•  

ಕ್ರಿಕೆಟ್‌ಗೆ ಕಪ್ಪುಮಸಿ ಬಳಿದ ಚೆನ್ನೈ ರೈನೋಸ್

ಸೋಮವಾರ, ಫೆಬ್ರವರಿ 13, 2012, 12:00 [IST]
Chennai Rhinos does not show sportsman spirit
ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಫೈನಲ್ ಪಂದ್ಯದ ಕಟ್ಟಕಡೆ ಗಳಿಗೆಯಲ್ಲಿ, ಪಂದ್ಯದ ಫಲಿತಾಂಶ ನಿರ್ಧರಿಸಲು ಇನ್ನು ಎರಡೇ ಎಸೆತಗಳು ಇರುವಾಗ ನಡೆದ ಒಂದು ಘಟನೆ ಇಡೀ ಟೂರ್ನಮೆಂಟಿಗೆ ಕಪ್ಪುಮಸಿ ಬಳಿದಿದೆ. ಕಪ್ಪು ಆಗಸದಲಿ ಮಿಂಚಾಡುತ್ತಿದ್ದ ತಾರೆಗಳು ಇದ್ದಕ್ಕಿದ್ದಂತೆ ಮಂಕಾದಂತಾಗಿದೆ. ಹಂಸಬಿಳುಪಿನ ಕ್ಯಾನ್ವಾಸಿನ ಮೇಲೆ ಕಪ್ಪುಚುಕ್ಕೆ ಇಟ್ಟಂತಾಗಿದೆ.

ನಡೆದದ್ದು ಇಷ್ಟೆ. ಚೆನ್ನೈ ರೈನೋಸ್ ತಂಡ ಇಟ್ಟಿದ್ದ 162ರ ಗುರಿಯನ್ನು ಅತ್ಯಂತ ಲೀಲಾಜಾಲವಾಗಿ ಬೆನ್ನತ್ತಿದ್ದ ಕರ್ನಾಟಕ ಬಲ್ಡೋಜರ್ಸ್ ತಂಡಕ್ಕೆ ಕಡೆಯ 2 ಎಸೆತಗಳಲ್ಲಿ 2 ರನ್ ಬೇಕಿದ್ದವು. ಒಂದೊಂದು ರನ್ ಹೊಡೆದಾಗ, ವಿಕೆಟ್ ಬಿದ್ದಾಗ, ಸುಖಾಸುಮ್ಮನೆ ನಲಿದಾಡುತ್ತಿದ್ದ ತಾರೆಗಳು, ಪ್ರೇಕ್ಷಕರು ಗಪ್‌ಚಿಪ್ ಕುಳಿತಿದ್ದರು.

ಕನ್ನಡ ತಾರೆ ತಾರಾ ಕಣ್ಣುಮುಚ್ಚಿ ದೇವರಲ್ಲಿ ಒಂದೇ ಸವನೆ ಬೇಡಿಕೊಳ್ಳುತ್ತಿದ್ದರು. ಬಾವುಟ ಹಾರಾಡಿಸುತ್ತಿದ್ದ ಅಶೋಕ್ ಖೇಣಿ ಬಿಮ್ಮಗೆ ಕುಳಿತಿದ್ದರು. ಹಿಂದಿನ ಬಾಲಲ್ಲಿ ಪೆವಿಲಿಯನ್ನಿಗೆ ಮರಳಿದ್ದ ಕಿಚ್ಚ ಸುದೀಪ್ ಮಾತಾಡುವ ಸ್ಥಿತಿಯಲ್ಲಿಯೇ ಇರಲಿಲ್ಲ. ಮಾಧುರಿ ಭಟ್ಟಾಚಾರ್ಯ ತುಂಡು ಫ್ರಾಕ್ ಕೂಡ ಹಾರಾಟ ನಿಲ್ಲಿಸಿತ್ತು. ಅಂಬರೀಶ್, ಗುಂಡಪ್ಪ ವಿಶ್ವನಾಥ್, ರಾಕ್‌ಲೈನ್ ಎಲ್ಲ ರಾಕ್ ಥರ ಕುಳಿತಿದ್ದರು.

ಕ್ರೀಸಲ್ಲಿ ಬ್ಯಾಂಟಿಂಗ್ ಎದುರಿಸುತ್ತಿದ್ದುದು ರಾಹುಲ್, ಇನ್ನೊಂದು ತುದಿಯಲ್ಲಿ ಅರ್ಧ ಶತಕ ಗಳಿಸಿ ರನ್ ಕದಿಯಲು ಸಿದ್ದರಾಗಿದ್ದ ಜೆ ಕಾರ್ತಿಕ್. ಬೌಲಿಂಗ್ ಮಾಡಲು ಓಡೋಡುತ್ತ ಬಂದ ವಿಕ್ರಾಂತ್ ಬೌಲಿಂಗ್ ಆಕ್ಷನ್ ಮುಗಿಸುತ್ತಿದ್ದಂತೆ ಬೇಲ್ ಎಗರಿಸಿಬಿಟ್ಟರು, ಕಾರ್ತಿಕ್ ನಾಲ್ಕು ಹೆಜ್ಜೆ ಕ್ರೀಸಿನಿಂದ ಹೊರಗಿದ್ದರು. ಚೆನ್ನೈ ತಂಡದ ಒಕ್ಕೊರಲ ಹೌಜ್ಯಾಟ್ ಕೂಗಿಗೆ ಅಂಪೈರ್ ತೋರು ಬೆರಳೆತ್ತಿಬಿಟ್ಟರು.

ಇದು ಕ್ರಿಕೆಟ್ ಕಾನೂನು ವಿರುದ್ಧವೇನಲ್ಲ. ನಿಜಕ್ಕೂ ಕ್ರೀಸಿನಿಂದ ಹೊರಗಿದ್ದ ಕಾರ್ತಿಕ್ ಔಟಾಗಲೇಬೇಕು. ಪಂದ್ಯ ಗೆಲ್ಲಬೇಕಾಗಿದ್ದರೆ ವಿಕ್ರಾಂತ್ ಬೇಲ್ ಎಗರಿಸಲೇಬೇಕಿತ್ತು ಮತ್ತು ಅಂಪೈರಿಗೆ ಮನವಿ ಮಾಡಲೇಬೇಕಿತ್ತು. ಅಲ್ಲಿ ಹೋರಾಟವಿತ್ತು, ಉತ್ಸಾಹವಿತ್ತು, ಟೆನ್ಷನ್ ಇತ್ತು, ಕ್ರೀಡಾಂಗಣ ಹುಚ್ಚೆದ್ದು ಕುಣಿಯುತ್ತಿತ್ತು, ಮಾತಿತ್ತು ಮೌನವಿತ್ತು. ಆದರೆ, ಮಾಯವಾಗಿದ್ದು ಕ್ರೀಡಾ ಮನೋಭಾವವೊಂದೇ.

1987ರ ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ ಪಂದ್ಯದಲ್ಲಿ ಇಂಥದೇ ಸ್ಥಿತಿ ಇದ್ದಾಗ ವೆಸ್ಟ್ ಇಂಡೀಸಿನ ಕರ್ಟ್ನಿ ವಾಲ್ಶ್ ಅವರು ಪಾಕಿಸ್ತಾನದ ಅಬ್ದುಲ್ ಖಾದಿರ್ ಅವರು ಕ್ರೀಸಿಂದ ಹೊರಗಿದ್ದಾಗ ಬೇಲ್ ಎಗರಿಸದೆ ಕ್ರೀಡಾ ಮನೋಭಾವ ಮೆರೆದು ಎಲ್ಲ ಕ್ರಿಕೆಟಿಗರಿಗೆ ಮಾದರಿಯಾಗಿದ್ದರು ಮತ್ತು ಆ ಮನೋಭಾವ ತೋರಿದ್ದಕ್ಕಾಗಿ ಚಿನ್ನದ ಪದಕ ಕೂಡ ಗೆದ್ದಿದ್ದರು.

ಆದರೆ, ಹೈದರಾಬಾದಿನಲ್ಲಿ ನಡೆದ ಪಂದ್ಯದಲ್ಲಿ ಯಾರಿಗೂ ಚಿನ್ನದ ಪದಕ ಬೇಕಾಗಿರಲಿಲ್ಲ, ತಮ್ಮ ತಂಡ ಗೆಲ್ಲುವುದು ಮಾತ್ರ ಬೇಕಾಗಿತ್ತು. ಸೋತಿದ್ದು ಮಾತ್ರ ಕ್ರಿಕೆಟ್ ಮತ್ತು ಸಿಸಿಎಲ್. ಇದು ಕರ್ನಾಟಕದ ತಂಡದವರಿಗೂ ಅನ್ವಯಿಸುತ್ತದೆ. ಆಟದಲ್ಲಿ ಸೋಲು ಗೆಲುವು ಇದ್ದದ್ದೆ. ಆದರೆ ಸೋತಿದ್ದಕ್ಕೆ ಬೇಸರಿಸಿಕೊಂಡು ಪ್ರಶಸ್ತಿ ನೀಡುವಾಗ ಉಪಸ್ಥಿತರಿರದಿದ್ದುದು ಕ್ರಿಕೆಟಿಗೆ ಮಾಡಿದ ಅವಮಾನವಲ್ಲವೆ? (ವಿಡಿಯೋ : ವಿವಾದದ ಕುರಿತು ಕಿಚ್ಚ ಸುದೀಪ್ ಹೇಳುವುದೇನು?)

User Comments
shiusorry sorry 15 Feb 2012 04:59 pm
ನಿಜವಾಗಲು ಬೇಜಾರು ಆಗಿದೆ ನಮ್ಮ ಸಿ ಸಿ ಲ್ ಕರ್ನಾಟಕ ಟೀಂ ಗೆಲ್ಲಬೇಕಾಗಿತ್ತು ,
Mamatha 13 Feb 2012 02:13 pm
ಕರ್ನಾಟಕ ತಂಡ ನಿಜವಾಗಿಯೂ ಗೆಲುವನ್ನ ಕಂಡಿದೆ ಸುದೀಪ ಸರ್ ಬೇಜಾರ್ ಮಾಡಿಕೊಳಬೇಕದದಿಲ್ಲ ಪ್ರತಿಯೊಬ್ಬರು ಒಳ್ಳೆಯ ಸಾಹಸವನ್ನು ಮಾಡಿದ್ದೀರಾ ಉತ್ತಮ ಆಟ ಆಡಿದ್ದಿರ .
[ ಅಭಿಪ್ರಾಯ ಬರೆಯಿರಿ ]
   
IPL, Himachal Pradesh Cricket Association Stadium, Dharmasala
Chennai Super Kings: 40 / 2, 7.2 Overs
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article