ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಲ್ಲಿಗೆರೆಯ 'ಮರಿ' – ಸಣ್ಣ ಕತೆ

By ಬರತ್ ಕುಮಾರ್
|
Google Oneindia Kannada News

ನೆಲ್ಲಿಗೆರೆಯ ಆ ಹೊತ್ತಾರೆಯು ಅಲ್ಲಮನ ವಚನದಂತೆ ಒಗಟು ಒಗಟಾಗಿತ್ತು. ಆ ಕಡೆ ಕತ್ತಲೆಯೂ ಅಲ್ಲ, ಈ ಕಡೆ ಬೆಳಕೂ ಇಲ್ಲ ಅನ್ನುವಂತೆ ಮಬ್ಬು ಮಬ್ಬಾಗಿ ಹೊತ್ತು ಹುಟ್ಟಹತ್ತಿತ್ತು. ಆಗ ತಾನೆ ಕಣ್ಣು ಬಿಟ್ಟ ಚನ್ನರಾಜು ಬಲ ಮಗ್ಗಲಲ್ಲಿ ಎದ್ದು ದನದ ಕೊಟ್ಟಿಗೆಯ ಹತ್ತಿರ ಬಂದ. ಅಶ್ಟು ಹೊತ್ತಿಗೆ ಚನ್ನಾಜಪ್ಪ-
"ಲೋ ಮೊಗ, ಕೊಟ್ಟಿಗೆಕಸವ ಮಕರಿಗೆ ಆಕಿವ್ನಿ..ವೋಗಿ ತಿಪ್ಗೆ ಸುರುದ್ಬುಡಪ್ಪ".

ಚನ್ನರಾಜು ಗುಡುಗುಡನೆ ಓಡಿ ಟವಲ್ಲನ್ನು ಸಿಂಬಿ ಮಾಡಿ, ತಲೆಯ ಮೇಲೆ ಮಕರಿ ಹೊತ್ತುಕೊಂಡು ತಿಪ್ಪೆಯ ಕಡೆ ನಡೆದ. ಕುರಿಮರಿ ಮತ್ತು ಅದರ ಮೇವನ್ನು ಗಮನಿಸಿದ ಮೇಲೆ ಚನ್ನಾಜಪ್ಪ-

"ಲೇ.. ವಸಿ ಗದ್ದೆ ತವ್ಕೆ ವೋಗ್ ಬತ್ತಿವ್ನಿ, ನೀರ್ ನೋಡ್ಬೇಕ್" ಎಂದು ಹಟ್ಟಿಯ ಒಳಗೆ ಇದ್ದ ಹೆಂಡತಿಗೆ ಕೂಗಿ ಹೇಳಿ ಊರಾಚೆಯ ಗದ್ದೆಯ ಕಡೆಗೆ ಅಡಿಯಿಟ್ಟ.
ಕಸ ಸುರಿದು ಬಂದ ಚನ್ನರಾಜು - "ಅವ್ವ, ಕಾವಲಿ ತವ್ಕೆ ವೋಗಿದ್ ಬತ್ತಿನಿ" ಎಂದು ಓಡುತ್ತಲೇ ಹೇಳಿದ.

ಚನ್ನರಾಜು ಕಾವಲಿಯ ಹತ್ತಿರ ಬಂದಾಗ ಅವನ ಗೆಳೆಯ ತಿಬ್ಬ ಕಯ್ಕಾಲು ತೊಳೆದುಕೊಳ್ಳುತ್ತಿದ್ದ. ಅವನನ್ನು ಕುರಿತು -
"ಅಜೋ ತಿಬ್ಬ, ಇವತ್ತು ಸ್ಕೂಲ್ನಾಗೆ ಕಂಸಾಳೆ ಪ್ರಾಕ್ಟೀಸ್ ಅದೆ, ಮರೀದೆ ಬಯ್ಗ್ ವೊತ್ಗೆ ಬಂಬುಡು". ಎಲ್ಲಿಗೆ ಬರಬೇಕೆಂದು ಚನ್ನರಾಜು ಹೇಳಬೇಕಾಗಿರಲಿಲ್ಲ.
*****
ಶಾಲೆಯಲ್ಲಿ ಕನ್ನಡದ ಕಲಿಹೊತ್ತು ಮುಗಿದು ಮೇಶ್ಟರು ಆಚೆಗೆ ಬಂದರು. ಮೇಶ್ಟರ ಹಿಂದೆಯೇ ಚನ್ನರಾಜು ಓಡಿ ಬಂದು -
"ಸಾರ್, ಒಂದು ಕೇಳ್ಬೇಕಿತ್ತು" ಎಂದ
"ಅದಕ್ಕೇನ್ ಕೇಳಪ್ಪ. ಏನ್ ವಿಶ್ಯ?"
"ಸಾರ್, ನೀವೇನೊ ಈ ವಚನದ ಪಾಟದಲ್ಲಿ ಅದರ ಅರ‍್ತ ಚೆನ್ನಾಗಿ ಯೋಳ್ಕೊಟ್ರಿ...ಆದ್ರೆ ಇದನ್ನೆಲ್ಲ ಅವ್ರು ಯಾಕ್ ಯೋಳುದ್ರು? ಅಂತದ್ದೇನು ಆಗಿತ್ತು ಆವಾಗ?"
"ನೋಡು ಚನ್ನ, ಈಗ ನಾನು ಯೋಳುದ್ರು ನಿಂಗೆ ಸರಿಯಾಗಿ ಅರ‍್ತ ಆಗಕಿಲ್ಲ. ದೊಡ್ಡವನಾದ ಮೇಲೆ ನಿಂಗೆ ಗೊತ್ತಾಯ್ತುದೆ ಬುಡಪ್ಪ"
ಚನ್ನರಾಜು ಪೆಚ್ಚು ಮೋರೆ ಹಾಕಿಕೊಂಡು ಹಿಂದಿರುಗಿದ. ಆದರೆ ಅವನ ಒಳಗೆ ತಿಳಿದುಕೊಳ್ಳಬೇಕೆಂಬ ಹಂಬಲ ಹಾಗೆ ಉಳಿದುಕೊಂಡಿತ್ತು.

Mari(The Kid) a short story by Bharat Kumar

*****
ಬಯ್ಗು ಹೊತ್ತಿಗಾಗಲೆ ಕಂಸಾಳೆ ತಂಡ ತರಗತಿಯಲ್ಲೇ ಒಟ್ಟುಗೂಡಿತ್ತು. ಹುಡುಗರು ಕಂಸಾಳೆ ಹಿಡಿದು ಕುಣಿತದ ಹೆಜ್ಜೆ ಹಾಕುತ್ತಿದ್ದರು. ಚನ್ನರಾಜನೇ ಅದಕ್ಕೆ ಮುಂದಾಳ್ತನ ವಹಿಸಿಕೊಂಡಿದ್ದ. ಕಂಸಾಳೆಯ ಲಯವು ಕುಣಿತದ ಹೆಜ್ಜೆ ಮತ್ತು ಅವರು ಮಾಡುತ್ತಿದ್ದ ಜಿಗಿತ, ನೆಗೆದಾಟಗಳೊಂದಿಗೆ ಸೇರಿ ನೋಡುವವರಿಗೆ ಒಂದು ವಿಚಿತ್ರ ನಲಿವನ್ನು ನೀಡುತ್ತಿತ್ತು. ಪ್ರಾಕ್ಟೀಸ್ ಮುಗಿದು ಮನೆಯತ್ತ ಹೆಜ್ಜೆ ಹಾಕುತ್ತಿರುವಾಗ ಚನ್ನರಾಜು ತಿಬ್ಬನಿಗೆ -
"ಜೋ ತಿಬ್ಬ, ಕಂಸಾಳೆ ಆಡ್ತಿದ್ರೆ ವೊತ್ತ್ ವೋಗದೆ ಗೊತ್ತಾಗ್ನಿಲ್ಲ ನೋಡ್ ಮಂತ್ತೆ"
"ಊಂ, ಕಜ, ನನ್ಮಗಂದು ಯೆಜ್ಜೆ ಆಕ್ತಿದ್ರ...ಏನೋ ಒಂತರ ಕುಸಿ"
ಹೀಗೆ ಕಂಸಾಳೆ ಗುಂಗಿನಲ್ಲಿದ್ದ ಚನ್ನ ಮತ್ತು ತಿಬ್ಬರಿಗೆ ತಮ್ಮ ತಮ್ಮ ಹಟ್ಟಿ ತಲುಪಿದ್ದೇ ತಿಳಿಯಲಿಲ್ಲ. ಮನೆಗೆ ಬರುವಶ್ಟರಲ್ಲಿ ಕತ್ತಲಾಗಿತ್ತು. ಮನೆಗೆ ಯಾರೋ ನಂಟರು ಬಂದಿದ್ದಾರೆಂದು ಊಹಿಸಿವುದು ಚನ್ನರಾಜುವಿಗೆ ಕಶ್ಟವೇನಾಗಲಿಲ್ಲ. ಒಳಗಡೆ ಚನ್ನಾಜಪ್ಪ ಮತ್ತು ಯಾರೋ ಬಿಳಿಕೂದಲಿನ ಮುಪ್ಪಾದ ಒಬ್ಬ ವ್ಯಕ್ತಿ ಮಾತಾಡ್ುತತಿರುವುದು ಕೇಳಿಸುತ್ತಿತ್ತು. ನಡುಮನೆಗೆ ಬಂದಾಗ ತಿಳಿಯುತು ಬಂದಿರುವುದು ಪುಟ್ಬುದ್ದಿ ತಾತ ಅಂತ. ಹೋದವನೇ ಪುಟ್ಬುದ್ದಿ ತಾತನನ್ನು ತಬ್ಬಿ ಹಿಡಿದ. ತಾತನವರು ಕೂಡ ಚನ್ನರಾಜುವಿನ ಬೆನ್ನು ಸವರುತ್ತ-
"ಏನಪ್ಪ. ಬರೋದು ಇಶ್ಟು ವೊತ್ ಮಾಡ್ಬುಟ್ಟೆ. ಎಲ್ ವೋಗಿದ್ದೆ ಕೂಸೆ"
"ನಾಮು ಸ್ಕೂಲ್ನಾಗೆ ಕಂಸಾಳೆ ಪ್ರಾಕ್ಟೀಸ್ ಮಾಡ್ತ ಇಂವಿ ತಾತೊ...ಅದ್ಕೆ ವೊತ್ತಾಯ್ತು"
"ಸರಿ, ವಾಗಪ್ಪ...ಕಯ್ಕಾಲ್ ಮೊಕ ತೊಳೆದು ಇಬೂತಿ ಇಟ್ಕೊ ವೋಗು" ಎಂದು ಪುಟ್ಬುದ್ದಿ ಚನ್ನರಾಜುವಿಗೆ ಹೇಳುತ್ತಾ ಚನ್ನಾಜಪ್ಪನ ಕಡೆ ತಿರುಗುವಶ್ಟರಲ್ಲಿ ಚನ್ನರಾಜು ಬಚ್ಚಲುಮನೆಗೆ ಹೊರಟು ಹೋಗಿದ್ದ.
ಪುಟ್ಬುದ್ದಿ ಅರ‍್ದಕ್ಕೆ ನಿಲ್ಲಿಸಿದ್ದ ಮಾತನ್ನು ಮುಂದುವರೆಸುತ್ತಾ-
"ನೋಡು ಚನ್ನಾಜಪ್ಪ. ಇದನ್ನು ನಿನ್ನ ಪಾಲಿನ ಬಾಗ್ಯ ಅಂತ ತಿಳಿದಿಕೊ, ನಿನ್ನ ಮಗನಿಗಿಂತ ಸರಿಯಾಗಿರೋರ್ ಇದಕ್ಕೆ ಸಿಗ್ನಿಲ್ಲ ಕಪ್ಪ. ನಾಂವು ಎಲ್ಲ ಕಡೆ ತಡಕಾಡುದ್ಮೊ"
"ಅಲ್ ಪುಟ್ಬುದ್ದಣ್ಣಯ್ಯ, ಇಂವಿನ್ನು ಅರೀದ್ ಗಂಡು. ಇಂವುಂಗೆ ಆ ಪಟ್ಟ ಕಟ್ಟೋದಾ! ಅಲ್ದೇ ನಮ್ಗೂ ಬಿಟ್ಟಿರಕ್ಕೆ ಆಗಕಿಲ್ಲ ಕಣ್ಣಯ್ಯ" ಎಂದು ಚನ್ನಾಜಪ್ಪ ತನ್ನ ನಿಲುವನ್ನು ಬಲು ಮೆದುವಾಗಿಯೇ ತಿಳಿಸಿದ.

"ಅಲ್ಲಪ್ಪ. ಬುದ್ದೇವ್ರು ಬೇರೆ ನಿನ್ ಮಗನ್ನೇ ತಮ್ಮ ಮಟಕ್ಕೆ ಮರಿ ಮಾಡೋದು ಅಂತ ಎಲ್ಲ ಕಡೇ ಯೋಳ್ಕ ಬಂಬುಟ್ಟವ್ರೆ. ನಿನ್ ಮಗನ ಆಚಾರ-ಇಚಾರ, ಇದ್ಯಾಬುದ್ದಿ ಇವೆಲ್ಲ ನೋಡಿ ಮಟದ ಹಿರೀಕ್ರೆಲ್ಲ ಈ ತೀರ‍್ಮಾನಕ್ಕೆ ಬಂದವ್ರೆ. ನೀನ್ ನೋಡುದ್ರೆ ಆಗಕಿಲ್ಲ ಅಂತೀಯಲ್ಲಪ್ಪ"

ಚನ್ನಾಜಪ್ಪನು ಈ ಮಾತುಗಳಿಂದ ಒತ್ತಡಕ್ಕೆ ಸಿಕ್ಕಿದವನಂತಾಗಿ ಏನು ಮಾತಾಡಬೇಕೆಂದೇ ತಿಳಿಯದಾದನು. ಪುಟ್ಬುದ್ದಿ, ಮಟ ಇರುವ ಹಳ್ಳಿಯಾದ ತಮ್ಮಡಳ್ಳಿಯವರು. ಚನ್ನಾಜಪ್ಪನ ದೂರದ ನಂಟಸ್ತನಾದರೂ ಕಶ್ಟ-ಸುಕಕ್ಕೆ ಆದವರು. ಪುಟ್ಬುದ್ದಿಯ ಮೇಲೆ ಚನ್ನಾಜಪ್ಪ ಗವ್ರವದ ಒಣರಿಕೆಯನ್ನು ಹೊಂದಿದ್ದ, ಹಾಗಾಗಿ ಅವನು ಮರುಮಾತಾಡುವ ಸ್ತಿತಿಯಲ್ಲಿರಲಿಲ್ಲ. ಹೊತ್ತಾರೆಗೆ ಎದ್ದು ಪುಟ್ಬುದ್ದಿಯವರು ಹೊರಡಲು ಅನುವಾಗಿ ಚನ್ನಾಜಪ್ಪನನ್ನು ಕುರಿತು-
"ಇನ್ನೆರ‍್ಡು ತಿಂಗ ಅದೆ. ಅಶ್ಟೊತ್ತಿಗೆ ನೀವು ರೆಡಿಯಾಗಿರಿ"
"ಆಗಲಿ" ಎಂದು ತಲೆತಗ್ಗಿಸಿಕೊಂಡೇ ಉತ್ತರವಿತ್ತ ಚನ್ನಾಜಪ್ಪ.
*****
ಎರಡು ತಿಂಗಳಲ್ಲಿ ಚನ್ನಾಜಪ್ಪನ ಬೆಳೆಯು ಕಯ್ ಕೊಟ್ಟು ಗದ್ದೆಕರ್ಚ ಹೆಚ್ಚಾಗಿತ್ತು. ಅದಕ್ಕಾಗಿ ಅವನಿಗೆ ತನ್ನ ಕುರಿಮರಿಯನ್ನು ಮಾರಬೇಕಾಗಿ ಬಂತು. ಅದೇ ತಾನೆ ಸಂತೆಗೆ ಹೋಗಿ ಕುರಿಮರಿಯನ್ನು ಮಾರಿ ಮನೆಗೆ ಬಂದಿದ್ದ. ಇತ್ತ ಕಡೆ ಚನ್ನರಾಜುವನ್ನು ಕರೆದುಕೊಂಡು ಹೋಗಲು ಪುಟ್ಬುದ್ದಿ ಮಟದ ಹಿರೀಕರ ಜೊತೆಗೆ ಹಟ್ಟಿಗೆ ಬಂದರು. ಚನ್ನಾಜಪ್ಪನ ಹೆಂಡತಿ ಒಳಗೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.

"ನೋಡವ್ವ. ಇಂಗೆ ಮಗನನ್ನು ಕಳಿಸುವಾಗ ಅಳಬ್ಯಾಡ್ದು..ನೆಗುನೆಗುತ ಕಳಿಸ್ಕೊಡು...ಮುಂದೆ ನಿನ್ ಮಗನೇ ಮಟದ ಒಡೆಯನಾಗಂವ ಕವ್ವ" ಎಂದು ಪುಟ್ಬುದ್ದಿ ಸಮಾದಾನ ಹೇಳಿದರು.

ಇವೆಲ್ಲ ಮಾತುಕತೆಗಳಿಂದ ದೂರವಿದ್ದ ಚನ್ನರಾಜುವಿಗಂತೂ ಏನಾಗುತ್ತಿದೆ ಎಂಬುದೇ ತಿಳಿದಿರಲಿಲ್ಲ. ತಾತನ ಜೊತೆಗೆ ರಜೆ ಕಳೆಯಲು ಅವರೂರಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಅವನು ಬಾವಿಸಿದ್ದ. ಸಂಜೆಯ ಹೊತ್ತಿಗೆ ಬಂದ ನೆಂಟರೆಲ್ಲ ಕಾಲಿಯಾಗಿದ್ದು ಹಟ್ಟಿಯೆಲ್ಲ ಬಣಗುಡುತ್ತಿತ್ತು. ಚನ್ನಾಜಪ್ಪ ತೊಟ್ಟಿಮನೆಯ ಕಂಬ ಒರಗಿಕೊಂಡು ಬಾನಿನೆಡೆಗೆ ಮುಕ ಮಾಡಿ ಏನನ್ನೋ ದಿಟ್ಟಿಸುತ್ತಿದ್ದ. ಇತ್ತಗೆ ಕೊಟ್ಟಿಗೆಯಲ್ಲಿದ್ದ ಕುರಿಮರಿಯ ಕೊರಳಿಗೆ ಕಟ್ಟಿದ್ದ ಗೆಜ್ಜೆಯ ಸದ್ದೂ ಇಲ್ಲ, ಅತ್ತಗೆ ಮಗನು ಜೋರಾಗಿ ಓದುತ್ತಿದ್ದ ಸದ್ದೂ ಇಲ್ಲ, ಆದರೂ ಅವನ ಒಳಗಿವಿಯಲ್ಲಿ ಇವೆಲ್ಲವೂ ಮಾರ್ದನಿಸುತ್ತಿತ್ತು.

ಓದುಗರಿಗೆ ಸೂಚನೆ: ಈ ಸಣ್ಣಕಥೆ ಹೊನಲು.ನೆಟ್ ನಲ್ಲಿ ಹಿಂದೆ ಪ್ರಕಟವಾಗಿದೆ.

English summary
Mari(The Kid) a short story by Bharat Kumar revolves around a small village kid whose life compared to a lamb.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X