ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾ.ಡಿ ಭಾಷಣ -7 : ಸರ್ಕಾರದ 'ಭಾಗ್ಯ' ಯೋಜನೆ ವಿಮರ್ಶೆ ಆಗ್ಲಿ

By Mahesh
|
Google Oneindia Kannada News

ಈ ವರೆಗೆ ಕೇವಲ ಪರಿಸರವಾದಿಗಳು ಮಾತ್ರ ಯಾವ ವಿಷಯವನ್ನ ಕುರಿತು ಮಾತನಾಡುತ್ತಿದ್ದರೋ ಆ ವಿಷಯ ಈಗ ಸಾರ್ವತ್ರಿಕ ವಿಷಯವಾಗಿದೆ. ವಿಶ್ವಸಂಸ್ಥೆ ಪಶ್ಚಿಮ ಘಟ್ಟವನ್ನ ವಿಶೇಷ ಪ್ರದೇಶವೆಂದು ಸಾರಲು ಹೊರಟಾಗ ನಮ್ಮಲ್ಲಿ ಕೆಲ ರಾಜಕಾರಿಣಿಗಳು ತಮ್ಮ ವಿರೋಧವನ್ನ ವ್ಯಕ್ತ ಪಡಿಸಿದರು.

ಡಾ. ಕಸ್ತೂರಿ ರಂಗನ್ ವರದಿ ಬಂದ ನಂತರ ಈ ವಿರೋಧ ಹೆಚ್ಚಾಗಿದೆ. ಕಸ್ತೂರಿ ರಂಗನ್ ವರದಿ ಬರಲು ಮುಖ್ಯ ಕಾರಣ ಪರಿಸರವನ್ನ ಬೇಕಾಬಿಟ್ಟಿಯಾಗಿ ನಾವು ನಾಶ ಮಾಡ ಹೊರಟಿದ್ದು. ಪರಿಸರ ಇರುವುದೇ ನಮಗಾಗಿ ಅನ್ನುವ ಭ್ರಮೆಯಲ್ಲಿ ನಾವು ಅದನ್ನ ದೋಚಲು ಹೊರಟೆವು. ಈ ಕೃತ್ಯದಿಂದ ಪರಿಸರ ಉಳಿಯುವುದೇ ಇಲ್ಲ ಅನ್ನುವಾಗ ಕಸ್ತೂರಿ ರಂಗನ್ ವರದಿ ಬಂದಿದೆ.

ಈ ಹಿಂದೆ ಒಂದು ಕಡೆ ಪರಿಸರ ನಾಶವಾಯಿತು, ಇನ್ನೊಂದು ಕಡೆ ಬಂಗಾರದ ಊಟದ ತಟ್ಟೆಗಳು, ಹವಾ ನಿಯಂತ್ರಿತ ವಾಹನಗಳು, ಹೆಲಿಕ್ಯಾಫ್ಟರುಗಳು ಬಂದವು. ಗಣೀ ಲಾಬಿ ದೇಶವನ್ನ ಆಳ ತೊಡಗಿತು. ಪರಿಸರವನ್ನ ಮುಟ್ಟಲೇ ಬೇಡ ಅನ್ನುವುದು ಅವೈಜ್ಞಾನಕ. ಏಕೆಂದರೆ ನಮಗೆ ಇರುವುದೊಂದೇ ಭೂಮಿ. ನಾವು ಇದನ್ನ ಬಿಟ್ಟು ಇರಲಾರೆವು, ಇದನ್ನ ತೊರೆದೂ ಬದುಕಲಾರೆವು. ಬಂಗಾರದ ಮೊಟ್ಟೆಯನ್ನ ಇಡುತ್ತಿದ್ದ ಕೋಳಿಯ ಹೊಟ್ಟೆ ಸೀಳಿದ ರೈತನ ಕತೆ ನಮಗೆ ಗೊತ್ತಿದೆ.

ನಮ್ಮ ಅಭಿವೃಧ್ದಿಗಾಗಿ ಪಶ್ಚಿಮ ಘಟ್ಟವನ್ನ ದೋಚುವ ಕೆಲಸ ಆಗ ಬೇಕೇ ? ಈಗ ಒಂದು ಮಧ್ಯದ ದಾರಿಯನ್ನ ನಾವು ಕಂಡು ಕೊಳ್ಳಬೇಕು. ಪ್ರಕೃತಿಯನ್ನ ಉಳಿಸಿ ನಾವು ಉಳಿಯುವುದು. ಪ್ರಕೃತಿಯನ್ನ ಬಳಸಿ ಕೊಳ್ಳುವ ವಿಷಯ ಬಂದಾಗ ತುಸು ತಾಳ್ಮೆ, ಮುಂದಿನ ಜನಾಂಗದ ಮೇಲೆ ನಮ್ಮ ಹೊಣೆ, ಪ್ರಕೃತಿಯ ಬಗ್ಗೆ ಗೌರವ, ನಮ್ಮ ಸುಖದ ಮೇಲೆ ಹಿಡಿತ ಇರಿಸಿ ಕೊಂಡು ಯೋಚಿಸಿದರೆ ಇದು ಸಾಧ್ಯ ಎಂದು ನನಗೆ ಅನಿಸುತ್ತದೆ. ಇಂತಹಾ ಒಂದು ಸುವರ್ಣ ಮಾಧ್ಯಮದ ದಾರಿ ಹಿಡಿಯದಿದ್ದರೆ ನಾವೂ ಇಲ್ಲ ಈ ಪರಿಸರವೂ ಇಲ್ಲ.

80th Kannada Sahitya Sammelana Madikeri President Norbert D'Souza Speech

ದೇಶದಲ್ಲಿ ಕಾಣಿಸಿಕೊಂಡಿರುವ ಮತ್ತೊಂದು ಮನೋಭಾವವನ್ನ ನಾನಿಲ್ಲಿ ಪ್ರಸ್ತಾಪಿಸ ಬೇಕು. ಹಿಂದೆ ನಮ್ಮ ದೇಶದಲ್ಲಿ ಹುಟ್ಟುವ ಮಕ್ಕಳೆಲ್ಲ ಕೈ ಮುಷ್ಟಿಯನ್ನ ಕಟ್ಟಿ ಕೊಂಡೇ ಹುಟ್ಟುತ್ತಿದ್ದವು. ಇಂದು ಎಲ್ಲ ಮಕ್ಕಳೂ ಕೈ ಚಾಚಿ ಕೊಂಡೇ ಹುಟ್ಟುತ್ತಿವೆ. ತಾ ತಾ ತಾ ನಮ್ಮ ಜನರ ಮನೋಭಾವ ಆಗುತ್ತಿದೆ. ಈ ತಾ ತಾ ಅನ್ನುವ ಮನೋಭಾವಕ್ಕೆ ಭಾಗ್ಯ ಅನ್ನುವ ಹೆಸರನ್ನ ನಾವು ಇರಿಸಿದ್ದೇವೆ. ಸೈಕಲ್ ಭಾಗ್ಯ, ಅನ್ನ ಭಾಗ್ಯ, ಶಾದಿಭಾಗ್ಯ, ಪುಸ್ತಕ ಭಾಗ್ಯ, ಇಲ್ಲಿ ನಮ್ಮ ಆತ್ಮಾಭಿಮಾನದ ಕೊರತೆ ಇದೆ ಅಂತ ನಮಗೆ ಏಕೆ ಅನಿಸೋದಿಲ್ಲ. ಒಬ್ಬ ವಿದೇಶಿ ಆಫ್ರಿಕಾಗೆ ಹೋದನಂತೆ. ಜನ ಎಲ್ಲ ಕೈ ಕಟ್ಟಿ ಕೊಂಡು ಕುಳಿತಿದ್ದರು. ಏನು ಕುಳಿತಿದ್ದೀರಿ? ಎಂದು ಆತ ಕೇಳಿದ. ಗೆಣಸು ತೆಗೆಯ ಬೇಕಿತ್ತು ಎಂದರು ಅವರು. ತೆಗೆಯಿರಿ, ಇಲ್ಲ ಭೂಕಂಪ ಆದರೆ ಗೆಣಸು ಮೇಲೆ ಬಂದು ಬೀಳುತ್ತದೆ, ನಾವು ಭೂಕಂಪದ ದಾರಿ ಕಾಯುತ್ತಿದ್ದೇವೆ ಎಂದರು ಅವರು. ಅವರ ನಿರೀಕ್ಷೆಯಂತೆ ಭೂಕಂಪ ಆಯಿತು. ಗೆಣಸು ಮೇಲೆ ಬಂದು ಬಿದ್ದಿತು. ಆದರೂ ಅವರು ಕುಳಿತಿದ್ದರು. ಮತ್ತೆ ಸುಮ್ಮನೆ ಕುಳಿತಿರಲ್ಲ ಅಲ್ಲ ಕಾಡು ಕಿಚ್ಚು ಬರಲಿ ಅಂತ ಕಾಯುತ್ತಿದ್ದೇವೆ, ಗೆಣಸು ಸುಡಬೇಕಲ್ಲ...ಕಾಡು ಕಿಚ್ಚೂ ಬಂದಿತು. ಗೆಣಸು ಬೆಂಕಿಗೆ ಬೆಂದಿತು. ಆಗ ಅವರು ಅದನ್ನ ತಿಂದರು. ನಮ್ಮ ಕತೆ ಇದಕ್ಕಿಂತ ಬೇರೆ ಅಲ್ಲ.

ನಮ್ಮ ಸರಕಾರಗಳು ನಮ್ಮ ಜನರನ್ನ ನಿಷ್ಪ್ರಯೋಜಕರು, ಸೋಮಾರಿಗಳು, ಆತ್ಮಾಭಿಮಾನ ಇಲ್ಲದವರನ್ನಾಗಿ ಮಾಡುತ್ತಿದೆಯೆ ನಾವು ಯೋಚಿಸ ಬೇಕು. ಕೆಲ ವರ್ಷಗಳ ಹಿಂದೆ ಮುಂಬಯಿಯಲ್ಲಿ ಓರ್ವ ಫುಟ್ ಪಾತ ಹುಡುಗನಗೆ ಒಂದು ಹಣದ ಚೀಲ ದೊರೆಯುತ್ತದೆ. ಅದನ್ನ ಆತ ಹತ್ತಿರದ ಪೋಲೀಸ ಠಾಣೆಗೆ ತೆಗೆದು ಕೊಂಡು ಹೋಗಿ ಕೊಡುತ್ತಾನೆ. ಅಲ್ಲಿಯ ಅಧಿಕಾರಿ ಅದನ್ನ ತೆರೆದು ನೋಡಿದಾಗ ಅದರಲ್ಲಿ ಗರಿಗರಿಯಾದ ನೂರರ ಹತ್ತು ನೋಟುಗಳು ಇರುತ್ತವೆ. ಅಧಿಕಾರಿ ಅಚ್ಚರಿಯಿಂದ ಕೇಳುತ್ತಾನೆ ಈ ಹಣ ನಿನಗೆ ಸಿಕ್ಕಿದ್ದನ್ನ ಯಾರೂ ನೋಡಿಲ್ಲ, ಇದನ್ನ ನೀನೇ ಇರಿಸಿಕೊಳ್ಳ ಬಹುದಿತ್ತಲ್ಲ ಆಗ ಆ ಫುಟ್ ಪಾತ್ ಹುಡುಗ ಹೇಳುತ್ತಾನೆ ಹರಾಮಕಾ ಪೈಸಾ ಮತ್ ಚಾಹಿಯೇ ಸಾಬ್.ಇವತ್ತು ಎಲ್ಲಿಯಾದರೂ ಯಾರಾದರೂ ಇಂತಹಾ ಮಾತನ್ನ ಆಡಿಯಾರೇ? ಇಂತಹಾ ಮಾತನ್ನ ಯಾರೂ ಆಡದ ಹಾಗೆ ನಮ್ಮ ಸಾಮಾಜಿಕ, ರಾಜಕೀಯ, ಧಾರ್ಮಿಕ ವ್ಯವಸ್ಥೆ ಒಂದು ವಾತಾವರಣವನ್ನ ನಿರ್ಮಾಣ ಮಾಡಿದೆ. ಇದನ್ನ ಸಮರ್ಥಿಸಿ ಕೊಳ್ಳುವ ಬುಧ್ದಿವಂತಿಕೆಯೂ ನಮ್ಮಲ್ಲಿದೆ ಇದರ ಬಗ್ಗೆ ನಮಗೆ ಯಾಕೆ ನಾಚಿಕೆ ಆಗುವುದಿಲ್ಲ? ನಮ್ಮ ಗಣಿ ಮಾಫಿಯಾಗಳು, ಅರಣ್ಯ ಮಾಫಿಯಾಗಳು ಎಷ್ಟು ಬಲಶಾಲಿಯಾಗಿವೆ ಅಂದರೆ ಹರಾಮಿ ಹಣವನ್ನ ನಾನು ಮುಟ್ಟುವುದಿಲ್ಲ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಅನ್ನುವ ಯುವ ಅಧಿಕಾರಿಗಳನ್ನು ಹಸಿಹಸಿಯಾಗಿ ಕೊಲ್ಲುವಷ್ಟು ಸಮರ್ಥವಾಗಿವೆ. ಇಂತಹಾ ಕೊಲೆಗಳು ದಿನ ನಿತ್ಯ ನಡೆಯುತ್ತಿದ್ದರೂ ನಮ್ಮ ಜನ ಏನೂ ಆಗಿಲ್ಲ ಅನ್ನುವಂತೆ ಇದನ್ನ ನೋಡುತ್ತ ಕೂರುತ್ತಾರೆ. ಅಂದರೆ ನಮ್ಮ ನೈತಿಕ ಅಧೋಗತಿಗೆ ಏನು ಹೇಳ ಬೇಕು?

English summary
The three day Kannada Sahitya Sammelana inaugurated today (Jan.7). Here is the part 7 of complete text of speech by eminent Kannada writer and novelist President for 80th Kannada Sahitya Sammelana Norbert D'Souza.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X