ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾ.ಡಿ ಭಾಷಣ -4: ನದಿಯಿಂದ ಸರಿಯಾದ ಪಾಠ ಕಲಿತಿಲ್ಲ

By Mahesh
|
Google Oneindia Kannada News

ಆದರೆ ನಾವು ಯಾರೂ ಕೂಡ ವಿವೇಕ ಶಾಲಿಗಳಾಗಿ ಪರಿವರ್ತನೆ ಹೊಂದುತ್ತಿಲ್ಲ. ಒಂದು ನದಿ ಎಲ್ಲಿ ಹುಟ್ಟುತ್ತೆ, ಅದರಲ್ಲಿ ಎಷ್ಟು ನೀರು ಹರಿಯುತ್ತೆ, ಅದು ಎಲ್ಲಿ ಕಡಲನ್ನ ಸೇರುತ್ತದೆ ಅನ್ನುವುದು ನಮಗೆ ಗೊತ್ತಿದೆ. ಆದರೆ ಅದೇ ನದಿ ಒಂದು ಸಂಸ್ಕೃತಿಯನ್ನ ಹುಟ್ಟು ಹಾಕುವುದು, ಲಕ್ಷಲಕ್ಷ ಜನರ ದಾಹವನ್ನ ನೀಗಿಸುವುದು, ವಿವಿಧ ರೀತಿಯಲ್ಲಿ ಜನರನ್ನ ಸಲಹುವುದು ನಮಗೆ ಗೊತ್ತಿಲ್ಲ. ನದಿಯೊಂದರ ಕುರಿತ ಅಂಕಿ ಅಂಶ ಅರಿತ ನಾವು ಅದರ ಮಾನವೀಯ ಸಂಬಂಧಗಳ ಕುರಿತು ಕುರುಡರಾಗುತ್ತೇವೆ. ಹೀಗಾಗಿ ನದಿಯೊಂದರಿಂದ ಕಲಿಯ ಬೇಕಾದ ಪಾಠವನ್ನ ನಾವು ಕಲಿಯುವುದೇ ಇಲ್ಲ. ನಮಗೆ ಇಂದು ಜ್ಞಾನದ ಜೊತೆಗೆ ವಿವೇಕ ಬೇಕಾಗಿದೆ. ಆದರೆ ಅದರ ಕೊರತೆ ಇದೆ.

ಇನ್ನು ಈ ಯಂತ್ರದ ದಾಳಿಗೆ ಒಳಗಾಗಿ ನಮ್ಮ ಭಾಷೆ ಕೂಡ ನಶಿಸಿ ಹೋಗುತ್ತಿದೆಯೆ? ನಾವು ಈ ವಿಚಾರ ಮಾಡಬೇಕು. ಎಫ್.ಎಂ. ರೇಡಿಯೋ ಬಂದ ಮೇಲೆ ನಮ್ಮ ಭಾಷೆಗೆ ಬಂದೊದಗಿದ ದುರವಸ್ಥೆಯ ಕುರಿತು ಈಗಾಗಲೇ ಸಾಕಷ್ಟು ನಾವು ಕೇಳಿದ್ದೇವೆ. ಮಗಾ, ಮಚ್ಚಾ ಅನ್ನುವ ಶಬ್ದಗಳನ್ನ ಉಪಯೋಗಿಸ ಬಾರದು ಎಂದು ಒಂದು ವಿದ್ಯಾ ಸಂಸ್ಥೆ ತನ್ನ ವಿದ್ಯಾರ್ಥಿಗಳಿಗೆ ಆದೇಶ ಹೊರಡಿಸಿದೆ. ಮೊಬೈಲ್ ಬಂದ ನಂತರ ಕನ್ನಡದ ಅಂಕಿಗಳು ನಮಗೆ ಮರೆತೇ ಹೋಗಿವೆ. ಯಂತ್ರದ ಅವಸರಕ್ಕೆ ಹೊಂದಿ ಕೊಳ್ಳುವ ಭರದಲ್ಲಿ ಭಾಷೆಯನ್ನ ಮೊಟಕು ಗೊಳಿಸುವ, ಹೃಶ್ಯ ಗೊಳಿಸುವ ಯತ್ನ ನಡೆದಿದೆ. ಅನ್ನದ ಪ್ರಶ್ನೆಯೇ ಮುಖ್ಯವಾಗಿ ಕನ್ನಡ ಹಿಂದೆ ಸರಿದು ಇಂಗ್ಲೀಷ್ ವಿಜೃಂಬಿಸುತ್ತಿದೆ.

ಇಂತಹ ವೈವಿಧ್ಯತೆ ನಾಳೆ ಉಳಿದೀತೆ ?: ಕವಿರಾಜ ಮಾರ್ಗದ ಕವಿ ತನ್ನ ಕಾಲದಲ್ಲಿ ಇದ್ದ ಕನ್ನಡವನ್ನ ಕುರಿತು ಬರೆಯುತ್ತ ಕನ್ನಡಂಗಳ್ ಅನ್ನುವ ಶಬ್ದವನ್ನ ಬಳಸುತ್ತಾನೆ. ಈ ಮಾತು ಇಂದಿಗೂ ನಿಜ. ಗಂಡು ಮೆಟ್ಟಿನ ಭಾಷೆಯಾದ ಬೇಂದ್ರೆಯವರ ಧಾರವಾಡದ ಕನ್ನಡ, ಅನಕೃ ಅವರ ಮಧುರವಾದ ಮೈಸೂರು ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯ ಕಾರಂತರ ಕನ್ನಡ, ಗೋಕಾಕದ ಕೃಷ್ಣ ಮೂರ್ತಿ ಪುರಾಣಿಕರ ಕನ್ನಡ, ಗ್ರಾಮಾಯಣ ಕಾದಂಬರಿಯ ಬಹದ್ದೂರರ ಕನ್ನಡ, ಕುವೆಂಪು ಅವರ ಮಲೆನಾಡಿನ ಕನ್ನಡ, ಕುಂವಿ ಅವರ ಬಳ್ಳಾರಿಯ ಕನ್ನಡ, ದೇವನೂರರ ಚಾಮರಾಜ ನಗರದ ಕನ್ನಡ, ಇತ್ಯಾದಿಗಳು ಕನ್ನಡದಲ್ಲಿ ಇರುವುದನ್ನ ನಾವು ಗಮನಿಸ ಬೇಕಿದೆ. ಇಂತಹ ವೈವಿಧ್ಯತೆ ನಾಳೆ ಉಳಿದೀತೆ ಅನ್ನುವ ಪ್ರಶ್ನೆ ಕೂಡ ಇದೆ.

Norbert D'Souza Speech

ಇಂತಹ ವೈವಿಧ್ಯಮಯ ಕನ್ನಡವನ್ನ ಇರಿಸಿ ಕೊಂಡು ನಾವು ಏನೂ ಮಾಡಬಹುದು. ಆದರೆ ನಮ್ಮ ಜನ ಕನ್ನಡದಲ್ಲಿ ಶಬ್ದಗಳಿಲ್ಲ, ವಿಜ್ಞಾನ, ವೈದ್ಯಕೀಯ ಇತ್ಯಾದಿ ವಿಷಯಗಳನ್ನ ಕನ್ನಡದಲ್ಲಿ ಹೇಳಲಿಕ್ಕೆ ಸಾಧ್ಯವಿಲ್ಲ ಅನ್ನುವ ನೆಪಗಳನ್ನ ಹೇಳುತ್ತಿರುವುದು ನಾಚಿಕೆಗೇಡು. ನಮ್ಮ ನಾಡಿನ ಕೃಷಿಕರು, ಕುಶಲ ಕರ್ಮಿಗಳು, ವಿವಿಧ ಕೆಲಸ ಕಾರ್ಯಗಳನ್ನ ಮಾಡುವವರು ತಾವು ದಿನ ನಿತ್ಯ ಬಳಸುವ ವಸ್ತುಗಳಿಗೆ ಸುಂದರ ಹೆಸರುಗಳನ್ನ ಇರಿಸಿದ್ದಾರೆ, ತಮ್ಮ ಸುತ್ತ ಇರುವ ಗಿಡ ಮರ ಬಳ್ಳಿ ಹಕ್ಕಿ ಮೀನುಗಳಿಗೆ ಹೆಸರನ್ನ ಇರಿಸಿದ್ದಾರೆ. ಆದರೆ ಒಂದು ಮೋರಿ ಕಟ್ಟಲು ನಮ್ಮ ಇಂಜಿನಿಯರುಗಳಿಗೆ ವರ್ಡ್ಸ ಇಲ್ಲ ಅಂದರೆ ಅದು ಭಾಷೆಯ ಅಸಾಮರ್ಥ್ಯ ಅಲ್ಲ. ಇದು ಅವರ ಅಸಾಮರ್ಥ್ಯ.

ಕನ್ನಡದ ವಿಷಯ ಬಂದಾಗಲೆಲ್ಲ ನಾವು ಸರಕಾರವನ್ನ ಅಪರಾಧೀ ಸ್ಥಾನದಲ್ಲಿ ನಿಲ್ಲಿಸುತ್ತೇವೆ. ಸರಕಾರ ಕನ್ನಡಕ್ಕಾಗಿ ಏನೂ ಮಾಡುತ್ತಿಲ್ಲ ಅನ್ನುವುದು ನಮ್ಮ ಜನರ ಪುಕಾರು. ಸರಕಾರ ಆಕಡೆ ಇರಲಿ, ನಾವು ಏನು ಮಾಡಿದ್ದೇವೆ? ನಮ್ಮ ಮಕ್ಕಳು ನಾಯಿಯನ್ನ ಡಾಗಿ ಅಂದಾಗ, ಬೆಕ್ಕನ್ನ ಕ್ಯಾಟಿ ಅಂದಾಗ, ಚಂದ್ರನನ್ನ ಮೂನ್ ಅಂಕಲ್ ಎಂದಾಗ ತೆಂಗಿನ ಮರ ಹತ್ತಿ ಕೂರುವ ನಮ್ಮ ನಮ್ಮ ಪೋಷಕರು ಕನ್ನಡದ ಇಂದಿನ ಸ್ಥಿತಿಗೆ ಮೂಲ ಕಾರಣ. ಆಂಗ್ಲ ಮಾಧ್ಯಮ ಶಾಲೆಗಳು ನಮ್ಮ ಜನರಿಗೆ ರೋಮಾಂಚನವನ್ನ ಉಂಟುಮಾಡುತ್ತವೆ.

ಶಾಲೆಗಳ ಕನ್ನಡ ಶಿಕ್ಷಣ : ಈ ಶಾಲೆಗಳ ಶಿಕ್ಷಣದ ಬಗ್ಗೆ ನನ್ನ ತಕರಾರಿದೆ. ಹತ್ತು ಕೆಜಿ ಹೆಗಲ ಚೀಲ, ಕೈಯಲ್ಲಿ ನೀರಿನ ಬಾಟಲಿ, ಊಟದ ಡಬ್ಬಿ, ಕೊಡೆ, ಇತ್ಯಾದಿ ಹೊತ್ತು ಶಾಲೆಗೆ ಹೋಗುವ ಮಕ್ಕಳಿಗೂ ಗಡಿಯಲ್ಲಿ ಗಡಿಕಾಯುವ ನಮ್ಮ ಸೈನಿಕರಿಗೂ ನನಗೆ ವ್ಯತ್ಯಾಸ ಕಾಣುವುದಿಲ್ಲ. ಅಲ್ಲಿಯ ಹೋಂ ವಕರ್್ ಅನ್ನುವ ಶಿಕ್ಷೆ, ಶಿಸ್ತಿನ ಹೆಸರಿನ ಬಿಗಿ ಶಿಕ್ಷಣ ಇದು ಮಕ್ಕಳನ್ನ ಏನು ಮಾಡ ಬಹುದು ನಾವು ವಿಚಾರ ಮಾಡ ಬೇಕು. ಮಕ್ಕಳು ಒಂದು ವೇಳೆ ಗದ್ದಲ ಮಾಡಿದರೆ ಅವರ ಮೊದಲ ಕಲ್ಲು ಬೀಳುವುದು ಅವರೇ ಕಲಿತ ಶಾಲೆಯ ಮೇಲೆ ಎಂಬ ಮಾತಿದೆ. ನಮ್ಮ ಶಾಲೆಗಳಲ್ಲಿ ಕನ್ನಡದ ವಾತಾವರಣ ಇಲ್ಲ ಅಂದರೆ ಅದಕ್ಕೆ ಕಾರಣ ನಮ್ಮ ಅಪ್ಪ ಅಮ್ಮ. ಎರಡನೆಯ ಕಾರಣ ನಮ್ಮ ಸರಕಾರ. ಎಲ್ಲ ರಾಜ್ಯಗಳ ಸರಕಾರಗಳೂ ತಮ್ಮ ರಾಜ್ಯದ ಭಾಷೆಯ ಹಿತವನ್ನ ಕಾಪಾಡುತ್ತ ಬಂದಿವೆ. ಆದರೆ ಕರ್ನಾಟಕದ ಸರಕಾರ ಕನ್ನಡ ಸರಕಾರವಾಗಿದೆಯೇ?

ಕೆಲ ವರ್ಷಗಳ ಹಿಂದೆ ತಮಿಳು ನಾಡಿನ ಮುಖ್ಯಮಂತ್ರಿ ಬೆಂಗಳೂರಿನ ವಿಧಾನ ಸೌಧಕ್ಕೆ ಬಂದ. ಆತ ಅಲ್ಲಿ ಕುಳಿತು ತಮಿಳಿನಲ್ಲಿ ಮಾತನಾಡಿದ. ನಮ್ಮ ಮುಖ್ಯಮಂತ್ರಿ ಆತನಿಗೆ ಇಂಗ್ಲೀಷಿನಲ್ಲಿ ಉತ್ತರಿಸಿದರು. ಇದು ಕನ್ನಡ ಸರಕಾರದ ಲಕ್ಷಣ ಖಂಡಿತ ಅಲ್ಲ. ನರಕಕ್ಕೆ ಇಳಿಸಿ ನಾಲಿಗೆ ಸೀಳ್ಸಿ ಬಾಯಿ ಹೊಲಸಾಕಿದ್ರು ಮೂಗನಲ್ಲಿ ಕನ್ನಡವನ್ನ ಆಡುತ್ತೇನೆ ಅನ್ನುವ ನಮ್ಮ ಕವಿಗಳ ಶಪಥಕ್ಕೆ ನಮ್ಮ ಮಂತ್ರಿಗಳು ಎಂತಹ ಅವಮಾನ ಮಾಡುತ್ತಾರಲ್ಲ ಎಂದು ಮೈ ಉರಿಯುತ್ತದೆ.

ಇನ್ನು ಕನ್ನಡದ ಏಳಿಗೆಗೆ ಕಾವಲು ಸಮಿತಿ, ಅಭಿವೃಧ್ದಿ ಪ್ರಾಧಿಕಾರ ಇತ್ಯಾದಿಗಳು. ಕನ್ನಡವನ್ನ ದಿನ ನಿತ್ಯದ ವ್ಯವಹಾರದಲ್ಲಿ ಬಳಸಿ ಅನ್ನುವ ಸರಕಾರಿ ಆದೇಶಗಳು, ಬೋರ್ಡ್ ಗಳನ್ನ ಕನ್ನಡದಲ್ಲಿ ಹಾಕಿ ಅನ್ನುವ ಸಾಲು ಸಾಲು ಸರಕಾರೀ ಆಜ್ಞೆಗಳು ಯಾರಿಗೂ ಮಯರ್ಾದೆ ತರುವ ವಿಷಯವಲ್ಲ. ಎಷ್ಟೋ ಸಂದರ್ಭಗಳಲ್ಲಿ ಸರಕಾರ ಜನರ ತಾಳಕ್ಕೆ ತಕ್ಕಂತೆ ಕುಣಿಯುತ್ತದೆ. ತಮಿಳು ನಾಡಿನಲ್ಲಿ ತಾಂತ್ರಿಕ ಹಾಗು ವೈದ್ಯಕೀಯ ಶಿಕ್ಷಣವನ್ನ ತಮಿಳಿನಲ್ಲಿ ನೀಡುವಾಗ ನಾವು ಪ್ರಾಥಮಿಕ ಮೊದಲ ತರಗತಿಯಲ್ಲಿ ಇಂಗ್ಲೀಷ್ ಶಿಕ್ಷಣ ನೀಡಲಿಕ್ಕೆ ಮುಂದಾಗಿದ್ದೇವೆ.

English summary
The three day Kannada Sahitya Sammelana inaugurated today (Jan.7). Here is the part 4 of complete text of speech by eminent Kannada writer and novelist President for 80th Kannada Sahitya Sammelana Norbert D'Souza.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X