ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ಚಿತ್ರರಸಿಕರ ಹೃದಯವೀಣೆ ಮೀಟಿದ್ದ ತಾರೆ ಖುಷ್ಬೂ ಈಗ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಈ ಬಾರಿ ಅವರು ಹಿಂದು ಧಾರ್ಮಿಕ ಭಾವನೆಗಳಿಗೆ ಮರ್ಮಾಘಾತ ನೀಡದಿದ್ದರೂ ಒಂಚೂರು ಹೃದಯಾಘಾತವನ್ನಂತೂ ತಂದಿಟ್ಟಿದ್ದಾರೆ.
ಇತ್ತೀಚೆಗೆ ಹೈದರಾಬಾದಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಖುಷ್ಬೂ ವಿಚಿತ್ರ ಸೀರೆಯನ್ನು ತೊಟ್ಟು ಬಂದಿದ್ದರು. ಎಲ್ಲರ ಕಣ್ಣು ಅವರ ಸೀರೆ ಮೇಲೆ ನೆಟ್ಟಿತ್ತು. ಸೂಕ್ಷ್ಮವಾಗಿ ನೋಡಿದವರು ಅಯ್ಯೋ ರಾಮ ರಾಮ ಕೃಷ್ಣ ಕೃಷ್ಣ ಎಂದು ಮೂಗಿನ ಮೇಲೆ ಬೆರಳಿಟ್ಟರು.
ಖುಷ್ಬೂ ಸೀರೆ ಮೇಲೆ ರಾಮ, ಕೃಷ್ಣ, ಹನುಮಂತನ ಚಿತ್ರಗಳು ಪ್ರಿಂಟಾಗಿರುವುದನ್ನು ನೋಡಿದ ಹಿಂದೂ ಮಕ್ಕಳ್ ಕಚ್ಚಿ (ಎಚ್ ಎಂಕೆ) ಪಕ್ಷ ಕಾಳಿಂಗಸರ್ಪದಂತೆ ಬುಸ್ ಎಂದು ಹೆಡೆ ಎತ್ತಿದೆ. ಖುಷ್ಬೂ ಅವರು ಹಿಂದುಗಳ ಧಾರ್ಮಿಕ ಭಾವನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಂತಿಲ್ಲ ಎಂದಿದೆ ಹಿಂದು ಮಕ್ಕಳ್ ಕಚ್ಚಿ.
ಖುಷ್ಬೂ ಅವರಿಗೆ ಒಂಚೂರು ಸದಭಿರುಚಿಯಿಲ್ಲ. ಇದು ಅವರ ಕೆಟ್ಟ ಅಭಿರುಚಿಗೆ ಕನ್ನಡಿ ಹಿಡಿಯುತ್ತದೆ. ರಾಮ, ಕೃಷ್ಣ ಹಾಗೂ ಹನುಮಂತ ಹಿಂದುಗಳ ಪವಿತ್ರ ದೇವಾನುದೇವತೆಗಳು. ಹಿಂದು ದೇವತೆಗಳನ್ನು ಸೀರೆಯ ಮೇಲೆ ಪ್ರಿಂಟ್ ಹಾಕಿಸಿಕೊಳ್ಳುವ ಮೂಲಕ ಬಿಟ್ಟಿ ಪ್ರಚಾರ ಗಿಟ್ಟಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದಿದೆ ಎಚ್ಎಂಕೆ.

































