
ಪರಮಾತ್ಮ ಚಿತ್ರ ಮೊದಲ ಹೆಜ್ಜೆಯಲ್ಲಿ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. ಆಡಿಯೋ ಬಿಡುಗಡೆಯಾದ ಮೂರೇ ದಿನದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಸಿಡಿ ಬಿಕರಿಯಾಗಿವೆ. ಇದು ಹಾಡಿನ ಟ್ಯೂನ್ ಮತ್ತು ಸಾಹಿತ್ಯದ ಪವರ್ ಎನ್ನುತ್ತೆ ಚಿತ್ರತಂಡ. ಚಿತ್ರದ ಆಡಿಯೋ ರೈಟ್ಸ್ ಅಶ್ವಿನಿ ಆಡಿಯೋ ಸುಮಾರು ಒಂದು ಕೋಟಿಗೂ ಅಧಿಕ ಮೌಲ್ಯ ನೀಡಿ ತನ್ನದಾಗಿಸಿ ಕೊಂಡಿರುವುದು ನಿಮಗೆ ಈಗಾಗಲೇ ತಿಳಿದಿದೆ.
ಕೆಲವೇ ದಿನಗಳ ಹಿಂದೆ ಜೋಗಯ್ಯ ಚಿತ್ರದ ಪ್ಲಾಟಿನಂ ಡಿಸ್ಕ್ ಅಶ್ವಿನಿ ಆಡಿಯೋ ಬಿಡುಗಡೆ ಮಾಡಿತ್ತು. ಈಗ ಪರಮಾತ್ಮ ಚಿತ್ರದ ಸರದಿ. ವಿಶಿಷ್ಟ ರೀತಿಯ ಸಾಹಿತ್ಯ ಮತ್ತು ಟ್ಯೂನ್ ಮೂಲಕ ಹಾಡು ಈಗ ಜನಪ್ರಿಯತೆಯತ್ತ ದಾಪುಗಾಲು ಹಾಕುತ್ತಿದೆ. ಹೀಗಾಗಿ ಚಿತ್ರದ ನಿರ್ಮಾಪಕರು ರಿಲೀಫ್ ಆಗಿದ್ದಾರೆ.
ಐಪಾಡ್ ಮತ್ತು ಮೊಬೈಲ್ ನಲ್ಲಿ ಸಾವಿರಾರು ಪದಗಳನ್ನು ಸೇವ್ (save) ಮಾಡಿಕೊಳ್ಳಬಹುದಾದ ಈ ಕಾಲದಲ್ಲಿ ಆಡಿಯೋ ಈ ಮಟ್ಟಿಗೆ ಯಶಸ್ಸು ಕಾಣುತ್ತೆ ಅಂದು ಕೊಂಡಿರಲಿಲ್ಲ. ಮುಖ್ಯವಾಗಿ ಸಾಹಿತ್ಯವನ್ನು ವಿಭಿನ್ನ ರೀತಿಯಲ್ಲಿ ಬರೆಯಲು ನಾನು ಮತ್ತು ಜಯಂತ್ ಕಾಯ್ಕಿಣಿ ನಿರ್ಧರಿಸಿದೆವು. 20 ರಿಂದ 30 ವರ್ಷದ ಯುವ ಜನಾಂಗ ವನ್ನು ಸೆಳೆಯುವ ಸಾಹಿತ್ಯ ನೀಡುವ ನಿರ್ಧಾರಕ್ಕೆ ಬಂದೆವು ಎಂದು ಭಟ್ರು ಹೇಳಿದ್ದಾರೆ.




























