Englishবাংলাગુજરાતીहिन्दीമലയാളംதமிழ்తెలుగు

ಸೆ.17ರಿಂದ ಸಿಂಹಾವಲೋಕನ; ವಿಷ್ಣು ಚಿತ್ರೋತ್ಸವ

Posted by:
Published: Wednesday, September 1, 2010, 19:16 [IST]
 

ಸಾಹಸಸಿಂಹ ವಿಷ್ಣುವರ್ಧನ್ ಅವರ ಅರುವತ್ತನೆ ಹುಟ್ಟುಹಬ್ಬದ ಪ್ರಯುಕ್ತ ಸೆ.18ರಿಂದ ಮೂರುದಿನಗಳ ಕಾಲ ಬೆಂಗಳೂರಿನಲ್ಲಿ ವಿಷ್ಣುವರ್ಧನ್ ಚಿತ್ರೋತ್ಸವ (ಸಿಂಹಾವಲೋಕನ)ನಡೆಯಲಿದೆ. ಚಿತ್ರೋತ್ಸವವನ್ನು ಖ್ಯಾತ ಚಿತ್ರ ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್ ಅವರ ಪತ್ನಿ ಶ್ರೀಮತಿ ಪುಟ್ಟಣ್ಣ ಕಣಗಾಲ್ ಅವರು ಚಾಲನೆ ನೀಡಲಿದ್ದಾರೆ.

ವಿಷ್ಣು ಅಭಿನಯದ 12 ಚಿತ್ರಗಳನ್ನು ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ. ಬೆಂಗಳೂರಿನ ಗರುಡಾ ಮಾಲ್ ಮತ್ತು ಐನಾಕ್ಸ್ ಚಿತ್ರಮಂದಿರಗಳಲ್ಲಿ ವಿಷ್ಣು ಅಭಿನಯದಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದು ಭಾರತಿ ವಿಷ್ಣುವರ್ಧನ್ ಅವರು ಬುಧವಾರ (ಸೆ.1) ಶ್ರೀಕೃಷ್ಣಜನ್ಮಾಷ್ಟಮಿ ದಿನ ಜಯನಗರದ ತಮ್ಮ ಮನೆಯಲ್ಲಿ ಪತ್ರಕರ್ತರಿಗೆ ತಿಳಿಸಿದರು.

ಸೆ.17ರಂದು ಪ್ರದರ್ಶನಗೊಳ್ಳಲಿರುವ ಚಿತ್ರಗಳು: ನಾಗರಹಾವು (ಬೆ.10.15), ಮಲಯ ಮಾರುತ (ಮ.1.30), ಸುಪ್ರಭಾತ (ಸ.4.30), ವೀರಪ್ಪ ನಾಯ್ಕ (ರಾ.7.30); ಸೆ.18ರಂದು ವಿಷ್ಣು ಹುಟ್ಟುಹಬ್ಬದ ದಿನ: ಬಂಧನ (ಬೆ.10.15), ಸಿಂಹಾದ್ರಿಯ ಸಿಂಹ (ಮ.1.30), ದಿಗ್ಗಜರು (ಸಂ.4.30), ಕರ್ಣ (ರಾ.7.30).

ಸೆ.19ರಂದು ಪ್ರದರ್ಶನಗೊಳ್ಳಲಿರುವ ಚಿತ್ರಗಳು: ಯಜಮಾನ (ಬೆ.10.15), ಮುತ್ತಿನಹಾರ (ಮ.1.30), ಬಂಗಾರದ ಜಿಂಕೆ (ಸಂ.4.30), ಲಾಲಿ (ರಾ.7.30). ವಿಷ್ಣು ಅಭಿಮಾನಿಗಳಿಗಾಗಿ ಈ ಚಿತ್ರಗಳನ್ನು ಉಚಿತವಾಗಿ ಪ್ರದರ್ಶಿಸಲಾಗುತ್ತಿದೆ ಎಂದು ಭಾರತಿ ವಿಷ್ಣುವರ್ಧನ್ ಹೇಳಿದರು.

ಈ ಹನ್ನೆರಡು ಚಿತ್ರಗಳ ನಿರ್ದೇಶಕರು, ನಿರ್ಮಾಪಕರು, ಚಿತ್ರದ ಇಬ್ಬರು ಕಲಾವಿದರು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನಟ ಹಾಗೂ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ತಿಳಿಸಿದರು. ವಿಷ್ಣು ಅವರ ಜನುಮದಿನವನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ.

ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಜನ್ಮದಿನಾಚರಣೆ ನಡೆಯಲಿದೆ. ಭಾರತಿ ವಿಷ್ಣುವರ್ಧನ್, ಅನಿರುದ್ಧ್ ಸೇರಿದಂತೆ ಅವರ ಕುಟುಂಬ ಸದಸ್ಯರು ಭಾಗಿಯಾಗಲಿದ್ದಾರೆ. ಇದೇ ಸಂದರ್ಭದಲ್ಲಿ ಸಿನಿಮಾ ಪತ್ರಕರ್ತ ನಂದಕುಮಾರ್ ಬರೆದಿರುವ "ನನ್ನ ಹಾಡು ನನ್ನದು" ಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತದೆ.

ವಿಭಾ (ವಿಷ್ಣುವರ್ಧನ್ ಭಾರತಿ) ಟ್ರಸ್ಟ್ ಮೂಲಕ ಬಡ ಮಕ್ಕಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ, ರಕ್ತದಾನ, ಶಿಕ್ಷಣಕ್ಕೆ ಸಹಾಯ ಸೇರಿದಂತೆ ಹಲವು ಜನೊಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲೂ ವಿಷ್ಣು ಜನ್ಮದಿನ ಆಚರಿಸಲು ತೀರ್ಮಾನಿಸಲಾಗಿದೆ.

ಅಭಿಮಾನ್ ಸ್ಟುಡಿಯೋದಲ್ಲಿ ನಿರ್ಮಾಣವಾಗುತ್ತಿರುವ ವಿಷ್ಣು ಸ್ಮಾರಕಕ್ಕೆ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದ್ದು ಆರ್ಥಿಕ ನೆರವು ನೀಡುತ್ತಿದೆ. ಮುಂಬರುವ ದಿನಗಳಲ್ಲಿ ವಿಷ್ಣು ಸ್ಮಾರಕದಲ್ಲಿ ಗ್ಯಾಲರಿ, ಆಡಿಟೋರಿಯಂ ನಿರ್ಮಿಸುವ ಯೋಜನೆ ಹೊಂದಲಾಗಿದೆ ಎಂದು ಭಾರತಿ ವಿಷ್ಣುವರ್ಧನ್ ತಿಳಿಸಿದರು. ಹಿರಿಯ ಕಲಾವಿದ ಶಿವರಾಂ ಸಹ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಅಭಿಪ್ರಾಯ ಬರೆಯಿರಿ

Please read our comments policy before posting

Click here to type in Kannada
Subscribe Newsletter
Coupons