ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕವನ: ಕಸೂತಿ ಹುಡುಗಿ ಮೇ 1 ‍X 365

By ಅಂಜಲಿ ರಾಮಣ್ಣ, ಬೆಂಗಳೂರು
|
Google Oneindia Kannada News

ವೈಜ್ಞಾನಿಕ ಸಮಾಜವಾದದ ಪ್ರವರ್ತಕರಾದ ಕಾರ್ಲ್ ‌ಮಾರ್ಕ್ಸ್ ಹಾಗೂ ಫ್ರೆಡ್ರಿಕ್ ಎಂಗೆಲ್ಸ್ ಇವರು ಎಂಟು ಗಂಟೆಗಳ ಕೆಲಸದ ದಿನ ಜಾರಿಗೆ ಬರಬೇಕು ಎಂದು ತಮ್ಮ ಅನೇಕ ಬರವಣಿಗೆಗಳಲ್ಲಿ ಪ್ರತಿಪಾದಿಸಿದ್ದರು. 1886 ಮೇ 1, ಕಾರ್ಮಿಕ ಹೋರಾಟಗಳ ಇತಿಹಾಸದಲ್ಲಿ ಒಂದು ಮಹತ್ವದ ಘಟ್ಟ. ಆ ದಿನ ಅಮೆರಿಕೆಯಲ್ಲಿ ಸುಮಾರು ಐದು ಲಕ್ಷ ಜನ, ಎಂಟು ಗಂಟೆಯ ಕೆಲಸದ ದಿನಕ್ಕಾಗಿ ಪ್ರದರ್ಶನವನ್ನು ಹೂಡಿದ್ದರು. ಇವರಲ್ಲಿ ಸುಮಾರು ಎರಡು ಲಕ್ಷ ಜನ ಮುಷ್ಕರವನ್ನು ಹೂಡಿದ್ದರು.

ಮೇ, 1 ನೆಯ ತಾರೀಖನ್ನು 'ವಿಶ್ವಕಾರ್ಮಿಕರದಿನ' ವೆಂದೂ 'ದೀಕ್ಷಾದಿನ' ವಾಗಿಯೂ ಆಚರಿಸುವಂತೆ ರೂಪಿಸಲಾಯಿತು. ಎಲ್ಲಾ ದೇಶಗಳ ಕಾರ್ಮಿಕರೇ ಒಂದಾಗಿರಿ, ಒಂದಾಗಿರಿ', 'ವಿಶ್ವದ ಕಾರ್ಮಿಕರೇ ಒಂದಾಗಿರಿ', ಇದು 'ಮೇ ದಿನಾಚರಣೆ' ಯ ಘೋಷಣೆ. ಮೇ ಡೇ ಅಂಗವಾಗಿ ಗಾರ್ಮೆಂಟ್ಸ್ ಫ್ಯಾಕ್ಟರಿ ಕಾರ್ಮಿಕರ ನಿರಂತರ ದುಡಿಮೆ ಕುರಿತಂತೆ ಒಂದು ಕವನ ಇಲ್ಲಿದೆ ತಪ್ಪದೇ ಓದಿ...

International Workers' Day poem Anjali Ramanna, Bangalore

ದುಂಡು ತ್ರಿಕೋನ ಕತ್ತರಿ ಚೌಕದ ಹೊಲಿಗೆ
ನವಿಲ ಕಣ್ಣು ಪೋಲ್ಕಾ ಡಿಜೈನ್ ಪಕಳೆಗಳೊಳಗೆ ತೂರಿ ನಕ್ಷತ್ರ
ಸೆರಗಿಗೆ ನೆಟ್ ಹಿಮ್ಮಡಿಯಂಚಿಗೆಂದೇ ಫಾಲ್ಸ್
ಬಾಟಿಕ್ ಪ್ರಿಂಟ್ ಓರೆಕೋರೆಯಾಗದ ಜಿಗ್ ಜಾಗ್ ತುದಿಗೆ
ಗುಂಡಿಗಳ ಜೋಡಿಸಿ ಅಂಚೆರಡು ಸೇರಿಸಿ ಲೇಸು ಮಾಡಿಬಿಡುತ್ತಾಳೆ
ಇಲ್ಲೊಬ್ಬ ಕಸೂತಿ ಹುಡುಗಿಯಿದ್ದಾಳೆ
ಸಣ್ಣ ಕಣ್ಣಿನ ಸೂಜಿಯೊಳಕ್ಕೆ ದಾರ ಪೋಣಿಸಿ
ಹೈ ನೆಕ್ ವೀ ನೆಕ್ ಡೀಪ್ ನೆಕ್
ಎಡಕ್ಕೆ ನಕ್ಕಿಯಿಟ್ಟು ಬಲದಲ್ಲಿ ಚಮಕಿ ಬಿಟ್ಟು
ನೆರಿಗೆಗಳ ಮೇಲೆ ಮೇಲೊಂದರಂತೆ ಒತ್ತರಿಸಿ
ಗುಂಡಿಗಳ ಜೋಡಿಸಿ ಅಂಚೆರಡು ಸೇರಿಸಿ ಲೇಸು ಮಾಡಿಬಿಡುತ್ತಾಳೆ
ಹೀಗೊಬ್ಬ ಕಸೂತಿ ಹುಡುಗಿಯಿದ್ದಾಳೆ
ಕಾಲುಗಳನ್ನು ಒತ್ತುತ್ತಾ ಕೈ ಬಂಡಿ ತಿರುವುತ್ತಾ
ಜಿಪ್ ಎತ್ತರಿಸಿ ನಡು ಬಿಗಿಯಾಗಿಸಿ
ಸ್ಲೀವ್ ‍ಲೆಸ್ ಪುಶ್ ‍ಬ್ಯಾಕ್ ಉದ್ದನೆಯ ಲಂಗ
ಕೆಂಪು ಗೌನುಗಳಿಗೆ ಫ್ರಿಲ್ಸ್ ಸೇರಿಸುತ್ತಾ
ಗುಂಡಿಗಳ ಜೋಡಿಸಿ ಅಂಚೆರಡು ಸೇರಿಸಿ ಲೇಸು ಮಾಡಿಬಿಡುತ್ತಾಳೆ
ಇಲ್ಲಿ ಕಸೂತಿ ಹುಡುಗಿಯೊಬ್ಬಳಿದ್ದಾಳೆ
ಹಿಡಿದು ಎಳೆದರೆ ಹರಿದು ಹೋಗುವ ಭಯ
ಬಿಳಿ ಜಾಲಕ್ಕೆ ಕ್ರೋಶದ ಕಡ್ಡಿ ಚುಚ್ಚಿ
ಉಬ್ಬು ತಗ್ಗಿಗೆ ಡಾಟ್ಸ್ ಕಠೋರಿ ಕಟ್ ಕೊಟ್ಟು
ಡಬಲ್ ಹೊಲಿಗೆ ಬಿದ್ದರೆ ಪೋಷಾಕಿನ ಅಭಯ
ಗುಂಡಿಗಳ ಜೋಡಿಸಿ ಅಂಚೆರಡು ಸೇರಿಸಿ ಲೇಸು ಮಾಡಿಬಿಡುತ್ತಾಳೆ
ಆಹಾ ! ಎನಿಸುವಂಥ ಕಸೂತಿ ಹುಡುಗಿಯಿದ್ದಾಳೆ
ಕಾರ್ಖಾನೆಯ ಸೈರನ್ ಕೂಗುತ್ತಲೇ
ಗಾರ್ಮೆಂಟ್ ‍ಗೆ ದಪ್ಪ ಟಾಕ ಸಣ್ಣ ಹೆಮ್ಮಿಂಗ್
ಅನಾರ್ಕಲಿ ಅಂಬ್ರೆಲ್ಲಾ ಮಾದರಿಗಳು
ಹೊಲಿಗೆಗಳ ನಡುನಡುವೆ ಮೌನವನು ಇರಿಸುತ್ತಲೇ
ಗುಂಡಿಗಳ ಜೋಡಿಸಿ ಅಂಚೆರಡು ಸೇರಿಸಿ ಲೇಸು ಮಾಡಿಬಿಡುತ್ತಾಳೆ
ನಗು ನಗುತ್ತಾ ಈ ಹುಡುಗಿ ಕಸೂತಿಯಾಗಿಬಿಡುತ್ತಾಳೆ !
English summary
May 1 ‍X 365 she is alive so am I too!..a poem on Garment Factory workers on the eve of International Workers' Day by Anjali Ramanna, Bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X