•  

ಒಬಾಮಾಗೆ ಸ್ವಾಗತ ಸುಸ್ವಾಗತ

ಶನಿವಾರ, ನವೆಂಬರ್ 6, 2010, 10:19 [IST]
Barack Obama, President of America
ದಿನಪತ್ರಿಕೆಯೊಂದರ ಮುಖಪುಟದಲ್ಲಿ ಚಂದ್ರಶೇಖರ ಕಂಬಾರರ ಕವನ 'ಒಬಾಮಾಗೆ ಸ್ವಾಗತ' ಪ್ರಕಟಗೊಂಡಿದೆ. ಅದಕ್ಕೆ ಪ್ರತಿಯಾಗಿ ನಾನಿಲ್ಲಿ ಅದೇ ಧಾಟಿಯಲ್ಲಿ, ಆದರೆ ಭಿನ್ನ ನೆಲೆಯಲ್ಲಿ 'ಒಬಾಮಾಗೆ ಸುಸ್ವಾಗತ' ಕೋರುತ್ತಿದ್ದೇನೆ. ಈ ಅಣಕವಾಡನ್ನು ಕಂಬಾರರು ಮನ್ನಿಸುವರೆಂದುಕೊಳ್ಳುತ್ತೇನೆ.

* ಎಚ್. ಆನಂದರಾಮ ಶಾಸ್ತ್ರೀ

ಪಡುವಣದಲ್ಲಿ ಓಲಗಗೊಂಡವರು
ಮೂಡಲಿಗೆ ಪಯಣಿಸುವುದೇನು ಹಿರಿದಲ್ಲ,
ಪಾದ ಬೆಳೆಸಿರಿ ಸ್ವಾಮೀ, ಭೂಮಿ ಒಂದೇ

ಮೊದಮೊದಲು ಸ್ವದೇಶೀ
ಜಪ ಮಾಡಿಕೊಂಡಿದ್ದವರು,
ನೀವು ಬರುವುದು ಗೊತ್ತಾದದ್ದೆ
ಜಪ ಜಾರಿ ವ್ರತಗೆಟ್ಟೆವೆಂದುಕೊಳ್ಳದಿರಿ
ಐಡಿಯಾಗಳಿವೆ ಇಂಡಿಯಾದಲ್ಲಿ ನಮ್ಮವೇ.
ಜಾತಕ ಜನನ ನಕ್ಷತ್ರ ತಿಥಿ ನೋಡದೆ
ಶನಿವಾರ ಸಿಂಗಾರಾಗಿ
ಅಂಗಾರದಂತೆ ಬರುವ ನಿಮ್ಮನ್ನು ತಣಿಸಲು
ಮತ್ತು ನಿಮಗೇ ಉಣಿಸಲು
ಐಡಿಯಾಗಳಿವೆ ನಮ್ಮಲ್ಲಿ.
ನೀವು ಭಿಕ್ಷೆ ನೀಡುವುದೆಷ್ಟೆಂದು
ಅಂದಾಜು ಹಾಕುವ ದರಿದ್ರರಲ್ಲ ನಾವು,
ನಿಮಗೇ ದುಡಿಮೆಯ ಐಡಿಯಾ ಕೊಟ್ಟೇವು

ನೀವು ನಮಗೇನಂದರೂ ತಾಳಿಕೊಳ್ಳಲು
ನೀವೇ ನಮ್ಮ ಗತಿಯಲ್ಲ, ಕೇವಲ ಅತಿಥಿ;
ಸತ್ಕರಿಸುವುದು ನಮ್ಮ ಪದ್ಧತಿ;
ಸತ್ಕರಿಸುತ್ತೇವೆ ಬನ್ನಿ.
ನೀವು ಕಣ್ಣು ಮುಚ್ಚಿದ್ದೆ ಅಮಾವಾಸ್ಯೆ,
ತೆರೆದದ್ದೆ ಹುಣ್ಣಿಮೆ
ಅಂದುಕೊಳ್ಳದಿರಿ, ಆ ಕಾಲ ಹೋಯ್ತು.
ಮಣ್ಣು ಮುಕ್ಕಿದಿರಿ ಆರ್ಥಿಕ ಹಿಂಜರಿತದಿಂದ ನೀವು;
ಕೂದಲೂ ಕೊಂಕದೆ ಮುನ್ನಡೆದೆವು ನಾವು.
ಮಹೇಂದ್ರಜಾಲವ ಹರಡಿ ನೀವು
ಪ್ರಪಂಚದ ಮೂಲೆ ಮೂಲೆಗು ಕಣ್ಣು ನೆಟ್ಟು
ಗುರಿಯಿಟ್ಟರೂ
ಮಾಹಿತಿತಂತ್ರಜ್ಞಾನದ ಜಾಲದಲ್ಲಿ
ನಮಗೆ ಬಂಧಿ! ನಮ್ಮನ್ನು ಬಿಟ್ಟಿರಲಾರದ
ಇಬ್ಬಂದಿ ಪಾಪ ನಿಮಗೆ!

ಅದ್ಯಾವುದೋ ಕೊಚ್ಚೆ ಕೊಳೆಗೇರಿಗೆ ಹೋಗಿ
ನೀವು ಫೋಟೋ ಹಿಡಿಸಿಕೊಂಡಾಕ್ಷಣ
ಅದೇ ಕೇಂದ್ರವೆಂದುಕೊಳ್ಳಬೇಡಿ
ನಿಮ್ಮ ಕಾರಸ್ಥಾನಕ್ಕೆ; ಭಾರತದ ತಾಕತ್ತು ಅಲ್ಲುಂಟು.
ಮನದ ಕೊಳೆಗೇರಿ ನಿಮ್ಮಲ್ಲುಂಟು,
ನಮ್ಮಲ್ಲಿಲ್ಲ

ಏನ ಮಾಡಿದರೂ ಆಕಾಶದ ಸ್ಕ್ರೀನಿನ ತುಂಬ
ನಿಮ್ಮದೇ ಕಥೆ; ಆದರೆ ಇಡೀ ಜಗತ್ತಿಗೆ ಗೊತ್ತು,
ಅದು ನಿಮ್ಮ ಯುದ್ಧದಾಹದ ವ್ಯಥೆ

ನಿಮ್ಮ ಸ್ವಾಗತಕ್ಕೆಂದೇ ಸೇರಿದ್ದೇವೆ
ಕುಲ ಹದಿನೆಂಟು ಹಿರೀಕರು.
ಹಗಲ ದೀವಟಿಗೆ ಹಿಡಿದಾರು
ನಮ್ಮ ಕೊಳಕು ರಾಜಕಾರಣಿಗಳು;
ಆದರೆ ನಿಮಗೆ ಎಷ್ಟೋ ಅಷ್ಟೇ ಮರ್ಯಾದೆ
ಕೊಡುವವರು ನಾವು, ಇಲ್ಲಿನ ಪ್ರಜೆಗಳು

ಕಾಣಿಕೆ ಕೊಡಲು ನಿಮ್ಮಲ್ಲೇನಿದೆ ಅಣುಬಾಂಬು ಬಿಟ್ಟು?
ನಮ್ಮಲ್ಲಿದೆ ನೋಡಿ ಸಂಸ್ಕೃತಿ, ಮೇಧಾಶಕ್ತಿ, ಜೊತೆಗೆ
ಅಕ್ಕರೆಯೊಡನೆ ದೀವಳಿಗೆಯ ಒಬ್ಬಟ್ಟು.

ಗಾದಿಯೇರಿದಕೂಡಲೆ
ಮಹಾತ್ಮ ಗಾಂಧಿಯನ್ನು ನೆನೆದವರು ನೀವು.
ಬನ್ನಿ ಗಾಂಧೀಜಿಯ ಪುಣ್ಯಭೂಮಿಗೆ;
ತಾಗಲಿ ಈ ನೆಲದ ಮಣ್ಣು ನಿಮಗೆ;
ಪಾವನರಾಗಿರಿ,
ಬನ್ನಿ, ಸುಸ್ವಾಗತ.

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7
User Comments
ಶೇಷಾದ್ರಿ ಆರ್ 09 Nov 2010 10:51 pm
ತುಂಬಾ ಚೆನ್ನಾಗಿದೆ. ಭಾರತದ ಸಂಸ್ಕೃತಿಗೆ ಎತ್ತಿದ ಕನ್ನಡಿಯಂತಿದೆ .
ಎಚ್ ಆನಂದರಾಮ ಶಾಸ್ತ್ರೀ 08 Nov 2010 02:22 pm
ಪ್ರತಿಕ್ರಿಯಿಸಿರುವ ಎಲ್ಲ ಸಹೃದಯಿ ಮಿತ್ರರಿಗೂ ಹೃತ್ಪೂರ್ವಕ ಧನ್ಯವಾದಗಳು.
ಚಂದ್ರು 08 Nov 2010 04:11 pm
ಆನಂದರಾಮ ಶಾಸ್ತ್ರಿ ಗಳೇ ನಿಮಗೆ ವಂದನೆಗಳು. ನಿಮ್ಮನ್ನು ನೋಡಿ ಕಂಬಾರರು ಕಲಿಯುವುದು ಸಾಕಷ್ಟಿದೆ. ಅವರ ಬಿಕ್ಷೆ ನಮಗೇಕೆ. ನಾವೇ ಅವರಿಗೆ ಬಿಕ್ಷೆ ನೀಡುವ ಅವಕಾಸವಿದೆ. ಒಬಾಮ ಏನು ದೇವರೇ? ಬೇಕಿದ್ದರೆ ಅವ್ನು ಕಂಬಾರರಿಗೆ ಬಿಕ್ಷೆ ನೀಡಲಿ. ಭಾರತಕ್ಕಲ್ಲ.
[ ಅಭಿಪ್ರಾಯ ಬರೆಯಿರಿ ]
IPL, Himachal Pradesh Cricket Association Stadium, Dharmasala
Kings XI Punjab: 71 / 3, 11 Overs
1st Test , Lord's Cricket Ground, St John's Wood
West Indies: 94 / 3, 35.1 Overs
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article