ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೇ ಶಬ್ದ

By Staff
|
Google Oneindia Kannada News

Jayanth Kaikiniಡಿಸೆಂಬರ್ 28, 2008ರ ಭಾನುವಾರ ಜಯಂತ್ ಕಾಯ್ಕಿಣಿ ಅವರ ಹೊಸ ಕವನಗಳ ಸಂಕಲನ 'ಒಂದು ಜಿಲೇಬಿ' ಬೆಂಗಳೂರಿನಲ್ಲಿ ಬಿಡುಗಡೆ ಆಯಿತು. ಸಂಕಲನದಿಂದ ಆಯ್ದ ಒಂದು ಕವನ 'ಕೊನೇ ಶಬ್ದ'ವನ್ನು ಇಲ್ಲಿ ನೀಡಲಾಗಿದೆ. ಇದು ಸ್ವತಃ ಕವಿಯೇ ಆಯ್ದು ಕಳಿಸಿದ ಕವನ.


* ಜಯಂತ್ ಕಾಯ್ಕಿಣಿ, ಬೆಂಗಳೂರು

ಕವಿತೆಯ ಕೊನೇ ಶಬ್ದ ಎಲ್ಲೋ ನೋಡುತಿದೆ
ಕಿಟಕಿ ಸೀಟಿನ ಮಗುವಿನಂತೆ
ಅದಕೆ ಒಳಗಿದ್ದೂ ಹೊರಗೆ ನೋಡುವ ಭಾಗ್ಯವಿದೆ

ಕೆಲವರು ಅನ್ನುತ್ತಾರೆ ಅಲ್ಲೇ ಮುಗಿಯುವುದು ಎಲ್ಲ
ಅಥವಾ ಅಲ್ಲಿಂದಲೇ ಆರಂಭ
ಪೂರ್ಣಗೊಳಿಸಲಾಗದು ಕವಿತೆಯನ್ನು
ಕಠೋರವಾಗಿ ತ್ಯಜಿಸಿ ಮುಂದರಿಯಬೇಕು
ಪರ್ವತಾರೋಹಿಗಳು ಕೈಲಾಗದ ಸಹಯಾತ್ರಿಯನ್ನು
ಹಿಂದೆ ಬಿಟ್ಟಂತೆ

ಬಾಡಿಗೆಗೆ ಬಂದ ಶಬ್ದಗಳು
ತಮ್ಮ ಕೆಲಸ ತಾವು ಮಾಡಿಕೊಂಡು ಸುಮ್ಮನಿದ್ದರೆ ಚೆನ್ನು
ತುಂಬ ದೂರ ನಡೆದು ಬಂದಿವೆ ಅವು
ನಾಲಿಗೆಯ ಮೇಲೆ

ಹಳೆಯ ತಿರುವುಗಳನ್ನು ಹೊಸ ಕನಸಿನಲ್ಲಿ ಕಂಡಿವೆ
ಬಾವಿಯಲ್ಲಿ ಬಿದ್ದ ಕೊಡದಂತೆ
ಯುಗಾಂತರಗಳ ನಂತರ ಮನಸಿನಲ್ಲಿ ಎದ್ದಿವೆ

ಸಿಕ್ಕಂತೆ ನೀರವ ತೀರದಲ್ಲೊಂದು ಸಂಜೆ ಬೆಳಕಿನ ಚಿಪ್ಪು
ಅಥವ ಸಂತೆಯ ಮರುದಿನ ಬಯಲಲ್ಲಿ
ಒಂಟಿ ಬೇಬಿ ಶೂಸು
ಸಿಗುತ್ತದೆ ಶಬ್ದ ಕೆಲವರಿಗೆ

ಗುಜರಿ ಅಂಗಡಿಯ ಅನಾಥ ಕನ್ನಡಿಯಂತೆ
ಬಾ ಮುಖ ನೋಡಿಕೋ ಎನ್ನುತ್ತವೆ
ಕೆಲವಂತೂ ಚಹಾದಲ್ಲಿ ಕೈ ತಪ್ಪಿ ಮುಳುಗಿ
ತಳ ಸೇರಿದ ಬಿಸ್ಕೀಟೀನಂತೆ
ಇದ್ದ ಹಾಗೆ ಊದಿಕೊಂಡು ಭಯ ಹುಟ್ಟಿಸುತ್ತವೆ

ನತದೃಷ್ಟ ಶಬ್ದಗಳಷ್ಟೆ ಕವಿತೆಯ
ತಲೆಬರಹವಾಗುತ್ತವೆ
ಕೈದಿಯ ಕೊರಳಿನ ಸ್ಲೇಟಿನ ನಂಬರಿನಂತೆ

ಕವಿತೆಯ ಒಳಗೆ ಸೀದಾ ಬಂದು ಕೂತ ಶಬ್ದಕ್ಕೋ
ಅದರದೇ ಅಲ್ಪ ಮುಕ್ತಿಯ ಭ್ರಮೆ
ಏಕೆಂದರೆ ತಕ್ಷಣ ಅದು ಯಾರ ಕಣ್ಣಿಗೂ ಬೀಳುವುದಿಲ್ಲ
ಅಥವಾ ಮುಂದಿನ ಸಾಲಿಗೆ ಜಿಗಿಯಲೇ ಬೇಕು
ಅಂತ ಕಾನೂನೇನಿಲ್ಲ ಬಿದ್ದು ಕಾಲು ಮುರಕೊಂಡರೂ
ನಿಶ್ಯಬ್ದದ ಪ್ರಪಾತದಲ್ಲಿ ಕೂಗು ಬೇಗ ಮೇಲೆ ಬರುವುದಿಲ್ಲ

ಇಷ್ಟಾಗಿ ಕವಿತೆ ಯಾರದು
ಕವಿಯದಂತೂ ಖಂಡಿತ ಅಲ್ಲ
ಹಾಗಿದ್ದರೆ ಖಂಡಿತ ಹೀಗೆ ಅವ
ಪೇಟೆಯಲ್ಲಿ ಬಿಟ್ಟು ಹೋಗುತ್ತಿರಲಿಲ್ಲ

ಆದರೆ ಎಲ್ಲೋ ನೋಡುತ್ತಿರುವ
ಕವಿತೆಯ ಕೊನೇ ಶಬ್ದ ಮಾತ್ರ ಹೇಗೆ
ಶಾಲೆಗೆ ಮೊದಲ ದಿನ ನೂಕಲ್ಪಡುತ್ತಿರುವ ಶಿಶುವಿನಂತೆ
ತನ್ನೆರಡೂ ಪುಟಾಣಿ ಕೈಗಳಿಂದ ಬಿಗಿದು
ಅವಚಿಕೊಂಡಿದೆ ಕವಿತೆಯ ಕೊರಳನ್ನು
ಮರಣ ಭಯದಲ್ಲಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X