ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾ.ಡಿ ಭಾಷಣ -8 : ಹೆಣ್ಣು ನೊಂದರೆ ಸಮಾಜಕ್ಕೆ ಪಾರ್ಶ್ವವಾಯು

By Mahesh
|
Google Oneindia Kannada News

ಗಾಂಧೀಜಿಯವರು ಒಂದು ಮಾತನ್ನ ಹೇಳುತ್ತಿದ್ದರು. ನಮ್ಮ ದೇಶದ ಓರ್ವ ಹೆಣ್ಣು ಮಗಳು ನಿಶ್ಚಿಂತೆಯಿಂದ ಮಧ್ಯರಾತ್ರಿಯಲ್ಲಿ ಊರಿನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವಂತಾದ ದಿನ ಬಂದಾಗ ಈ ದೇಶಕ್ಕೆ ಸ್ವಾತಂತ್ರ್ಯ ಬಂತು ಅಂತ ನಾನು ನಂಬುತ್ತೇನೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ ಅನ್ನುವ ಭ್ರಮೆಯಲ್ಲಿ ನಾವು ಇದ್ದೇವೆ.

ಆದರೆ ನಮ್ಮ ಹೆಣ್ಣು ಮಕ್ಕಳು ಇಂದು ಯಾವ ಪರಿಸ್ಥಿತಿಯಲ್ಲಿ ಇದ್ದಾರೆ ನಾವು ನೋಡಬೇಕು. ಅತ್ಯಾಚಾರ ದಿನ ನಿತ್ಯದ ಸುದ್ದಿ ಆಗುತ್ತಿದೆ. ನಮ್ಮ ಹೆಣ್ಣು ಮಕ್ಕಳು ರಾತ್ರಿ ಹೊತ್ತು ಬೇಡ ಹಗಲು ಹೊತ್ತಿನಲ್ಲಿ ಕೂಡ ಇವತ್ತು ಅಸುರಕ್ಷಿತರು. ಇದು ಆಧುನಿಕತೆಯ ಅತಿರೇಕವೇ? ನಮ್ಮ ಸಂಸ್ಕೃತಿ ಧರ್ಮಗಳ ಪತನವೇ? ಗಂಡಿನ ಸ್ವೇಚ್ಛಾಚಾರವೇ? ಹೆಣ್ಣಿನ ಬೆಳವಣಿಗೆಯನ್ನ ಸಹಿಸದ ಜನ ಮಾಡುತ್ತಿರುವ ಗದ್ದಲವೇ? ಟಿವಿ ಸಿನೀಮಾಗಳ ಪ್ರಭಾವವೇ? ಕಿರಿಯರನ್ನ ಸರಿದಾರಿಯಲ್ಲಿ ಕರೆದೊಯ್ಯದ ಹಿರಿಯರ ಬೇಜವಾಬ್ದಾರಿತನವೇ? ನನಗೆ ಗೊತ್ತಾಗುತ್ತಿಲ್ಲ. ಮೊದಲಿನಿಂದಲೂ ನಮ್ಮ ಹೆಣ್ಣು ವಿವಿಧ ಬಗೆಯ ಕಿರುಕುಳಕ್ಕೆ ಒಳಗಾದವಳು. ಆಧುನಿಕತೆ ಅವಳನ್ನ ಅವಳ ಶತಮಾನಗಳ ಸಂಕೋಲೆಯಿಂದ ಹೊರ ತಂದಿದೆ ಅಂತ ನಾನು ನಂಬಿದ್ದೆ ಆದರೆ ಆಕೆ ಇನ್ನೊಂದು ಬಗೆಯ ಶಾಪಕ್ಕೆ ಒಳಗಾಗಿರೋದು ನಿಜಕ್ಕೂ ವಿಷಾದದ ಸಂಗತಿ.

ದಿನ ನಿತ್ಯ ನಡೆಯುತ್ತಿರುವ ಸಾಲು ಅತ್ಯಾಚಾರಗಳು ಕೂಡ ನಮ್ಮ ಸರಕಾರದ ಕಣ್ಣನ್ನ ತೆರೆಸುವುದಿಲ್ಲ. ನಮ್ಮ ಸ್ವಾಮಿ ಜಗದ್ಗುರುಗಳು ಇದರಿಂದ ವಿಚಲಿತರಾಗುವುದಿಲ್ಲ. ಅಯ್ಯಾ ಅಣ್ಣಾ ಅಂತ ಕರೆ ಎದಿರು ನಿಂತವ ಅತ್ಯಾಚಾರಕ್ಕೆ ಮುಂದಾಗುವುದಿಲ್ಲ ಅನ್ನುವ ಉಪದೇಶ ಬಿಟ್ಟರೆ ಕಾರ್ಯಗತವಾಗ ಬಹುದಾದ ಯಾವುದೇ ಕ್ರಮ, ಮಾತು ಸರಕಾರದಿಂದ ಬಂದಿಲ್ಲ. ತನ್ನ ಮೇಲೆ ಒಂದು ಹುಲಿ ಆಕ್ರಮಣ ಮಾಡಿದಾಗ ಜಿಂಕೆ ಹೀಗೆಯೇ ಹೇಳುತ್ತದೇನೋ, ಆದರೆ ಹುಲಿ ದುಷ್ಟ ವ್ಯಾಘ್ರವೇ ಅಲ್ಲವೆ? ಹೆಣ್ಣನ್ನ ನೋಡುವ ಸಮಗ್ರ ದೃಷ್ಟಿ ನಮ್ಮಲ್ಲಿ ಬದಲಾಗದಿದ್ದರೆ ಹೆಣ್ಣಿನ ಬದುಕಿಗೆ ಭರವಸೆ ಇಲ್ಲ. ಅವಳನ್ನ ಒಪ್ಪಿಕೊಳ್ಳುವ, ಸ್ವೀಕರಿಸುವ, ಸಹಿಸಿ ಕೊಳ್ಳುವ, ಯಥಾ ಅವಳನ್ನ ಗೌರವಿಸುವ ಮನೋಭಾವ ಎಲ್ಲರಲ್ಲಿಬಾರದೆ ಹೆಣ್ಣಿಗೆ ಇವತ್ತಿನ ಆತಂಕ, ಭೀತಿ, ಕಳವಳ, ದೂರವಾಗುವುದಿಲ್ಲ. ಹೆಣ್ಣಿಗೆ ನೀಡಬೇಕಾದ ಸ್ಥಾನ ನೀಡದಿದ್ದರೆ ನಮ್ಮ ಸಮಾಜಕ್ಕೆ ಪಾಶ್ರ್ವವಾಯು ಹೊಡೆಯುತ್ತದೆ.

ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳ ಬಗ್ಗೆ ಸದಾ ಒಂದು ತಕರಾರಿದೆ. ಈ ಬಾರಿ ಯಾವುದೇ ನಿರ್ಣಯ ಕೈಕೊಳ್ಳ ಬೇಡಿ, ಅದು ನೆರವೇರುವುದಿಲ್ಲ ಅನ್ನುವ ಸಲಹೆ ನನಗೆ ಬಂದಿದೆ. ಸಮ್ಮೇಳನಗಳಲ್ಲಿ ನಿರ್ಣಯಗಳನ್ನ ಕೈಕೊಳ್ಳೋದು ಒಂದು ಪದ್ದತಿ. ಎಷ್ಟೋ ನಿರ್ಣಯಗಳು ಅನುಷ್ಠಾನಗೊಂಡಿವೆ. ಪರಿಷತ್ತು ಕೈಕೊಂಡ ನಿರ್ಣಯಗಳನ್ನ ಯಾವ ಕ್ರಮದಲ್ಲಿ ಸರಕಾರಕ್ಕೆ ಸಲ್ಲಿಸುತ್ತೆ ನನಗೆ ಗೊತ್ತಿಲ್ಲ, ಸರಕಾರದಲ್ಲಿ ವಿವಿಧ ವಿಭಾಗಗಳು ಇರುತ್ತವೆ. ಆ ಆ ವಿಭಾಗಕ್ಕೆ ಪ್ರತ್ಯೇಕವಾಗಿ ನಿರ್ಣಯಗಳು ತಲುಪ ಬೇಕು. ಆ ಇಲಾಖೆ ಅದನ್ನ ಪರಿಶೀಲಿಸಿ ಕ್ರಮ ಕೈಕೊಳ್ಳ ಬೇಕು. ಆ ನಿರ್ಣಯ ಸರಕಾರದ ಪಾಲಿಸಿಗಳಿಗೆ ಅನುಗುಣವಾಗಿರ ಬೇಕು. ಆ ನಿರ್ಣಯಗಳ ಹಿಂದೆ ಬೆನ್ನು ಹತ್ತಿ ಹೋಗುವ ಜನ ಇರಬೇಕು.

80th Kannada Sahitya Sammelana Madikeri President Norbert D'Souza Speech

ಸರಕಾರ ಸಮ್ಮೇಳನಗಳ ನಿರ್ಣಯಗಳನ್ನ ಅನುಷ್ಠಾನಕ್ಕೆ ತರುವ ಬಗ್ಗೆ ಒಂದು ಹೊಣೆಯನ್ನ ಹೊರಬೇಕು. ಸಮ್ಮೇಳನಕ್ಕೆ ಕೋಟಿ ಹಣ ನೀಡುವ ಸರಕಾರ ಅಷ್ಟಕ್ಕೆ ಸುಮ್ಮನಿರ ಬಾರದು. ತನ್ನ ಓರ್ವ ಅಧಿಕಾರಿಯನ್ನ ನಿಯೋಜಿಸಿ ಸರಕಾರಕ್ಕೆ ಇಡೀ ಸಮ್ಮೇಳನದಲ್ಲಿ ಏನೇನು ಸಲಹೆ, ಸೂಚನೆ ಬರುತ್ತೆ ಅನ್ನುವುದನ್ನ ದಾಖಲೆ ಮಾಡ ಬೇಕು. ಈ ಎಲ್ಲ ವಿಚಾರಗಳು ಜಾರಿ ಆಗುವ ಹಾಗೆ ಆ ಅಧಿಕಾರಿ ಮಾಡ ಬೇಕು. ಅಲ್ಲದೆ ಕನ್ನಡ ಸಾಹಿತ್ಯ ಸಮ್ಮೇಳನ ಏನೋ ಒಂದು ಜಾತ್ರೆ ಅನ್ನುವ ಅಭಿಪ್ರಾಯ ಸರಕಾರದ್ದಾಗಬಾರದು. ದೇಶ, ಭಾಷೆಯನ್ನ ಜನಜೀವನವನ್ನ ಗಮನದಲ್ಲಿ ಇರಿಸಿ ಕೊಂಡು ನಡೆಸುವ ಈ ಸಮ್ಮೇಳನಕ್ಕೆ ಸರಕಾರ ಗೌರವ, ಪ್ರಾತಿನಿಧ್ಯವನ್ನ ನೀಡ ಬೇಕು. ಇಲ್ಲಿ ಕೇಳಿಬರುವ ವಿಚಾರಗಳಿಗೆ ಸರಕಾರದ ಮುದ್ರೆ ಬೀಳ ಬೇಕು.

ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಏರ ಬೇಕಾದ ಮಟ್ಟವನ್ನ ಏರಿಲ್ಲ. ಒಂದು ಕಾಲದಲ್ಲಿ ನಾಡಿನ ಎಲ್ಲ ಹಿರಿಯ ಲೇಖಕರೂ ಮಕ್ಕಳಿಗಾಗಿ ಬರೆಯುವುದನ್ನ ಒಂದು ಪವಿತ್ರ ಕೆಲಸ ಅಂತ ತಿಳಿದರು. ಕುವೆಂಪು, ರಾಜರತ್ನಂ, ಕಾರಂತ ಕಸ್ತೂರಿ, ಹೊಯ್ಸಳ ಇವರೆಲ್ಲ ಮಕ್ಕಳಿಗಾಗಿ ಬರೆದರು. ಆದರೆ ಯಾಕೋ ಇವತ್ತಿನ ಅಕ್ಯಾಡೆಮಿಶೀಯನ್ಗಳು ಮಕ್ಕಳಿಗಾಗಿ ಬರೆಯುವುದು ಅವಮಾನ ಅಂತ ತಿಳಿದಿದ್ದಾರೆ. ಆದರೂ ಕೆಲ ಲೇಖಕರು ಬರೆಯುತ್ತಿರುವುದು ಸಂತೋಷ. ಆದರೆ ಈ ಕ್ಷೇತ್ರ ಇನ್ನೂ ವಿಸ್ತಾರವಾಗ ಬೇಕು. ಹೊಸ ಪ್ರಯೋಗ ಆಗ ಬೇಕು. ಪೋಷಕರು ಮಕ್ಕಳಿಗೆ ಮೊಬೈಲ ಟ್ಯಾಬ್ ಕೊಡಿಸುವುದರ ಬದಲು ಪುಸ್ತಕ ಕೊಡಿಸಬೇಕು. ಜೊತೆಗೆ ಆ ಪುಸ್ತಕದ ಬಗ್ಗೆ ಒಂದು ಸಣ್ಣ ವಿವರವನ್ನ ಮಗುವಿಗೆ ನೀಡಿ ಪುಸ್ತಕ ಕೊಟ್ಟರೆ ತುಂಬಾ ಉಪಯೋಗ.

ಹಿಂದೆ ಮನೆಗೆ ಬರುತ್ತಿದ್ದ ಚಂದಾಮಾಮವನ್ನ ಮೊದಲು ನಮ್ಮ ಅಜ್ಜ ಓದಿ ನಂತರ ಆತ ಮಕ್ಕಳಿಗೆ ಅದನ್ನ ಕೊಡುತ್ತಿದ್ದ. ಈ ಕ್ರಮವನ್ನ ನಾವು ಅನುಸರಿಸಬೇಕು. ಶಾಲೆಗಳಲ್ಲಿ ಮಕ್ಕಳಿಗೆ ಪುಸ್ತಕಗಳನ್ನ ನೀಡುವ ಪದ್ದತಿ ನಿಂತು ಹೋಗಿದೆ. ಸರಕಾರ ಶಾಲಾ ಲೈಬ್ರರಿಗಳನ್ನ ಸಜ್ಜು ಗೊಳಿಸಿದರೂ ಪುಸ್ತಕ ಕಳೆದು ಹೋಗುತ್ತೆ, ಹರಿಯುತ್ತದೆ ಅನ್ನುವ ಕಾರಣಕ್ಕೆ ಪುಸ್ತಕಗಳನ್ನ ಬೀರುವಿನಲ್ಲಿ ಇರಿಸಿ ಬೀಗ ಹಾಕಲಾಗುತ್ತದೆ ಅನ್ನುವ ಮಾತು ಕೇಳಿ ಬಂದಿದೆ. ಇದು ತಪ್ಪು. ಪುಸ್ತಕ ಹರೀಬೇಕು, ಕಳೆದು ಹೋಗ ಬೇಕು. ನಮ್ಮ ಮಕ್ಕಳು ಪುಸ್ತಕಗಳೊಡನೆ ತಮ್ಮ ಸಂಬಂಧವನ್ನ ಗಟ್ಟಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗ ಬೇಕು. ನಮಗೆ ಸ್ವಾತಂತ್ರ್ಯ ದೊರೆತು 60 ವರ್ಷ ಕಳೆದು ಹೋದರೂ ಶಿಕ್ಷಣದ ಬಗ್ಗೆ ಸ್ಪಷ್ಟವಾದ ಒಂದು ನಿಧರ್ಾರಕ್ಕೆ ನಾವು ಬಂದಿಲ್ಲ.

ಪ್ರತಿ ವಿದ್ಯಾ ಮಂತ್ರಿ ಬಂದ ಕೂಡಲೇ ನಮ್ಮ ಶಿಕ್ಷಣ ನೀತಿ ಬದಲಾಗುತ್ತದೆ. ವಿವಿಧ ಪ್ರಯೋಗಗಳಿಗೆ ನಮ್ಮ ಮಕ್ಕಳು ತುತ್ತಾಗುತ್ತಿದ್ದಾರೆ. ಈ ಸ್ಥಿತಿ ತಪ್ಪ ಬೇಕು. ಮಕ್ಕಳಿಗೆ ಇಂಗ್ಲೀಷನ್ನ ಕಲಿಸುವ ವಿಷಯದಲ್ಲಿ ಸಾಹಿತಿಗಳ ತಕರಾರಿಲ್ಲ. ಆದರೆ ಇಂಗ್ಲೀಷಿನಲ್ಲಿಯೇ ಎಲ್ಲ ಇದೆ, ಅದೇ ಸರ್ವ ಶ್ರೇಷ್ಠ, ಅದು ಬಾರದೆ ಇದ್ದರೆ ನಮ್ಮ ಬದುಕೇ ವ್ಯರ್ಥ ಅನ್ನುವ ನಂಬಿಕೆಯನ್ನ ನಮ್ಮ ಮಕ್ಕಳ ಮನಸ್ಸಿನಲ್ಲಿ ಬಿತ್ತುವ ಕೆಲಸವನ್ನ ನಾವು ಮಾಡಬಾರದು. ಇದರಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತೆ. ನಮ್ಮ ಮಕ್ಕಳು ಅಜ್ಜನ ಕೋಲಿದು ನನ್ನಯ ಕುದುರೆ ಹೇಳಲಿ. ಬಾರೋ ಬಾರೋ ಮಳೆರಾಯ ಹೇಳಲಿ ಈ ಪದ್ಯಗಳನ್ನ ಹೇಳುವಾಗ ಅವು ರೋಮಾಂಚನಗೊಳ್ಳುತ್ತವೆ. ಆದರೆ ಅವರಿಗೆ ಮುದ ನೀಡದ ಬ್ಯಾಬ್ಯಾ ಬ್ಲಾಕ್ ಶೀಪ್ ಗೋ ಅವೇ ಗೋ ಅವೇ ರೈನ ಅನ್ನುವಂತಹಾ ಜೀವ ವಿರೋಧಿ ಹಾಡುಗಳನ್ನ ಮಕ್ಕಳಿಗೆ ಕಲಿಸ ಬೇಡಿ.

ನಾವು ನಮ್ಮ ಬಗ್ಗೆಯೇ ತುಂಬಾ ಮಾತನಾಡುತ್ತೇವೆ, ನಮ್ಮ ಅಭಿವೃಧ್ದಿ, ನಮ್ಮ ಪ್ರಗತಿಯ ಚಿಂತೆ ನಮಗೆ. ಆದರೆ ನಮ್ಮ ಜೊತೆಯಲ್ಲಿ ಹೊರನಾಡ ಕನ್ನಡಿಗರು, ಗಡಿನಾಡ ಕನ್ನಡಿಗರು ಇದ್ದಾರೆ. ಇವರು ಕನ್ನಡಿಗರಾಗಿ ಇರಲಿಕ್ಕೆ ಒಂದು ಹೋರಾಟವನ್ನೇ ನಡೆಸಿದ್ದಾರೆ. ಬೇರೆ ರಾಜ್ಯಗಳಲ್ಲಿ ಕನ್ನಡಿಗರ ಸ್ಥಿತಿಗತಿಗಳು ತೃಪ್ತಿಕರವಾಗಿ ಇಲ್ಲ. ಇವರ ಮಕ್ಕಳಿಗೆ ಅಲ್ಲಿ ಕನ್ನಡ ಶಾಲೆಗಳಿಲ್ಲ, ವಿದ್ಯಾರ್ಥಿಗಳಿಗೆ ಅಲ್ಲಿಯ ಸರಕಾರ, ಜನರ ಬೆಂಬಲವಿಲ್ಲ. ಕೇರಳದಲ್ಲಿ ಕನ್ನಡ ಕಾರ್ಯಕ್ರಮಗಳ ನೋಟೀಸನ್ನ ಬೋರ್ಡುಗಳ ಮೇಲೆ ಹಾಕಿದರೆ ಅದನ್ನ ಹರಿದು ಹಾಕುವಂತಹಾ ಪರಿಸ್ಥಿತಿ ಇದೆ. ಇಲ್ಲಿ ಬೇರೆ ಭಾಷಿಕರ ಮೇಲೆ ಏನಾದರೂ ಹಲ್ಲೆಯಾದರೆ ಅಲ್ಲಿಯ ಕನ್ನಡ ಜನ ಆತಂಕದಿಂದ ಬದುಕುವ ಸ್ಥಿತಿ ಇದೆ. ಅಲ್ಲಿಯ ಸರಕಾರಗಳು ಗಡಿನಾಡ ಕನ್ನಡಿಗರ, ಹೊರನಾಡ ಕನ್ನಡಿಗರ ಹಿತವನ್ನ ಕಾಪಾಡುವುದಿಲ್ಲ. ಕರ್ನಾಟಕ ಸರಕಾರ ಕೂಡ ಎಷ್ಟೋ ವಿಷಯಗಳಲ್ಲಿ ತಮ್ಮನ್ನ ದೂರ ಇರಿಸಿದೆ ಅನ್ನುವ ವ್ಯಥೆ ಇವರದ್ದು.

ಗಡಿನಾಡು ಹಾಗು ಹೊರನಾಡ ಕನ್ಮಡಿಗರಿಗೆ ಆಗುತ್ತಿರುವ ಅನ್ಯಾಯಗಳ ಒಂದು ಯಾದಿಯೇ ಇದೆ. ಅಲ್ಲಿಯ ಪ್ರತಿಭಾವಂತರನ್ನ ಗುರುತಿಸದೇ ಇರುವುದು, ವಿದ್ಯಾರ್ಥಿಗಳ ಪ್ರವಾಸ, ಅಶಕ್ತರಿಗೆ ಮಾಶಾಸನ ಅಲ್ಲಿ ಕನ್ನಡ ಜಾನಪದ ಉತ್ಸವ, ಕವಿ ಗೋಷ್ಠಿ, ಉಪನ್ಯಾಸಗಳ ಏರ್ಪಡೆ, ಈ ಕನ್ನಡಿಗರು ಬರೆದ ಪುಸ್ತಕಗಳ ಪ್ರಕಟಣೆ, ಶಾಸ್ತ್ರೀಯ ಕನ್ನಡ ಸ್ಥಾನಮಾನದಿಂದ ದೊರೆಯುವ ಸೌಲಭ್ಯಗಳನ್ನ ಇವರಿಗೆ ನೀಡುವುದು ಇಂತಹಾ ಹಲವು ಕೆಲಸಗಳು ಆಗಬೇಕಿದೆ. ಅಲ್ಲಿಯ ಸರಕಾರಗಳು ಇವರು ಕನ್ನಡಿಗರು ಅನ್ನುವ ಕಾರಣಕ್ಕೆ ಇವರನ್ನ ದೂರ ಮಾಡಿದರೆ ಇವರು ಗಡಿನಾಡಿನವರು, ಇಲ್ಲ ಹೊರನಾಡಿನವರು ಅನ್ನುವ ಕಾರಣಕ್ಕೆ ನಮ್ಮ ಆಡಳಿತದಿಂದ ಹೊರಗೆ ಉಳಿಯುತ್ತಾರೆ.

English summary
The three day Kannada Sahitya Sammelana inaugurated today (Jan.7). Here is the part 8 of complete text of speech by eminent Kannada writer and novelist President for 80th Kannada Sahitya Sammelana Norbert D'Souza.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X