twitter
    For Quick Alerts
    ALLOW NOTIFICATIONS  
    For Daily Alerts

    ನನ್ನ ಲಂಗದಾವಣಿ ಕದ್ದವರಾರು?

    By * ಶಾಮಿ
    |

    ದಕ್ಷಿಣ ಭಾರತದಲ್ಲಿ ಹೆಂಗಳೆಯರು ಧರಿಸುವ ಸಾಂಪ್ರದಾಯಿಕ ಉಡುಪುಗಳಿಗೆ ಮೂರು ಮಟ್ಟು. ಶಾಲೆಗೆ ಹೋಗುವಾಗ ಲಂಗ ಕುಪ್ಪುಸ, ದೊಡ್ಡವಳಾದ ಮಾರನೆದಿನವೇ ಲಂಗ ದಾವಣಿ, ಮದುವೆ ಆದ ತಕ್ಷಣ ಸೀರೆ. ಹೀಗಿದ್ದ ನಮ್ಮ ಉಡುಪು ಸಂಸ್ಕೃತಿ ನಿಮಗೆ ಗೊತ್ತು. ಆದರೆ ಇದು ಇವತ್ತಿನ ಕರ್ನಾಟಕದ ಅನೇಕ ಹೆಣ್ಣು ಮಕ್ಕಳಿಗೆ ಅನ್ವಯಿಸುವುದಿಲ್ಲ. ಏಕೆಂದರೆ ಹೆಣ್ಣು ಮಗುವಿಗೆ ಮೂರು ನಾಕು ವರ್ಷವಿದ್ದಾಗಲೇ ಸ್ಕರ್ಟ್ ಆರಂಭ. ಐದು ತುಂಬಿದರೆ ಶಾಲೆ ಸಮವಸ್ತ್ರವೂ ಸ್ಕರ್ಟ್, ಮನೆಯಲ್ಲಿದ್ದಾಗ ಚಡ್ಡಿ, ವರ್ಷ ಎಂಟಾದರೆ ಮಿಡಿ ತಪ್ಪಿದರೆ ಜೀನ್ಸು.

    ಉತ್ತರ ಭಾರತದ ಸಂಸ್ಕೃತಿ ನಮ್ಮ ಜೀವನ ಶೈಲಿಯ ಮೇಲೆ ಅಪಾರ ಪ್ರಭಾವ ಬೀರಿದೆ. ಅದು ಕೇವಲ ಉತ್ತರ ಭಾರತದ ತಿನಿಸುಗಳು, ಉತ್ತರ ಭಾರತದ ನೇತಾರರು, ಉತ್ತರ ಭಾರತದ ಭಾಷೆಗಳಿಗೆ ಸೀಮಿತವಲ್ಲ. ಹಾಕುವ ಬಟ್ಟೆಯೂ ಉತ್ತರ ಭಾರತ ಶೈಲಿಯದ್ದೇ ಆಗಬೇಕು. ಬಸ್ ನಿಲ್ದಾಣ, ಕಾಲೇಜು, ಗಾರ್ಮೆಂಟ್ ಫ್ಯಾಕ್ಟರಿ ಕಾಂಪೌಂಡು, ಯಾವುದೇ ಫಂಕ್ಷನ್ ಪಾರ್ಟಿಗಳನ್ನು ಗಮನಿಸಿ, ಪ್ಯಾಂಟು ಅಥವಾ ಡ್ರೆಸ್ಸು! ಹಬ್ಬ, ಮದುವೆ, ಉಪನಯನದಂತಹ ಮಂಗಳ ಕಾರ್ಯಕ್ರಮಗಳಲ್ಲೂ ಚೂಡಿದಾರ್ ಪ್ಯಾಂಟುಗಳದ್ದೇ ಮೆರವಣಿಗೆ.

    ಈ ಅಭಿರುಚಿ ಬಲವಾಗಿ ಬೆಳೆದುದರಿಂದಲೇ ಇರಬೇಕು, ನಮ್ಮ ಕನ್ನಡ ಚಿತ್ರಗಳಲ್ಲಿ ಉಡುಪು ಶೈಲಿ ಕೂಡ ಗಮನಾರ್ಹ ರೂಪಾಂತರಗಳನ್ನು ಕಂಡಿದೆ. ನಾಯಕಿಯರಿಗೆ ತಾವು ಹೇಳಿದ ಅಮೆರಿಕಾ, ಐರ್ ಲ್ಯಾಂಡ್, ಮುಂಬೈ, ಲಾಸ್ ಏಂಜಲೀಸ್ ಡಿಸೈನರ್ ಕಾಸ್ಟೂಮುಗಳೇ ಆಗಬೇಕು. ಕಥಾ ಹಂದರಗಳು ಕೌಟುಂಬಿಕ, ಸಾಂಸಾರಿಕ ಪರಿಧಿಯನ್ನು ಮೀರಿ ಜಿಗಿದಿರುವುದರಿಂದ ನಾಯಕಿಯರಿಗೆ ನಮ್ಮ ಸಾಂಪ್ರದಾಯಿಕ ಉಡುಪುಗಳು ಫಿಟ್ಟೇ ಆಗುತ್ತಿಲ್ಲ.

    ಈ ಎಲ್ಲ ವಿದ್ಯಮಾನಗಳಿಂದಾಗಿ ನಿಮಗೆ ಈ ಕೆಳಕಂಡ ಲಂಗ ದಾವಣಿ ದಮಯಂತಿಯರು ತೆರೆಯಮೇಲೆ ಕಾಣಸಿಗುವುದಿಲ್ಲ.

    ಸುಧಾ ರಾಣಿ (ಮನಮೆಚ್ಚಿದ ಹುಡುಗಿ)
    ಶೃತಿ, ಜೂಹಿ ಚಾವ್ಲ (ಕಿಂದರಜೋಗಿ)
    ಮಾಲಾಶ್ರೀ (ರಾಮಾಚಾರಿ)
    ಬಿಂದಿಯಾ (ಹಳ್ಳಿಮೇಷ್ಟ್ರು)
    ರಾಧಿಕಾ (ಕೋಕೋಕೋ ಕೋಳಿ ಬಂತು)
    ಗೀತಾ (ರಾಮಾಪುರದ ರಾವಣ)
    ಪ್ರೇಮಾ (ನಮ್ಮೂರ ಮಂದಾರ ಹೂವೆ, ಕೌರವ)

    ರವಿಚಂದ್ರನ್ ಅವರಿಗೆ ಲಂಗ ದಾವಣಿ ಅಂದ್ರೆ ಪೆಟ್. ಪ್ರಳಯಾಂತಕದಲ್ಲಿ ಭವ್ಯ, ಅಸಂಭವದಲ್ಲಿ ಅಂಬಿಕಾ, ರಸಿಕದಲ್ಲಿ ಭಾನುಪ್ರಿಯ. ನೀಲಕಂಠದಲ್ಲಿ ಡುಮ್ಮಿ ನಮಿತಾಗೆ ಲಂಗ ದಾವಣಿ ಉಡಿಸಲು ಯಾಕೋ ಮನಸು ಮಾಡದ ರವಿಮಾಮಾ ನಮಿಗೆ ಸ್ಯಾಟಿನ್ ಗೌನ್ ಹಾಕಿಸಿ ಮಜಾ ಉಡಾಯಿಸಿದ್ದರು. ಇರಲಿ, ಇದ್ದದ್ದರಲ್ಲಿ ಸ್ವಲ್ಪ ಡೀಸೆಂಟಾಗಿ ಲಂಗ ದಾವಣಿ ತೊಟ್ಟಿದ್ದೆಂದರೆ ಜನುಮದ ಜೋಡಿಯಲ್ಲಿ ಶಿಲ್ಪ, ತುಂಬಾ ಸೆಕ್ಸೀ ಆಗಿ ಕಾಣುತ್ತಿದ್ದ ಅಂಜಲಿ (ತರ್ಲೆ ನನ್ನ ಮಗ), ಕಾಮಿಡಿ ನಟ ಎನ್ಎಸ್ ರಾವ್ ಜತೆ ಲಂಗಾ ದಾವಣಿ ಉಡುಪಿನಲ್ಲಿ ಉಮಾಶ್ರೀ ಅಭಿನಯಿಸಿದ ಸಿನಿಮಾಗಳಿಗಂತೂ ಲೆಕ್ಕವೇ ಇಲ್ಲ. ನರಸಿಂಹರಾಜು ಮತ್ತು ಕುಳ್ಳಿ ಜಯ ನಟಿಸಿದ ದೃಶ್ಯಗಳಲ್ಲಿ ಜಯಾಗೆ ಲಂಗಾ ದಾವಣಿ, ಪಾಪ ಕಡ್ಡಾಯ!

    ಆಗಿನ ಕಾಲದಲ್ಲಿ ನಾಯಕಿ ಅಥವಾ ನಾಯಕನ ತಂಗಿ ಪಾತ್ರವೆಂದರೆ ಮುಗಿಯಿತು. ಅವಳಿಗೆ ಸೀರೆ ಭಾಗ್ಯವೇ ಇಲ್ಲ. ಇನ್ನೂ ಕೂಡ ನಾಯಕಿ ಲಂಗದಾವಣಿ ಉಟ್ಟುಕೊಂಡಿದ್ದಾಳೆ ಎಂದರೆ ಅವಳಿಗಿನ್ನೂ ಮದುವೆ ಆಗಿಲ್ಲ ಎಂದು ನೀವು ತಿಳಿಯಬೇಕು. ಈ ಮಧ್ಯೆ ಮರೆಯಲಾಗದ ಸಿನಿಮಾ ಅಳೀಮಯ್ಯ. ಅಲ್ಲಿ ಸಿಲ್ಕ್ ಸ್ಮಿತಾ ಲಂಗಾ ದಾವಣಿ ಧರಿಸಿ ನಟಿಸಿದ ಐಟಂ ಸಾಂಗ್ ನಾನಂತೂ ಮರೆತಿಲ್ಲ. ಅಂತೆಯೇ, ಸತ್ಯ ಹರಿಶ್ಚಂದ್ರ ಚಿತ್ರದ ಆ ಅಭಿನೇತ್ರಿಯ ಹೆಸರನ್ನು ನಾನು ಮರೆತಿರಬಹುದು ಆದರೆ, ದಾವಣಿ ಹಾಕಿಕೊಂಡು ಗಿಲಿಗಿಲಿ ಗಿಲಕ್ಕು ಕಾಲು ಗೆಜ್ಜೆ ಗಿಲಕ್ಕು ಝುಂಮೆಂದಿತು.. ಕುಣಿದ ದೃಶ್ಯಗೀತ ಮರೆತಿಲ್ಲ. ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಲಂಗ ದಾವಣಿ ಉಟ್ಟುಕೊಂಡು ವೈಯಾರದಿಂದ 'ರಾಜಾ ಮುದ್ದು ರಾಜಾ ನೂಕುವಂಥ ಕೋಪ ನನ್ನಲೇಕೆ' ಅಂತ ಮಂಜುಳಾ ನುಲಿಯುತ್ತಿದ್ದರೆ ನೋಡುವುದು ಆನಂದ.

    ಬಹುಶಃ ವಿನಯಾ ಪ್ರಸಾದ್ ಹಾಕಿದಷ್ಟು ಲಂಗಾದಾವಣಿ ಇನ್ನಾರೂ ಹಾಕಿರಲಿಕ್ಕಿಲ್ಲ ಈ ಜಗದೊಳಗೆ (ನೀನು ನಕ್ಕರೆ ಹಾಲು ಸಕ್ಕರೆ). ದೇವಾ ಚಿತ್ರದಲ್ಲಿ ರೂಪಿಣಿ, ಡಾಕ್ಟರ್ ಕೃಷ್ಣದಲ್ಲಿ ನಿಮ್ಮ ತಾರಾ, ಪಟ್ಟಣಕ್ಕೆ ಬಂದ ಪುಟ್ಟದಲ್ಲಿ ಶುಭಶ್ರೀ, ಇತ್ತೀಚಿನ ತಾಖತ್ ಚಿತ್ರದಲ್ಲಿ ಶುಭಾ ಪೂಂಜಾ. ಇದನ್ನೆಲ್ಲ ಮನಗಂಡೆ ಹಂಸಲೇಖ ಒಂದು ಹಾಡು ಬರೆದಿದ್ದರು 'ದಾವಣಿ ಒಳಗಿದೆ ಲಂಗ, ಲಂಗದ ಮೇಲಿದೆ ಚಿಟ್ಟೆ..'

    ಲಂಗಾ ದಾವಣಿ ಅಪ್ಪಟ ಕನ್ನಡ ಪದ. ಇದಕ್ಕೆ ಇಂಗ್ಲಿಷ್ನಲ್ಲಿ ಏನಂತಾರೆ ಎಂದು ನಿಘಂಟುಗಳನ್ನು ಕೆದಕಿ ನೋಡಿದೆ. ಸರಿಯಾದ ಉತ್ತರ ಸಿಕ್ತಿಲ್ಲ. ಅನೇಕರಿಗೆ ಕೇಳಿದೆ. ಶೇ 25ರಷ್ಟು ಮಂದಿ half Saree ಎಂದು ಎಸ್ಎಂಎಸ್ ಉತ್ತರ ಕಳಿಸಿದರು. ನನಗೆ ಒಪ್ಪಿಗೆ ಆಗಲಿಲ್ಲ. ಸೀರೆಯನ್ನು ಹರಿದು ಅರ್ಧ ಮಾಡಿದರೆ ಅದು ಹಾಫ್ ಸ್ಯಾರಿ ಆಗುತ್ತದೆ. ಲಂಗ ದಾವಣಿಗೆ ಪ್ರತ್ಯೇಕ ಅಸ್ತಿತ್ವವೇ ಇಲ್ಲವೇ?

    ಸಿನಿಮಾ ಹೇಗೋ ಹಾಗೆ ನಮ್ಮ ಹುಡುಗಿಯರ ಡ್ರೆಸ್ಸು ಇರತ್ತೋ ಅಥವಾ ಹುಡುಗಿಯರು ಯಾವ ರೀತಿ ಡ್ರೆಸ್ಸು ಮಾಡ್ತಾರೋ ಅದೇ ರೀತಿ ನಿರ್ದೇಶಕರು ತಮ್ಮ ನಾಯಕರಿಗೆ ಬಟ್ಟೆ ಹಾಕ್ತಾರೋ ಅರ್ಥವಾಗಲೊಲ್ಲದು. ಒಟ್ಟಿನಲ್ಲಿ ಹಳದಿ ಲಂಗ, ತಿಳಿಹಸುರು ಕುಪ್ಪುಸ ಮತ್ತು ಅರೆ ಪಾರದರ್ಶಕ ಕಪ್ಪು ದಾವಣಿ ತೊಟ್ಟುಕೊಂಡು ನವಿಲುಗರಿ ಬಚ್ಚಿಟ್ಟುಕೊಂಡ ನೋಟುಬುಕ್ಕುಗಳನ್ನು ಎದೆಗವಚಿಕೊಂಡು ದಿಬ್ಬ ಹತ್ತಿ ಇಳಿದು ಶಾಲೆಗೆ ಹೋಗುವ ಬರಿಗಾಲ ಕೋಮಲೆಯರು ಈಗ ಸಿಗುವುದಿಲ್ಲ, ಮಲೆನಾಡಿನಲ್ಲೂ ಇಲ್ಲ, ಮನಸಾರೆ ಚಿತ್ರದಲ್ಲೂ ಇಲ್ಲ!

    Monday, December 14, 2009, 17:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X