ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮಸೂತ್ರ

By Staff
|
Google Oneindia Kannada News


ಕನ್ನಡ ಕಾವ್ಯ ಪ್ರಪಂಚದಲ್ಲಿ, ಸಹೃದಯರು ಮತ್ತು ವಿಮರ್ಶಕರ ಗಮನಸೆಳೆದ ಪದ್ಯಗಳಲ್ಲಿ ಇದೂ ಒಂದು. ಈ ಪದ್ಯವನ್ನು ತೆರೆದ ಹೃದಯದಿಂದ ಸುಮ್ಮನೇ ಓದಿಕೊಳ್ಳಿ. ನಿಮ್ಮಲ್ಲಿ ಸಂದೇಹಗಳು ಉಳಿದರೆ, ಇನ್ನೊಂದು ಸಲ ಓದಿ. ಓದಿದ ಮೇಲೆ ಏನಾದರೂ ಬರೆಯ ಬೇಕು ಅನ್ನಿಸಿದರೆ ನಮಗೆ ಬರೆದು ಕಳಿಸಿ. ಈ ಪದ್ಯದ ಬಗ್ಗೆ ಜೋಗಿ ವಿಮರ್ಶೆ ಓದಲು, ಗುರುವಾರದ ತನಕ ದಯವಿಟ್ಟು ಕಾಯಿರಿ.*ಸಂಪಾದಕ


  • ಗಂಗಾಧರ ಚಿತ್ತಾಲ
Kamasuthra A Kannada Poem by Gangadhara Chittala

ಅಂದು ಬೆತ್ತಲೆ ರಾತ್ರಿ

ಅರಿವೆ ಇರಲಿಲ್ಲ ಪರಿವೆ ಇರಲಿಲ್ಲ
ಅರೆನಾಚಿ ಮರೆಮಾಚಿ ಸರಿವುದಿರಲಿಲ್ಲ
ಜೀವ ಝಲ್ಲೆನೆ ಪೂರ್ಣ ನಗ್ನರಾಗಿ
ಒಬ್ಬರಲ್ಲೊಬ್ಬರು ನಿಮಗ್ನರಾಗಿ
ಮೊದಲ ನಂದನದಲ್ಲಿ ಸೆಳೆದ ಹಸಿವು
ಮತ್ತೆ ಹೊಡಕರಿಸೆ ನಂದದಲೆ ತುಸುವೂ
ಕೊಂಬೆಕೊಂಬೆಗೆ ತೂಗಿ ಬೀಗಿ ಬಯಕೆಯ ಹಣ್ಣು
ಹೊಡೆಯೆ ಕಣ್ಣು

ತಡೆಯಲಾರದೆ ಬಂದೆವೆದುರುಬದುರು
ಮೈಯೆಲ್ಲ ನಡುಕ, ತುಟಿಯೆಲ್ಲ ಅದುರು
ಅಂದು ಬೆತ್ತಲೆ ರಾತ್ರಿ

ಏನು ಮಿದು ನುಣುಪು ಸರ್ವಾಂಗ ಸ್ಪರ್ಶ
ಉಗುರು ಬೆಚ್ಚಗೆ, ಹಗುರು, ಆಹಾ ಜೀವಂಕರ್ಷ
ಮೈಯ ತಬ್ಬಿತು ಮೈಯ ನಗುವು ಹರ್ಷ

ಗುಬ್ಬಕ್ಕಿ ಮೊಲೆ ಬಂದು ಮುದ್ದಾಡಿದುವು ಎದೆಗೆ
ಮಿದ್ದಿದೊಲು ತೊಡೆ ಬಂದು ತೆಕ್ಕೆಯಿಟ್ಟವು ತೊಡೆಗೆ

ತುಟಿಗೆ ತುಟಿ ಮುಟ್ಟಿಸಿತು ಎಂಥ ಮಾತು
ಕಂಠನಾಳದಲೆಲ್ಲ ನಾಗಸಂಪಗೆಯಂತೆ ಉಸಿರು ಹೂತು
ಬಾಯ್ತುಂಬ ಜೇನು, ಕೈತುಂಬ ಮೊಲೆಹೂ
ಮಗ್ಗುಲು ತಿರುವಿದಲ್ನೆಲ್ಲ ಸುಖದ ಉಲುಹು

ಬೆದೆಯ ಕಾವಿಗೆ ಸಿಕ್ಕು ಮೆತ್ತೆ ಮೆತ್ತೆ
ಬಿಗಿದಪ್ಪಿ ಮುತ್ತಿಟ್ಟು ಮತ್ತೆ ಮತ್ತೆ
ತುಟಿ ತೆರೆದು ಕಟಿ ತೆರೆದು ಎಲ್ಲ ತೆರೆದು
ಒಡಲ ಹೂವನ್ನರಸಿ ಹೊಕ್ಕು ಬೆರೆದು

ಇದು ಬಯಕೆ, ಇದು ಹಸಿವೆ, ಇದುವೆ ದಾಹಾ
ಒಂದೆ ಉಸಿರಿನಲ್ಲಿತ್ತು ಅಯ್ಯೋ ಆಹಾ

ಹೊಲದುದ್ದ ನಡೆದಿತ್ತು ನೇಗಿಲ ಮೊನೆ
ಬಸಿರೆಲ್ಲ ಬಿರಿದು ಜೊಲ್ಲುಕ್ಕಿ ಸುರಿದು
ಬಸಿದು ಹೊರಚೆಲ್ಲಿತ್ತು ಜೀವದ ಸೊನೆ
ಅಂದು ಬೆತ್ತಲೆ ರಾತ್ರಿ

ತೆರೆದೆ ಇದೆ ಬಾಗಿಲವು, ನೇರ ಒಳ ಬಾ ಎಂದೆ
ನನ್ನ ಎದೆಕದವನೂ ತೂರಿ ನೀ ಒಳಬಂದೆ
ಏನು ಸುಮಧುರ ಸಹಜವೀ ಪ್ರವೇಶ

ಬೇಕಾದ್ದ ತಿನು ಎಂದೆ
ನನ್ನ ತೋಳುಗಳಲ್ಲಿ ಇಡಿಯ ನೀನು
ಬೇಕಾದ್ದ ತಕೋ ಎಂದೆ
ನಿನ್ನ ತೋಳುಗಳಲ್ಲಿ ಇಡಿಯ ನಾನು

ಆ ಒಂದು ಗಳಿಗೆಯಲಿ ಏನು ಗೈದರು ಮಾಫಿ
ಕಾಡಿದರು ಬೇಡಿದರು ಹಿಡಿಹಿಡಿದು ಆಡಿದರು ಮಾಫಿ
ಸಂದಿಯಲಿ ಮೂಲೆಯಲಿ ಕೈಹಾಕಿ ಬೆದಕಿದರು,
ಯಾವ ಗುಟ್ಟನು ಕೆದಕಿದರು ಮಾಫಿ

ಬರಿಗೈಲೆ ಬಂದು ಪರೆಕಳಚಿ ನಿಂತು
ಬೇಕಾದ್ದ ತಿನಿಸಿ ಬೇಕಾದ್ದ ತಿಂದು

ಕೊಟ್ಟುದೆನಿತು ನಾವು ಕೊಂಡುದೆನಿತು
ಉಣ್ಣಿಸಿದುದೆನಿತು ಉಂಡುದೆನಿತು
ಕಣ್ಮುಚ್ಚಿಯೂ ಕೂಡ ಕಂಡುದೆನಿತು
ಮಾತಿಲ್ಲದೆಯೂ ಕೂಡ ಅಂದುದೆನಿತು

ಅಂದು ಬೆತ್ತಲೆ ರಾತ್ರಿ
ಒಡಲಿಗೊಡಲನು ಬೆಸೆದು ನಿನ್ನ ಬಳಿ ಸಾರೆ
ಏಕಾಂತ ಸಮ್ಮತಿಯ ಆ ಒಂದು ಕ್ಷಣದಿಂದೆ
ಈ ಜಗತ್ತೇ ಬೇರೆ.

ಯಾವ ಹಿಗ್ಗಿನ ಸೆಲೆಯೋ ನಮಗೆ ಸಿಲುಕಿ
ಇಳೆಯ ಮೂಲಕು ನಮ್ಮ ಬೇರು ನಿಲುಕಿ

ಭೂಗರ್ಭ ಸುರಿದಿತ್ತು ಜೊಲ್ಲುಬಾಯಿ
ನಾವಿಂದು ಮನುಕುಲದ ತಂದೆತಾಯಿ

ಈ ಕವಿತೆಗೆ ಜೋಗಿ ಬರೆದ ಟಿಪ್ಪಣಿ ನೋಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X