ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾ.ಡಿ ಭಾಷಣ -3: ಬದುಕಿನ ಪುನರಾವಲೋಕನಕ್ಕೆ ಸಾಹಿತ್ಯ

By Mahesh
|
Google Oneindia Kannada News

ನಮ್ಮಲ್ಲಿ ಸದಾ ಮತ್ತೊಬ್ಬರು ಬದುಕನ್ನ ಹೇಗೆ ಎದುರಿಸಿದರು ಅನ್ನುವುದರ ಬಗ್ಗೆ ಕುತೂಹಲ ಇರುತ್ತದೆ. ಈ ಕುತೂಹಲವನ್ನ ತಣಿಸೋದು ಸಾಹಿತ್ಯ. ಈ ಕೆಲಸವನ್ನ ಬೇರೆ ಕಲಾ ಮಾಧ್ಯಮಗಳು ಮಾಡಿದರೂ ಕೂಡ ಒಂದು ಕ್ರಮದಲ್ಲಿ ಒಂದು ಮಾದರಿಯಲ್ಲಿ ಸರಳವಾಗಿ ಈ ಕೆಲಸ ಮಾಡುವುದು ಸಾಹಿತ್ಯ. ಇದಕ್ಕಾಗಿ ಸಾಹಿತ್ಯದ ಬಗ್ಗೆ ನಮಗೆ ಗೌರವ...

ಇದು ಸಾಹಿತ್ಯವನ್ನ ನಾವು ಗೌರವಿಸಲಿಕ್ಕೆ ಒಂದು ಕಾರಣ ಅಂತ ನಾನು ತಿಳಿದಿದ್ದೇನೆ. ಅದು ಕತೆ ಕಾದಂಬರಿ ಕಾವ್ಯ ನಾಟಕ ಬೇರೆ ಯಾವುದೇ ಸಾಹಿತ್ಯ ಪ್ರಕಾರವೇ ಇರಲಿ ಅದು ಬದುಕನ್ನ ಕುರಿತೇ ಇರುತ್ತದೆ. ನಾವು ಬದುಕುವ ಧಾವಂತದಲ್ಲಿ ಬದುಕುತ್ತ ಹೋಗಿ ಬಿಡುತ್ತೇವೆ. ನಾವೇನು ತಪ್ಪು ಮಾಡಿದ್ದೇವೆ ಅನ್ನುವುದು ನಮಗೆ ತಿಳಿಯದೇ ಹೋಗಿ ಬಿಡುತ್ತದೆ. ಅಧಿಕಾರವನ್ನ ಹಣವನ್ನ ಹೆಣ್ಣನ್ನ ಭೋಗಿಸುವಾಗ ನಮ್ಮ ವರ್ತನೆ ಏನಾಗಿತ್ತು ಅನ್ನುವುದು ನಮಗೆ ತಿಳಿಯುವುದಿಲ್ಲ. ಇಂತಹಾ ಸಂದರ್ಭದಲ್ಲಿ ನಮ್ಮ ಬದುಕಿನ ಪುನರಾವಲೋಕನ ಮಾಡಲು ಸಾಹಿತ್ಯ ನಮಗೆ ನೆರವು ನೀಡುತ್ತದೆ. ಮತ್ತೊಬ್ಬರ ಕತೆಯನ್ನ, ಬದುಕನ್ನ ನಮ್ಮ ಮುಂದೆ ತೆರೆದು ಇಡುವುದರ ಮೂಲಕ ಸಾಹಿತ್ಯ ನಮ್ಮ ಬದುಕನ್ನ ನಾವೇ ಪರಿಶೀಲಿಸಿ ಕೊಳ್ಳುವ ಅವಕಾಶವನ್ನ ಕಲ್ಪಸಿ ಕೊಡುತ್ತದೆ. ಸಾಹಿತ್ಯವನ್ನ ನಾವು ಮೆಚ್ಚಿ ಕೊಳ್ಳಲು ಕೂಡ ಇದೇ ಕಾರಣ. ಬದುಕಿನ ಪುನರಾವಲೋಕನಕ್ಕೆ ಅವಕಾಶ ಮಾಡಿ ಕೊಡುವುದೇ ಸಾಹಿತ್ಯದ ವಿಶೇಷತೆ. ಇದನ್ನ ನಾವೆಲ್ಲ ಗೌರವಿಸುವುದು ಇದೇ ಕಾರಣಕ್ಕೆ.

ಇನ್ನು ಎರಡನೆಯದಾಗಿ ಸಾಹಿತ್ಯ ತನ್ನ ಕೆಲಸಕ್ಕೆ ಭಾಷೆಯನ್ನ ಅವಲಂಬಿಸಿ ಕೊಂಡಿರುತ್ತದೆ. ಕಲಾವಿದ ಬಣ್ಣವನ್ನ, ಸಂಗೀತಗಾರ ರಾಗ ಆಲಾಪನೆಯನ್ನ, ನಟ ಅಭಿನಯವನ್ನ, ನರ್ತಕ ಮುದ್ರೆಗಳನ್ನ ಬಳಸಿದರೆ ಸಾಹಿತಿ ಕೇವಲ ಭಾಷೆಯನ್ನ. ಹೌದು ಕೇವಲ ಭಾಷೆಯನ್ನ ಬಳಸಿ ಕೊಳ್ಳುತ್ತಾನೆ. ಈ ಭಾಷೆ ಕೆಲ ಶಬ್ದಗಳ ಜಂಜಡ ಅಲ್ಲ. ಗೊಂದಲ ಅಲ್ಲ. ಭಾಷೆಗೆ ಒಂದು ಜಾನಪದ ಶ್ರೀಮಂತಿಕೆ, ಭವ್ಯ ಇತಿಹಾಸ, ಒಂದು ಪರಂಪರೆ ಒಂದು ಜೀವನ ವಿಧಾನ ಇರುತ್ತೆ. ಇಂತಹಾ ಭಾಷೆಯನ್ನ ಲೇಖಕ ತನ್ನ ಸಂವಹನಕ್ಕೆ ಬಳಸಿ ಕೊಳ್ಳುತ್ತಾನೆ. ಭಾಷೆಯ ಮೂಲಕವೇ ಲೇಖಕ ಎಲ್ಲವನ್ನ ತಂದು ಓದುಗನಿಗೆ ತಲುಪಿಸುತ್ತಾನೆ. ಒಂದು ಪುಸ್ತಕವನ್ನ ಓದುತ್ತ ಓದುಗ ಬೆರಗಾಗುತ್ತಾನೆ, ಕಂಬನಿ ಮಿಡಿಯುತ್ತಾನೆ, ಸಂತೋಷ ಪಡುತ್ತಾನೆ. ಇದು ಪುಸ್ತಕ ಮಾಡುವ ಪರಿಣಾಮ ಎಂದು ನಾನು ತಿಳಿಯುತ್ತೇನೆ.

Norbert D'Souza Speech

ಅಲೆಕ್ಷಾಂಡರನ ಆಸ್ಥಾನಕ್ಕೆ ಬಂದ ಓರ್ವ ಕಲಾವಿದ ಕಲಾತ್ಮಕವಾಗಿ ಕೆತ್ತಿದ ಒಂದು ಕರಂಡಕವನ್ನ ದೊರೆಗೆ ಕಾಣಿಕೆಯಾಗಿ ನೀಡಿದ. ಅದರಲ್ಲಿ ಏನನ್ನ ಇಡುವುದು ಅನ್ನುವ ಪ್ರಶ್ನೆ ಬಂದಿತು. ಜನ ಒಂದೊಂದು ಸಲಹೆ ನೀಡಿದರು. ದೊರೆಯ ಪಟ್ಟದ ಕತ್ತಿ, ಉಂಗುರ, ಕಿರೀಟ ಇಡಿ ಎಂದರು ಜನ. ಆದರೆ ಕೊನೆಗೆ ಅಲೆಕ್ಸಾಂಡರ್ ನುಡಿದ ಈ ಕಲಾತ್ಮಕವಾದ ಕರಂಡಕದಲ್ಲಿ ಏನನ್ನಾದರೂ ಇಡಬೇಕು ಅಂದರೆ ಅದು ಗ್ರೀಕ್ ಭಾಷೆಯ ಶ್ರೇಷ್ಠ ಕೃತಿಗಳಾದ ಒಡೆಸ್ಸಿ ಹಾಗೂ ಎಲಿಯಡ್ಡನ್ನ ಇಡಬೇಕು ಎಂದ ಆತ. ಜನ ಆಗ ಅದನ್ನ ಒಪ್ಪಿಕೊಂಡರು. ಅಂದರೆ ಪುಸ್ತಕ ಅನ್ನುವ ವಸ್ತು ಶ್ರೇಷ್ಠವಾದದ್ದು. ಇಂತಹ ಪುಸ್ತಕದ ಮೂಲಕ ಭಾಷೆ ಮಾಡುವ ಮ್ಯಾಜಿಕ್ ಬಹಳ ದೊಡ್ಡದು ಎಂದು ನಾನು ನಂಬುತ್ತೇನೆ.

ಲೇಖಕ ಇಂತಹ ಭಾಷೆ ಉಳಿಯ ಬೇಕು ಎಂದು ಬಯಸುವುದು ಇದಕ್ಕಾಗಿ. ಆತ ಹೋರಾಟ ಮಾಡುವುದು, ಭಾಷೆಯ ಶಕ್ತಿ ಅವನಿಗೆ ಗೊತ್ತಿದೆ ಅನ್ನುವ ಕಾರಣಕ್ಕೆ. ಸರಸ್ವತಿಯನ್ನ ಅಕ್ಷರ ಮಾಲಾ ಪುಸ್ತಕ ಧಾರಿಣಿ ಎಂದು ಒಪ್ಪಿಕೊಂಡವರು ನಾವು. ಶೃಂಗೇರಿಯ ಶಾರದೆಯ ಕೈಯಲ್ಲಿ ಪುಸ್ತಕವಿದೆ. ಒಂದು ಕಾಲದಲ್ಲಿ ಜ್ಞಾನ ಅನ್ನುವುದು ಪುಸ್ತಕದ ಮೂಲಕವೇ ನಮಗೆ ಲಭ್ಯವಾಗುತ್ತಿತ್ತು. ಪುಸ್ತಕ ಭಂಡಾರಗಳ ಅಭಿವೃಧ್ದಿಯ ಮೂಲಕವೇ ಹೊಸ ಸಾಧನೆಗಳನ್ನ ಮಾಡಿದ ದೇಶಗಳೂ ಇವೆ. ಆದರೆ ಇಂದು ಪುಸ್ತಕದ ಜಾಗದಲ್ಲಿ ಕಂಪ್ಯೂಟರ್, ಲ್ಯಾಪಟಾಪ್, ಮೊಬೈಲ, ಟ್ಯಾಬ್ ಇಂಟರ್ ನೆಟ್ ಬಂದಿದೆ. ಒಂದು ಕಾಲದಲ್ಲಿ ಪುಸ್ತಕಗಳನ್ನ ಓದಿ ಅಲ್ಲಿಯ ಆಗುಹೋಗುಗಳ ಕುರಿತು ಮಾತನಾಡುತ್ತಿದ್ದ ನಮ್ಮ ಓದುಗ ವರ್ಗ ಇಂದು ಈ ವಿದ್ಯುನ್ಮಾನ ಮಾಧ್ಯಮಗಳ ಕೈಯಲ್ಲಿ ಸಿಕ್ಕಿ ಬಿದ್ದಿದೆ.

ಈ ಯಂತ್ರದ ಹಿಂದೆ ಈ ಆಧುನಿಕ ಯಂತ್ರವನ್ನ ಎಲ್ಲೆಲ್ಲೂ ಜನಪ್ರಿಯಗೊಳಿಸಿ ಅದರ ಮೂಲಕ ಇಡೀ ವಿಶ್ವವನ್ನ ಆಳಬೇಕು ಅನ್ನುವ ಅಭಿಲಾಷೆ ಇರುವ ಒಂದು ಕುತಂತ್ರ ಮನಸ್ಸು ಇದೆಯೇನೋ ಎಂದು ಕೂಡ ನನಗೆ ಅನಿಸುತ್ತಿದೆ. ಈ ಯಂತ್ರಗಳು ಮಾನವೀಯ ಗುಣಗಳನ್ನ ಕೊಲ್ಲುತ್ತ, ಮಾನವೀಯತೆಯಿಂದ ನಮ್ಮನ್ನ ದೂರ ಸೆಳೆದೊಯ್ಯುತ್ತ ಯಂತ್ರದ ಗುಲಾಮರನ್ನಾಗಿ ನಮ್ಮನ್ನ ಪರಿವತರ್ಿಸಿ ಇಡೀ ವಿಶ್ವ ಒಂದೇ ಮಾದರಿಯ, ಒಂದೇ ರೀತಿಯಲ್ಲಿ ಯೋಚಿಸುವ, ಒಂದೇ ಆಹಾರವನ್ನ ಸೇವಿಸುವ ವಿಚಿತ್ರ ಜೀವಿಗಳನ್ನ ಸೃಷ್ಟಿ ಮಾಡುವ ಹುನ್ನಾರ ನಡೆದಿರಬಹುದೆ ಅನ್ನುವ ಅನುಮಾನ ನನ್ನನ್ನ ಕಾಡುತ್ತಿದೆ.

ಜ್ಞಾನ ಮತ್ತು ವಿವೇಕ : ಪುಸ್ತಕಗಳ ವಿಶೇಷತೆ ಅಂದರೆ ಒಂದು ಪುಸ್ತಕ ಓರ್ವ ಓದುಗನನ್ನ ಆಯ್ಕೆ ಮಾಡಿ ಕೊಂಡು ಅವನ ವಿಶ್ವಾಸವನ್ನ ಗಳಿಸಿ ಏಕಾಂತದಲ್ಲಿ ಅವನಿಗೆ ಕೆಲ ವಿಷಯಗಳನ್ನ ತಿಳಿಸಿ ಕೊಡುತ್ತ ಅವನನ್ನ ಎಲ್ಲ ವಿಷಯಗಳಲ್ಲೂ ಕನ್ವಿನ್ಸ್ ಮಾಡುತ್ತ ಹೋಗುತ್ತದೆ. ಇದರಿಂದಾಗಿ ಓದುಗನ ವ್ಯಕ್ತಿತ್ವದಲ್ಲಿ ಬದಲಾವಣೆ ಆಗುತ್ತದೆ, ಆವನ ಅನುಭವ, ಕಲ್ಪನೆ, ಜೀವನ ದೃಷ್ಟಿ ಪಕ್ವವಾಗುತ್ತ ಹೋಗುತ್ತದೆ. ಈ ಕೆಲಸವನ್ನ ಇಂದಿನ ವಿದ್ಯುನ್ಮಾನ ಯಂತ್ರಗಳು ಮಾಡುವುದಿಲ್ಲ. ಹೊಸದು, ಆಧುನಿಕ ಆವಿಷ್ಕಾರ, ಒಂದು ಅದ್ಭುತ ಎಂಬಂತಹಾ ಭ್ರಮೆಯನ್ನ ಸೃಷ್ಟಿ ಮಾಡುತ್ತ ಬಂದ ಒಂದು ಯಂತ್ರ, ಮೊದಲು ಮನುಷ್ಯನ ವಿವೇಕವನ್ನ ನಾಶ ಮಾಡಿದರೆ ನಂತರ ಅದು ಹೃದಯ ಮನಸ್ಸುಗಳ ಮೇಲೆ ದಾಳಿ ಮಾಡುತ್ತದೆ. ಈ ಕಾರಣಕ್ಕಾಗಿಯೇ ಗಾಂಧೀಜಿ ಯಂತ್ರವನ್ನ ರಕ್ಕಸ ಎಂದು ಕರೆದದ್ದು. ಈ ಯಂತ್ರ ತನಗೆ ಬೇಕಾದ ಕಮಾಡಟಿಯನ್ನ ಉತ್ಪಾದಿಸುವಲ್ಲಿ, ಬಿಕರಿಮಾಡುವಲ್ಲಿ ಸದಾ ನಿರತ. ಸದಾ ಸಾಮಾಜಿಕ ಬದ್ಧತೆಯೊಡನೆ ಯೋಚನೆ ಮಾಡುವ ಬರೆಯುವ ಲೇಖಕ ಇಂದು ಈ ಯಂತ್ರದ ಎದಿರು ಸೋಲುತ್ತಿದ್ದಾನೆ. ಹಾಗೆಂದು ನಾವು ಯಂತ್ರಗಳನ್ನ ನಿರಾಕರಿಸಬೇಕು ಎಂದು ನಾನು ಹೇಳುತ್ತಿಲ್ಲ, ಯಂತ್ರ ಮನುಷ್ಯನ ಕೈಲಿರ ಬೇಕು, ಮಾನವ ಯಂತ್ರದ ಗುಲಾಮನಾಗ ಬಾರದು. ಮಾಹಿತಿ ತಂತ್ರ ಜ್ಞಾನದ ಇಂದಿನ ದಿನಗಳಲ್ಲಿ ನಾವೆಲ್ಲ ಜ್ಞಾನವಂತರಾಗುತ್ತಿದ್ದೇವೆ.

English summary
The three day Kannada Sahitya Sammelana inaugurated today (Jan.7). Here is the part 3 of complete text of speech by eminent Kannada writer and novelist President for 80th Kannada Sahitya Sammelana Norbert D'Souza.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X