twitter
    For Quick Alerts
    ALLOW NOTIFICATIONS  
    For Daily Alerts

    ಕುಡುಕರ ಕಣ್ಣು ತೆರೆಸುವ ಎದ್ದೇಳು ಮಂಜುನಾಥ

    By Super
    |

    Jaggesh and Yagna Shetty in Eddelu Manjunatha
    ಎದ್ದೇಳು ಮಂಜುನಾಥ ಚಿತ್ರಕ್ಕೆ ನಿರ್ದೇಶಕ ಗುರುಪ್ರಸಾದ್ ಬರೆದ ಸಂಭಾಷಣೆ ಬಿಯರು ಬಾಟಲನ್ನು ಅಲ್ಲಾಡಿಸಿ ಬಿರಡೆ ಬಿಚ್ಚಿದಾಗ ಉಕ್ಕಿಬರುವ ಬುರುಗು ಬುರುಗು ನೊರೆಯಾದರೆ, ಜಗ್ಗೇಶ್ ನಟನೆ ಒಂದು ಹನಿಯೂ ನೊರೆಯಾಗದ ಹಾಗೆ, ತೊಟ್ಟೂ ನೆಲಕ್ಕೆ ಬೀಳದ ಹಾಗೆ ಆ ಬಾಟಲಿಗೆ ಸುರಿಯುವ ಬಿಯರು.

    * ಪ್ರಸಾದ ನಾಯಿಕ

    ಪೆಟ್ಟಿಗೆಯಲ್ಲಿ ವರ್ಷಾನುಗಟ್ಟಲೆ ಸೋಮಾರಿಯಾಗಿ ಕುಂತು ಕುಂತು ಅಂತೂ ಇಂತೂ ಎದ್ದೇಳಿರುವ 'ಎದ್ದೇಳು ಮಂಜುನಾಥ'ದ ನಾಯಕ ಮಂಜ ಮಹಾ ಮೈಗಳ್ಳ, ಮಹಾ ಸುಳ್ಳ, ಕುಡುಕ, ಮೋಸಗಾರ, ಲಂಪಟ, ಜವಾಬ್ದಾರಿ ಪದವೇ ಗೊತ್ತಿಲ್ಲದ ವೇಸ್ಟ್ ಬಾಡಿ. ಎಲ್ಲಕ್ಕಿಂತ ಹೆಚ್ಚಾಗಿ ಮಹಾ ಸೋಮಾರಿ. ತನ್ನನ್ನು ತಾನೇ ಸಮಸ್ತ ಜಗದ ಎಲ್ಲಾ ಸೋಮಾರಿಗಳ ಪ್ರತಿನಿಧಿ ಅಂತ ತಿಳಿದುಕೊಂಡವ! ಮಂಜನ ಜೊತೆ ನಿರ್ದೇಶಕರಾದ ಗುರುಪ್ರಸಾದ್ ಅವರೂ ಸೋಮಾರಿಯಾಗಿದ್ದಾರೆ. ಆ ಪಾತ್ರವೇ ಸೋಮಾರಿಯಾಗಿದ್ದಕ್ಕೆ ಇವರೇ ಸೋಮಾರಿಯಾದರೋ, ಗುರುವೇ ಸೋಮಾರಿಯಾಗಿದ್ದಕ್ಕೆ ಆ ಪಾತ್ರ ಹುಟ್ಟಿಕೊಂಡಿತೋ ಗೊತ್ತಿಲ್ಲ.

    ಈ ಲೋಕವೇ ದೇವರು ಸೃಷ್ಟಿಸಿರುವ ಬಾರು. ಕುಡಿತಕ್ಕೆ ದಾಸನಾದವನನ್ನು ಜೀವನ ಹೇಗೆ ಬಾರಿಸುತ್ತದೆ, ಸೋಮಾರಿಯಾದರೆ ಏನೆಲ್ಲ ದುರ್ಘಟನೆಗಳಿಗೆ ಸಾಕ್ಷಿಯಾಗಬೇಕಾಗುತ್ತದೆ ಎಂಬುದನ್ನು ಸೋಮಾರಿ ಮಂಜನ ಮುಖಾಂತರ ಅವನ ಜೀವನದ ಕಥೆಯನ್ನೇ ಗುರು ಹೇಳಿಸುತ್ತಾರೆ, ಎಲ್ಲ ಅಂಡು ಊರಿ ಕುಂತು ಕುಂತಲ್ಲೇ!

    ಮಾತು ಮಾತು ಮಾತು. ಮಾತೇ 'ಎದ್ದೇಳು ಮಂಜುನಾಥ' ಚಿತ್ರದ ಬಂಡವಾಳ, ಮಾತೇ ಪ್ರೇಕ್ಷಕರನ್ನು ಕೆಣಕುವ ಬೇತಾಳ. ನಾಯಕ ಮಂಜುನಾಥ ಲಾಡ್ಜ್ ರೂಮಿನ ಕಾಟು, ಪುಟ್ಟ ಗೂಡಿನಂಥ ಮನೆಯ ಮಂಚದ ಮೇಲೆ ಒಂದು ಹೆಜ್ಜೆ ಆಚೆ ಈಚೆ ಇಡದೆ ಸಮಾಜದ ನೈಜ ಮುಖ ತೆರೆದಿಡುತ್ತಾನೆ. ನಾಯಕನಿಗೆ ಚಲನಶೀಲತೆ ಇಲ್ಲದಿದ್ದರೂ 'ಅಶ್ಲೀಲ' ಎಂಬ ಕೆಟಗರಿಗೆ ಸೇರುವ ಪುಂಖಾನುಪುಂಖ ಮಾತುಗಳಿಂದ ಚಿತ್ರಕ್ಕೆ ಚಲನಶೀಲತೆ ನೀಡುವಲ್ಲಿ ಗುರುಪ್ರಸಾದ್ ಯಶಸ್ವಿಯಾಗಿದ್ದಾರೆ.

    ಸುದೀರ್ಘವಾಗಿ ಉಸಿರಾಡಿಸಲೂ ಅವಕಾಶ ನೀಡದಂತೆ ಮಾತಿನ ಸುರಿಮಳೆ ಸುರಿಸಿದ್ದಾರೆ. ಮಾತೇ ಚಿತ್ರದ ಉಸಿರು, ಮಾತುಗಳೇ ಡ್ಯುಯೆಟ್ಟು, ಮಾತೇ ಸಾಹಿತ್ಯ, ಮಾತೇ ಹಿನ್ನೆಲೆ ಸಂಗೀತ ಕೂಡ. ಈ ಮಾತುಗಳೇ ಪ್ರೇಕ್ಷಕನನ್ನು ವಿಪರೀತ 'ಸೋಮಾರಿ'ಯನ್ನಾಗಿ ಮಾಡಿ ಸೀಟಿನ ಮೇಲೆ ಗಟ್ಟಿಯಾಗಿ ಕೂರಿಸಿದೆ. ಆದರೆ, ಯಾವ ಬಗೆಯ ಪ್ರೇಕ್ಷಕನನ್ನು ಹಿಡಿದಿಡುತ್ತದೆ? ಎನ್ನುವುದು ಪ್ರಶ್ನೆ. ಗುರುಪ್ರಸಾದ್ ಬರೆದಿರುವ ಸಂಭಾಷಣೆ ಅಷ್ಟು 'ಸೃಜನಶೀಲ'ವಾಗಿದೆ. ಸೆನ್ಸಾರ್ ಮಂಡಳಿ ಅನೇಕ ಕಟ್ ಗಳನ್ನು ಹೇಳದಿರದಿದ್ದರೆ ಸಂಭಾಷಣೆ ಇನ್ನೂ ಯಾವ ಮಟ್ಟದ್ದಾಗಿರುತ್ತಿತ್ತು ಎಂದು ಚಿಂತಿಸುವ ರೀತಿ ದ್ವಂದ್ವಾರ್ಥಗಳಿಂದ ಕೂಡಿದೆ. ಇನ್ ಫ್ಯಾಕ್ಟ್, ಈ ದ್ವಂದ್ವಾರ್ಥದ ಸಂಭಾಷಣೆಯೇ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಾಡಿಸುತ್ತದೆ, ತೂರಾಡಿಸುತ್ತದೆ. ಕೊನೆಗೆ ಸಾಕಪ್ಪಾ ಸಾಕು ಅನ್ನುವಂತೆಯೂ ಮಾಡುತ್ತದೆ.

    ಸಂಭಾಷಣೆಯ ಒಂದು ನಮೂನೆಯನ್ನು ನೋಡಿ : ಕುಡುಕ ಮಂಜ ಮತ್ತು ಪರಿಚಯವಾದ ಸಿನೆಮಾ ನಿರ್ದೇಶಕ ಕುರುಡ ನಾಣಿ ಕೈಯಲ್ಲಿ ಗ್ಲಾಸು ಹಿಡಿದು ಮಾತಾಡುತ್ತ ಊಟ ಮಾಡುತ್ತ ಕುಳಿತಿರುತ್ತಾರೆ. ನಾಣಿಗೆ ಮಂಜ ಕೇಳುತ್ತಾನೆ, 'ಕಣ್ಣಿಲ್ಲದಿದ್ದರೂ ನಿಮ್ಮ ಕೈ ನೇರವಾಗಿ ಬಾಯಿಗೇ ಹೋಯಿತಲ್ಲ!' ಕುರುಡ ಅದಕ್ಕೆ ಉತ್ತರವಾಗಿ, 'ನನಗೆ ಒಬ್ಬ ಸ್ನೇಹಿತನಿದ್ದಾನೆ. ಆತನೂ ಕುರುಡ, ಆತನಿಗೀಗ ಎರಡು ಮಕ್ಕಳು!'

    ಇದು ಒಂದು ಉದಾಹರಣೆ ಮಾತ್ರ. ಮತ್ತೆ ದ್ವಂದ್ವಾರ್ಥದ ಸಂಭಾಷಣೆ ಬರಬಹುದೆಂದು ಪ್ರೇಕ್ಷಕ ಕಾಯುತ್ತ ಕುಳಿತುಕೊಳ್ಳುವ ಹಾಗೆ ಮಾತಿನ ಹೊಳೆ ಹರಿಸಿದ್ದಾರೆ ಗುರು. ಪ್ರೇಕ್ಷಕರು ಖಂಡಿತ ನಿರಾಶರಾಗುವುದಿಲ್ಲ. ಸಂಭಾಷಣೆ ವಿಷಯದಲ್ಲಿ ಮಠ ಚಿತ್ರದ ಮುಖಾಂತರ ಒಂದು ಹೆಜ್ಜೆ ಮುಂದಿಟ್ಟಿದ್ದ ಗುರು ಮಂಜುನಾಥ ಚಿತ್ರದಿಂದ ಎರಡು ಹೆಜ್ಜೆ ಹಿಂದೆ ಇಟ್ಟಿದ್ದಾರೆ. ನಟ, ರಾಜಕಾರಣಿ, ಚಿತ್ರ ನಿರ್ದೇಶಕ, ಹೆಂಡತಿ, ತಂದೆ-ತಾಯಿ, ಅಜ್ಜ-ಅಜ್ಜಿ, ಸ್ವತಃ ತಮ್ಮನ್ನು, ಅಷ್ಟೆ ಏಕೆ ದೇವರನ್ನೂ ಬಿಟ್ಟಿಲ್ಲ ಗುರು. ಎಲ್ಲರೂ ಅಪಹಾಸ್ಯದ ವಸ್ತುವಾಗಿದ್ದಾರೆ. ಕೊಚ್ಚೆ ತಮಗೂ ಸಿಡಿಯುತ್ತದೆ ಎಂಬುದರ ಅರಿವಿಟ್ಟುಕೊಂಡೇ ಕೊಚ್ಚೆಯ ಮೇಲೆ ಕಲ್ಲೆಸೆಯುವ ಸಾಹಸ, ಧೈರ್ಯ, ಭಂಡತನ ಮತ್ತು ಜಾಣತನ ತೋರಿದ್ದಾರೆ.

    ಇಷ್ಟಿದ್ದೂ, ಜಗ್ಗೇಶ್ ಕಟ್ಟಾ ಆರಾಧಕರನ್ನು, ದ್ವಂದ್ವಾರ್ಥದ ಸಂಭಾಷಣಾ ಪ್ರಿಯರನ್ನು ಚಿತ್ರ ಗಟ್ಟಿಯಾಗಿ ಹಿಡಿದು ಕೂಡಿಸಿಬಿಡುತ್ತದೆ. ಈ ಪಾತ್ರವನ್ನು ಜಗ್ಗೇಶ್ ಮಾತ್ರ ಮಾಡಲು ಸಾಧ್ಯ ಎನ್ನುವಷ್ಟರ ಮಟ್ಟಿಗೆ ಜಗ್ಗೇಶ್ ತಾವೇ ತಾವಾಗಿದ್ದಾರೆ. ಕುಳಿತಲ್ಲೇ ತೋರುವ ಹಾವಭಾವ, ಮಾತುಗಳ ಏರಿಳಿತ ನಿಜಕ್ಕೂ ಅದ್ಭುತ. ನಗಿಸಲೇಬೇಕೆಂಬ ವಿಕೃತ ಹಾವಭಾವವಿಲ್ಲ. ಹುಬ್ಬುಗಳ ಕುಣಿತ, ತುಟಿಗಳ ವೈಯಾರ ಅನವಶ್ಯಕ ಅನಿಸಿದರೂ ಅತಿರೇಕ ಅನಿಸುವುದಿಲ್ಲ. ಗುರು ಬರೆದ ಸಂಭಾಷಣೆ ಬಿಯರು ಬಾಟಲನ್ನು ಅಲ್ಲಾಡಿಸಿ ಬಿರಡೆ ಬಿಚ್ಚಿದಾಗ ಉಕ್ಕಿಬರುವ ಬುರುಗು ಬುರುಗು ನೊರೆಯಾದರೆ, ಜಗ್ಗೇಶ್ ನಟನೆ ಒಂದು ಹನಿಯೂ ನೊರೆಯಾಗದ ಹಾಗೆ, ತೊಟ್ಟೂ ನೆಲಕ್ಕೆ ಬೀಳದ ಹಾಗೆ ಆ ಬಾಟಲಿಗೆ ಸುರಿಯುವ ಬಿಯರು. ಜಗ್ಗೇಶ್ ಪ್ರಖರವಾದ ಪಾತ್ರಪೋಷಣೆಯ ಜೊತೆಗೆ ಎ ಮತ್ತು ಉಪೇಂದ್ರ ಚಿತ್ರ ಮುಖಾಂತರ ನಟ ಉಪೇಂದ್ರ ಒಂದು ವರ್ಗದ ಪ್ರೇಕ್ಷಕರನ್ನು ಸೃಷ್ಟಿಸಿಕೊಂಡ ಅಪಾಯವನ್ನು ಜಗ್ಗೇಶ್ ಕೂಡ ಸೃಷ್ಟಿಸಿಕೊಂಡಿದ್ದಾರೆ.

    ಜಗ್ಗೇಶ್ ಅವರಲ್ಲಿ ಈ ಬಗೆಯ ನಟನೆ ಹೊರಹೊಮ್ಮಿಸಿದ ಗುರುಪ್ರಸಾದ್ ನಿಜಕ್ಕೂ ಅಭಿನಂದನಾರ್ಹರು. ಕುಳಿತಲ್ಲೇ ಎಲ್ಲ ನಡೆಯುತ್ತಿದ್ದರೂ ಎಲ್ಲೂ ಬೋರು ಹೊಡೆಯುವುದಿಲ್ಲ, ಕಥಾ ನಿರೂಪಣೆ ಅಷ್ಟು ಬಿಗಿಯಾಗಿದೆ. ಸಮಾಜ ಇರುವುದೇ ಹೀಗೆ, ನಾನು ನನಗೆ ತಿಳಿದ ಆದರ್ಶಗಳನ್ನು ಹೇಳುವ ರೀತಿಯೇ ಹೀಗೆ, ಅದೇ ಸರಿ ಎಂಬ ಹಂಗಿಗೆ ಬಿದ್ದಿರುವ ಗುರುಪ್ರಸಾದ್ ನೀಟಾದ ನಿರೂಪಣೆಯ ನಡುವೆಯೂ ಅನೇಕ ಕಡೆಗಳಲ್ಲಿ ಎಡವಿದ್ದಾರೆ. ಅದು ಸಹಜ ಕೂಡ. ಅಜ್ಜಿ ಮೊಮ್ಮಗನಿಗೆ ಬ್ರಾಂಡಿ ಕುಡಿಸಿ ಕುಡಿಸಿಯೇ ಕುಡುಕನನ್ನಾಗಿಸುವುದು, ಮಗನೇ ಅಪ್ಪನನ್ನು ಹೊಗಲೋ ಬಾರಲೋ ಅಂತ ಸಂಭೋದಿಸುವುದು, ವಾಂತಿ ಮಾಡಿಸುವುದು... ನಿಜಕ್ಕೂ ಚಿತ್ರದ ನೈಜತೆಗೆ ಚ್ಯುತಿ ತಂದಿದೆ. ಈ ಕೆಲ ಅಂಶ ಹೊರತುಪಡಿಸಿದರೆ ಗುರು ಚಿತ್ರವನ್ನು ತಮ್ಮ 'ಕಂಟ್ರೋಲ್'ನಲ್ಲಿಯೇ ಇಟ್ಟುಕೊಂಡಿದ್ದಾರೆ.

    ಉಳಿದವರ ನಟನಾ ವಿಷಯಕ್ಕೆ ಬಂದರೆ, ಜಗ್ಗೇಶ್ ಮಾತುಗಳಿಗೆ ಕಿವಿಯಾಗುವ, ಕಥೆಗೆ ಕೊಂಡಿಯಾಗುವ ತಬ್ಲಾ ನಾಣಿ ಕುಡುಕ ನಿರ್ದೇಶಕನಾಗಿ ನಾಯಕನಿಗೆ ಸಮಸಮವಾಗಿ ಸಾಗಿದ್ದಾರೆ. ಮಂಜನಿಂದಾಗಿ ಜೀವನದ ಎಲ್ಲ ಸುಖಗಳನ್ನು ಕಳೆದುಕೊಳ್ಳುವ ಹೆಂಡತಿಯಾಗಿ ಯಜ್ಞಾ ಶೆಟ್ಟಿ ಸಂಯಮದ ಅಭಿನಯ ನೀಡಿದ್ದಾರೆ. ಚಿಕ್ಕಪ್ಪನಾಗಿ ವಿ ಮನೋಹರ್ ಮತ್ತು ಬ್ಯಾಂಕ್ ಅಧಿಕಾರಿಯಾಗಿ ಶಾಮ ಸುಂದರ ಚಿಕ್ಕ ಪಾತ್ರಗಳಲ್ಲಿ ಚೊಕ್ಕದಾಗಿ ಅಭಿನಯಿಸಿದ್ದಾರೆ. ಅನೂಪ್ ಸಿಳೀನ್ ಸಂಗೀತದಲ್ಲಿರುವ 'ಆರತಿ ಎತ್ತಿರೆ ನಮ್ ಕಳ್ ಮಂಜಂಗೆ, ನಮ್ ಸುಳ್ ಮಂಜಂಗೆ' ಮತ್ತು 'ಈ ಜಗವೇ ದೇವರು ಸೃಷ್ಟಿಸಿದ ಬಾರು' ಹಾಡುಗಳು ಸೂಪರು.

    ಕುಡಿತದ ಚಟಕ್ಕೆ ಬಲಿಯಾದರೆ, ಜತೆಗೆ ಸೋಮಾರಿಯಾದರೆ ಇಡೀ ಒಂದು ಸಂಸಾರ ಕಣ್ಣೀರ ಕಡಲಲ್ಲಿ ಮುಳುಗುತ್ತದೆ ಎಂದು ಸಾರುವುದೇ ಚಿತ್ರದ ಸಂದೇಶವಾಕ್ಯ. ಹೆಣ್ಣುಮಕ್ಕಳ ಬದುಕನ್ನು ಹಿಂಡಿಹಿಪ್ಪೆ ಮಾಡುವ ಕುಡುಕ ಗಂಡ, ಅಣ್ಣ, ತಮ್ಮ, ಅಪ್ಪಂದಿರು ನೋಡಲೇ ಬೇಕಾದ ಚಿತ್ರ. ಕುಡಿತದ ಚಟವನ್ನು ಚಿವುಟುವ ಚಿತ್ರ. ಕುಡಿತದ ಚಟಕ್ಕೆ ಬಲಿಯಾದ ಮಹಿಳೆಯರೂ ಕೂಡ ಚಿತ್ರ ನೋಡಲಿಕ್ಕೆ ಅಡ್ಡಿಯಿಲ್ಲ!

    Friday, February 8, 2013, 15:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X