twitter
    For Quick Alerts
    ALLOW NOTIFICATIONS  
    For Daily Alerts

    ತುತ್ತು ಅನ್ನ ತಿನ್ನೋಕೆ ಹಾಡು ಹುಟ್ಟಿದ ಸಮಯ

    By *ಎ ಆರ್ ಮಣಿಕಾಂತ್
    |

    ಒಂದಲ್ಲ ಒಂದು ಸಂದರ್ಭದಲ್ಲಿ ಎಲ್ಲರಿಗೂ ಇಂಥ ಅನುಭವವಾಗಿರುತ್ತದೆ. ಏನೆಂದರೆ, ತುಂಬ ನಿಷ್ಠೆಯಿಂದ ದುಡಿದ ಕಂಪನಿಯಲ್ಲೇ ಅವಮಾನವಾಗಿಬಿಡುತ್ತದೆ, ನೌಕರಿ ಹೋಗುತ್ತದೆ ಅಥವಾ ಯಾರದೋ ಕುತಂತ್ರದ ಕಾರಣಕ್ಕೆ ಹುಟ್ಟಿದ ಊರಲ್ಲಿ ಮರ್ಯಾದೆ ಹೋಗುತ್ತದೆ. ಊರ ಮಂದಿಯಿಂದ ಬಹಿಷ್ಕಾರ"ದ ಬಹುಮಾನ ಸಿಗುತ್ತದೆ. ಇನ್ನು ಕೆಲವೊಂದು ಸಂದರ್ಭಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ಮನೆಮಂದಿಯೋ, ಬಂಧುಗಳೋ ಅವಮಾನಿಸಿರುತ್ತಾರೆ. ನಮ್ಮ ಪ್ರತಿ ನಡೆಯನ್ನೂ ಅನುಮಾನದಿಂದ ನೋಡಿರುತ್ತಾರೆ. ಅಷ್ಟೇ ಅಲ್ಲ, ಇನ್ನು ನೀನು ಉದ್ಧಾರ ಆಗೋದಿಲ್ಲ ಕಣೋ ಎಂದು ಭವಿಷ್ಯವನ್ನೂ ಹೇಳಿಬಿಡುತ್ತಾರೆ. ಆ ಮೂಲಕ ವ್ಯಕ್ತಿಯೊಬ್ಬನ ಆತ್ಮವಿಶ್ವಾಸಕ್ಕೇ ಪೆಟ್ಟು ಕೊಡುವ ಕೆಲಸಕ್ಕೆ ಮುಂದಾಗಿಬಿಡುತ್ತಾರೆ.

    ಭಾವುಕ ಮನಸ್ಸಿನವರಾದರೆ ಇಂಥ ಸಂದರ್ಭಗಳಲ್ಲಿ ಸವಾಲಿಗೆ ಎದೆಯೊಡ್ಡದೆ ಗಪ್ಚುಪ್ ಆಗಿ ಉಳಿದುಬಿಡುತ್ತಾರೆ. ಆದರೆ ಸ್ವಲ್ಪ ಡೇರ್ಡೆವಿಲ್ ವ್ಯಕ್ತಿತ್ವದ ಜನ ಮಾತ್ರ -ಈ ಕೆಲಸ ಇಲ್ಲದಿದ್ರೆ ಇನ್ನೊಂದು. ಈ ಊರಲ್ಲಿ ಜಾಗ ಸಿಗದಿದ್ರೆ ಕತ್ತೆ ಬಾಲ ಹೋಯ್ತು. ಇದರ ಅಪ್ಪನಂಥ ಊರಲ್ಲಿ ಮನೆಕಟ್ಕೊಂಡು ಇರ್ತೀನಿ ಎಂದು ನಿರ್ಧರಿಸಿಬಿಡುತ್ತಾರೆ. ಇಂಥ ಸಂದರ್ಭಗಳಲ್ಲಿ ನೊಂದವರೆಲ್ಲರೂ ಸ್ವಗತದಲ್ಲಿ ಹಾಡುತ್ತಾರೆ: ತುತ್ತು ಅನ್ನ ತಿನ್ನೋಕೆ/ ಬೊಗಸೆ ನೀರು ಕುಡಿಯೋಕೆ/ ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ/ ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ…"

    ವಿಷ್ಣುವರ್ಧನ್ ಅವರು ಅದ್ಭುತವಾಗಿ ಹಾಡಿರುವ ಈ ಹಾಡು, 1982ರಲ್ಲಿ ತೆರೆಕಂಡ ಜಿಮ್ಮಿಗಲ್ಲು" ಚಿತ್ರದ್ದು. ಸಾಹಿತಿ ವೇಣುಗೋಪಾಲ ಕಾಸರಗೋಡು ಅವರ ಕಾದಂಬರಿ ಆಧರಿಸಿ ತೆಗೆದ ಸಿನಿಮಾ ಜಿಮ್ಮಿಗಲ್ಲು. ಜೀವನವೆಂಬ ಹೋರಾಟದಲ್ಲಿ ಎಡವಿಬಿದ್ದ; ಸೋಲಿನಿಂದ ತತ್ತರಿಸಿಹೋದ; ಮುಂದೇನು ಎಂದು ತಿಳಿಯದೆ ಕಕ್ಕಾಬಿಕ್ಕಿಯಾದ ಎಲ್ಲರಿಗೂ ಧೈರ್ಯ ಹೇಳುವಂತಿರುವುದು ತುತ್ತು ಅನ್ನ ತಿನ್ನೋಕೆ" ಹಾಡಿನ ಹೆಚ್ಚುಗಾರಿಕೆ. ಈ ಗೀತೆ ರಚಿಸಿದವರು ಚಿ. ಉದಯಶಂಕರ್. ಈ ಹಾಡು ಬರೆದ ಸಂದರ್ಭದ ಬಗ್ಗೆ ಜಿಮ್ಮಿಗಲ್ಲು" ಚಿತ್ರದ ನಿರ್ದೇಶಕರೂ ಆದ ಕೆಎಸ್ಎಲ್ ಸ್ವಾಮಿ (ರವೀ)ಯವರು ವಿವರಿಸಿದ್ದು ಹೀಗೆ:

    ಇದು 1982ರ ಮಾತು. ವೇಣುಗೋಪಾಲ ಕಾಸರಗೋಡು ಅವರ ಕಾದಂಬರಿಯನ್ನು ಸಿನಿಮಾ ಮಾಡಲು ನಿರ್ಧರಿಸಿದ್ದಾಯಿತು. ಚಿತ್ರಕಥೆ ಸಂಭಾಷಣೆ ರಚನೆಯ ಕೆಲಸ ಮುಗಿದ ನಂತರ ಎಲ್ಲೆಲ್ಲಿ ಹಾಡುಗಳು ಬರಬೇಕು ಎಂದು ತಿಳಿಸಲು ಚಿ. ಉದಯಶಂಕರ್ ಅವರೊಂದಿಗೆ ಚರ್ಚೆಗೆ ಕೂತೆವು. ಚಿತ್ರದಲ್ಲಿ ನಾಯಕ ಹಳ್ಳಿಮುಕ್ಕ. ಅನಕ್ಷರಸ್ಥ, ಅಮಾಯಕ. ಮುಗ್ಧ. ಊರ ಪಟೇಲನ ಕುತಂತ್ರದಿಂದ ಆತ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗಿ ಬರುತ್ತದೆ. ಇದೇ ಕಾರಣದಿಂದ ಅವನಿಗೆ ಊರಿಂದ ಬಹಿಷ್ಕಾರ ಹಾಕಲಾಗುತ್ತದೆ. ತಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದು ಅವನಿಗೇ ತಿಳಿದಿರುವುದಿಲ್ಲ. ಆದರೆ, ಮುಂದಿನ ದಿನಗಳಲ್ಲಿ ತುಂಬ ಚನ್ನಾಗಿ ಬದುಕಬೇಕು ಹಾಗೂ ಬದುಕಬಲ್ಲೆ ಎಂಬ ಆತ್ಮವಿಶ್ವಾಸ ಅವನಿಗಿರುತ್ತದೆ. ಇಂಥ ಪರಿಸ್ಥಿತಿಯಲ್ಲಿ ಹೊಲಗಳ ಹಾದಿಯಲ್ಲಿ ಹೋಗುತ್ತಾ ತನಗೆ ಎದುರಾದ ಒಟ್ಟು ಪರಿಸ್ಥಿತಿಗೇ ಸವಾಲು ಹಾಕುವಂತೆ ನಾಯಕ ಹಾಡುತ್ತಾ ಸಾಗಬೇಕು…

    ಇಷ್ಟನ್ನೂ ವಿವರಿಸಿದ ನಿರ್ದೇಶಕ ರವೀ, ನಂತರ ಹೇಳಿದರಂತೆ: ಶಂಕರಾ, ಈ ಸಂದರ್ಭಕ್ಕೆ ಸುಭಾಷಿತದಂಥ ಒಂದು ಹಾಡು ಬೇಕು. ಸುಭಾಷಿತದಂತೆಯೇ ಅದು ಸರಳವಾಗಿರಬೇಕು. ಹಾಡಿನ ಸಾಹಿತ್ಯ ತಕ್ಷಣಕ್ಕೇ ಎಲ್ಲರಿಗೂ ಅರ್ಥವಾಗಿಬಿಡಬೇಕು. ಆ ಹಾಡು, ನೊಂದವರಿಗೆ ಸಮಾಧಾನ ಹೇಳುವಂತಿರಬೇಕು. ಒಂದು ಚಿಕ್ಕ ಸೋಲಿಗೇ ಬದುಕು ಮುಗಿದುಹೋಗುವುದಿಲ್ಲ. ಸೋಲಿನ ಹಿಂದೆಯೇ ಗೆಲುವಿನ ಕುದುರೆಯೂ ನಿಂತಿರುತ್ತದೆ. ಅದನ್ನು ಏರಿಹೋಗುವ ಮನಸ್ಸಿರಬೇಕು. ಒಂದು ನೌಕರಿ ಕೈತಪ್ಪಿದರೆ, ಒಂದು ಊರಲ್ಲಿ ಆಶ್ರಯವೇ ದಕ್ಕದೆ ಹೋದರೆ, ಸಂಕಟ ಪಡಬೇಕಾದ ಅಗತ್ಯ ಖಂಡಿತ ಇಲ್ಲ. ನಂಬಿದವರನ್ನು ದೇವರು ಯಾವತ್ತೂ ಕೈ ಬಿಡುವುದಿಲ್ಲ ಎಂಬ ಸಾಲುಗಳೆಲ್ಲ ಆ ಹಾಡಲ್ಲಿ ಇರಬೇಕು. ಹಾಡು ಕೇಳಿದ ಜನ ಅರೆ, ಹೌದಲ್ವಾ? ಬದುಕನ್ನು ನಾವು ಎದುರಿಸಬೇಕಾದದ್ದು ಹೀಗೇ ಅಲ್ವಾ? ಈ ಹಾಡಲ್ಲಿರುವಂಥ ಭಾವನೆಯೇ ಎಷ್ಟೋ ಬಾರಿ ನಮ್ಮ ಮನಸ್ಸಿಗೂ ಬಂದು ಹೋಗಿದೆ. ಆದರೆ ನಾವ್ಯಾರೂ ಅದನ್ನು ಗಮನಿಸಿರುವುದೇ ಇಲ್ಲ" ಅನ್ನಿಸಿಬಿಡಬೇಕು. ಈ ಹಾಡಿನಲ್ಲಿ ವೇದಾಂತ ಇರಬೇಕು. ಬುದ್ಧಿ ಮಾತಿರಬೇಕು. ಬದುಕಿನ ನಶ್ವರತೆಯ ವಿವರ ಬರಬೇಕು. ನಮಗೆ ನಾವೇ ದಿಕ್ಕು ಎಂಬುದು ಹೈಲೈಟ್ ಆಗಬೇಕು. ಎಂದರಂತೆ.

    ಸರಿ. ನೀವು ಹೇಳಿರುವ ಅಷ್ಟೂ ಅಂಶಗಳು ಬರುವಂಥ ಹಾಡು ಬರೆದುಕೊಡ್ತೇನೆ. ಈ ಚಿತ್ರದ ನಾಯಕ ಹಳ್ಳೀಮುಕ್ಕ ತಾನೆ? ಹಾಗಾಗಿ ಇಡೀ ಹಾಡು ಗ್ರಾಮ್ಯ ಭಾಷೆಯ ಪದಗಳಲ್ಲಿರಲಿ" ಎಂದರಂತೆ ಉದಯಶಂಕರ್. ನಂತರದ ಹದಿನೈದೇ ನಿಮಿಷದಲ್ಲಿ ತುತ್ತು ಅನ್ನ ತಿನ್ನೋಕೆ" ಹಾಡು ಬರೆದುಬಿಟ್ಟರಂತೆ.

    ಆ ದಿನಗಳಲ್ಲಿ (ಮತ್ತು ಈಗಲೂ ಸಹ) ವಿಷ್ಣುವರ್ಧನ್ ಅವರ ಚಿತ್ರಗಳಿಗೆ ಹಿನ್ನೆಲೆ ಗಾಯಕರಾಗುತ್ತಿದ್ದವರು ಎಸ್.ಪಿ. ಬಾಲಸುಬ್ರಹ್ಮಣ್ಯಂ. ಆದರೆ, ಜಿಮ್ಮಿಗಲ್ಲು ಚಿತ್ರದ ತುತ್ತು ಅನ್ನ ತಿನ್ನೋಕೆ" ಗೀತೆಯನ್ನು ಸ್ವತಃ ವಿಷ್ಣುವರ್ಧನ್ ಅವರೇ ಹಾಡಿದರು. ವಿಷ್ಣುವರ್ಧನ್ ಅವರು ಗಾಯಕರಾದ ಆ ಸಂದರ್ಭವನ್ನು ಕೆಎಸ್ಎಲ್ ಸ್ವಾಮಿಯವರು ವಿವರಿಸಿದ್ದು ಹೀಗೆ: ಜಿಮ್ಮಿಗಲ್ಲು" ಚಿತ್ರದಲ್ಲಿ ನಾಯಕ, ತಾನು ಮಾಡದ ತಪ್ಪಿಗೆ ಅಪರಾಧ ಸ್ಥಾನದಲ್ಲಿರುತ್ತಾನೆ. ಕಷ್ಟದಲ್ಲಿಯೇ ಬದುಕು ಸಾಗಿಸುತ್ತಿರುತ್ತಾನೆ. ಇವತ್ತಿನ ಹಸಿವು ನೀಗಲಿಕ್ಕೆ ತುತ್ತು ಅನ್ನ, ಮಲಗಲಿಕ್ಕೆ ಒಂದಿಷ್ಟು ಜಾಗ, ಮಾನ ಕಾಪಾಡಿಕೊಳ್ಳಲು ಒಂದೆರಡು ಬಟ್ಟೆ ಇಷ್ಟಿದ್ದರೆ ಸಾಕು ಎಂಬುದು ಅವನ ಮನೋಭಾವ ಆಗಿರುತ್ತದೆ. ಗಾಯಕರಿಗೆ ಇದನ್ನೆಲ್ಲ ವಿವರಿಸಿ ಹೇಳಲು ಆಗುವುದಿಲ್ಲ. ಜತೆಗೆ, ಹಿನ್ನೆಲೆ ಗಾಯಕರಿಂದ ಹಾಡಿಸಿದರೆ, ಪ್ರತಿಯೊಂದು ಹಾಡಿಗೂ ತಂತಾನೇ ಸಂಗೀತದ ಚೌಕಟ್ಟು ಬಂದುಬಿಡುತ್ತದೆ. ಅಂಥ ಹಾಡು ನಮಗೆ ಬೇಕಿರಲಿಲ್ಲ. ಹಾಗಾಗಿ, ಇಡೀ ಸಿನಿಮಾದ ಸನ್ನಿವೇಶವನ್ನು ಅರ್ಥಮಾಡಿಕೊಂಡಿರುವ ಕಥಾನಾಯಕ ವಿಷ್ಣುವರ್ಧನ್ ಅವರಿಂದಲೇ ಹಾಡಿಸೋಣ ಎಂದುಕೊಂಡೆವು.

    ಹೀಗೆ ನಿರ್ಧರಿಸಲು ಮತ್ತೂ ಒಂದು ಕಾರಣವಿತ್ತು. ಏನೆಂದರೆ 1982ರ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರು ಕೆಲವು ವೈಯಕ್ತಿಕ ನೋವುಗಳಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಇಂಥ ಸಂದರ್ಭದಲ್ಲಿ ಅವರ ಮನಸ್ಸಿನ ಭಾವನೆಯನ್ನು ಬಿಂಬಿಸುವಂಥ ಹಾಗೂ ಅವರಿಗೆ ಆತ್ಮಸ್ಥೈರ್ಯ ತುಂಬುವಂಥ ಹಾಡು ಇದಾಗಿತ್ತು. ಹಾಗಾಗಿ, ವಿಷ್ಣು ಅವರಿಂದಲೇ ಹಾಡಿಸಿದರೆ ಹಾಡಿಗೆ ನ್ಯಾಯ ಒದಗಿಸಿದಂತಾಗುತ್ತದೆ ಅನ್ನಿಸಿತು. ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಅವರಿಗೆ ಇದನ್ನೆಲ್ಲ ಹೇಳಿದೆವು. ಹೊಸ ಪ್ರಯೋಗಗಳಿಗೆ ಸದಾ ಹಂಬಲಿಸುತ್ತಿದ್ದ ಅವರು-ವೆರೀಗುಡ್. ಹಾಗೇ ಮಾಡೋಣ" ಎಂದರು.

    ಮುಂದೆ ನಡೆದದ್ದು ಇತಿಹಾಸ. ತಮ್ಮ ಎದೆಯಾಳದ ಭಾವನೆಯನ್ನೆಲ್ಲ ಈ ಹಾಡಿನಲ್ಲಿ ತಂದ ವಿಷ್ಣುವರ್ಧನ್, ಅದ್ಭುತವಾಗಿ ಹಾಡಿದರು. ಈ ಹಾಡು ಏಕಕಾಲಕ್ಕೆ ನಟ ವಿಷ್ಣುವರ್ಧನ್ ಹಾಗೂ ಜಿಮ್ಮಿಗಲ್ಲು" ಚಿತ್ರದ ನಾಯಕನ ಸ್ವಗತ ಲಹರಿಯಾಗಿತ್ತು. ವಿಷ್ಣುವರ್ಧನ್ ಅವರ ಮುಂದಿನ ಹೆಜ್ಜೆ ಏನು ಎಂಬುದಕ್ಕೆ ಆ ಹಾಡಿನಲ್ಲಿ ಉತ್ತರವಿತ್ತು. ನಂತರದ ದಿನಗಳಲ್ಲಿ ವಿಷ್ಣು ವರ್ಧನ್ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಜನ ಒಕ್ಕೊರಲಿನಿಂದ ಕೂಗುತ್ತಿದ್ದರು: ತುತ್ತು ಅನ್ನ ತಿನ್ನೋಕೆ…" ಹಾಡು ಗುರೂ…

    ***
    ಈಗ ಸುಮ್ಮನೇ ಯೋಚಿಸಿನೋಡಿ. ತುತ್ತು ಅನ್ನ ತಿನ್ನೋಕೆ…" ಗೀತೆಯನ್ನು ನಾವು-ನೀವೆಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಹಾಡಿರುತ್ತೇವೆ. ತುಂಬ ನೋವಾದಾಗ, ಮಾಡದ ತಪ್ಪಿಗೆ ಅವಮಾನವಾದಾಗ, ಜೀವನದ ಮೇಲೇ ಜಿಗುಪ್ಸೆ ಬಂದುಬಿಟ್ಟಾಗ ಒಮ್ಮೆ ಈ ಹಾಡು ಕೇಳಿಬಿಟ್ಟರೆ ಹೌದಲ್ವ? ಬದುಕೆಂದರೆ ಇಷ್ಟೇನೇ. ಇನ್ನೊಂದಷ್ಟು ಸಾಹಸಗಳಿಗೆ ಮೈ ಒಡ್ಡೋಣ ಅನ್ನಿಸಿಬಿಡುತ್ತದೆ. ಗಮನಿಸಿದ್ದೀರ ತಾನೆ? ಈ ಹಾಡಲ್ಲಿ ಒಂದು ಸಾಲಿದೆ: ಕಡ್ನಾಗೊಂದು ಮರವೇ ಒಣಗಿ ಬಿದ್ರೆ ಏನಾಯ್ತು? /ಊರ್ನಾಗೊಂದು ಮನೆಯೇ ಉರಿದು ಹೋದ್ರೆ ಏನಾಯ್ತು?

    ಇವತ್ತು ಯಾವುದೇ ಪತ್ರಿಕೆ, ಮ್ಯಾಗಜಿನ್ ತೆರೆದರೂ ಬದುಕಲು ಕಲಿಯಿರಿ, ವ್ಯಕ್ತಿತ್ವವಿಕಸನ, ಸೋಲೇ ಗೆಲುವಿನ ಸೋಪಾನ" ಎಂಬರ್ಥದ ಲೇಖನ, ಅಂಕಣಗಳು ಪ್ರಕಟವಾಗುತ್ತಲೇ ಇವೆ. ಆದರೆ, ಯಾವೊಂದು ಲೇಖನವೂ ನೀಡಲಾರದಂಥ ಸಂದೇಶವನ್ನು ಒಂದು ಹಾಡಿನ ಮೂಲಕ 27 ವರ್ಷಗಳ ಹಿಂದೆಯೇ ಹೇಳಿಬಿಟ್ಟಿದ್ದರು ಉದಯಶಂಕರ್. ಇವನ್ನೆಲ್ಲ ನೆನಪುಮಾಡಿಕೊಂಡೇ ಉದಯಶಂಕರ್ರನ್ನು ದೇವರಿಗೂ, ನಿಮರ್ಮಾಪಕ-ನಿರ್ದೇಶಕರನ್ನು ಭಕ್ತರಿಗೂ ಹೋಲಿಸಿದರು ಕೆಎಸ್ಎಲ್ ಸ್ವಾಮಿ. ಹಿಂದೆಯೇ-ಉದಯಶಂಕರ್ ಎಲ್ಲರನ್ನೂ ಕಾಪಾಡಿದ ದೇವರು" ಎಂದೂ ಸೇರಿಸಿದರು. ಎಷ್ಟೊಂದು ಸತ್ಯದ ಮಾತಲ್ಲವೆ? ತುತ್ತು ಅನ್ನ ತಿನ್ನೋಕೆ...ಹಾಡಿನ ಪೂರ್ಣ ಚರಣ

    Wednesday, December 30, 2009, 12:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X