ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಲಾಸ್ ಟೀಚರ್ಗೆ ಅಬ್ರಹಾಂ ಲಿಂಕನ್ ಬರೆದ ಪತ್ರ

By * ಗುಣಮುಖ
|
Google Oneindia Kannada News

Abraham Lincoln's letter to his child's teacher
ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸಂಸ್ಕಾರ ಕೊಡಬೇಕೆಂಬುವುದು ಎಲ್ಲಾ ತಂದೆತಾಯಿಂದರ ಕನಸು. ಮಗುವಿಗೆ ವರುಷ ಕಳೆಯುವಷ್ಟರಲ್ಲಿ ಒಳ್ಳೆ ಶಾಲೆಗೆ ಹುಡುಕಾಟ. ಆದರೆ, ಮಕ್ಕಳನ್ನು ಒಳ್ಳೆ ಶಾಲೆಗೆ ಸೇರಿಸಿಬಿಟ್ಟರೆ, ಅಲ್ಲಿಗೆ ಶಿಕ್ಷಣ ಕೊಡಿಸುವ ನಮ್ಮ ಜವಾಬ್ದಾರಿ ಮುಗಿಯಿತೇ? ಮಕ್ಕಳಿಗೆ ಅಕ್ಷರಗಳನ್ನು ಹೇಳಿಕೊಟ್ಟರೆ ಅವು ಜೀವನಕ್ಕೆ ಸಾಕೆ? ಮಕ್ಕಳು ಕಲಿಕೆಯಲ್ಲಿ ಹಿಂದೆ ಬಿದ್ದರೆ, ಪ್ರೈವೇಟ್ ಟ್ಯೂಶನ್ ಅಂತ ಕಳುಹಿಸಿಕೊಟ್ಟರೆ ಸಾಕೆ? ಹೋಗಲಿ ನಮ್ಮ ಮಕ್ಕಳು ನೆಮ್ಮದಿಯ, ಉಜ್ವಲ ಭವಿಷ್ಯ ಕಟ್ಟಿಕೊಳ್ಳಲು ನಾವು ಏನು ಕಲಿಸಬೇಕೆಂಬ ಪರಿಕಲ್ಪನೆ ನಮಗೆ ಇದೆಯೆ? ಇದ್ದರೆ ಅದು ಸರಿಯಿದೆಯೆ? ಎಂಬ ಪ್ರಶ್ನೆ ಎಲ್ಲೋ ಅಂತರಂಗದ ಮೂಲೆಯಲ್ಲಿ ನಮ್ಮಲ್ಲಿ ಏಳುತ್ತಿರುತ್ತದೆ.

ಹೀಗೆ ಅನೇಕ ಪ್ರಶ್ನೆಗಳು ತಂದೆತಾಯಂದಿರ ಮನದಲ್ಲಿ. ನಮ್ಮ ಮುದ್ದು ಮಗುವಿಗೆ ಏನು ಕೊಟ್ಟರೂ ಸಮಾಧಾನವಿಲ್ಲದ ಮಮತೆ. ನಾಳೆ ನನ್ನ ಮಗು ಜೀವನದಲ್ಲಿ ದೊಡ್ಡ ಮನುಷ್ಯನಾ(ಳಾ)ಗಲಿ ಎಂಬ ಆಸೆ, ಆಶೀರ್ವಾದ. ಎಲ್ಲದಕ್ಕೂ ನಾವು ನಂಬಿರುವುದು ಓದು, ಓದು ಮತ್ತು ಓದು. ಆದರೆ ಮಕ್ಕಳಿಗೆ ಅಕ್ಷರ ಜ್ಞಾನ ಮಾತ್ರ ಸಾಕೆ? ಜೀವನ ಮೌಲ್ಯಗಳು? ಈ ಎಲ್ಲಾ ಆಸೆ ಮತ್ತು ಹಂಬಲದ ನಡುವೆ ನಮ್ಮ ಮಗುವಿಗೆ ಉಸಿರುಗಟ್ಟುವ ವಾತಾವರಣ, ಒತ್ತಡದ ಬದುಕು ಸೃಷ್ಟಿಸುತ್ತಿದ್ದೇವೆಯೆ? ಇದನ್ನೆಲ್ಲ ಕುರಿತು ಯೋಚಿಸುತ್ತಿರುವಾಗ, ಒಬ್ಬ ತಂದೆ ತನ್ನ ಮಗನ ಶಾಲೆಯ ಅಧ್ಯಾಪಕನಿಗೆ ಬರೆದ ಪತ್ರ ಸಿಕ್ಕಿತು. ಆ ಪತ್ರದ ಭಾವಾನುವಾದ ನಿಮ್ಮ ಓದಿಗೆ. ನಿಮ್ಮ, ನಮ್ಮ ಗೊಂದಲಗಳಿಗೆ ಉತ್ತರ ಸಿಗುವುದೊ, ಓದಿ ನೋಡೋಣ.

***
ಆತ್ಮೀಯ ಅಧ್ಯಾಪಕ ಮಿತ್ರ, ಇಂದಿನಿಂದ ನನ್ನ ಮಗನ ಶಾಲೆ ಶುರುವಾಗುತ್ತಿದೆ. ಮೊದಲ ದಿನ ಬೇರೆ, ಖಂಡಿತ ಅವನಿಗೆ ಎಲ್ಲಾ ಹೊಸದಾಗಿ ಮತ್ತು ವಿಚಿತ್ರವಾಗಿ ತೋರಬಹುದು. ದಯವಿಟ್ಟು ನನ್ನ ಮಗನನ್ನು ಮಮತೆಯಿಂದ ಕಾಣು. ಮಗುವಿಗೆ ಇದೊಂದು ಖಂಡ-ಖಂಡಾಂತರವನ್ನು ದಾಟಿ ಹೋಗುವ ಸಾಹಸ ತುಂಬಿದ ಅದ್ಭುತ ಯಾನವಾಗಬಹುದು. ಆ ಸಾಹಸ ಯಾತ್ರೆಯಲ್ಲಿ ಅವನು ದುರಂತ, ಯುದ್ಧ ಮತ್ತು ಅನಂತ ದುಃಖವನ್ನೂ ಕಾಣಬಹುದು. ಹಾಗಾಗಿ ಮಗುವಿಗೆ ಈ ಜೀವನ ಕಟ್ಟಿಕೊಳ್ಳಲು ಮತ್ತು ಬಾಳಲು ನಂಬಿಕೆಯ, ಪ್ರೀತಿಯ ಮತ್ತು ಧೈರ್ಯದ ಅವಶ್ಯಕತೆ ಇದೆ, ಹಿಂದಿಗಿಂತಲೂ ಹೆಚ್ಚು ಅಗತ್ಯ ಈಗಿನ ಕಾಲದಲ್ಲಿದೆ.

ಆದಕಾರಣ ನನ್ನ ಆತ್ಮೀಯ ಅಧ್ಯಾಪಕ, ಕರುಣಾಳುವಾಗಿ ಮಗುವಿನ ಕೈ ಹಿಡಿದು ಅವನು ಕಲಿಯಬೇಕಾದುದನೆಲ್ಲಾ ತಾಳ್ಮೆಯಿಂದ, ಸಹನೆಯಿಂದ ಕಲಿಸಿಕೊಡು. ಕಲಿಕೆ ಸಮಯದಲ್ಲಿ ಆದಷ್ಟು ಮೃದುವಾಗಿರು, ಸಾಧ್ಯವಾದರೆ. ಜಗದಲ್ಲಿ ಶತ್ರುಗಳಿದ್ದಂತೆ ಮಿತ್ರರೂ ಇರುವರು. ಎಲ್ಲಾ ಮನುಷ್ಯರು ಯೋಗ್ಯರಲ್ಲ, ಸತ್ಯಸಂಧರೂ ಅಲ್ಲ, ಆದರೆ ಈ ಜಗದಲ್ಲಿ ಪ್ರತಿ ಫಟಿಂಗನಿಗೆ ಸಮನಾಗಿ ಒಬ್ಬ ಸಭ್ಯ ಮನುಷ್ಯ; ಪ್ರತಿ ಕುಟಿಲ, ದುಷ್ಟ ರಾಜಕಾರಣಿಗೆ ಸಮನಾಗಿ ನಿಷ್ಠಾವಂತ, ಸಮರ್ಪಣ ಮನೋಭಾವದ ನಾಯಕನಿರುವನು ಎಂದು ತಿಳಿವಳಿಕೆ ಕೊಡು.

ಹಾಗೆಯೆ, ಎಲ್ಲೋ ಸಿಕ್ಕ ಒಂದು ರುಪಾಯಿಗಿಂತ, ದುಡಿದು ಗಳಿಸಿದ ಹತ್ತು ಪೈಸೆಯ ಮೌಲ್ಯ ಹೆಚ್ಚೆಂದು ಹೇಳಿಕೊಡು. ಆತ್ಮೀಯ ಅಧ್ಯಾಪಕ - ಸೋಲುವುದು, ಫೇಲಾಗುವುದು, ಮೋಸಮಾಡುವುದಕ್ಕಿಂತ ಮೇಲೆಂದು ಹೇಳಿಕೊಡು. ಸೋತಾಗ ಘನತೆಯಿಂದ ವರ್ತಿಸುವುದು ಹೇಗೆಂದು ಹೇಳಿಕೊಡು, ಹಾಗೆಯೇ ಗೆದ್ದಾಗ ಸಂತೋಷಿಸುವುದನ್ನು, ಸಭ್ಯನಾಗಿ ಉಳಿಯುವುದನ್ನು ಹೇಳಿಕೊಡು.

ತನ್ನ ಸಹಪಾಟಿಗಳೊಡನೆ, ಜನರೊಡನೆ ಸಭ್ಯನಾಗಿ ಮೃದುವಾಗಿ ವರ್ತಿಸುವುದು ಹೇಳಿಕೊಡು. ಹಾಗೆಯೆ ಕಠಿಣರ ಜೊತೆ ಕಠಿಣವಾಗಿ ವರ್ತಿಸುವುದನ್ನು; ಅಸೂಯೆ, ದ್ವೇಷದಿಂದ ದೂರವಿರುವುದು ಹೇಗೆಂದು ಹೇಳಿಕೊಡು. ಚಿಕ್ಕ ಮುಗುಳ್ನಗೆಯ ಮಹತ್ವವನ್ನು, ಕಣ್ಣೀರು ಹಾಕುವುದು ಅವಮಾನವಲ್ಲವೆಂದು ಕಲಿಸಿಕೊಡು. ಸಾಧ್ಯವಾದರೆ, ದುಃಖದಲ್ಲಿರುವಾಗ ನಗುವುದನ್ನು ಕೂಡ ಕಲಿಸಿಕೊಡು. ಸೋತಾಗ ಸಿಗುವ ಮತ್ತೊಂದು ಅವಕಾಶ, ಸೋಲಿನಲ್ಲಿರುವ ಪಾಠ, ಅಭ್ಯುದಯದ ಬಗ್ಗೆ ಹೇಳಿಕೊಡು. ಹಾಗೆಯೆ ಗೆದ್ದಾಗ ಉಂಟಾಗುವ ಖಾಲಿತನ, ಹತಾಶೆಯ ಬಗ್ಗೆ ಕೂಡ. ಸಿನಿಕರನ್ನು ಅಲಕ್ಷಿಸುವುದನ್ನು, ಕಡೆಗಣಿಸುವುದನ್ನು ಹೇಳಿಕೊಡು.

ನಿನಗೆ ಸಾಧ್ಯವಾದರೆ ಮಗುವಿಗೆ ಪುಸ್ತಕಗಳ ಅದ್ಭುತ ಲೋಕ ಪರಿಚಯಿಸು, ಆದರೆ ಆಕಾಶದಲ್ಲಿ ಹಾರುವ ಹಕ್ಕಿಯ ರಮ್ಯತೆಯ ಬಗ್ಗೆ, ಸೂರ್ಯನ ರಶ್ಮಿಯಲ್ಲಿ ಹಾರುವ ದುಂಬಿಗಳ ಝೇಂಕಾರದ ಬಗ್ಗೆ ಮತ್ತು ಹಸಿರು ಬೆಟ್ಟದಲ್ಲಿ ನಗುವ ಹೂವಿನ ಬಗ್ಗೆ ಯೋಚಿಸುವುದಕ್ಕೆ ಸಮಯ ಹೊಂದಿಸಿಕೊಳ್ಳುವುದನ್ನು ಹೇಳಿಕೊಡು. ಜಗತ್ತಿನ ಸಮಸ್ತರು ಟೀಕಿಸುವಾಗ, ಅವನ ವಿಚಾರಗಳಲ್ಲಿ ಅವನಿಗೆ ಅಚಲ ನಂಬಿಕೆ ಇಟ್ಟುಕೊಳ್ಳುವ ಬಗೆ ಅವನಿಗೆ ತಿಳಿಸಿಕೊಡು.

ಕುರಿಯಂತೆ ಎಲ್ಲರೂ ಮಾಡಿದ್ದನ್ನೇ ನನ್ನ ಮಗನೂ ಅನುಕರಿಸುವುದು ಬೇಡ. ಗುಂಪಲ್ಲಿದ್ದರೂ ಸ್ಪಷ್ಟವಾಗಿ, ಸ್ವತಂತ್ರವಾಗಿ ಯೋಚಿಸುವುದನ್ನು ಹೇಳಿಕೊಡು. ಆ ಶಕ್ತಿಯನ್ನು ಅವನಲ್ಲಿ ತುಂಬು. ಎಲ್ಲರ ಅಭಿಪ್ರಾಯಗಳನ್ನು, ಮಾತನ್ನು ತಾಳ್ಮೆಯಿಂದ ಕೇಳುವುದ ಹೇಳಿಕೊಡು. ಆದರೆ ಕೇಳಿದ್ದನ್ನೆಲ್ಲ ಸೋಸಿ, ಬಸಿದು ಸತ್ಯವನ್ನು ಮತ್ತು ಒಳ್ಳೆಯದನ್ನು ಮಾತ್ರ ಗ್ರಹಿಸುವುದನ್ನು ಹೇಳಿಕೊಡು.

ಅವನ ಬುದ್ಧಿವಂತಿಕೆಯನ್ನು, ಸಾಮರ್ಥ್ಯವನ್ನು ಅತ್ಯಂತ ಹೆಚ್ಚು ಮೆಚ್ಚುವ, ಹೆಚ್ಚು ಮೌಲ್ಯ ಕೊಡುವವನಿಗೆ ಮೀಸಲಿಡಲು ಹೇಳಿಕೊಡು. ಆದರೆ ತನ್ನ ಆತ್ಮ ಮತ್ತು ಹೃದಯವನ್ನ ಹಣಕ್ಕೆ ಮಾರಿಕೊಳ್ಳದಿರಲು ಹೇಳು. ನಿರ್ಭೀತಿಯಿಂದ ವರ್ತಿಸುವ ಉತ್ಸುಕತೆ, ಧೈರ್ಯದಿಂದ ವರ್ತಿಸುವ ಸಹನೆ ಹೇಳಿಕೊಡು. ತನ್ನ ಮೇಲೆ ಅಚಲ ನಂಬಿಕೆ ಬೆಳೆಸಿಕೊಳ್ಳುವ ಮಹತ್ವ ಹೇಳಿಕೊಡು. ತನ್ನ ಮೇಲೆ ಅಚಲ ನಂಬಿಕೆ ಇದ್ದವ ದೇವರನ್ನು, ಮನುಕುಲವನ್ನು ಮತ್ತು ಮನುಷ್ಯತ್ವವನ್ನು ನಂಬುವನು.

ಪ್ರಿಯ ಅಧ್ಯಾಪಕ, ಇದೆಲ್ಲಾ ಹೇಳಿಕೊಡಲು ನಿನ್ನ ಶಕ್ತಿಮೀರಿ ಪ್ರಯತ್ನಿಸು. ಇದು ನನ್ನ ಆದೇಶ ಹಾಗು ನಮ್ರ ವಿನಂತಿ. ನನ್ನ ಮಗನೋ ಮುದ್ದಾದ ಪುಟ್ಟ ಹುಡುಗ, ತುಂಬಾ ಒಳ್ಳೆಯವನು ಕೂಡ.

***
ಮಕ್ಕಳ ಬದುಕನ್ನು ರೂಪಿಸುವಲ್ಲಿ ಗುರುವಿನ ಅಗತ್ಯದ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆಯೇ ಇಲ್ಲ. ಹರ ಮುನಿದರೆ ಗುರು ಕಾಯವನು ಎಂದಿದ್ದಾರೆ ಹಿರಿಯರು. ಹಾಗಾಗಿಯೇ 'ಗುರು ಬ್ರಹ್ಮ...' ಎಂದು ಹೇಳಿಕೊಟ್ಟಿದೆ ನಮ್ಮ ನೆಲದ ಸಂಸ್ಕಾರ.

ಅಂದಹಾಗೆ ಮೇಲಿನ ಪತ್ರವನ್ನು ಅಮೆರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ತನ್ನ ಮಗನ ಸ್ಕೂಲ್ ಟೀಚರ್-ಗೆ ಬರೆದಿದ್ದು. ಬನ್ನಿ ಮಕ್ಕಳಿಗೆ ಜೀವನ ಮೌಲ್ಯಗಳ ಬಗ್ಗೆ ತಿಳಿಸಿ ಹೇಳುವ 'ಶುಭಸಂಕಲ್ಪ' ಮಾಡೋಣ. ಇಂದು ಶಿಕ್ಷಕರ ದಿನಾಚರಣೆ. ಎಲ್ಲಾ ಶಿಕ್ಷಕರಿಗೂ ಹೃದಯಪೂರ್ವಕ ಶುಭಾಶಯಗಳು! [ಲೇಖಕರ ಈಮೇಲ್ : [email protected]]

ಶುಭಸಂಕಲ್ಪ - ನೋವ್ವೆ ಅನಾರೋಗ್ಯ ಸಂತೋಷವೇ ಆರೋಗ್ಯ, ಶುಭಸಂಕಲ್ಪದೊಂದಿಗೆ ಗುಣಮುಖರಾಗುವುದೇ ಭಾಗ್ಯ...! [ಅಬ್ರಹಾಂ ಲಿಂಕನ್ ಕುರಿತು ವಿಶ್ವೇಶ್ವರ ಭಟ್ ಬರೆದ ಲೇಖನ ಓದಿರಿ.]

English summary
What are your plans for a bright future of your kid? Is it enough to give him education? If you feel good education is enough then read this letter written by Former President of USA Abraham Lincoln to teacher of his kid, asking the teacher to teach values of life. Inspirational Kannada short story by Gunamukha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X