ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕವನಾಂಜಲಿ: ರಾಯರ ಚಿತ್ರಕ್ಕೆ ರಾಮಣ್ಣನ ಪದ್ಯ

By ಅಂಜಲಿ ರಾಮಣ್ಣ, ಬೆಂಗಳೂರು
|
Google Oneindia Kannada News

ಖ್ಯಾತ ಕುಂಚ ಕಲಾವಿದ ದಿ. ಕೊಂಡಪಲ್ಲಿ ಶೇಷಗಿರಿ ರಾವ್ (1924 - 2012) ಅವರು ರಚಿಸಿದ ಅದ್ಬುತ ವರ್ಣಚಿತ್ರವನ್ನು ವಸ್ತುವಾಗಿಸಿಕೊಂಡು ಬೆಂಗಳೂರಿನ ವಕೀಲೆ ಅಂಜಲಿ ರಾಮಣ್ಣ ಅವರು ರಚಿಸಿದ ಕವನ ಇದು. ಶೇಷಗಿರಿ ರಾವ್ ಅವರು ರಚಿಸಿರುವ ವರ್ಣಚಿತ್ರಗಳ ಪ್ರದರ್ಶನ ಹೈದರಾಬಾದ್‌ನ ಸ್ಟೇಟ್ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಲಾಗಿದೆ.

ಅಂದ ಹಾಗೆ, ಸಾವಿರಕ್ಕೂ ಹೆಚ್ಚು ಅತ್ಯುದ್ಭುತ ಕೃತಿಗಳನ್ನು ರಚಿಸಿರುವ ಶೇಷಗಿರಿ ರಾವ್ ಅವರ ಹುಟ್ಟುಹಬ್ಬ ಜನವರಿ 27ರಂದು - ಸಂಪಾದಕ.

Poetic tribute to painter Kondapalli Sheshagiri Rao

ಇಂದ್ರ- ಗೌತಮ, ನಡುವೆ ಮನಸ್ತಾಪ
ಇರದಿದ್ದರೆ, ರಾಮ ಸ್ಪರ್ಶ ಸಿಕ್ಕುತ್ತಿತ್ತೇ
ಅಹಲ್ಯೆಗೆ?

ಅವನ ಅಹಂ ಇವನ ಅಹಂಕಾರ
ಅವಳೀಗ ಕಲ್ಲಾಗಲೊಲ್ಲಳು
ಮಣಿಪುರದಲ್ಲಿ ಸತ್ಯಾಗ್ರಹ ಹೂಡುತ್ತಾಳೆ

ಇಲ್ಲಿ
ಆತ್ಮಕಥೆಗೆ ಪ್ರಶಸ್ತಿ ಸಿಗುತ್ತೆ
ಚಪ್ಪಾಳೆ ಸದ್ದಾಗುತ್ತೆ

ಪತಿತಪಾವನ ಸೀತಾರಾಮ
ಪಾಪ, ಮತ್ತ್ಯಾರನ್ನೋ
ಸ್ಪರ್ಶಿಸಲು ಸಜ್ಜಾಗುತ್ತಾನೆ!

ತಾಕಿದ್ದು ಮಾತ್ರ ಅವನ ಅಂಗುಷ್ಠ
ಮಿಡುಕಾಡಿತ್ತು ಅವಳ ಜೀವ ನಖಶಿಖಾಂತ

ಏಕೆ ಬೇಕಿತ್ತು ಮತ್ತದೇ;
ರುದ್ರಾಕ್ಷಿಯ ಘಮಲು
ನಾರುಮಡಿಯ ಕಮುಟಲು
ಕಿಲುಬು ಕಮಂಡಲು
ಜಟೆಯೊಳಗಿನ ದಿಗಿಲು

ಮತ್ತೆ ಮತ್ತೆ ಏಕೆ ಬೇಕಿತ್ತು;
ಸಂಧ್ಯೆಗೆ ಮಣಮಣ ಮಂತ್ರದ ವಂದನೆ
ಅಗ್ನಿಗೆ ಪಿಟಿಪಿಟಿ ತಂತ್ರದ ಹವಿಸ್ಸು
ನಿರಂತರ ಜಪತಪದ ಮುಚ್ಚಳಿಕೆ
ಗಾಂಧಾರಿ ಕಣ್ಣ್ಪಟ್ಟಿಯೊಳಗಿನ ಕತ್ತಲು

ನಿನಗ್ಯಾಕೆ ಅರಿಯದಾಯ್ತು;
ಜಡ ನೆನಪುಗಳು ಭರತನಾಗುವ ಪುಳಕ
ನರನಾಡಿ ಆಗಿಯೂ ಕಲ್ಲಾಗದ ತವಕ
ನಗೆ ಹೂವು ಸ್ಥಿತ್ಯಂತರಗೊಂಡ ಕಲ್ಪನೆ
ಭೋರ್ಗೆರೆತಕ್ಕೆ ಇಂಚಿಂಚೇ ಹನಿವ ಪ್ರೀತಿ ಸೋನೆ

ಶುದ್ಧ ಬ್ರಹ್ಮ ಪರಾತ್ಪರ ರಾಮ ಅಹಲ್ಯೆಗೆ ತಿಳಿದದ್ದು ನಿನಗೇಕೆ ತಿಳಿಯದ್ದು
ಬೆಳದಿಂಗಳ ರಾತ್ರಿಯಲೂ ಹಾದಿ ನಿನಗೆ ಏಕೆ ಕಾಣದಾಯ್ತು
ಹೆಬ್ಬಂಡೆ ಸಿಕ್ಕೊಡನೆ ಗೌತಮನೇ ಕಂಡಂತಾಯ್ತು
ಹೆದೆಯೇರಿದ ಬಿಲ್ಲು ಬಾಗುವ ಮೊದಲೇ ಎಡವಿದ್ದಾಯ್ತು
ಹೊರಟುಬಿಡು ತೊಟ್ಟ ಬಾಣ ತೊಡಲಾರೆನೆಂಬ ಭಾಷೆಯಿತ್ತು!

English summary
Bangalore advocate Anjali Ramanna has paid poetic tribute to legendary painter Kondapalli Sheshagiri Rao (1924 - 2012) of Andhra Pradesh. His paintings are being exhibited at State Art Gallery, Hederabad. Sheshagiri Rao's birthday is on January 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X