ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುರಿಗಳು, ಸಾರ್‌, ಕುರಿಗಳು

By Staff
|
Google Oneindia Kannada News


K.S.Nisar Ahmed *ಕೆ.ಎಸ್‌.ನಿಸಾರ್‌ ಅಹಮದ್‌

:
ಸಾಗಿದ್ದೇ
ಗುರಿಗಳು.
ಮಂದೆಯಲಿ ಒಂದಾಗಿ, ಸ್ವಂತತೆಯೆ ಬಂದಾಗಿ
ಇದರ ಬಾಲ ಅದು ಮತ್ತೆ ಅದರ ಬಾಲ ಇದು ಮೂಸಿ,
ದನಿ ಕುಗ್ಗಿಸಿ, ತಲೆತಗ್ಗಿಸಿ
ಹುಡುಕಿ ಹುಲ್ಲು ಕಡ್ಡಿ ಮೇವು, ಅಂಡಲೆಯುವ ನಾವು, ನೀವು,
:
ನಮಗೊ ನೂರು ಗುರಿಗಳು,
ಎಡ ದಿಕ್ಕಿಗೆ ಬಲ ದಿಕ್ಕಿಗೆ, ಒಮ್ಮೆ ದಿಕ್ಕು ಪಾಲಾಗಿ,
ಒಮ್ಮೆ ಅದೂ ಕಳೆದುಕೊಂಡು ತಾಟಸ್ಥ್ಯದಿ ದಿಕ್ಕೆಟ್ಟು
ಹೇಗೆ ಹೇಗೊ ಏಗುತಿರುವ,
ಬರೀ ಕಿರುಚಿ ರೇಗುತಿರುವ,
ನೊಣ ಕೂತರೆ ಬಾಗುತಿರುವ,
ತಿನದಿದ್ದರು ತೇಗುತಿರುವ,
ಹಿಂದೆ ಬಂದರೊದೆಯದ , ಮುಂದೆ ಬರಲು ಹಾಯದ
ಅವರು, ಇವರು, ನಾವುಗಳು
.

ಮಂದೆಯಲ್ಲಿ ಎಲ್ಲವೊಂದೆ ಆದಾಗಲೆ ಸ್ವರ್ಗ ಮುಂದೆ
ಅದಕಿಲ್ಲವೆ ನಾವುತ್ತರ?
ಮೆದುಳಿನಲ್ಲಿ ತಗ್ಗೆತ್ತರ,
ಹಿರಿದು, ಕಿರಿದು ಮಾಯಿಸಿ,
ಒಬ್ಬೊಬ್ಬರಿಗಿರುವ ಮೆದುಳ ಸ್ವಾರ್ಥದ ಉಪಯೋಗದಿಂದ
ಇಡಿ ಮಂದೆಗೆ ಹಾಯಿಸಿ,
ಹೊಟ್ಟೆ ಬಟ್ಟೆಗೊಗ್ಗದಂಥ ಕಲೆಯ ಕರ್ಮಕಿಳಿಯದಂತೆ
ತಲೆ ಬೆಲೆಯ ಸುಧಾರಿಸಿ,
ಬಿಳಿ ಕಪ್ಪಿನ ದ್ವಂದ್ವಗಳಿಗೆ ಮಾಡಿಸಿ ಸಮಜಾಯಿಷಿ,
ನಮ್ಮ ಮೆದುಳು ಶುದ್ಧಿಯಾಗಿ, ಬುದ್ಧಿ ನಿರ್ಬುದ್ಧಿಯಾಗಿ,
ಕೆಂಬಣ್ಣವನೊಂದೆ ಪೂಸಿ,
ಅದರ ಬಾಲ ಇದು ಮತ್ತೆ ಇದರ ಬಾಲ ಅದು ಮೂಸಿ
ನಡೆವ ನಮ್ಮೊಳೆಲ್ಲಿ ಬಿರುಕು ?

ನಮ್ಮ ಕಾಯ್ವ ಕುರುಬರು :
ಪುಟಗೋಸಿಯ ಮೊನ್ನೆ ತಾನೆ ಕಿತ್ತು ಪಂಚೆಯುಟ್ಟವರು
ಶಾನುಭೋಗ ಗೀಚಿದಕ್ಕೆ ಹೆಬ್ಬೆಟ್ಟನು ಒತ್ತುವವರು.
ಜಮಾಬಂದಿಗಮಲ್ದಾರ ಬರಲು ನಮ್ಮಳೊಬ್ಬನನ್ನ
ಮೆಚ್ಚಿ , ಮಸೆದ ಮಚ್ಚ ಹಿರಿದು ಕಚಕ್ಕೆಂದು ಕೊಚ್ಚಿ ಕತ್ತ
ಬಿರಿಯಾನಿಯ ಮೆಹರುಬಾನಿ ಮಾಡಿ ಕೈಯ್ಯ ಜೋಡಿಸುತ್ತ
ಕಿಸೆಗೆ ಹಸಿರುನೋಟು ತುರುಕಿ, ನುಡಿಗೆ ಬೆಣ್ಣೆ ಹಚ್ಚುವವರು.

ಬಿಸಿಲಿನಲ್ಲಿ ನಮ್ಮ ದೂಡಿ, ಮರದಡಿಯಲಿ ತಾವು ಕೂತು
ಮಾತು, ಮಾತು, ಮಾತು, ಮಾತು
ಮಾತಿನ ಗೈರತ್ತಿನಲ್ಲೆ ಕರಾಮತ್ತು ನಡೆಸುವವರು,
ನಮ್ಮ ಮೈಯ ತುಪ್ಪಟವ ರವಷ್ಟು ಬಿಡದ ಹಾಗೆ ಸವರಿ
ಕಂಬಳಿಗಳ ನೇಯುವಂಥ ಯೋಜನೆಗಳ ಹಾಕುವವರು.
ಮಾರಮ್ಮನ ಮುಡಿಗೆ ಕೆಂಪು ದಾಸವಾಳ ಆಯುವವರು
ಬೆಟ್ಟ ದಾಟಿ ಕಿರುಬ ನುಗ್ಗಿ , ನಮ್ಮೊಳಿಬ್ಬರನ್ನ ಮುಗಿಸಿ
ನಾವು ‘ಬ್ಯಾ, ಬ್ಯಾ’ ಎಂದು ಬಾಯಿ ಬಾಯಿ ಬಡಿದುಕೊಂಡು
ಬೊಬ್ಬೆ ಹಾಕುತಿದ್ದರೂ
ಚಕ್ಕ ಭಾರ ಆಟದಲ್ಲೆ ಮಗ್ನರು ಇವರೆಲ್ಲರು
ನಮ್ಮ ಕಾಯ್ವ ಗೊಲ್ಲರು.

ದೊಡ್ಡಿಯಲ್ಲಿ ಕೂಡಿಹಾಕಿ ನಿಲ್ಲಲಿಲ್ಲ , ಕೂರಲಿಲ್ಲ ,
ಎದ್ದರೆ ಸರಿದಾಡಲಿಲ್ಲ , ಬಿದ್ದರೆ ಹರಿದಾಡಲಿಲ್ಲ ,
ದೀಪದ ದೌಲತ್ತು ಇಲ್ಲ ,
ಗಾಳಿಯ ಗಮ್ಮತ್ತು ಇಲ್ಲ ,
ಕಿಂಡಿಯಿಂದ ತೆವಳಿ ಬಂದ ಗಾಳಿ ಕೂಡ ನಮ್ಮದೇನೆ :
ನಮ್ಮ ಮುಂದೆ ಕುರಿಯ ಸುಲಿದು ಆಚೆ ಅಲ್ಲಿ ಉಪ್ಪು ಸವರಿ
ಒಣಗಲಿಟ್ಟ ಹಸಿ ತೊಗಲಿನ ಬಿಸಿ ಬಿಸಿ ಹಬೆ ವಾಸನೆ,
ಇರಿಯುತಿಹುದು ಮೂಗನೆ !
ಕೊಬ್ಬಿರುವೀ ಮಬ್ಬಿನಲ್ಲಿ , ಮೈ ನಾತದ ಗಬ್ಬಿನಲ್ಲಿ
ಇದರ ಉಸಿರು ಅದು ಮತ್ತೆ ಅದರ ಉಸಿರು ಇದು ಮೂಸಿ
ಹೇಸಿದರು ನಿಭಾಯಿಸಿ,
ತಾಳ್ಮೆಯನೆ ದಬಾಯಿಸಿ,
ನಮ್ಮ ನಾವೆ ಅಂದುಕೊಂಡೊ, ಉಗುಳುನುಂಗಿ ನೊಂದುಕೊಂಡೊ,
ನಂಬಿಕೊಂಡು ಏಗುತ್ತಿರುವ ನಾವು, ನೀವು, ಇಡೀ ಹಿಂಡು
.

ತಳವೂರಿದ ಕುರುಬ ಕಟುಕನಾದ ; ಅವನ ಮಚ್ಚೊ ಅಹ!
ಏನು ಝಳಪು, ಏನು ಹೊಳಪು, ಏನು ಜಾದು, ಏನು ಮೋಹ!
ಆ ಹೊಳಪಿಗೆ ದಂಗಾಗಿ ಕಣ್ಣಿಗದೇ ರಂಗಾಗಿ,
ಒಳಗೊಳಗೇ ಜಂಗಾಗಿ
ಕಣ್ಣು ಕುಕ್ಕಿ, ಸೊಕ್ಕಿರುವ, ಹೋಗಿ ಹೋಗಿ ನೆಕ್ಕಿರುವ,
ಕತ್ತನದಕ್ಕೆ ತಿಕ್ಕಿರುವ
ನಾವು, ನೀವು, ಅವರು, ಇವರು
!

ಮಚ್ಚಿನ ಆ ಮೆಚ್ಚಿನಲ್ಲಿ ಅದರಾಳದ ಕಿಚ್ಚಿನಲ್ಲಿ
ಮನೆ ಮಾಡಿವೆ ಹುಚ್ಚಿನಲ್ಲಿ
ನಮ್ಮೆಲ್ಲರ ಗುರಿಗಳು !
....

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X