ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಭಸಂಕಲ್ಪ : ಆರಂಭಿಸಿದ ಕೆಲಸ ಮುಗಿಸುವ ದೃಢತೆ

By ಗುಣಮುಖ
|
Google Oneindia Kannada News

ಸಾಧನೆ ಎಂದರೇನು? ಗೆಲ್ಲುವುದೇ? ಎಲ್ಲರನ್ನೂ ಹಿಂದಿಕ್ಕಿ ಪ್ರಥಮ ಸ್ಥಾನ ಪಡೆಯುವುದೇ? ಅಲ್ಲ! ಹಾಗಾದರೆ, ಸಾಧನೆ ಎಂದರೇನು? ಹೀಗೊಂದು ಪ್ರಶ್ನೆ ಬಂದಿದ್ದು ನನ್ನ ಯುವ ಸ್ನೇಹಿತನನ್ನು ಕಂಡಾಗ. ಅವನೇ ಹೇಳಿದಂತೆ ಎಲ್ಲರಿಗಿಂತ ಮೊದಲು ಅವನೇ ಕೆಲಸವನ್ನು ಶ್ರದ್ದೆಯಿಂದ ಆರಂಭಿಸುತ್ತಾನೆ. ಆದರೆ ಅರ್ಧ ಭಾಗ ಮುಗಿಸುವಷ್ಟರಲ್ಲಿ, ಅರ್ಧ ಓಟ ಮುಗಿಸುವಷ್ಟರಲ್ಲಿ ನೆರಳನ್ನು ಹುಡುಕಲು ಆರಂಭಿಸುತ್ತಾನೆ. ಈ ಬಗೆಯ ಆರಂಭ ಶೂರತ್ವ ನಮ್ಮಲ್ಲೂ ಅನೇಕರಲ್ಲಿ ಇದೆ. ಶುರು ಮಾಡಿದ ಕೆಲಸವನ್ನು ಮುಗಿಸುವ ಸಮಾಧಾನ, ಶ್ರದ್ಧೆ, ಹಠ, ಛಲ ನಮ್ಮಲ್ಲಿಲ್ಲ.

ಕೆಲವೊಮ್ಮೆ ಕೆಲಸ ಆರಂಭಿಸುವುದಕ್ಕೆ ವಿಪರೀತ ಮೀನ-ಮೇಷ ಎಣಿಸುತ್ತೇವೆ. ಕನಸು ಕಾಣುವುದರಲ್ಲಿನ ಉತ್ಸಾಹ, ಕೆಲಸ ಶುರು ಮಾಡುವುದರಲ್ಲಿ ಇರುವುದಿಲ್ಲ. ಶುರು ಮಾಡಿದರೂ ಕೆಲಸ ಮುಗಿಸುವುದರಲ್ಲಿ ಇರುವುದಿಲ್ಲ. ಹಾಗಾದರೆ ಸಾಧನೆ ಮಾಡುವುದು ಕೂಡ ದೂರವೇ ಉಳಿಯಿತು. ಯುವ ಸ್ನೇಹಿತನಿಗೆ ಸ್ಫೂರ್ತಿಗಾಗಿ ಏನು ಹೇಳುವುದು ಎಂದು ಯೋಚಿಸುತ್ತಿದ್ದಾಗಲೇ ನೆನಪಾದವನು ಡೆರಿಕ್ ರೆಡ್-ಮಾಂಡ್.

ಹೌದು! ಅವನ ಹೆಸರು ಡೆರಿಕ್ ರೆಡ್-ಮಾಂಡ್. ಅವನ ಹೆಸರು ನೆನಪಾದರೆ ಸಾಕು ನನ್ನಲ್ಲಿ ಸ್ಫೂರ್ತಿಯ ಊಟೆಯೊಡೆಯುತ್ತದೆ. [ಸ್ಫೂರ್ತಿಯ ಸೆಲೆ]

ಬ್ರಿಟನ್-ನ ಡೆರಿಕ್ ರೆಡ್-ಮಾಂಡ್ ಹೆಸರು ಪ್ರಸಿದ್ಢಿಗೆ ಬಂದಿದ್ದು 1985ಲ್ಲಿ, ಅವನು 400 ಮೀಟರ್ ರೇಸ್‌ನಲ್ಲಿ ಬ್ರಿಟನ್‌ನ ರಾಷ್ಟ್ರೀಯ ದಾಖಲೆ ಮುರಿದಾಗ. ಇಪ್ಪತ್ತು ವರುಷದ ಕಪ್ಪು ಯುವಕ ರಾಷ್ಟ್ರೀಯ ದಾಖಲೆ ಮುರಿದಾಗ (44.82 ಸೆಕೆಂಡ್ಸ್), ಬ್ರಿಟನ್‌ನ ಅಥ್ಲೆಟಿಕ್ಸ್ ಪ್ರಪಂಚದಲ್ಲಿ ಭಾರಿ ಸಂಚಲನ ಹುಟ್ಟಿಸಿದ್ದ. ಡೆರಿಕ್ ಓಟದ ಟ್ರ್ಯಾಕ್‌ನಲ್ಲಿ ಇಳಿದರೆ ಅಪ್ಪಟ ಕಪ್ಪು ಚಿರತೆಯ ಹಾಗೆ ಓಡುತ್ತಿದ್ದ. ಅವನ ದಾಖಲೆಯನ್ನು ಮುಂದೆ ರೋಜರ್ ಬ್ಲ್ಯಾಕ್ ಮುರಿದ. ಆದರೆ ಹಠವಾದಿ ಡೆರಿಕ್ 1987ರಲ್ಲಿ ಮತ್ತೆ ವೇಗವಾಗಿ ಓಡಿ (44.50 ಸೆಕೆಂಡ್ಸ್) ರಾಷ್ಟ್ರೀಯ ದಾಖಲೆ ತನ್ನದಾಗಿಸಿಕೊಂಡ.

ಮುಂದೆ ಡೆರಿಕ್ ನಡೆದಿದ್ದು ದಾಖಲೆಯ ಹಾದಿಯೇ. ಯುರೋಪಿಯನ್ ಚಾಂಪಿಯನ್ ಶಿಪ್‌ನಲ್ಲಿ ಗೆದ್ದ, ಕಾಮನ್ ವೆಲ್ತ್ ಕ್ರೀಡೆಯಲ್ಲಿ ಗೆದ್ದ. ಹಾಗೇ ಮುಂದುವರಿದು ವಿಶ್ವ ಅಥ್ಲೆಟಿಕ್ಸ್ ಚ್ಯಾಂಪಿಯನ್ ಶಿಪ್‌ನಲ್ಲಿಯೂ ಗೆದ್ದ. 4 X 400 ಮೀಟರ್ಸ್ ರಿಲೇಯಲ್ಲಿ ಭಾಗಿಯಾಗಿ ಹಲವು ಪಂದ್ಯಗಳನ್ನು, ಬಂಗಾರದ ಪದಕಗಳನ್ನು ಗೆದ್ದ. 1991 ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಎಲ್ಲರೂ ಗೆಲ್ಲುವರೆಂದು ಭಾವಿಸಿದ್ದ ಮೆಚ್ಚಿನ ಅಮೇರಿಕ ರಿಲೇ ತಂಡವನ್ನು ಸೋಲಿಸಿ ಬಂಗಾರದ ಪದಕ ಪಡೆಯುವುದರಲ್ಲಿ ಡೆರಿಕ್ ಪ್ರಮುಖ ಪಾತ್ರ ವಹಿಸಿದ. [ಕೆಲಸವೆಂಬೋ ಉನ್ಮಾದಕ್ಕೆ ಬಿದ್ದವರಿಗೆ ಕಿವಿಮಾತು]

ಇಷ್ಟೆಲ್ಲಾ ಸಾಧನೆ ಮಾಡಿದರೂ ಎಲ್ಲಾ ಅಥ್ಲೀಟ್ಸ್‌ಗೆ ಇರುವಂತೆ ಅವನಿಗೂ ಒಂದು ಕನಸಿತ್ತು. ಅದೇ ಒಲಿಂಪಿಕ್ಸ್‌ನಲ್ಲಿ ಒಂದೇ ಒಂದು ಪದಕ ಗೆಲ್ಲುವ ಕನಸು! ಅಲ್ಲಾ, ಯಾವ ಅಥ್ಲೀಟ್ಸ್‌ಗೆ ತಾನೇ ಒಲಿಂಪಿಕ್ಸ್ ಪದಕದ ಕನಸು ಇರುವುದಿಲ್ಲ ಹೇಳಿ? ಡೆರಿಕ್ ಸಾಧನೆಯ ಹಾದಿಯಲ್ಲಿ ಮುಂದುವರಿದಂತೆ, ಆ ಕನಸಿಗೆ ಇಂಬು, ಕೊಂಬು ಬಂತು. ಅವನು ಎದಿರು ನೋಡುತ್ತಿದ್ದ ಆ ಒಲಿಂಪಿಕ್ಸ್ ಬಂದೇ ಬಿಟ್ಟಿತು. 1992 ಬಾರ್ಸಿಲೋನಾ ಒಲಿಂಪಿಕ್ಸ್ ಕೂಟ.

ಎಲ್ಲಾ ಡೆರಿಕ್ ಕನಸಿದಂತೆ ಸಾಗುತ್ತಿತ್ತು. ಮೊದಲ ಕೆಲವು ಸುತ್ತುಗಳಲ್ಲಿ ಉತ್ತಮ ಸಾಧನೆ ತೋರಿದ ಡೆರಿಕ್, ಯಾವುದೇ ಅಡೆತಡೆ, ಆತಂಕವಿಲ್ಲದೆ 400 ಮೀಟರ್ಸ್‌ನ ಒಲಿಂಪಿಕ್ಸ್ ಸೆಮಿಫೈನಲ್ಸ್ ತಲುಪಿದ. ಸೆಮಿಫೈನಲ್ಸ್ ಆರಂಭಕ್ಕೆ ಮುನ್ನ ಡೆರಿಕ್ ರೆಡ್-ಮಾಂಡ್ ಗೆಲ್ಲುವ ಬಗ್ಗೆ ಯಾರಿಗೂ ಅನುಮಾನವಿರಲಿಲ್ಲ. ಸ್ವತಃ ಡೆರಿಕ್‌ಗೂ. ರೇಸ್ ಆರಂಭಕ್ಕೆ ಮುನ್ನ ಎಲ್ಲರ ಕಣ್ಣೂ ಅವನ ಮೇಲೆ.

ನಿಮಗೆ ಗೊತ್ತಿರಲಿ, ಅಥ್ಲೀಟ್ಸ್‌ನ ಸಕ್ರಿಯ ಜೀವನದಲ್ಲಿ ಒಲಿಂಪಿಕ್ಸ್ ಬರುವುದು ಒಂದೋ ಎರಡೋ ಬಾರಿ, ಅದೃಷ್ಟವಿದ್ದರೆ ಮೂರು ಬಾರಿ. ಅಥ್ಲೀಟ್ ಆ ಸಮಯದಲ್ಲಿ ಅತ್ಯಂತ ಉತ್ತಮ ಆರೋಗ್ಯ, ದೇಹದಾರ್ಢ್ಯತೆಯನ್ನು, ಎಲ್ಲಕ್ಕಿಂತ ಮುಖ್ಯವಾಗಿ ಆತ್ಮಸ್ಥೈರ್ಯವನ್ನು ಕಾಪಾಡಿಕೊಳ್ಳಬೇಕು. ಮುಖ್ಯವಾಗಿ ಗಾಯದ ಸಮಸ್ಯೆಯಿಂದ ದೂರವಿರಬೇಕು. ಒಂದೇ ಒಂದು ಗಾಯ ಅಥ್ಲೀಟ್ಸ್‌ನ ಜೀವನ ಸಾಧನೆಯನ್ನೂ, ಸಾಧನೆಯ ಹಂತದ ಉತ್ಕಟ ಕ್ಷಣವನ್ನೂ ಹಾಳುಗೆಡವಬಲ್ಲದು. [ಪುಸ್ತಕವಾಗಿ ಶುಭ ಸಂಕಲ್ಪ]

ಶುರುವಾಯಿತು ಸೆಮಿಫೈನಲ್ಸ್‌ನ 400 ಮೀಟರ್ಸ್ ರೇಸ್ - ನಾಲ್ಕು ವರ್ಷದ ಸಾಧನೆ, ತಪನೆ ಸುಮಾರು ನಲವತ್ತೈದು ಕ್ಷಣದಲ್ಲಿ ಪ್ರಕಟವಾಗುವ ಕ್ಷಣ! ಡೆರಿಕ್ ಓಟವನ್ನು ಚೆನ್ನಾಗಿಯೇ ಆರಂಭಿಸಿದ. ಮೆಲ್ಲನೆ ವೇಗ ವೃದ್ಧಿಸಿಕೊಳ್ಳುತ್ತಾ ಉತ್ತಮವಾಗಿ ಸಾಗಿದ್ದ. ಆದರೆ... ಆದರೆ... ಅವನ ಉತ್ಕಟ ವೇಗವನ್ನ, ವೇಗದ ಆಸೆಯನ್ನ ಅವನ ದೇಹ ತಾಳಿಕೊಳ್ಳಲಿಲ್ಲ. ಅವನ ಬಲಗಾಲಿನ ತೊಡೆಯ ಸ್ನಾಯುವೊಂದು ಕತ್ತರಿಸಿ ಹೋಯಿತು. ನೋವಿನಿಂದ ಡೆರಿಕ್ ಹಾಗೇ ಕುಸಿದು ಬಿದ್ದ. ತುಂಬಿದ ಕ್ರೀಡಾಂಗಣ ನೋವಿನಿಂದ ಕಿರುಚಿಬಿಟ್ಟಿತು. ಇದ್ಯಾವುದರ ಪರಿವೇ ಇಲ್ಲದ ಬೇರೆ ಆಟಗಾರರು ರೇಸ್ ಮುಗಿಸಿದರು. ಆದರೆ ನೆಲಕ್ಕೆ ಬಿದ್ದ ಡೆರಿಕ್‌ನ ರೇಸ್ ಮುಗಿದಿರಲಿಲ್ಲ...

ಮೆಲ್ಲನೆ ಎದ್ದು ನಿಂತ - ಕ್ರೂರ ವಿಧಿಯನ್ನು ಸೋಲಿಸುವ ನಿರ್ಧಾರದೊಂದಿಗೆ. ಮೆಲ್ಲನೆ ಕುಂಟುತ್ತಾ... ಗಾಯಗೊಂಡ ಬಲಗಾಲನ್ನು ಎಳೆಯುತ್ತಾ ಸಾಗತೊಡಗಿದ... ಕ್ರೀಡಾಂಗಣದಲ್ಲಿ ಅವನ ತಂದೆ ಎಲ್ಲಾ ಸೆಕ್ಯೂರಿಟಿ ಅಡೆತಡೆಗಳನ್ನೂ ದಾಟಿ 'ಮಗನೇ...' ಎಂದು ಓಡಿ ಬಂದ. ಕುಂಟುತ್ತಿದ್ದ ಮಗನಿಗೆ ಹೆಗಲು ಕೊಟ್ಟ. 'ಮಗನೇ ಹೋಗಲಿ ಬಿಡು, ಬಿಟ್ಟುಬಿಡು' ಎಂದ. ಡೆರಿಕ್ ಹಠ ಬಿಡಲಿಲ್ಲ. ಕೊನೆಗೆ ತಂದೆಯೇ ಸೋತ. 'ನಡಿ ಮಗನೇ, ಈ ರೇಸನ್ನು ನಾವಿಬ್ಬರೂ ಸೇರಿಯೇ ಮುಗಿಸುವ' ಎಂದು ಕಣ್ಣೀರಾದ. ಇಬ್ಬರೂ ಕೊಂಚ ದೂರ ಸಾಗಿದರು.

ನಂತರ ಡೆರಿಕ್ ನಿರ್ಧರಿಸಿದ. ಇದು ನನ್ನ ರೇಸ್, ಇದನ್ನು ನಾನೇ ಮುಗಿಸುತ್ತೇನೆ. ತಂದೆಯ ಹೆಗಲು ಬಿಟ್ಟು, ತಂದೆಯನ್ನು ದೂರ ಕಳುಹಿಸಿದ. ಕುಂಟುತ್ತಾ... ಕುಂಟುತ್ತಾ ಗುರಿಯೆಡೆಗೆ ಸಾಗಿದ, ಗುರಿ ಮುಟ್ಟಿದ. ಕ್ಷಣ ಕಾಲ ಇಡೀ ಕ್ರೀಡಾಂಗಣ ಸ್ತಬ್ಧವಾಯಿತು. ಈ ಅದ್ಭುತ ಘಟನೆಗೆ ಸಾಕ್ಷಿಯಾಯಿತು. ಡೆರಿಕ್ ರೇಸ್ ಮುಗಿಸಿದಾಗ ಅರವತ್ತೈದು ಸಾವಿರಕ್ಕೂ ಹೆಚ್ಚಿದ್ದ ಪ್ರೇಕ್ಷಕರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಡೆರಿಕ್ ರೆಡ್-ಮಾಂಡ್ ವಿಧಿಯನ್ನು ಮೆಟ್ಟಿ ನಿಂತಿದ್ದ. ಅವನು ಪದಕ ಗೆಲ್ಲಲಿಲ್ಲ ನಿಜ, ಆದರೆ ಅವನು ಮಾನವ ಕುಲದ ಧೀ ಶಕ್ತಿಯ ಪ್ರತೀಕವಾಗಿ ನಿಂತಿದ್ದ.

ಮುಂದೆ ಅವನು ಗಾಯದ ಸಮಸ್ಯೆಯಿಂದ ಓಟಗಾರನಾಗಿ ಮುಂದುವರೆಯಲಾಗಲಿಲ್ಲ. ಅವನು ಯಾವುದೇ ಆಟವಾಡುವುದು ಸಾಧ್ಯವಿಲ್ಲವೆಂದು ವೈದ್ಯರು ಹೇಳಿದರು. ಆದರೆ ಛಲದಂಕ ಮಲ್ಲ, ಡೆರಿಕ್ ಮುಂದೆ ಬಾಸ್ಕೆಟ್ ಬಾಲ್, ರಗ್ಬಿ ಆಟಗಾರನಾಗಿ ಮುಂದುವರಿದ. ಅನೇಕ ವರ್ಷ ರಾಷ್ಟ್ರೀಯ ವಲಯದಲ್ಲಿ ಆಡಿದ. ಮುಂದೆ, 1992ರ ಒಲಿಂಪಿಕ್ಸ್ 400 ಮೀಟರ್ಸ್ ರೇಸ್‌ನ ಸೆಮಿಫೈನಲ್ಸ್ ಘಟನೆ ಬಳಸಿಕೊಂಡು ಸ್ಫೂರ್ತಿ ತುಂಬುವ ಡೆರಿಕ್-ನ ಛಲವನ್ನು, ಹೋರಾಟ ಮನೋಭಾವವನ್ನು ಕೊಂಡಾಡುವ ಅನೇಕ ಕಿರು ಚಿತ್ರಗಳು ಬಂದವು.

ಈಗಲೂ 1992ರ ಒಲಿಂಪಿಕ್ಸ್ ಎಂದರೆ ಕಣ್ಣು ಮುಂದೆ ಬರುವುದು ಕುಂಟುತ್ತಾ ರೇಸ್ ಮುಗಿಸಿದ ಡೆರಿಕ್! ಬಂಗಾರದ ಪದಕ ಅಥವಾ ಯಾವುದೇ ಪದಕ ಗೆದ್ದವನು ಮಾತ್ರ ಸಾಧಕನಲ್ಲ ಎಂದು ತೋರಿದ ಡೆರಿಕ್ ರೆಡ್-ಮಾಂಡ್. [ಶುಭಸಂಕಲ್ಪ]

English summary
Inspirational short story in Kannada by Gunamukha. We always start the work in enthusiasm, but fail to finish it in time. World champion athlete Derek Redmond is a perfect example for any person. His lifestyle is truly inspirational.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X