ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾ.ಡಿ ಭಾಷಣ -9 : ಸಮಗ್ರ ಕರ್ನಾಟಕ ಒಂದೇ ನಮ್ಮ ಸೂರು

By Mahesh
|
Google Oneindia Kannada News

ಕರ್ನಾಟಕ ಪ್ರಾಂತ್ಯ ರಚನೆಯಾಗುವ ಮುನ್ನ ನಮ್ಮ ನಾಡು ಬೇರೆ ಬೇರೆ ಪ್ರಾಂತ್ಯಗಳ ಜೊತೆಯಲ್ಲಿ ಹರಿದು ಹೋಗಿತ್ತು. ಆಗ ನಾಡಿನ ಕೆಲ ಪ್ರದೇಶಗಳನ್ನ ಗುರುತಿಸುವಾಗ ಹೈದರಾಬಾದ ಕರ್ನಾಟಕ, ಮದರಾಸು ಕರ್ನಾಟಕ, ಮುಂಬಯಿ ಕರ್ನಾಟಕ ಎಂದೆಲ್ಲ ನಾವು ಕರೆಯುತ್ತಿದ್ದೆವು. ಹೀಗೆ ಕರೆಯುವ ಈ ಪರಿಪಾಠ ಇಂದಿಗೂ ಮುಂದುವರೆದಿರುವುದು ಅಷ್ಟೊಂದು ಸೂಕ್ತವಲ್ಲ. ಪದೇ ಪದೇ ಈ ಬಗೆಯ ಮಾತುಗಳು ಮನಸ್ಸಿಗೆ ರೇಜಿಗೆಯನ್ನ ಉಂಟು ಮಾಡುತ್ತವೆ. ನಾವೆಲ್ಲ ಒಂದು ಅನ್ನುವಾಗ ಈ ಭಿನ್ನತೆಗೆ ಅವಕಾಶ ಕೊಡಬಾರದು. ಅಂತೆಯೇ ಇದೀಗ ಕನ್ನಡ ನಾಡನ್ನ ಒಡೆಯುವ ಮಾತು ಕೇಳಿ ಬರುತ್ತಿದೆ. ಒಂದು ದೀರ್ಘ ಹೋರಾಟದ ಮೂಲಕ ಪಡೆದ ನಾಡು ಇದು.

ಆಲೂರು ವೆಂಕಟರಾಯರು, ಕಡಪಾ ರಾಘವೇಂದ್ರ ರಾಯರು. ಮುದವೀಡು ಕೃಷ್ಣರಾಯರು, ಯಾವುದೇ ಅಧಿಕಾರದ ಆಸೆ ಇಲ್ಲದೆ, ಮಕ್ಕಳು ಮೊಮ್ಮಕ್ಕಳಿಗೆ ಆಸ್ತಿ ಮಾಡದೆ, ಯಾವುದೇ ಅನ್ಯಾಯವನ್ನ ಮಾಡದೆ ಕಟ್ಟಿದ ನಾಡು. ಇದನ್ನ ನಾವು ಹಾಗೆಯೇ ಇರಿಸಿ ಕೊಳ್ಳ ಬೇಕು. ಆದರೆ ನಾಳೆ ತಮಗೆ ಮಂತ್ರಿಗಿರಿ ದೊರೆಯ ಬೇಕೆಂದೋ, ಇಲ್ಲ ತಮ್ಮ ಬೇಳೆ ಬೇಯಿಸಿ ಕೊಳ್ಳ ಬೇಕೆಂದೋ ಕೆಲವರು ಬೇರೆ ಬೇರೆ ರಾಜ್ಯಗಳ ಮಾತನ್ನ ಆಡುತ್ತಿದ್ದಾರೆ.

1956ರಲ್ಲಿ ಈ ನಾಡು ನವ ಮೈಸೂರು ಅನ್ನುವ ಹೆಸರಿನಲ್ಲಿ ತಲೆ ಎತ್ತಿತು, ಜನರ ಅಭಿಪ್ರಾಯ ರೂಪಿಸಿ ದೇವರಾಜು ಅರಸು ಅವರು ಇದಕ್ಕೆ ಕನರ್ಾಟಕ ಅನ್ನುವ ಹೆಸರನ್ನ ಇರಿಸಿದರು. ಇದು ಹಾಗೇ ಇರಲಿ. ಮತ್ತೆ ಒಡಕು ಬೇಡ. ಮತ್ತೆ ಈ ನಾಡು ಒಡೆದರೆ ನಾವು ದುರ್ಬಲರಾಗುತ್ತೇವೆ. ನಮ್ಮ ದನಿ ಉಡುಗಿ ಹೋಗುತ್ತದೆ. ಅವರಿಗೆ ರಾಜ್ಯ ಕೊಟ್ಟಿರಿ ನಮಗೂ ಕೊಡಿ ಎಂದು ವೆಂಕ ನಾಣಿ ಸೀನರೆಲ್ಲ ಎದ್ದು ನಿಲ್ಲುತ್ತಾರೆ. ಗಡಿ ಸಮಸ್ಯೆ, ಜಲ ಸಮಸ್ಯೆಗಳು ಹೆಚ್ಚುತ್ತವೆ, ದೇಶದ ಸಂಪತ್ತು ವಿಂಗಡಣೆ ಆಗುತ್ತದೆ, ಇಡೀ ರಾಷ್ಟ್ರ ಒಂದಾಗಿ ಬಾಳದೇ ಹೋದ ಕನ್ನಡಿಗರ ದುಸ್ಥಿತಿಗೆ ಮರಗುತ್ತದೆ.

80th Kannada Sahitya Sammelana Madikeri President Norbert D'Souza Speech

ಇವತ್ತು ತೆಲಂಗಾಣಕ್ಕೆ ಬಂದಿರುವ ಪರಿಸ್ಥಿತಿ ನಮಗೆ ಒಂದು ಪಾಠವಾಗ ಬೇಕು. ಇಲ್ಲಿ ಸರಕಾರದ ಒಂದು ಹೊಣೆ ಇದೆ. ಈ ಬಗೆಯ ಪ್ರತ್ಯೇಕತೆಯ ಕೂಗು ಏಕೆ ಹುಟ್ಟುತ್ತದೆ ಎಂಬ ಬಗ್ಗೆ ಸರಕಾರ ಪರಿಶೀಲಿಸ ಬೇಕಿದೆ. ನಾಡಿನ ಯಾವುದೇ ಪ್ರದೇಶದ ಜನ ನಮ್ಮನ್ನ ಯಾರೂ ಕೇಳುತ್ತಿಲ್ಲ, ಸಿಗಬೇಕಾದ ಸೌಲಭ್ಯಗಳು ನಮಗೆ ಸಿಗುತ್ತಿಲ್ಲ ಎಂದು ಕೊರಗುವಂತಹಾ ಪರಿಸ್ಥಿತಿ ಏರ್ಪಡದ ಹಾಗೆ ನೋಡಿ ಕೊಳ್ಳ ಬೇಕಿದೆ.

ಇಂದಿನ ಸರಕಾರ ಬಂದ ಕೂಡಲೇ ನಮ್ಮ ಮುಖ್ಯ ಮಂತ್ರಿಗಳು ಬೆಂಗಳೂರಿನ ಸಾಹಿತಿಗಳನ್ನ ಹೋಗಿ ಭೇಟಿಯಾದದ್ದು ಒಂದು ಒಳ್ಳೆಯ ಸೂಚನೆ. ಇದಕ್ಕಾಗಿ ನಾನು ಮುಖ್ಯ ಮಂತ್ರಿಗಳನ್ನ ಅಭಿನಂದಿಸುತ್ತೇನೆ. ಆದರೆ ಆ ನಂತರದ ದಿನಗಳಲ್ಲಿ ಓರ್ವ ಲೇಖಕನ ಮೇಲೆ ಪೋಲೀಸ್ ಕ್ರಮ ಕೈಕೊಂಡಿದ್ದು ಕಸಿವಿಸಿಯ ವಿಷಯ. ಇದು ಲೇಖಕರನ್ನ ನಡೆಸಿ ಕೊಳ್ಳುವ ರೀತಿಯಲ್ಲ. ಈ ದೇಶ ಶತಮಾನಗಳಿಂದ ಭಿನ್ನಾಭಿಪ್ರಾಯಗಳನ್ನ, ಅಭಿಪ್ರಾಯ ಬೇಧಗಳನ್ನ ಜೀರ್ಣಿಸಿ ಕೊಂಡು ಬಂದಿದೆ. ನಾವು ಮತ್ತೊಬ್ಬರ ಅಭಿಪ್ರಾಯವನ್ನ ಒಪ್ಪುವುದು ಬಿಡುವುದು ಬೇರೆ ಆದರೆ ಕೊನೆಯ ಪಕ್ಷ ಇನ್ನೊಬ್ಬರ ಅಭಿಪ್ರಾಯವನ್ನ ಕೇಳುವ ತಾಳ್ಮೆಯಾದರೂ ನಮಗೆ ಬೇಕಲ್ಲ. ಇದೂ ಇಲ್ಲ ಅಂದರೆ ಬೀದಿಯಲ್ಲಿ ನಡೆಯುವ ಗೂಳಿ ಕಾಳಗಕ್ಕೂ ನಮ್ಮ ವರ್ತನೆಗೂ ವ್ಯತ್ಯಾಸ ಇಲ್ಲ ಎಂದಾಗುತ್ತದೆ.

ಇತ್ತೀಚೆಗೆ ನಮ್ಮ ಸರಕಾರ ಮೂಢ ನಂಬಿಕೆಯ ವಿರುಧ್ದ ಒಂದು ಯುಧ್ದವನ್ನೇ ಸಾರಿತು. ಸಾಕಷ್ಟು ಕಡೆ ಇದರ ಬಗ್ಗೆ ಚರ್ಚೆ ಆಯಿತು, ಆಗುತ್ತಿದೆ. ಇದು ಆಗಬೇಕಾದ ಒಂದು ಕೆಲಸ. ಹಿಂದೆ ಚಂದ್ರಗುತ್ತಿಯಲ್ಲಿ ಬೆತ್ತಲೆ ಸೇವೆ ನಡೆಯುತ್ತಿತ್ತು, ಸರಕಾರ ಕಾನೂನಿನ ಮೂಲಕ ಅದನ್ನ ತಡೆದಿದೆ. ಮಹಾರಾಷ್ಟ್ರದಲ್ಲಿ ಇಂತಹಾ ಒಂದು ಕಾನೂನು ಬಂದಿದೆ ಎಂದು ಕೇಳಿದೆ ಆದರೆ ಅದರ ವಿವರ ನನಗೆ ದೊರೆತಿಲ್ಲ. ಇಲ್ಲಿ ಕೂಡ ಜೀವ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ, ಮನುಷ್ಯನನ್ನ ಕೆಳಹಂತಕ್ಕೆ ತರುವ, ಅವನನ್ನ ಇನ್ನೊಬ್ಬನ ಪಾದದ ಕೆಳಗೆ ಬೀಳಿಸುವ ಹಲವು ನಂಬಿಕೆ ಆಚರಣೆ ಸಂಪ್ರದಾಯಗಳು ಇವೆ.

ಇದು ಈ ಧರ್ಮ ಆ ಧರ್ಮ ಅಂತ ಅಲ್ಲ. ಎಲ್ಲ ಧರ್ಮಗಳಲ್ಲೂ ಈ ಸಂಪ್ರದಾಯಗಳು ಇವೆ. ಇವು ನಿಲ್ಲಬೇಕು. ಆದರೆ ಇದು ಧಿಡೀರನೆ ಆಗುವ ಕೆಲಸವಲ್ಲ. ಜನರಲ್ಲಿ ಆತ್ಮ ವಿಶ್ವಾಸ, ವೈಜ್ಞಾನಿಕ ಮನೋಭಾವ, ಸ್ಪಷ್ಟವಾಗಿ ಚಿಂತಿಸುವ ಶಕ್ತಿ ಬದುಕನ್ನ ಒಂಟಿಯಾಗಿ ನಿಂತು ಎದುರಿಸುವ ಧೀಮಂತಿಕೆ ಬಂದರೆ ಜನ ತಾವಾಗಿ ಈ ಮೌಢ್ಯದಿಂದ ದೂರವಾಗುತ್ತಾರೆ. ಮುಖ್ಯವಾಗಿ ನಮ್ಮ ನಾಯಕರು, ಧರ್ಮಾಧಿಕಾರಿಗಳು, ಸಮಾಜದ ಮುಂದುವರೆದ ವರ್ಗ, ವಿದ್ಯಾವಂತರು ರಿಪೇರಿಯಾದರೆ ಸಮಾಜದ ರಿಪೇರಿ ಆದ ಹಾಗೆ. ಇಲ್ಲೊಂದು ಅಂಶವನ್ನ ನಾವೆಲ್ಲ ಗಮನಿಸಬೇಕು. ಜನ ತಾವು ಒಪ್ಪಿ ಕೊಂಡಿರುವ ಆಚರಣೆಗಳನ್ನ ಸುಲಭವಾಗಿ ಬಿಟ್ಟು ಕೊಡುವುದಿಲ್ಲ. ಬೇರೆಯವರು ಅದನ್ನ ಟೀಕೆ ಮಾಡಿದಷ್ಟೂ ಅದಕ್ಕೆ ಬಲವಾಗಿ ಅಂಟಿ ಕೊಳ್ಳುತ್ತಾರೆ. ಈ ಸೂಕ್ಷ್ಮವಾದ ಕೆಲಸವನ್ನ ಎಚ್ಚರಿಕೆಯಿಂದ ಮಾಡ ಬೇಕು.

ಶ್ರೀ ನಾರಾಯಣ ಗುರುಗಳು ಬಹಳ ಅಪರೂಪದ ಸಮಾಜ ಸುಧಾರಕರು. ಅವರು ಮೊದಲು ದೇವಾಲಯಗಳನ್ನ ಕಟ್ಟಲಿಕ್ಕೆ ಹೊರಟರು ನಂತರ ದೇವಾಲಯ ಬಿಟ್ಟು ಶಾಲೆಗಳನ್ನ ನಿರ್ಮಿಸಿದರು. ಇದು ಪ್ರಯೋಜನಕಾರಿ ಅಂತ ಅವರಿಗೆ ಅನಿಸಿತು. ಜನರಿಗೆ ನೀಡುವ ನಿಜವಾದ ಶಿಕ್ಷಣ ಅವರ ಬದುಕನ್ನ ಬದಲಾಯಿಸುತ್ತದೆ. ಈ ನಿಟ್ಟಿನಲ್ಲಿ ಸರಕಾರ ಯೋಚಿಸಬೇಕು.

English summary
The three day Kannada Sahitya Sammelana inaugurated today (Jan.7). Here is the part 9 of complete text of speech by eminent Kannada writer and novelist President for 80th Kannada Sahitya Sammelana Norbert D'Souza.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X