ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಳ್ಗತೆ (ಭಾಗ 2) : ಎಡವಟ್ಟಾಯ್ತು ತಲೆಕೆಟ್ಟೋಯ್ತು

By ಮಾಧವ ವೆಂಕಟೇಶ್
|
Google Oneindia Kannada News

"ಬುರ್ಲಿ!" ಎಂದು ನಾನು ಅಣ್ಣಾವ್ರ ಹಾಗೆ ಹಿಂದೆಯಿಂದ ನಿಧಾನವಾಗಿ ಓಡಿ ಬಂದೆ. "ಮಾಧವ್!", ಅಂತ ಬುರ್ಲಿ, ನಾ ನಿನ್ನ ಮರೆಯಲಾರೆ ಲಕ್ಷ್ಮಿ ತರ, ಮುಂದಿನಿಂದ ಓಡಿ ಬಂದ. ಮಧ್ಯದಲ್ಲಿ ಇಬ್ಬರೂ ನಿಂತು ಕೈ ಕುಲುಕಿದೆವು. "ಏನ್ ಬದಲಾಗಿದ್ಯೋ ಬುರ್ಲಿ!", ಇಂದ ಪ್ರಾರಂಭವಾದ ಮಾತು, ಒಂದು ಘಂಟೆ ಸುದೀರ್ಘವಾಗಿ ನಡೆಯಿತು. ಕಾಲೇಜು ದಿನಗಳ ಬಗ್ಗೆ ಹರಟೆ ಹೊಡೆದು ಸುಸ್ತಾಗಿ, ತಿಂಡಿಗೆ ಇದೇ ಸೂಕ್ತ ಸಮಯ ಎಂದು ಸಮ್ಮತಿಸಿ, ಇಬ್ಬರೂ ಡೈನಿಂಗ್ ಹಾಲ್ ಗೆ ಹೊರಟೆವು.

ರುಚಿಕರವಾದ ಚೌಚೌ ಬಾತ್ ನ ಎರಡು ಎರಡು ಸಲ ಹಾಕಿಸಿಕೊಂಡು ಆನಂದಿಸಿ, ಕೈ ತೊಳೆದು ಹೊರಬರುತ್ತಿದ್ದಂತೆಯೇ ಯಾರೋ ಹಿಂದಿನಿಂದ ನನ್ನ ಕೈ ಹಿಡಿದು, "ಲೋ ಗುರು! ಕೈ ಸರಿಯಾಗಿ ತೊಳೆಯೋದು ಕಲಿ. ಸಜ್ಜಿಗೆಯ ತುಪ್ಪ ಇನ್ನೂ ಕೈಯಲ್ಲಿದೆ", ಎಂದರು. ಈ ದನಿಯನ್ನು ಗುರುತಿಸಲು ನಾನು ಹಿಂದೆ ತಿರುಗುವ ಅವಶ್ಯಕತೆ ಇರಲಿಲ್ಲ. ಆದರೂ ತಿರುಗಿದೆ. ಫಳ ಫಳನೆ ಮಿಂಚಿನಂತೆ ಮಿಂಚುತ್ತಿದ್ದನು ನಮ್ಮ ಕೆಂಚು ಕೂದಲಿನ, ಸಣ್ಣ ಗಾತ್ರದ ಸ್ನೇಹಿತ ನಾಡಿ!

Friend's marriage and awkward hair cutting (part 2)

"ಎಷ್ಟು ಸಂತೋಷ ಆಯ್ತು ಗೊತ್ತಾ ನಿಮ್ಮಿಬ್ರನ್ನ ನೋಡಿ", ಎಂದು ಹೇಳಿದ ನಾಡಿಯ ಮುಖದಲ್ಲಿ ಸಂತೋಷ ಉಕ್ಕಿಹರಿಯುತ್ತಿತ್ತು. "ಈ ಹೆಂಗಸ್ರು ಆ ಶಾಸ್ತ್ರ ಈ ಶಾಸ್ತ್ರ ಅಂತ ನನ್ತಲೆ ಚಿಟ್ ಹಿಡಿಸ್ತಾಯ್ದ್ರು", ಅಂದ.
"ಬಾಭಿನ ಇಂಟ್ರೊಡ್ಯೂಸ್ ಮಾಡ್ಸಲ್ವ?", ಬುರ್ಲಿ ಮೆಲು ದನಿಯಲ್ಲೇ ಕೇಳಿ, ಅವನ ಮಾತಿಗೆ ಅವನೇ ನಾಚಿಕೊಂಡ.
"ಆಮೇಲೆ ಬುರ್ಲಿ. ಅವ್ರು, ಐ ಮೀನ್ ಅವ್ಳು, ಫ್ರೆಂಡ್ಸ್ ಜೊತೆ ಬ್ಯೂಟಿ ಪಾರ್ಲರ್ಗೆ ಹೋಗಿದಾಳೆ. ಅಂದ್ಹಾಗೆ, ಈಗ ನೆನ್ಪಾಯ್ತು! ಸಾಯಂಕಾಲದ ವರಪೂಜೆಗೆ ನಾನು ತೀರ ಆದಿಮಾನವನ ತರ ಕಾಣ್ಬಾರ್ದು. ಹೇರ್ಕಟ್ ಮಾಡಸ್ಬೇಕು ಈಗ. ನನ್ಜೊತೆ ಬನ್ನಿ ಪ್ಲೀಸ್. ದಾರೀಲೇ ಮಾತಾಡ್ಕೊಂಡು ಹೋಗೋಣ", ಮಗು ತರ ನಾಡಿ ಬೇಡಿದ. ಮಗೂಗೆ ಇಲ್ಲ ಅನ್ನೋಕೆ ಆಗುತ್ತಾ? ಮೂರೂ ಜನ ನನ್ನ ಕಾರ್ನಲ್ಲಿ ಸಲೂನ್ ಗೆ ಹೊರಟೆವು.

ಆ ದಿನ ಭಾನುವಾರ. ಎಲ್ಲಾ ಸಲೂನ್ ಗಳಿಗೆ ನಿದ್ದೆಗಣ್ಣಲ್ಲಿದ್ದ ಗಂಡಸರು ಹಿಂಡು ಹಿಂಡಿನಲ್ಲಿ ನುಗ್ಗುತ್ತಿದ್ದರು. ನಾವು ಮೂರ್ನಾಲ್ಕು ಜಾಗಗಳಿಗೆ ಹೋಗಿ, ಅಲ್ಲಿನ ಪೇಪರ್ ಹಿಡಿದು ತೂಕಡಿಸುತ್ತಿದ್ದ ಕೇಶಭರಿತ ಗಂಡಸರ ಕ್ಯೂನನ್ನು ನೋಡಿ ಕಂಗಾಲಾದೆವು. ಅದೇ ಏರಿಯಾದಲ್ಲಿ ಅಲ್ಲಿ ಇಲ್ಲಿ ಹುಡುಕುತ್ತಾ ಕೊನೆಗೆ, ದೊಡ್ಡ ಬಂಗಲೆಗಳಿದ್ದ ಒಂದು ಪುಟ್ಟ ರಸ್ತೆಗೆ ಬಂದೆವು. ನಮ್ಮ ಎಡಗಡೆ ಇದ್ದ ಎರಡು ದೈತ್ಯಾಕಾರದ ಬಂಗಲೆಗಳ ಮಧ್ಯದಲ್ಲಿ ಒಂದು ಸಣ್ಣ ಹೇರ್ ಸಲೂನ್ ನುಸುಳಿಕೊಂಡಿತ್ತು. ಕಾರಿಂದ ಇಳಿದು ಸಲೂನಿನ ಮುಂದೆ ನಿಂತೆವು. ಒಂದು ಸೊಟ್ಟಗಿನ ಬೋರ್ಡು, "Amitabh hair saloon", ಎಂದು ಘೋಷಿಸುತ್ತಿತ್ತು. ಪಕ್ಕದಲ್ಲೇ ಅಮಿತಾಬ್ ನ ಕರಿ ವಿಗ್ ಮತ್ತು ಬಿಳಿ ಫ್ರೆಂಚ್ ಗಡ್ಡ ಧರಿಸಿದ ಒಂದು ಫೋಟೋ. ನಾವು ಮುಖಮುಖ ನೋಡಿಕೊಂಡೆವು.

ಒಳಗೆ ಇಣುಕಿ ನೋಡಿದರೆ ಯಾವ ಗಿರಾಕಿಯೂ ಇದ್ದಂತೆ ಕಾಣಲಿಲ್ಲ. "ಬನ್ನಿ ಬೇಗ. ಮುಗುಸ್ಕೊಂಡು ಹೊರ್ಡೋಣ. ಅಮ್ಮ ಮೆಸೇಜ್ ಮಾಡಿದಾರೆ. ಇನ್ ಅರ್ಧ ಘಂಟೆಗೆ ಪೂಜೆ. ನಾನಿಲ್ದೆ ಶುರು ಮಾಡೋಂಗಿಲ್ವಂತೆ", ಎಂದು ಹೇಳಿ ನಾಡಿ ಸಲೂನ್ ಪ್ರವೇಶಿಸಿದ. ನಾನು ಬುರ್ಲಿ ಅವನನ್ನು ಹಿಂಬಾಲಿಸಿದೆವು. ಸಲೂನ್ ಎಷ್ಟು ಚಿಕ್ಕದಾಕಿತ್ತೆಂದರೆ, ನಾವು ಮೂರು ಜನ ಪ್ರವೇಶಿಸಿದ ನಂತರ ಹೌಸ್ ಫುಲ್ ಎನಿಸಿತು. ಬಾಗಿಲಿನ ಬಳಿ, ನಕಲಿ ಹೂವಿನ ಹಾರ ಧರಿಸಿದ ಲಕ್ಷ್ಮಿ - ಗಣಪತಿ - ವೆಂಕಟೇಶ್ವರ ಮಿನುಗುವ ಫ್ರೇಮ್ ನಿಂದ ನಮ್ಮನ್ನು ಕುತೂಹಲದಿಂದ ಗಮನಿಸುತ್ತಿದ್ದರು. ಸಲೂನ್ ಮಧ್ಯದಲ್ಲಿ ಅಮಿತಾಬ್ ಕೌನ್ ಬನೇಗದಲ್ಲಿ ಉಪಯೋಗಿಸಿದಂತಹ ಎರಡು ಚೇರು. ಈ ಕಟಿಂಗ್ ಚೇರುಗಳ ಮುಂದೆ-ಹಿಂದೆ ಎರಡು ಸೆಟ್ಟು ಕನ್ನಡಿ. ಕಾಯುವವರಿಗೆ ಒಂದಿಷ್ಟು ಸ್ಟೂಲು, ಒಂದು ಪುಟ್ಟ ಮೇಜಿನ ಮೇಲೆ ಹಿಂದಿನ ದಶಕದ ಮಯೂರ, ಫಿಲಂ ಫೇರು. ನಾವು ಹೊಸ ವಾತಾವರಣವನ್ನು ಅರಗಿಸಿಕೊಳ್ಳುವ ಅಷ್ಟರಲ್ಲಿ, ಸಲೂನಿನ ಹಿಂದಿನ ಭಾಗದಲ್ಲಿದ್ದ ಒಂದು ಬಾಗಿಲು ತೆರೆಯಿತು. ದಪ್ಪ ಕನ್ನಡಕ ಧರಿಸಿದ ಒಬ್ಬ ಸಣ್ಣ ತಾತ ಹೊರಬಂದರು.

"ತಾತ, ಕಟಿಂಗ್", ಎಂದು ಆಜ್ಞಾಪಿಸಿ ನಾಡಿ ಸೀಟಿನಲ್ಲಿ ಕೂತೇಬಿಟ್ಟ.

English summary
Friend's marriage and awkward hair cutting : Kannada Short story by Madhava Venkatesh. Author's friend goes for hair cutting on the previous day of his marriage. What happens there? How the friends handle the situation? Author narrates it in a funny way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X