ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಭಸಂಕಲ್ಪ : ಗುರಿ ಮುಂದಿರಲಿ, ಗುರು ಹಿಂದಿರಲಿ

By * ಗುಣಮುಖ
|
Google Oneindia Kannada News

ನಿಮ್ಮ ಬೆನ್ನ ಹಿಂದೆ ಗುರು ಇರದಿದ್ದರೂ ಪರವಾಗಿಲ್ಲ, ನಿಮ್ಮ ಮುಂದೊಂದು ಗುರಿ ಇರದಿದ್ದರೆ ನಿಮ್ಮ ಬದುಕು ಅಸಹನೀಯವಾಗುತ್ತದೆ. ಹರ ಮುನಿದರೆ ಗುರು ಕಾಯುವುನು ನಿಜ, ಆದರೆ ಬದುಕಲ್ಲಿ ಒಂದು ಗುರಿ ಇರದಿದ್ದರೆ ಎಂತಹ ಗುರುವೂ ಕೂಡ ಸೋತು ಹೋದಾನು. ಬದುಕಲ್ಲಿ ಒಂದು ಗುರಿಯಿಟ್ಟುಕೊಳ್ಳಿ, ಉಳಿದಿದ್ದು ನಾಮಕಾವಸ್ತೆ. 'ಗುರು ಹೆಗಲ ಮೇಲಿನ ಹೆಣ. ಅದನ್ನು ಕೆಳಕ್ಕೆ ಹಾಕಿ ನೀನು ಗುರಿಯ ಕಡೆ ಸಾಗು' ಎಂಬರ್ಥದ ಮಾತನ್ನು ಸತ್ಯಕಾಮ ಒಂದೆಡೆ ಹೇಳಿದ್ದಾರೆ. ಜೀವನದಲ್ಲಿ ಗುರುಗಿಂತ ಗುರಿ ಮುಖ್ಯ. ಗುರಿಯಿದ್ದವನಿಗೆ ಗುರು ಸಿಕ್ಕೇ ಸಿಗುತ್ತಾನೆ. ಅವನ ಸಾಧನೆಯ ಹಾದಿ ತಾನಾಗಿಯೇ ಅವನ ಮುಂದೆ ಒಡಮೂಡುತ್ತದೆ.

ಗುರಿಯಿಲ್ಲದವನ ಮನಸು ಸಿಕ್ಕ ಸಿಕ್ಕ ಕಡೆ ಅಲೆದು ಸುಸ್ತಾಗುತ್ತದೆ. ಖಾಲಿ ಕೂತವನ ಮನಸು ದೆವ್ವದ ಕಾರ್ಖಾನೆಯಾಗುತ್ತದೆ. ಬದುಕಲ್ಲಿ ಗುರಿಯೊಂದು ಸ್ಪಷ್ಟವಾದ ದಿನ ಬದುಕಲ್ಲಿ ತಾನಾಗೆ ಸ್ಪಷ್ಟತೆ, ದೃಢಚಿತ್ತ ಮತ್ತು ಸಾಧನೆಗೆ ದಾರಿ ಲಭಿಸುತ್ತದೆ. ಮೊನ್ನೆ ಸಿಕ್ಕ ಯುವಕನೊಬ್ಬ ಹೇಳುತಿದ್ದ "ಬದುಕಲ್ಲಿ ಒಬ್ಬ ಗಾಡ್ ಫಾದರ್ ಇದ್ದಿದ್ದರೆ... ಒಬ್ಬ ಒಳ್ಳೆ ಗುರು ಸಿಕ್ಕಿದ್ದರೆ ನನ್ನ ಕತೆನೇ ಬೇರೆಯಾಗುತಿತ್ತು... ನೋಡಿ ಏನೂ ಆಗಬೇಕಾಗಿದ್ದ ನಾನು ಏನೂ ಆಗಲಿಲ್ಲ" ಎಂದ. ನಾನು ತಣ್ಣಗೆ ಕೇಳಿದೆ, ಅದೆಲ್ಲಾ ಸರಿ ನಿನ್ನ ಬದುಕಿನ ಗುರಿಯೇನು? ಏನೇನೋ ಹೇಳಿದ, ಕೆರಳಿದ, ನಿಟ್ಟುಸಿರು ಬಿಟ್ಟ, ಸುಸ್ತಾದ... ಆದರೆ ಯಾಕೋ ಅವನು ಸ್ಪಷ್ಟ ಉತ್ತರ ಕೊಡದಾದ. ಅವನು ಹೋದ ನಂತರ ಇದೆಲ್ಲಾ ಯೋಚಿಸುತ್ತಾ ಕೂತಾಗ ಎಲ್ಲೋ ಕೇಳಿದ ಒಂದು ಪುಟ್ಟ ಕತೆ ನೆನಪಾಯಿತು.

***

Goals are destinations in your life

ಅದೊಂದು ಪುಟ್ಟ ಊರು. ಊರಿನಲ್ಲೊಂದು ದೇವಸ್ಥಾನ. ದೇವಸ್ಥಾನದಲ್ಲಿ ದೇವರ ಸೇವೆಗೆಂದು ಆನೆಯನ್ನು ಸಾಕಿದ್ದರು. ಇದ್ದ ಆನೆಗೆ ವಯಸ್ಸಾಗಿ ತೀರಿಕೊಂಡಿದ್ದರಿಂದ, ಪುಟ್ಟ ಆನೆ ಮರಿಯೊಂದು ಕಾಣಿಕೆ ರೂಪದಲ್ಲಿ ಶ್ರೀಮಂತರೊಬ್ಬರ ಕೊಡುಗೆಯಾಗಿ ಬಂತು. ಮಾವುತ ಅದಕ್ಕೆ 'ಗಣೇಶ' ಎಂದು ಹೆಸರಿಟ್ಟು, ತನ್ನ ತರಬೇತಿಯನ್ನು ಪ್ರಾರಂಭಿಸಿದ.

ಗಣೇಶ ತನ್ನ ತುಂಟತನದಿಂದ ಮತ್ತು ಬುದ್ಧಿವಂತಿಕೆಯಿಂದ ಎಲ್ಲರ ಗಮನ ಸೆಳೆಯುತ್ತಾ, ಎಲ್ಲರ ಅಚ್ಚುಮೆಚ್ಚಾದ. ಮಕ್ಕಳಿಲ್ಲದ ಮಾವುತ ಅನೆಮರಿಯನ್ನು ಬಹು ಮುದ್ದಿನಿಂದ ನೋಡಿಕೊಳ್ಳುತಿದ್ದ. ಬೇರೆಲ್ಲಾ ಆನೆಗಳಿಗಿಂತ ಗಣೇಶ ಬೇಗನೆ ಎಲ್ಲಾ ಕಲಿಯುತಿದ್ದ. ಇದೆನೆಲ್ಲಾ ನೋಡಿ ಮಾವುತನಿಗೆ ಬಹು ಮೆಚ್ಚುಗೆ. ಅವನು ಬಹು ಹೆಮ್ಮೆಯಿಂದ ದೇವಸ್ಥಾನಕ್ಕೆ ಬಂದವರ ಮುಂದೆ ಗಣೇಶನ ಬುದ್ಧಿವಂತಿಕೆಯ ಪ್ರದರ್ಶನ ಮಾಡಿಸಿ, ಗಣೇಶ ಊರವರ ಮೆಚ್ಚುಗೆಯೂ ಪಡೆಯುವಂತೆ ಮಾಡಿದ.

ಹೀಗೆ ಎಲ್ಲಾ ಚೆನ್ನಾಗಿ ಸಾಗುತ್ತಿರುವಾಗ, ಒಂದು ಸಮಸ್ಯೆ ಎದುರಾಯಿತು. ಪ್ರತಿನಿತ್ಯ ನದಿಯಲ್ಲಿ ಗಣೇಶನಿಗೆ ಸ್ನಾನ ಮಾಡಿಸಿ ದೇವಸ್ಥಾನದ ಬೀದಿಯಲ್ಲಿ ನಡೆಸಿಕೊಂಡು ಬರುವಾಗ, ಗಣೇಶ ಬೀದಿಯ ಅಕ್ಕಪಕ್ಕ ಇದ್ದ ಅಂಗಡಿಯ ಮಾಲೀಕರಿಗೆ ತೊಂದರೆ ಕೊಡಲಾರಂಭಿಸಿದ. ಸೊಂಡಿಲಲ್ಲಿ ಅಂಗಡಿಯಲ್ಲಿ ಇಟ್ಟಿದ್ದ ಹಣ್ಣು-ಹಂಪಲನ್ನು, ಮಾರಾಟದ ವಸ್ತುವನ್ನು ಎಳೆದಾಡುವುದು. ಕೆಲವೊಮ್ಮೆ ಮಾರಾಟದ ವಸ್ತುಗಳನ್ನೂ ಬೀಳಿಸುವುದು ಇತ್ಯಾದಿ.

ಕೆಲದಿನ ವರ್ತಕರು ಗಣೇಶನ ತುಂಟತನವನ್ನು ಸಹಿಸಿಕೊಂಡರು, ನಂತರ ಗೊಣಗಾಡಿದರು. ಇನ್ನೂ ಕೆಲದಿನಗಳ ಗಣೇಶನ ದಾಂಧಲೆ ನಿಲ್ಲದಿದ್ದಾಗ, ನಷ್ಟ ಅನುಭವಿಸಿದ ವರ್ತಕರು ಮಾವುತನ ಜೊತೆ ಜೋರಾಗಿಯೇ ಜಗಳಕ್ಕೆ ನಿಂತರು.

ಮಾವುತ ಗಣೇಶನಿಗೆ ಸಾಕಷ್ಟು ಬುದ್ಧಿವಾದ ಹೇಳಿದ, ತರಬೇತಿ ನೀಡಿದ. ಆದರೆ ಅದ್ಯಾವುದು ಪ್ರಯೋಜನಕ್ಕೆ ಬರಲಿಲ್ಲ. ಗಣೇಶನಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಮಗನಂತೆ ಬೆಳೆಸಿದ ಗಣೇಶನನ್ನು ಹೊಡೆದು, ಬಡೆದು ಅಥವಾ ಅಂಕುಶದಿಂದ ತಿವಿದು ಅಂಕೆಯಲ್ಲಿಡಲು ಅವನ ಮನಸು ಒಪ್ಪಲಿಲ್ಲ. ಸಣ್ಣದಾಗಿ ಶುರುವಾದ ವರ್ತಕರ ಅಸಮಾಧಾನ ದೇವಸ್ಥಾನದ ಆಡಳಿತ ಮಂಡಳಿಯ ಕಿವಿಗೂ ಮುಟ್ಟಿತು.

ದೇವಸ್ಥಾನದ ಆಡಳಿತ ಮಂಡಳಿಯವರು ಮಾವುತನ ಕರೆದು ಎಚ್ಚರಿಕೆ ನೀಡಿದರು. ಬೇಗನೆ ಈ ಸಮಸ್ಯೆ ಬಗೆಹರಿಯರಿಸದಿದ್ದರೆ ಅವನ ಕೆಲಸಕ್ಕೆ ಸಂಚಕಾರ ಎಂದು ತುಸು ಕಟುವಾಗಿಯೇ ಹೇಳಿದರು. ಮಾವುತ ಚಿಂತೆಗೆ ಬಿದ್ದ. ಚಿಂತೆಯಲ್ಲಿ ಕೃಶನಾದ. ಹೀಗೆ ಸಮಸ್ಯೆಯ ಬಗ್ಗೆ ಮಾವುತ ತಲೆ ಕೆಡಿಸಿಕೊಂಡು ಕೂತಾಗ ಅವನಿಗೆ ಆನೆಗಳ ಬಗ್ಗೆ ತರಬೇತಿ ಹೇಳಿಕೊಟ್ಟ ಅವನ ಗುರು ನೆನಪಾದ. ಗುರುವನ್ನು ಕಂಡು ತನ್ನ ಸಮಸ್ಯೆಯ ಬಗ್ಗೆ ಹೇಳಿಕೊಂಡ.

ಗುರು ಅವನ ಸಮಸ್ಯೆ ಕೇಳಿ ಗಟ್ಟಿಯಾಗಿ ನಕ್ಕುಬಿಟ್ಟ. ಇದೊಂದು ಸಮಸ್ಯೆಯೇ ಅಲ್ಲವೆಂದುಬಿಟ್ಟ!

"ನೀನು ಹೀಗೆ ಮಾಡು ಗಣೇಶನನ್ನು ಬೀದಿಯಲ್ಲಿ ಕರೆದುಕೊಂಡು ಹೋಗುವಾಗ, ಅದಕ್ಕೊಂದು ಕೋಲು ಕೊಡು. ಅದನ್ನು ಬೀಳಿಸದಂತೆ ಭದ್ರವಾಗಿ ಸೊಂಡಿಲಲ್ಲಿ ಹಿಡಿದುಕೊಳ್ಳುವಂತೆ ತರಬೇತಿ ಕೊಡು... ನಂತರ ನಿನ್ನ ಸಮಸ್ಯೆ ಪರಿಹಾರ ಆಗದಿದ್ದರೆ ಹೇಳು" ಎಂದು ಬಿಟ್ಟ ಗುರು. ಮಾವುತನಿಗೆ ತಲೆಬುಡ ಅರ್ಥವಾಗಲಿಲ್ಲ, ಅದರೂ ನಂಬಿಕೆಯಿಂದ ಗುರು ಹೇಳಿದನ್ನು ಪಾಲಿಸಿ ನೋಡಣ ಎಂದು ತನ್ನ ಊರಿಗೆ ಮರಳಿದ.

ಈ ತರಬೇತಿಯ ನಂತರ ಗಣೇಶ ಪುಂಡಾಟ ತಹಬಂದಿಗೆ ಬಂತು, ಮತ್ತೆ ಗಣೇಶ ನನ್ನ ಒಳ್ಳೆ ನಡತೆಯಿಂದ ಎಲ್ಲರ ಮೆಚ್ಚುಗೆ ಪಾತ್ರನಾದ. ಮಾವುತನ, ವರ್ತಕರ ಮತ್ತು ಊರವವರ ಸಂತಸಕ್ಕೆ ಪಾರವೆಯಿರಲಿಲ್ಲ. ಆದರೆ ಮಾವುತನಿಗೆ 'ಎತ್ತಣ ಮಾಮರ ಎತ್ತಣ ಕೋಗಿಲೆ' ಎಂಬಂತಹ ಸೂಜಿಗ. ಮತ್ತೆ ಗುರುವನ್ನು ಕಂಡು ಸಂತೋಷವನ್ನು ಹಂಚಿಕೊಂಡ. ಕೊನೆಗೆ ಕುತೂಹಲ ತಡೆಯೆದೆ ತನ್ನ ಅನುಮಾನ ಗುರು ಬಳಿ ತೋಡಿಕೊಂಡ.

ಆಗ ಗುರು ಹೇಳಿದ "ನೋಡು ಬೀದಿಯಲ್ಲಿ ನಡೆದು ಬರುವಾಗ ಗಣೇಶನ ಸೊಂಡಿಲು ಬಿಡುವಾಗಿತ್ತು, ಹಾಗಾಗಿ ಅದು ಕಂಡಕಂಡ ಕಡೆ ಸೊಂಡಿಲು ಚಾಚಿ ದಾಂಧಲೆ ಮಾಡುತಿತ್ತು. ನೀನು ಅದಕ್ಕೆ ಒಂದು ಕೋಲು ಕೊಟ್ಟು, ಅದನ್ನು ಬೀಳಿಸದಂತೆ ಹಿಡಿದುಕೊಳ್ಳುವ ಒಂದು ಗುರಿ ನೀಡಿದೆ ನೋಡು... ಆಗ ಗಣೇಶನಿಗೆ ಒಂದು ಗುರಿ ಸಿಕ್ಕಿತು, ಗುರಿಯೆಡೆಗೆ ಅದರ ಗಮನ ಹೋಗಿ ಅವನ ತುಂಟಾಟ ತಾನಾಗಿಯೇ ಕಮ್ಮಿಯಾಯಿತು!". ಗುರು ಮುಗುಳ್ನಕ್ಕ, ಅದು ಮಾವುತನ ಮುಖದಲ್ಲಿ ಪ್ರತಿಫಲಿಸಿತು.

***
ತುಂಟಾಟ ಮಾಡುವ ಮಗುವಿಗೆ, ದಾಂಧಲೆ ಎಬ್ಬಿಸುವ ಮನಸಿಗೆ ಒಂದು ಗುರಿ ಕೊಟ್ಟು ನೋಡಿ, ಆಗ ಹೇಗೆ ಎಲ್ಲಾ ತುಂಟಾಟ, ಮೊಂಡಾಟ ಎಲ್ಲಾ ನಿಂತು ಹೋಗುತ್ತದೆ ಎಂದು. ಗುರಿಯೆಡೆಗೆ ಹುಟ್ಟುವ ತಪನೆಗೆ ಮನಸಿನ ಎಲ್ಲಾ ದಾಂಧಲೆಗಳನ್ನು ನಿಯಂತ್ರಿಸುವ ಶಕ್ತಿಯಿದೆ. ಮನಸು ಒಂದು ಕಡೆ ಕೇಂದ್ರೀಕೃತವಾದಾಗ, ನಿಮ್ಮ ಬದುಕಿನ ದಿಕ್ಕೇ ಬದಲಾಗುತ್ತದೆ.

ಅಂದಹಾಗೆ ನಿಮಗೆ ಒಂದೆರಡು ಕಷ್ಟದ ಪ್ರಶ್ನೆ, ನಿಮ್ಮ ಬದುಕಿನ ಗುರಿ ಏನು? ನಿಮಗೆ ನಿಮ್ಮ ಬದುಕಿನ ಗುರಿಯ ಬಗ್ಗೆ ಸ್ಪಷ್ಟತೆಯಿದೆಯಾ? ಬದುಕಲ್ಲಿ ಗುರಿ ಕಂಡುಕೊಳ್ಳುವ 'ಶುಭಸಂಕಲ್ಪ' ನಿಮ್ಮಲ್ಲಿ ಇಂದೇ ಮೂಡಲಿ ಎಂದು ಹಾರೈಸುತ್ತಾ...

ಶುಭಸಂಕಲ್ಪ - ನೋವ್ವೆ ಅನಾರೋಗ್ಯ ಸಂತೋಷವೇ ಆರೋಗ್ಯ, ಶುಭಸಂಕಲ್ಪದೊಂದಿಗೆ ಗುಣಮುಖರಾಗುವುದೇ ಭಾಗ್ಯ...!

English summary
Inspirational Kannada short stories. Idle mind is a devil's workshop. Do not sit idle thinking you will fail if attempted. One should have big goals to achieve big success. Goals are destinations of your life. Go and get whatever you want.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X