ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾ.ಡಿ -5 : ಕನ್ನಡದ ವಿಷಯ ಬಂದಾಗ ಏಕೆ ತೊಂಚವಂಚ ?

By Mahesh
|
Google Oneindia Kannada News

ಕನ್ನಡವನ್ನ ಅನುಷ್ಠಾನಕ್ಕೆ ತರುವಲ್ಲಿ ನಮ್ಮ ಮಂತ್ರಿಗಳು ಮುಂದಿದ್ದಾರೆ. ಆದರೆ ಇವರಿಗೆ ಅಡ್ಡಿಯಾಗಿ ನಿಂತಿರುವವರು ವಿಧಾನ ಸೌಧ ಮತ್ತಿತರ ಕಡೆಗಳಲ್ಲಿ ಕುಳಿತಿರುವ ಆಂಗ್ಲ ಮೋಹೀ ಅಧಿಕಾರಿಗಳು ಅನ್ನುವ ಮಾತಿದೆ. ಇವರು ಕನ್ನಡದ ಪರವಾಗಿ ನಿಂತರೆ ಕನ್ನಡ ಖಂಡಿತ ಉದ್ದಾರವಾಗುತ್ತದೆ.

ಒಂದು ಉದಾಹರಣೆ ಬೆಂಗಳೂರಿನಲ್ಲಿ ಪ್ರತಿ ವರ್ಷ ಒಂದು ಪುಸ್ತಕ ಪ್ರದರ್ಶನ 10 ದಿನಗಳ ಕಾಲ ಅರಮನೆ ಮೈದಾನದಲ್ಲಿ ನಡೆಯುತ್ತಿತ್ತು. ಸಹಸ್ರ ಜನ ಬಂದು ಪುಸ್ತಕಗಳನ್ನ ಅಲ್ಲಿ ಕೊಳ್ಳುತ್ತಿದ್ದರು. ಈ ಬಾರಿ ಈ ಪ್ರದರ್ಶನಕ್ಕೆ ಕೇವಲ 3 ದಿನ ನೀಡಲಾಯಿತು. ಇಲ್ಲಿ ಪುಸ್ತಕ ಮಾರಾಟ ಲಾಭ ದಾಯಕ ಉದ್ಯಮ ಪುಸ್ತಕ ವ್ಯಾಪಾರಿಗಳು ಹಣ ಮಾಡುತ್ತಾರೆ ಅನ್ನುವ ಕಾರಣಕ್ಕೆ ಹೀಗೆ ಮಾಡಲಾಯಿತು ಅನ್ನುವ ಮಾತು ಕೇಳಿ ಬಂತು

ಪುಸ್ತಕ ವ್ಯಾಪಾರದಿಂದ ಹಣ ಮಾಡಬಹುದು ಅನ್ನುವುದು ಮೊದಲ ಬಾರಿ ನಾನು ಕೇಳಿದ ಮಾತು. ಪುಸ್ತಕ ಮಾರಾಟ ಒಂದು ಸಾಂಸ್ಕೃತಿಕ ಪ್ರಕ್ರಿಯೆ. ಸಾವಿರಾರು ಜನ ಬಂದು ತಮಗೆ ಬೇಕಾದ ಒಂದು ಪುಸ್ತಕವನ್ನ ಆಯ್ಕೆ ಮಾಡಿ ಕೊಂಡು ಹೋಗುತ್ತಾರೆ ಅಂದರೆ ಈ ನೆಲದಲ್ಲಿ ಒಂದು ಉತ್ತಮ ಕೆಲಸವಾಗುತ್ತಿದೆ ಎಂದು ತಿಳಿಯಬೇಕು. ಇದರ ಬದಲು ಲಾಭದ ಮಾತನ್ನ ಆಡುವುದು ಅಕ್ಷಮ್ಯ ಅಪರಾಧ. ಪುಸ್ತಕೋದ್ಯಮವೇ ಕಷ್ಟದಲ್ಲಿ ಇರುವಾಗ ಇಂತಹಾ ವರ್ತನೆ ಖಂಡನಾರ್ಹ. ಜೊತೆಗೆ ಮೂರು ವರ್ಷಗಳಿಂದ ಗ್ರಂಥಾಲಯ ಇಲಾಖೆ ಬಿಡುಗಡೆ ಮಾಡಬೇಕಾದ ಹಣವನ್ನ ಬಿಡುಗಡೆ ಮಾಡಿಲ್ಲವಂತೆ. ಇದು ಕೂಡ ಸರಕಾರ ಗಮನಿಸ ಬೇಕಾದ ವಿಷಯ.

ಸರಕಾರದಲ್ಲಿ ಇರುವ ನಮ್ಮ ಬಿಳಿಕಾಲರಿನ ಕೆಲವೇ ಕೆಲ ಜನ ಕನ್ನಡದ ವಿಷಯ ಬಂದಾಗ ತೊಂಚವಂಚ ಮಾಡುತ್ತಿದ್ದಾರೆ. ಕನ್ನಡಕ್ಕೆ ಆಗಬಹುದಾದ ಲಾಭವನ್ನ, ಸಿಗಬೇಕಾದ ಸೌಲಭ್ಯವನ್ನ ಕಾನೂನನ್ನ ತಿರುಚುವುದರ ಮೂಲಕ ಸೌಲಭ್ಯ ವಂಚಿತರನ್ನಾಗಿ ಮಾಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಕನ್ನಡಾಭಿಮಾನಿ ಅಧಿಕಾರಿಗಳು ಇದ್ದಾರೆ, ಆದರೆ ಇವರ ಸಂಖ್ಯೆ ಕಡಿಮೆ. ಕೆಲವರು ಉದ್ದೇಶ ಪೂರ್ವಕವಾಗಿ ಕನ್ನಡದ ಬೆಳವಣಿಗೆಗೆ ಆತಂಕವನ್ನ ತಂದೊಡ್ಡುತ್ತಿದ್ದಾರೆ ಎಂದು ಹೇಳಲಾಗಿದೆ. ನಮ್ಮ ಕನ್ನಢಾಭಿಮಾನ ಮಂತ್ರಿಗಳು ಇಂತಹವರ ಕಿವಿ ಹಿಂಡಿ ಕನ್ನಡದ ಹಿತವನ್ನ ಕಾಪಾಡ ಬೇಕಾಗಿದೆ.

ಕನ್ನಡ ಭಾಷೆಗೆ, ಕರ್ನಾಟಕಕ್ಕೆ ಎಲ್ಲೇ ಅವಮಾನವಾಗಲಿ, ನಷ್ಟವಾಗಲಿ, ಅದರ ವಿರುಧ್ದ ಮೊದಲು ಸರಕಾರ ನಂತರ ಜನ ಸಿಡಿದು ನಿಲ್ಲಬೇಕು. ಮೊನ್ನೆ ಬೆಳಗಾಂನಲ್ಲಿ ಒಂದು ಮಾತು ಕೇಳಿ ಬಂತು.ನಾಲ್ಕು ಜನ ಇದ್ದರೆ ಕರ್ನಾಟಕದ ಹೆಣ ಹೊರುತ್ತೇವೆ, ಐದು ಜನ ಇದ್ದರೆ ಕರ್ನಾಟಕದ ತಿಥಿ ಮಾಡುತ್ತೇವೆ ಅನ್ನುವ ಮಾತದು. ಇದರ ವಿರುಧ್ದ ನಮ್ಮ ರಕ್ಷಣಾ ವೇದಿಕೆಯ ಮಿತ್ರರು ಪ್ರತಿಭಟನೆ ನಡೆಸಿದರು. ಆದರೆ ಈ ಬಗ್ಗೆ, ಸರಕಾರ, ನಮ್ಮ ಜನ ಪ್ರತಿನಿಧಿಗಳು, ಕೊನೆಗೆ ಜನ ಕೂಡ ಪ್ರತಿಭಟಿಸಲಿಲ್ಲ. ಇಂತಹದ್ದೇ ಮಾತು ಮಹಾರಾಷ್ಟ್ರದಲ್ಲಿ ಕೇಳಿ ಬಂದಿದ್ದರೆ ಏನಾಗುತ್ತಿತ್ತು ನಾವು ಯೋಚಿಸ ಬೇಕು. ಕನ್ನಡಕ್ಕೆ ಕರ್ನಾಟಕಕ್ಕೆ ಇಂತಹಾ ದುಸ್ಥಿತಿ ಬರಬೇಕಿತ್ತೆ ನಾನು ಕೇಳುತ್ತಿದ್ದೇನೆ. ನಾನು ಸಮ್ಮೇಳನದ ಅಧ್ಯಕ್ಷನಾಗಿ ಒಪ್ಪಿತನಾಗಿದ್ದೇನೆ ಅಂದ ಕೂಡಲೇ ಕನ್ನಡದ ಜನ ನನ್ನಿಂದ ಕೆಲ ನಿರೀಕ್ಷೆಗಳನ್ನ ಇರಿಸಿ ಕೊಂಡು ನನಗೆ ಪತ್ರ ಬರೆದಿದ್ದಾರೆ, ದೂರವಾಣಿಯಲ್ಲಿ ಪ್ರಸ್ತಾಪ ಮಾಡಿದ್ದಾರೆ.

Norbert D'Souza Speech,

ಆ ವಿಷಯಗಳು ಇಡೀ ನಾಡಿನಲ್ಲಿ ಚರ್ಚೆಗೆ ಒಳಗಾಗಿರುವುದರಿಂದ ಅವುಗಳನ್ನ ನಾನಿಲ್ಲಿ ಚುಟುಕಾಗಿ ನಿಮ್ಮ ಮುಂದೆ ಇಡ ಬಯಸುತ್ತೇನೆ. ಜೊತೆಗೆ ಕವಿ ಲೇಖಕ ಎಳೆ ಬಿಸಿಲು, ತಂಪು ಬೆಳದಿಂಗಳು, ಜುಳುಜುಳು ಹರಿಯುವ ನದಿಯ ನೀರು ಇವುಗಳ ಕುರಿತೇ ಬರೆಯ ಬೇಕು ಅನ್ನುವ ತತ್ವಕ್ಕೆ ವಿರೋಧಿ ಯಾದವನು ನಾನು. ಈ ಕಾರಣಕ್ಕೆ ಈ ಕೆಲ ವಿಷಯಗಳನ್ನ ಪ್ರಸ್ತಾಪ ಮಾಡಲಿಕ್ಕೆ ಬಯಸುತ್ತೇನೆ. ಹಾಗೆ ನೋಡಲು ಹೋದರೆ ಹೇಳಲಿಕ್ಕೆ ಬಹಳ ವಿಷಯಗಳಿವೆ. ಆದರೆ ಕೆಲವನ್ನ ಮಾತ್ರ ನಿಮ್ಮ ಜೊತೆಯಲ್ಲಿ ಹಂಚಿಕೊಳ್ಳುವ ಇರಾದೆ ನನ್ನದು.

ಪುಡಾರಿ: ನಮ್ಮಲ್ಲಿ ಸ್ವಾತಂತ್ಯ್ರ ಹೋರಾಟ ನಡೆದಾಗ, ನಮಗೆ ಸ್ವಾತಂತ್ರ್ಯ ದೊರೆತ ನಂತರದ ಕೆಲ ವರ್ಷಗಳ ವರೆಗೆ ಏನು ನಮ್ಮ ರಾಜಕಾರಿಣಿಗಳು ಇದ್ದರು ಅವರಿಗೂ ಇಂದಿನ ರಾಜಕಾರಿಣಿಗಳಿಗೂ ಇರುವ ವ್ಯತ್ಯಾಸ ಏನು ಅನ್ನುವುದು ನಮಗೆ ಇಂದು ಎದ್ದು ಕಾಣುತ್ತಿದೆ. ತ್ಯಾಗ, ನಿಸ್ವಾರ್ಥ ಮನೋಭಾವ, ದೇಶದ ಬಗ್ಗೆ ನಿಜವಾದ ಕಳಕಳಿ, ದೇಶದ ಪ್ರಗತಿಯ ಕುರಿತಂತೆ ಆಸಕ್ತಿ ಇದೆಲ್ಲ ಅಂದಿನ ವಿಶೇಷತೆ ಆಗಿದ್ದರೆ ಇಂದು ಅದಕ್ಕೆ ತದ್ವಿರುಧ್ದವಾದ ಚಿತ್ರಣವನ್ನ ನಾವು ನೋಡುತ್ತಿದ್ದೇವೆ. ನಾನು ಕೆಲ ವರ್ಷಗಳ ಹಿಂದೆ ಸೊಲ್ಲಾಪುರಕ್ಕೆ ಹೋಗಿದ್ದೆ. ಅಲ್ಲೊಂದು ಪತ್ರಿಕಾ ಕಛೇರಿ. ಪುಡಾರಿ ಅನ್ನುವ ಒಂದು ದಿನಪತ್ರಿಕೆ ಅಲ್ಲಿಂದ ಪ್ರಕಟವಾಗುತ್ತಿತ್ತು. ಸಂಪಾದಕರಲ್ಲಿ ಮಾತನಾಡುತ್ತ ನಾನು ಪುಡಾರಿ ಅನ್ನುವ ಶಬ್ದಕ್ಕೆ ನಮ್ಮಲ್ಲಿ ಒಳ್ಳೆಯ ಅರ್ಥವಿಲ್ಲ, ನಮ್ಮಲ್ಲಿ ಚಿಲ್ಲರೆ ರಾಜಕಾರಣ ಮಾಡುವರನ್ನ, ದೇಶ ಸೇವೆಯ ಸೋಗು ಹಾಕುವವರನ್ನ, ರಾಜಕೀಯ ದೂರ್ತರನ್ನ ನಾವು ಪುಡಾರಿ ಎಂದು ಕರೆಯುತ್ತೇವೆ. ನೀವು ಇಂತಹಾ ಹೆಸರನ್ನ ಇಟ್ಟಿದ್ದೀರಲ್ಲ? ಎಂದು ಕೇಳಿದೆ. ಅವರು ಇಲ್ಲಿ ಆ ಅರ್ಥದಲ್ಲಿ ಈ ಶಬ್ದ ಬಳಕೆಯಲ್ಲಿ ಇಲ್ಲ, ಇಲ್ಲಿ ಪುಡಾರಿ ಅಂದರೆ ನಿಜವಾದ ದೇಶ ಭಕ್ತ, ಎಲ್ಲರೂ ಹೀಗಿರಬೇಕು ಅನ್ನುವ ಕಾರಣಕ್ಕೆ ನಾವು ನಮ್ಮ ಪತ್ರಿಕೆಗೆ ಆ ಹೆಸರನ್ನ ಇರಿಸಿದ್ದೇವೆ ಎಂದರು. ಜೊತೆಗೆ ಇಂದಿನ ಪರಿಸ್ಥಿತಿ ನೋಡಿದರೆ ನಾಳೆ ನಾವೂ ಕೂಡ ನೀವು ಹೇಳುವ ಅರ್ಥದಲ್ಲಿ ಈ ಶಬ್ದವನ್ನ ನೋಡಬೇಕಾಗುತ್ತದೇನೋ ಅನ್ನುವ ಅಭಿಪ್ರಾಯ ವ್ಯಕ್ಯಪಡಿಸಿದರು. ಆಗ ನನಗೆ ಕನ್ನಡದ ಜನ ಬಹಳ ಮುಂಚೆಯೇ ನಮ್ಮ ರಾಜಕಾರಣದ ದುರವಸ್ತೆಯನ್ನ ಗುರುತಿಸಿ ಬಿಟ್ಟರಲ್ಲ ಅನಿಸಿ ಸಂತೋಷವಾಯಿತು. ಅಂದು ನನಗೆ ನಮ್ಮ ಭಾಷೆಯ ಬಗ್ಗೆ ಹೆಮ್ಮೆ ಅನಿಸಿತು.

ಒಂದು ಸತ್ಯವನ್ನ, ಒಂದು ವಾಸ್ತವ ಪರಿಸ್ಥಿತಿಯನ್ನ ನಮ್ಮ ಕನ್ನಡದ ಜನ ಎಂತಹಾ ಶಬ್ದದ ಮೂಲಕ ಹೊರಗೆಡವಿದ್ದಾರಲ್ಲ ಅನಿಸಿತು. ಇಂದು ಈ ಶಬ್ದದ ವ್ಯಾಪ್ತಿ ಆಳ ಅಗಲ ಹೆಚ್ಚಾಗಿದೆ. ದೇಶದಲ್ಲಿ ಈ ಪುಡಾರಿಗಳ ಆಟಾಟೋಪ ಹೆಚ್ಚಾಗಿ ದೇಶದ ಅವಸಾನವನ್ನ ನಾವು ಕಾಣ ಬೇಕಾಗಿದೆ. ನಮ್ಮಲ್ಲಿ ಯಾರನ್ನ ನಾವು ರಾಜಕಾರಿಣಿ, ಜನನಾಯಕ, ಸಮಾಜ ಸೇವಕ, ಜನಪ್ರತಿನಿಧಿಮೊದಲಾದ ಹೆಸರಿನಿಂದ ಕರೆಯುತ್ತೇವೆಯೋ ಅವರೆಲ್ಲ ಕನ್ನಡದ ಪುಡಾರಿಗಳಾಗಿರುವುದನ್ನ ನಾವು ನೋಡುತ್ತಿದ್ದೇವೆ. ಈ ಮಾತಿಗೆ ಹೊರತಾಗಿ ಇರುವವರು ಯಾರಾದರೂ ಇದ್ದರೆ ಅವರನ್ನ ನಾನು ಮನಃಪೂರ್ವಕ ನಮಸ್ಕರಿಸುತ್ತೇನೆ. ಅಯ್ಯಾ ನಿಮ್ಮ ಸಂತತಿ ಸಾವಿರವಾಗಲಿ. ಈ ಸಂತತಿಯಿಂದ ಈ ದೇಶದ ರೈತರಿಗೆ, ಬಡವರಿಗೆ ಒಳಿತಾಗಲಿ ಎಂದು ಹಾರೈಸುತ್ತೇನೆ.

English summary
The three day Kannada Sahitya Sammelana inaugurated today (Jan.7). Here is the part 5 of complete text of speech by eminent Kannada writer and novelist President for 80th Kannada Sahitya Sammelana Norbert D'Souza.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X