ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಳ್ಗತೆ (ಭಾಗ 5) : ಎಡವಟ್ಟಾಯ್ತು ತಲೆಕೆಟ್ಟೋಯ್ತು

By ಮಾಧವ ವೆಂಕಟೇಶ್
|
Google Oneindia Kannada News

ನಾವು ಸಲೂನ್ ಗೆ ವಾಪಸ್ಸು ಬಂದಾಗ ತಾತ ಮತ್ತು ನಾಡಿ ಒಂದೊಂದು ಸಲೂನ್ ಚೇರಿನಲ್ಲಿ ಕೂತು, ಏನು ಮಾತಾಡುವುದೆಂದು ಗೊತ್ತಾಗದೆ, ಸುಮ್ಮನೆ ಬಾಗಿಲನ್ನೇ ನೋಡುತ್ತಾ ನಮಗಾಗಿ ಕಾಯುತ್ತಿದ್ದರು. ನಾವು ಕಂಡ ಕೂಡಲೇ ಇಬ್ಬರು ಧಡಕ್ಕನೆ ಎದ್ದು ನಿಂತರು. "ಸಿಕ್ತಾ? ಸಿಕ್ತಾ?", ನಾಡಿ, ಫಾರಿನ್ ವಿಸ್ಕಿಗಾಗಿ ಚಡಪಡಿಸುವ ಕುಡುಕನ ಹಾಗೆ ಕೇಳಿದ. ನಾನು ಮೆಹೆಂದಿ ಟ್ಯೂಬನ್ನು ಎತ್ತಿ ಹಿಡಿದೆ.

ರಾಹುಕಾಲಕ್ಕೆ ಇನ್ನು ಮೂವತ್ತೈದು ನಿಮಿಷ. ಆಪರೇಷನ್ ಗೆ ನಾಲ್ಕೂ ಜನ ರೆಡಿಯಾದೆವು. ಪ್ಲಾನ್ ಈ ರೀತಿಯಾಗಿ ಇತ್ತು: ಬುರ್ಲಿ ಮೆಹೆಂದಿಯನ್ನು ಬಟ್ಟಲಿನಲ್ಲಿ ಮಿಕ್ಸ್ ಮಾಡುತ್ತಾನೆ. ತಾತ ಮಿಕ್ಸ್ ಮಾಡಿದ ಮೆಹೆಂದಿಯನ್ನು ವಿಗ್ಗಿನ ಸೈಡ್ಲಾಕ್ ಕೂದಲಿಗೆ ಹಚ್ಚಿ, ಆ ಕೂದಲ ಎಳೆಗಳನ್ನು ಕತ್ತರಿಸುತ್ತಾರೆ. ನಾಡಿಯ ಸೈಡ್ಲಾಕ್ ಜಾಗಕ್ಕೆ ನಾನು ಫೆವಿಕ್ವಿಕ್ ಹಚ್ಚಿದ ನಂತರ, ತಾತ ಕೂದಲನ್ನು ಅಲ್ಲಿ ಅಂಟಿಸುತ್ತಾರೆ - ಹೀಗೆ ಕಾರ್ಯವಿಭಜನೆ ಮಾಡಲಾಯಿತು. ಈ ಆಪರೇಷನ್ ಅನ್ನು ಮುಗಿಸಬೇಕಾದ ಕಾಲಾವಧಿ: ಐದು ನಿಮಿಷ.

ಎಲ್ಲಾರೂ ನಮ್ಮ ನಮ್ಮ ಕೆಲಸಗಳಲ್ಲಿ ಗಂಭೀರವಾಗಿ ತೊಡಗಿಕೊಂಡೆವು. ನಾಡಿ ಈ ಹೊತ್ತಿನಲ್ಲಿ ಸಿಂಕಿನ್ನತ್ತ ಒಂದಿಷ್ಟು ಶ್ಯಾಂಪೂ ತೆಗೆದುಕೊಂಡು ಹೋಗಿ, ಕೂದಲನ್ನು ಅಲ್ಲೇ ವಾಶ್ ಮಾಡಿಕೊಂಡನು. ಐದು ನಿಮಿಷದ ನಂತರ ಎಲ್ಲಾ ಸಾಮಗ್ರಿಗಳು ರೆಡಿಯಾಗಿದ್ದವು. ತಾತ ಕೈಯಲ್ಲಿ ತಿಳಿಯಾದ ಕಂದು ಬಣ್ಣದ ಕೂದಲ ಎಳೆಗಳನ್ನು ಹಿಡಿದಿದ್ದರು. ನಾಡಿ ನನ್ನ ಕೈಯಿಂದ ಫೆವಿಕ್ವಿಕ್ ಹಚ್ಚಿಸಿಕೊಂಡು ಚೇರಿನಲ್ಲಿ ಕೂತಿದ್ದ.

ಹಚ್ಚಿದ ಫೆವಿಕ್ವಿಕನ್ನು ತಾತ ಒಂದು ಬಾರಿ ಸವರಿದರು. ನಾಡಿ ಸ್ವಲ್ಪ ಹಿಂಜರಿದ. ನಾನು ಬುರ್ಲಿ ಆತಂಕದಿಂದ ನೋಡತೊಡಗಿದೆವು. ತಾತ ಕೂದಲ ಎಳೆಗಳನ್ನು ಅಂಗೈಯಲ್ಲಿ ಸೂಕ್ಷ್ಮವಾಗಿ ಹಿಡಿದು, ನಾಡಿಯ ಬಲ ಕಿವಿಯ ಪಕ್ಕದ ಜಾಗವನ್ನು ಗುರಿಯಾಗಿ ಇಟ್ಟುಕೊಂಡು, ಟಪ್ ಅಂತ ಸೊಳ್ಳೆ ಹೊಡೆಯುವಂತೆ ಹೊಡೆದರು. ಹೊಡೆದ ಕೈಯನ್ನು ಹಾಗೆ ಹಿಡಿದು, ನಾಡಿಯ ತಲೆಯ ಎಡ ಭಾಗವನ್ನು ಇನ್ನೊಂದು ಕೈಯಲ್ಲಿ, ಬೆಂಬಲಕ್ಕಾಗಿ, ಹಿಡಿದುಕೊಂಡರು. ಇದೇ ಸ್ಥಿತಿಯಲ್ಲಿ ಹತ್ತು ಸೆಕೆಂಡ್ ಇದ್ದರು. ಯಾರೂ ಮಾತಾಡಲಿಲ್ಲ.

Friend's marriage and awkward hair cutting (part 5)

ನಂತರ ತಾತ ನಿಧಾನವಾಗಿ ತಲೆಯಿಂದ ಕೈ ತೆರೆದರು. ನಾಡಿ ನಿಧಾನವಾಗಿ ಬಲ ಕಿವಿಯ ಜಾಗವನ್ನು ನೋಡಿದ. ಸ್ವಲ್ಪ ಬಣ್ಣದ ಹೊಂದಾಣಿಕೆಯ ಕೊರತೆಯಿದ್ದರೂ, ಕಡೇಪಕ್ಷ ಕೂದಲು ಸೈಡ್ಲಾಕ್ ಜಾಗದಲ್ಲಿ ಸ್ಥಿರವಾಗಿ ಕೂತಂತೆ ಕಾಣುತ್ತಿತ್ತು. ಬುರ್ಲಿ ಉಫ್ ಉಫ್ ಎಂದು ನಾಡಿಯ ಮುಖದ ಹತ್ತಿರ ಊದಿದ. ವಾಯು ಪರೀಕ್ಷೆಯನ್ನು ನವಕೇಶ ಪಾಸ್ ಮಾಡಿತು.

ನಾಡಿ ಚಟಕ್ಕನೆ ಸೀಟಿನಿಂದ ಎದ್ದ. "ಬನ್ನಿ ಲೇಟ್ ಆಯ್ತು", ಎಂದು ಕಾರಿನತ್ತ ಹೆಜ್ಜೆ ಇಡುತ್ತಲೇ ಕೂಗಿದ. ಕಾರಿನಲ್ಲಿ ಕೂತ್ಕೊಂಡು, ಇಂಜಿನ್ ಸ್ಟಾರ್ಟ್ ಮಾಡಿ, ಆ ರಸ್ತೆ ತುದಿಯ ಹತ್ತಿರ ಬಂದಾಗ, ಒಮ್ಮೆ ಹಿಂದೆ ನೋಡುವ ಕನ್ನಡಿಯಲ್ಲಿ ಕಣ್ಣು ಹಾಯಿಸಿದೆ. ರಸ್ತೆ ಮಧ್ಯದಲ್ಲಿ ನಿಂತು ನಮ್ಮ ಕಾರನ್ನು ನೋಡುತ್ತಿದ್ದ ಸಲೂನ್ ತಾತನ ದೃಶ್ಯ, ನಾನು ಟರ್ನ್ ಮಾಡುವ ಮುಂಚೆ ಕಣ್ಣಿಗೆ ಬಿತ್ತು.

ಇಪತ್ತು ನಿಮಿಷಕ್ಕೆ ರಾಹುಕಾಲ. ನಾಡಿ ಆಟಂ ಬಾಂಬಿನ ಹಾಗೆ ಸ್ಫೋಟಗೊಳ್ಳುವ ಸ್ಥಿತಿಗೆ ಬಂದಿದ್ದ.
"ಲೋ ಗುರು! ಕೂಲ್ ಡೌನ್", ಬುರ್ಲಿ ಸಮಾಧಾನ ಮಾಡಲು ಪ್ರಯತ್ನಿಸಿದ.
"ಕೂಲ್ ಡೌನ್ ಮನೆ ಹಾಳಾಯ್ತು. ಬೇಗ್ ಓಡ್ಸು ಮಾಧವ್".
"ನೋಡು ಯಾವ್ದೇ ಕಾರಣಕ್ಕೂ ತಲೆ ಕೆರ್ಕೊಬೇಡ. ಹಂಗೇನಾದ್ರೂ ಏನ್ ವಿಷಯದಲ್ಲೂ ಡೌಟ್ ಬಂದ್ರೆ ನಮ್ಮನ್ನ ಕೇಳು" ಎಂದೆ. ಚಿಂತಾಮಗ್ನನಾಗಿ ವಿಲಿವಿಲಿ ಒದ್ದಾಡುತ್ತಿದ್ದ ನಾಡಿಗೆ ನನ್ನ ಜೋಕು ತಲುಪಲಿಲ್ಲ.

ಛತ್ರದ ಹತ್ತಿರ ನಾವು ಬರುವಷ್ಟರಲ್ಲಿ ಗಂಡು ಹೆಣ್ಣಿನ ಮನೆ ಮಂದಿಯೆಲ್ಲಾ ಪೂಜೆ ಹೊತ್ತಿನಲ್ಲಿ ನಾಪತ್ತೆಯಾದ ವರನಿಗೆ ಆತಂಕದಿಂದ ಕಾಯುತ್ತಿದ್ದರು. ನಾಡಿಯ ತಂದೆ ತಾಯಿ ಮೊಬೈಲ್ ಹಿಡಿದು ಹೊರಗೆ ಕೂತೇ ಬಿಟ್ಟಿದ್ದರು. ಕಾರನ್ನು ಛತ್ರದ ಮೆಟ್ಟಲಿನ ಮುಂದೆಯೇ ನಿಲ್ಲಿಸಿದೆ. ಒಂದಿಷ್ಟು ಜನ ನೆಂಟರು ಕಾರಿನ ಹತ್ತಿರ ಬಂದರು. "ಇಷ್ಟೊತ್ತಾ ಹೇರ್ಕಟ್ ಗೆ?" ನಾಡಿಯ ಅಮ್ಮ ಓಡಿ ಬಂದು ಕೇಳಿದರು. ಉತ್ತರಕ್ಕಾಗಿ ಅವರು ಕಾಯಲಿಲ್ಲ. ಕೈಹಿಡಿದು ನಾಡಿಯನ್ನು ಛತ್ರದೊಳಕ್ಕೆ ಕರೆದುಕೊಂಡು ಹೋದರು. ನೆಂಟರ ಸಮೂಹದ ಜೊತೆಗೆ ನಾನು ಬುರ್ಲಿ ಛತ್ರದೊಳಕ್ಕೆ ಹೋದೆವು.

ಒಳಗೆ ವೇದಿಕೆ ಮೇಲಿದ್ದ ಮಂಟಪದಲ್ಲಿ ನಾಡಿಯ ಅತ್ತೆ ಮಾವ ಮತ್ತೆ ಪುರೋಹಿತರು ಪೂಜೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡು ಕಾಯುತ್ತಿದ್ದರು. ನಾಡಿ ಬೇಗಬೇಗನೆ ಪಂಚೆ ಶಲ್ಯ ಧರಿಸಿಕೊಂಡು ಅಪ್ಪ ಅಮ್ಮನ ಜೊತೆ ಹಸೆಮಣೆ ಏರಿದನು. ಪುರೋಹಿತರಾದ ವೆಂಕಣ್ಣ ಜೋಷಿಯವರು ಜೋಶಿನಿಂದ ಪೂಜೆ ಆರಂಭಿಸಿದರು.

ನಾನು ಬುರ್ಲಿ ಪೂಜೆ ನೋಡುತ್ತಾ ಕುಳಿತ್ತಿದ್ದ ಚೇರುಗಳ ಪಕ್ಕದಲ್ಲಿ ಒಂದು ಸಣ್ಣ ರೂಮಿತ್ತು. ಮೇಕ್ ಅಪ್ ಧರಿಸಿ ಬಣ್ಣ ಬಣ್ಣದ ಸೀರೆಗಳನ್ನು ಉಟ್ಟುಕೊಂಡಿದ್ದ ಯುವತಿಯರು ಆ ರೂಮಿನಿಂದ, ಜೇನುಗೂಡನ್ನು ಸುತ್ತುವರಿಯುವ ದುಂಬಿಗಳಂತೆ, ಒಳಗೆ ಹೊರಗೆ ಓಡಾಡುತ್ತಿದ್ದರು. ನಾನು ಬುರ್ಲಿ ನಮ್ಮ ಚೇರುಗಳನ್ನು ಸ್ವಲ್ಪ ಆ ರೂಮಿನ ದಿಕ್ಕಿನಲ್ಲಿ ತಿರುಗಿಸಿದೆವು.

ನಾನು ರೂಮನ್ನು ನೋಡುತ್ತಿದ್ದಂತೆಯೇ, ಮರೂನ್ ಬಣ್ಣದ ಸೀರೆ ಮತ್ತು ಕಾಡಿಗೆ ಹಚ್ಚಿದ್ದ ಹೊಳೆಯುವ ಕಪ್ಪು ಕಣ್ಣುಗಳ ಸುಳಿವು ಕಂಡಂತೆ ಆಯಿತು. ಬಾಗಿಲ ಬಳಿ ನಿಂತು, ನಾಡಿಯ ಕಡೆ ನೋಡಿ, ಮಾಯಾಮೃಗದಂತೆ ಮಾಯವಾದ ದೃಶ್ಯ. ಈ ದೃಶ್ಯ ನಿಜವಾ? ನನ್ನ ಕಲ್ಪನೆಯಾ? ತಿಳಿಯಲಿಲ್ಲ.

ಅರ್ಧ ಘಂಟೆ ನಡೆಯಬೇಕಾದ ಪೂಜೆಯನ್ನು, ಜೋಶಿಗಳು ಸಮಯಾಭಾವದಿಂದ ಕಾಲು ಘಂಟೆಯಲ್ಲೇ ಮುಗಿಸಿದರು. ನಂತರ ಎಲ್ಲಾರೂ ಊಟಕ್ಕೆ ಡೈನಿಂಗ್ ಹಾಲ್ ಗೆ ಹೊರಟರು. ನಾವು ಊಟ ಮುಗಿಸಿಕೊಂಡು ಹೊರಬರುತ್ತಿದ್ದಂತೆಯೇ ನಾಡಿ ನಮ್ಮನ್ನು ಭೇಟಿಯಾದ. ಪೂಜೆ ಸುಗಮವಾಗಿ ನಡೆದ ನಂತರದ ನೆಮ್ಮದಿ ಅವನ ಮುಖದಲ್ಲಿ ಸಹಜವಾಗಿ ಕಾಣುತ್ತಿತ್ತು.

"ಯಾರಾದ್ರೂ ಕೇಳದ್ರಾ ಗುರು?", ಬುರ್ಲಿ ನಕಲಿ ಸೈಡ್ಲಾಕಿನ ಬಗ್ಗೆ ವಿಚಾರಿಸಿದ. "ಸದ್ಯ, ಯಾರೂ ಇಲ್ಲ. ನಮ್ಮಜ್ಜಿ ಆಶೀರ್ವಾದ ಮಾಡ್ವಾಗ ಇನ್ನೇನು ತಲೆ ಸವರಿ ಬಿಡ್ತಾ ಇದ್ರು. ನಾನು ಅದೇ ಟೈಮ್ ಅಲ್ಲಿ ಸರ್ರಕ್ಕನೆ ಬಗ್ಗಿ ನಮಸ್ಕಾರ ಮಾಡ್ಬಿಟ್ಟೆ" ಎಂದ. ಎಲ್ಲಾ ನಕ್ಕೆವು.

ಮರುಕ್ಷಣ ಸ್ವಲ್ಪ ಗಂಭೀರವಾಗಿ ಮುಂದುವರಿದ, "ಅಂದಂಗೆ, ತಾತ ಏನೇ ಎಡವಟ್ ಮಾಡಿದ್ದ್ರೂ ಅವರನ್ನೂ ನಾಳೆ ಮದ್ವೆಗೆ ಕರೀಬೇಕು ಅನಸ್ತಾ ಇದೆ ನಂಗೆ. ಪಾಪ, ನಾವೇನೇ ರೇಗಾಡಿದರೂ ಕೊನೆಗೆ ಹೆಂಗೋ ಸರಿ ಮಾಡದ್ರಲ್ಲ. ಈಗ ಒಂದ್ ನಿಮ್ಷ ಹೋಗಿ ಇನ್ವಿಟೇಶನ್ ಕೊಟ್ಬರಣ್ವ?". ಬುರ್ಲಿಗೂ ನಂಗೂ ಇದು ಸರಿ ಅನಿಸಿತು. ಏನೋ ಬಡ ಜೀವ, ಊಟ ಮಾಡಿಕೊಂಡು ಹೋಗಲಿ ಅಂದುಕೊಂಡೆವು.

ರಾತ್ರಿ ವರಪೂಜೆಗೆ ತಯಾರಾಗಲು ನೆಂಟರೆಲ್ಲಾ ಛತ್ರದಿಂದ ನಾಡಿ ಮನೆಗೆ ಹೊರಡುತ್ತಿದ್ದರು. ನಾಡಿ ಅಮ್ಮನಿಗೆ ಐದೇ ನಿಮ್ಷ ಹೋಗ್ಬರ್ತೀವಿ ಅಂತ ಹೇಳಿ, ಒಂದು ಲಗ್ನಪತ್ರಿಕೆ ಇಸ್ಕೊಂಡು, ಹೆಸರಿನ ಸಾಲಿನಲ್ಲಿ "ಸೈಡ್ಲಾಕ್ ತಾತ" ಎಂದು ಬರೆದ. ಮೂರೂ ಜನ ಕಾರಿನಲ್ಲಿ ಮತ್ತೆ ತಾತನ ಸಲೂನ್ ಗೆ ಹೊರಟೆವು. ಡ್ರೈವ್ ಮಾಡುವಾಗ ಹೊರಗೆ ಆಕಾಶದ ಕಡೆ ನೋಡಿದೆ. ಒಂದು ಮೋಡವೂ ಇರದ ನಿಚ್ಚಳ ಗಗನ. ಸೂರ್ಯ ದೇವನು ಅವನ ಚೈತನ್ಯಭರಿತ ಕಿರಣಗಳಿಂದ ನವದಂಪತಿಗಳನ್ನು ಆಶೀರ್ವದಿಸುತ್ತಿದ್ದಾನೇನೋ ಎಂಬಂತಹ ಸುಂದರ ಮಧ್ಯಾಹ್ನವಾಗಿತ್ತು.

ಸಲೂನಿನ ರಸ್ತೆಯ ದೃಶ್ಯ ಈಗ ಅಜ್ಜಿಯ ಮನೆಯ ಬೀದಿಯಷ್ಟು ನಮಗೆ ಪರಿಚಿತವಾಗಿತ್ತು. ಆದರೆ ಈ ಬಾರಿ ಆ ಶಾಂತ ದೃಶ್ಯದಲ್ಲಿ ಒಂದು ಬದಲಾವಣೆಯಿತ್ತು. ಸಲೂನಿನ ಹತ್ತಿರ ಲಾರಿ ಗಾತ್ರದ ಒಂದು ದೊಡ್ಡ ಟೊಯೋಟಾ ವ್ಯಾನ್ ನಿಂತಿತ್ತು. ನಾನು ಅದರ ಪಕ್ಕವೇ ಕಾರನ್ನು ನಿಲ್ಲಿಸಿದೆ. ನಾವು ಇಳಿಯುವ ಕ್ಷಣಕ್ಕೆ ಸರಿಯಾಗಿ ವ್ಯಾನಿನಿಂದ ಒಬ್ಬ ದುಂಡುದುಂಡಾಗಿರುವ ಯುವಕ ಇಳಿದ. ನೋಡಕ್ಕೆ ಥೇಟ್ ವಿಜಯ್ ಮಲ್ಯನ ಯುವ ಅವತಾರ; ಕೂಲಿಂಗ್ ಗ್ಲಾಸು, ಕುತ್ತಿಗೆಗೆ ದಪ್ಪ ಚಿನ್ನದ ಚೈನು, ಕೈಯಲ್ಲಿ ಇಡ್ಲಿ ತಟ್ಟೆಯಷ್ಟು ಅಗಲವಾದ ಫೋನು, ಜಗಜಗಿಸುವ ಟಿ ಶರ್ಟು, ಮುಕ್ಕಾಲು ಪ್ಯಾಂಟು. ನಮ್ಮನ್ನು ನೋಡಿ ಕೂಲಿಂಗ್ ಗ್ಲಾಸ್ ತೆಗೆದ. ಥಟ್ಟಂತ ನನಗೆ ಅವನು ಯಾರು ಅಂತ ಗೊತ್ತಾಯಿತು. ನಮ್ಮನ್ನು ನೋಡುತ್ತಿದ್ದಂತೆಯೇ ಅವನ ಕಣ್ಣುಗಳು ಅರಳಿದವು.

ನಮ್ಮ ಕಾಲೇಜಿನ ಸಹಪಾಠಿಯಾಗಿದ್ದ ಪಮ್ಮಿ ಕೇಳಿದ, "ಮಾಧವ್, ನಾಡಿ, ಬುರ್ಲಿ, what a surprise I say! ಹೇಗಿದೀರ ಮಕ್ಳ?".
ಹಿರಿಮಗನಾದ ನಾನು ಉತ್ತರಿಸಿದೆ, "ಚೆನಾಗಿದೀವಿ ಪಮ್ಮಿ. ನೀ ಹೇಗಿದ್ಯಾ?"
"ಗೂಡ್ ಗೂಡ್", ಎಂದು ಪಮ್ಮಿ ತಲೆದೂಗಿದ.
"ದುಬಾಯ್ ನಲ್ಲಿ ಬಿಸಿನೆಸ್ ಶುರು ಮಾಡಿದ್ಯಂತೆ?", ಬುರ್ಲಿ ಕೇಳಿದ.
"ಹೌದು. ಡ್ಯೂಟಿ ಫ್ರೀ ಗೋಲ್ಡ್ export. ದೇವರ ದಯೆಯಿಂದ ಚೆನ್ನಾಗಿ ನಡಿತಾ ಇದೆ", ಎಂದು ಹೇಳಿ ಎದೆ ಮುಟ್ಟಿಕೊಂಡು ಮೇಲೆ ನೋಡಿದ. ನಂತರ ನಾಡಿಯ ಕಡೆ ತಿರುಗಿ,
"ಏನ್ ನಾಡಿ ಹೇಗಿದ್ಯಾ?"
"ಸೂಪರ್ ಗುರು. ತುಂಬಾ ದೀಸ ಆಯ್ತು ನಿನ್ನ ನೋಡಿ. ಕಾಲೇಜ್ ಆದ್ಮೇಲೆ ಭೇಟಿಯಾಗಿಲ್ಲ. ಅಂದಂಗೆ ಏನು ನೀ ಈ ಕಡೆ? ಈ ಏರಿಯಾದಲ್ಲಿ ಸೈಟು ಅಥವಾ ಮನೆ ತೊಗೊತಾಯಿದ್ಯ?", ನಾಡಿ ಕುತೂಹಲದಿಂದ ವಿಚಾರಿಸಿದ.
ಪಮ್ಮಿ ನಗುತ್ತಾ, "ಇಲ್ಲಾಪ್ಪ. ಇನ್ ಎರಡು ದೀಸಕ್ಕೆ ನನ್ನ ಮದ್ವೆ ಇದೆ ಇಲ್ಲೇ ಮೈಸೂರಲ್ಲಿ. ಅದಕ್ಮುಂಚೆ ಕಟಿಂಗ್ ಮಾಡಸ್ಕೊಳೋಣ ಅಂತ ಬಂದೆ".

ಹೊಳೆಯುವ ಸೂರ್ಯನ ಕೆಳಗೆ ನಿಂತಿದ್ದ ನಾನು, ಬುರ್ಲಿ, ಮತ್ತು ಇನ್ವಿಟೇಶನ್ ಹಿಡಿದ ನಾಡಿ, ಮುಖ ಮುಖ ನೋಡಿಕೊಂಡೆವು. ಎಲ್ಲೋ ದೂರದಲ್ಲಿ ರೇಡಿಯೋ ಹಾಡೊಂದು ಆಡಲು ಶುರುವಾಯಿತು: ಎಡವಟ್ಟಾಯ್ತು, ತಲೆಕೆಟ್ಟೋಯ್ತು.....

English summary
Friend's marriage and awkward hair cutting : Kannada Short story by Madhava Venkatesh. Author's friend goes for hair cutting on the previous day of his marriage. What happens there? How the friends handle the situation? Author narrates it in a funny way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X