ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ನಡುವಿನ ಅಪರೂಪದ ಕತೆಗಾರ ವಸುಧೇಂದ್ರ

|
Google Oneindia Kannada News

Vasudhendra
ಫೆಬ್ರವರಿಯಲ್ಲಿ ಮೇ ಫ್ಲವರ್ ಅಂಗಳದಲ್ಲಿ ನಮ್ಮ ನಡುವಿನ ಅಪರೂಪದ ಕತೆಗಾರ ವಸುಧೇಂದ್ರರೊಡನೆ ಒಂದು ಮಾತು-ಕತೆ ಕಾರ್ಯಕ್ರಮ ನಡೆಯಿತು. ಹಂಪಿ ಎಕ್ಸ್‌ಪ್ರೆಸ್ಸ್ ಕೃತಿ ಮಾಸ್ತಿ ಕಥಾ ಪ್ರಶಸ್ತಿಯನ್ನು ಗಳಿಸಿರುವ ಈ ಸಂದರ್ಭದಲ್ಲಿ ಅಂದು ನಡೆದ ಮಾತುಕತೆಯಲ್ಲಿ ನೆನಪಿನಲ್ಲಿರುವ ಕೆಲವು ತುಣುಕುಗಳು ಇಲ್ಲಿವೆ.

* ರಾಧಿಕಾ ಎಂ.ಜಿ.

ತಮ್ಮ ಕುಟುಂಬದಲ್ಲಿ ಸಾಹಿತ್ಯಿಕ ವಾತಾವರಣವಿಲ್ಲದಿದ್ದರೂ ಬಹುಶಃ ತಾವು ಕತೆಗಾರರಾಗಿದ್ದಕ್ಕೆ ಸ್ಪೂರ್ತಿ ತಮ್ಮ ತಾಯಿ ಎನ್ನುತ್ತಾರೆ ವಸುಧೇಂದ್ರ. ಕತೆ ಹೇಳುವುದು, ಬರೆಯುವುದು ಒಂದೇ ಉದ್ದೇಶದ ವಿಭಿನ್ನ ಅಭಿವ್ಯಕ್ತಿಗಳಷ್ಟೇ. ಚಿಕ್ಕಂದಿನಿಂದಲೂ ತಾಯಿಯಿಂದ ಕೇಳಿದ ಕತೆಗಳು ತಾವು ಕತೆಗಾರರಾಗಲು ಪೂರಕವಿರಬಹುದು. ತನ್ನ ಜೀವನದ ಅತಿ ಸಣ್ಣ ವಿಷಯವನ್ನೂ ಮಹತ್ವದ್ದೆಂಬಂತೆ ಅನೇಕ ರಂಜನೀಯ ವಿಶೇಷಣಗಳೊಂದಿಗೆ ಆಕೆ ಹೇಳುತ್ತಿದ್ದ ಪರಿ ಯಾವ ಕತೆ/ಕತೆಗಾರನಿಗೂ ಕಡಿಮೆಯಿರಲಿಲ್ಲ.

ತಮ್ಮ ಸಾಫ್ಟ್‌ವೇರ್ ವೃತ್ತಿ ಜೀವನದಲ್ಲಿ ಪ್ರಪಂಚದ ಹಲವೆಡೆ ಪಯಣಿಸಿರುವ ಇವರು ಲಂಡನ್ನಲ್ಲಿದ್ದಾಗ ಅನೇಕ ಉತ್ತಮ ಚಲನಚಿತ್ರಗಳನ್ನು ನೋಡಿದರು. ಕಚೇರಿಯಲ್ಲಿ ನಿಗದಿತ ವೇಳೆಯಷ್ಟೇ ಕೆಲಸ ಮಾಡುವ ಪರಿಪಾಠವಿರುವ ಆ ದೇಶದಲ್ಲಿ ಅವರಿಗೆ ದೊರೆತ ವಿಫುಲ ವಿರಾಮ ಸಮಯ ಕಳೆಯಲು ಅವರು ರೂಢಿಸಿಕೊಂಡಿದ್ದು ಪ್ರಪಂಚದೆಲ್ಲೆಡೆಯ ಉತ್ತಮ ಚಲನಚಿತ್ರಗಳನ್ನು ನೋಡುವ ಹವ್ಯಾಸ. ಬಹುಶಃ ಆಗಲೇ ತಾವ್ಯಾಕೆ ಕತೆ ಬರೆಯಬಾರದು ಅನಿಸಿದ್ದು. ಒಂದೇ ಸಮನೇ ಅನೇಕ ಕತೆಗಳನ್ನು ಬರೆದರು. ಆದರೆ ಸಾಹಿತ್ಯ ವಲಯದಲ್ಲಿ ಕಂಡು ಕೇಳಿರದ ಇವರ ಕತೆಗಳನ್ನು ಪ್ರಕಾಶಿಸಲು ಯಾರೂ ಮುಂದೆ ಬರಲಿಲ್ಲ. ಈ ಕತೆಗಳನ್ನ ಯಾರು ಓದುತ್ತಾರೆ ಹೋಗ್ರೀ ಎಂದು ಬಾಗಿಲು ತೋರಿಸಿದ್ದೂ ಇದೆ. ಆಗಲೇ ಅವರಿಗೆ ಹೊಳೆದದ್ದು ತಮ್ಮ ಕತೆಗಳನ್ನು ತಾವೇ ಏಕೆ ಪ್ರಕಟಿಸಬಾರದೆಂದು. ಅಂತೆಯೇ ಧೈರ್ಯ ಮಾಡಿ ತಮ್ಮ ಕತೆಗಳನ್ನು ತಾವೇ ಪ್ರಕಟಿಸಿದರು. ಉತ್ತರ ಕರ್ನಾಟಕದ ಸೊಗಡಿರುವ ಒಂದು ಸರಳ, ಚಂದವಾದ ಹೆಸರಿನ ಛಂದ ಪುಸ್ತಕ ಹುಟ್ಟಿದ್ದು ಹೀಗೆ. ಇದೇ ಸಮಯದಲ್ಲಿ ಅವರು ನೆನಸಿಕೊಳ್ಳುವುದು ತಮ್ಮ ಕತೆಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ಕನ್ನಡಪ್ರಭ ಪತ್ರಿಕೆಯನ್ನು. ಹೊಸ ಬರಹಗಾರರಿಗೆ ಎದುರಾಗುವ ಎಡರು ತೊಡರುಗಳನ್ನು ಕಣ್ಣಾರೆ ಕಂಡ ಫಲ ಹೊಸ ಬರಹಗಾರರನ್ನು ತಮ್ಮ ಛಂದ ಪುಸ್ತಕದ ಮೂಲಕ ಪ್ರೋತ್ಸಾಹಿಸಿದ್ದು.

ಈಗಷ್ಟೇ 5 ಯಶಸ್ವೀ ಸಂವತ್ಸರಗಳನ್ನು ಕಂಡಿರುವ ಛಂದ ಪುಸ್ತಕ ಈಗ ಸಾಹಿತ್ಯ ವಲಯದಲ್ಲಿ ಮನೆ ಮಾತಾಗಿದೆ. ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಗಳಲ್ಲಿ ತಾವೇ ಖುದ್ದು ಈ ಪುಸ್ತಕ ತೊಗೋಳ್ಳಿ ಚೆನ್ನಾಗಿದೆ ಎಂದು ಪುಸ್ತಕ ಮಾರಿದ್ದೂ ಇದೆ. ಜೊತೆ ಜೊತೆಗೇ 'ವಸುಧೇಂದ್ರಾನಾ, ಮಡಿ ಮೈಲಿಗೆ ಏನೂ ಇರಲ್ಲ ಇವರ ಬರವಣಿಗೆಯಲ್ಲಿ' ಎಂಬ ಓದುಗರ ನುಡಿಗಳಿಗೆ ಪ್ರತ್ಯಕ್ಷ ಸಾಕ್ಷಿಯಾದದ್ದೂ ಇದೆ.

ಯಶವಂತ ಚಿತ್ತಾಲರು ಒಂದೆಡೆ ಹೇಳಿದ್ದಾರೆ. ಅಮ್ಮ, ನಮ್ಮ ಶಾಲೆಯಲ್ಲಿ ಇವತ್ತು ಏನಾಯ್ತು ಗೊತ್ತಾ? ಅನ್ನುವ ಮಗುವಿನ ಮಾತಿನಲ್ಲೂ ಒಂದು ಕತೆಯಿದೆ ಎಂದು. ಅಂತೆಯೇ ಪ್ರತಿಯೊಬ್ಬರಲ್ಲೂ ಕತೆ ಹೇಳುವ ಪ್ರತಿಭೆಯಿರುತ್ತದೆ ಎನ್ನುವ ವಸುಧೇಂದ್ರ ಕತೆಗಳು ಓದುಗರಿಗೆ ಸುಲಭವಾಗಿ ಅರ್ಥವಾಗುವ ಹಾಗೆ ಸರಳವಾಗಿರಬೇಕು ಅನ್ನುತ್ತಾರೆ. ನಾನು ಬರೆಯುವುದೇ ಹೀಗೆ. ನಿಮ್ಮ ಬುದ್ಧಿಮತ್ತೆಗೆ ಸಾಧ್ಯವಾದರೆ ಅರ್ಥ ಮಾಡಿಕೊಳ್ಳಿ ಎನ್ನುವ ಧೋರಣೆ ಇವರದ್ದಲ್ಲ. ತಮ್ಮ ಛಂದ ಪುಸ್ತಕ ಮುಖೇನ ಅನೇಕ ಎಲೆಮರೆಯ ಬರಹಗಾರರನ್ನು ಪರಿಚಯಿಸಿದ್ದಾರೆ. ಇವರನ್ನು ನೀವು ಒಮ್ಮೇ ಕೇಳಿ ನೋಡಿ, ನಿಮ್ಮ ಪ್ರಕಾಶನದ ಯಾವ ಪುಸ್ತಕ ಚೆನ್ನಾಗಿದೆ ಎಂದು. ತಮ್ಮ ಪುಸ್ತಕಕ್ಕಿಂತ ಇನ್ನೆಲ್ಲರ ಪುಸ್ತಕಗಳೂ ತುಂಬಾ ಚೆನ್ನಾಗಿದೆ. ನನ್ನ ಪುಸ್ತಕ ಓದುವ ಮುನ್ನ ಅವನ್ನು ಓದಿ ಅನ್ನುವ ವಿನಮ್ರ ಮನಸ್ಸು ಅವರದು.

ಕೋಟ್ಯಾಂತರ ಮಂದಿ ಕನ್ನಡಿಗರಿರುವ ನಾಡಿನಲ್ಲಿ ಯಾವುದೇ ಪುಸ್ತಕದ ಒಂದೆರಡು ಸಾವಿರಪ್ರತಿಗಳು ಮಾರಾಟವಾಗುವುದೇ ಒಂದು ಸಾಧನೆಯೆಂದು ಖುಷಿ ಪಡಬೇಕಾದ ಪರಿಸ್ಥಿತಿ ನಿಜಕ್ಕೂ ವಿಪರ್ಯಾಸವಲ್ಲವೇ ಎಂದು ಪ್ರಶ್ನಿಸುತ್ತಲೇ ಹೆಚ್ಚು ಹೆಚ್ಹು ಕನ್ನಡಿಗರು ಬರೆಯುವತ್ತ ಒಲವು ತೋರಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಸಂತಸಪಡುತ್ತಾರೆ. ಪುಸ್ತಕ, ಮಾರಾಟದ ಸರಕಾಗಬಾರದು ಬದಲಿಗೆ ಓದುಗನಿಗೆ ಪುಸ್ತಕದ ಬಗ್ಗೆ ಪ್ರೀತಿ ಹುಟ್ಟಿ ಓದುವ ಹವ್ಯಾಸ ಬೆಳೆಯಬೇಕೆಂಬುದು ಅವರ ಆಶಯ. ಯಾವುದೇ ಬರವಣಿಗೆಯನ್ನು ಸರಿ ತಪ್ಪುಗಳ ಚೌಕಟ್ಟಿನಲ್ಲಿ ನೋಡುವ ಮನೋಭಾವ ಇವರದ್ದಲ್ಲ. ಎಲ್ಲ ಬರವಣಿಗೆಯೂ ಲೇಖಕನ ಪ್ರತಿಭೆಯ, ಪರಿಶ್ರಮದ ಫಲಶ್ರುತಿ ಎಂಬ ಅಭಿಪ್ರಾಯ ಇವರದ್ದು.

ಕತೆಗಳು ಹುಟ್ಟುವುದು ನಾವು ನೋಡಿದ, ಬೆಳೆದು ಬಂದ ಪರಿಸರದಲ್ಲೇ ಎನ್ನುವ ಇವರು, ತಮ್ಮ ಕತೆಗಳನ್ನು ಯಾವುದೇ ಜಾತಿ, ಪಂಥದೊಡನೆ ಗುರುತಿಸಿಕೊಳ್ಳಲು ನಯವಾಗಿಯೇ ನಿರಾಕರಿಸುತ್ತಾರೆ. ಒಬ್ಬ ಬುದ್ಧಿವಂತ ಆದರೆ ಕೆಟ್ಟ ಮನುಷ್ಯನಿಗಿಂತ, ಮುಗ್ಧ ಆದರೆ ಒಳ್ಳೆಯ ವ್ಯಕ್ತಿಯ ಸ್ನೇಹ ಒಡನಾಟವನ್ನು ತಾನು ಇಷ್ಟ ಪಡುವೆ ಎನ್ನುವ ಇವರು, ಕೆಟ್ಟದ್ದು ಯಾವ ರೂಪದಲ್ಲಿ ಬಂದರೂ ಅದು ಕೆಟ್ಟದ್ದೇ ಎಂದು ಖಡಾಖಂಡಿತವಾಗಿ ಹೇಳುತ್ತಾರೆ. ನಾವು ಪ್ರಪಂಚದ ಯಾವ ಮೂಲೆಯಲ್ಲೇ ಇರಲಿ, ಆ ನೆಲದ ಬಗ್ಗೆ ಪ್ರೀತಿ, ಅಭಿಮಾನವಿರಬೇಕೇ ಹೊರತು ಅಲ್ಲಿನ ಕುಂದುಕೊರತೆಗಳ ಬಗ್ಗೆ ಕೊರಗು, ತಿರಸ್ಕಾರ ಮನೋಭಾವ ಇರಬಾರದೆನ್ನುವ ವಸುಧೇಂದ್ರ ಬೆಂಗಳೂರಿನ ಅಂಕೆಯಿಲ್ಲದ ಟ್ರಾಫಿಕ್ ತನ್ನ ಸಾಹಿತ್ಯ ಕೃಷಿಗೆ ಪ್ರೋತ್ಸಾಹದಾಯಕವಾಗಿದೆ ಅನ್ನುತ್ತಾರೆ!

ವಸುಧೇಂದ್ರ ಕತೆ ಬರೆಯಲು ಷುರು ಮಾಡಿದಾಗ ಬ್ಲಾಗ್ ಲಗ್ಗೆ ಇಲ್ಲದಿದ್ದು ಓದುಗರ ಪಾಲಿಗೆ ಒಳ್ಳೆಯದೇ ಆಯಿತು. ಇಲ್ಲವಾದರೆ ಅವರು ಛಂದ ಪುಸ್ತಕದ ಬದಲು ಛಂದವಾದ ಬ್ಲಾಗ್‌ನ ಒಡೆಯರಾಗುತ್ತಿದ್ದರೋ ಏನೋ. ಎಷ್ಟೊ ಬಾರಿ ಅನಿಸಿದ್ದಿದೆ, ಅನೇಕ ಉತ್ತಮ ಬರಹಗಳು ಬ್ಲಾಗ ಲೋಕದ ಸೀಮಿತ ಓದುಗರನ್ನಷ್ಟೆ ತಲುಪಿ ನೇಪಥ್ಯಕ್ಕೆ ಸರಿಯುತ್ತಿವೆ ಎಂದು.

ವಸುಧೇಂದ್ರರ ಕೃತಿಗಳು:

ನಮ್ಮಮ್ಮ ಅಂದ್ರೆ ನಂಗಿಷ್ಟ
ಯುಗಾದಿ
ಇ-ಕಾಮರ್ಸ್
ಮನೀಷೆ
ಕೋತಿಗಳು ಸಾರ್ ಕೋತಿಗಳು
ಚೇಳು
ಮಿಥುನ (ಅನುವಾದಿತ ಕೃತಿ)
ಹಂಪಿ ಎಕ್ಸ್‌ಪ್ರೆಸ್ಸ್

ವಸುಧೇಂದ್ರರ ಲೇಖನಿಯಲ್ಲಿ ಮತ್ತಷ್ಟು ಕೃತಿಗಳು ಮೂಡಿಬರಲಿ, ಮೇ ಫ್ಲವರ್ ಅಂಗಳದಲ್ಲಿ ಓದುಗರೊಬ್ಬರು ಆಶಿಸಿದಂತೆ ಕಾದಂಬರಿಗಳೂ ಮೂಡಿಬರಲಿ, ಪ್ರಶಸ್ತಿಗಳನ್ನು ಗೆಲ್ಲಲಿ ಎನ್ನುವುದು ಅವರ ಎಲ್ಲ ಓದುಗರ ಹೃತ್ಪೂರ್ವಕ ಹಾರೈಕೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X