•  

ಕನ್ನಡಿಗರಿಗೆ ಕನ್ನಡ ಕಂಪ್ಯೂಟರ್‌ : ಮೊದಲ ದೃಢ ಹೆಜ್ಜೆ

ಶುಕ್ರವಾರ, ಮೇ 23, 2003, 5:30 [IST]
ಮೈಕ್ರೋಸಾಫ್ಟ್‌ನವರು, ವಿಂಡೋಸ್‌ ಎಕ್ಸ್‌ಪಿಗಾಗಿ ಕನ್ನಡದ ಭಾಷಾ ಅಂತರ್ಮುಖ ತಂತ್ರಾಂಶವನ್ನು ಬಿಡುಗಡೆ ಮಾಡಿ ಬಹುಶಃ ಒಂದೆರಡು ತಿಂಗಳಾಗಿರಬಹುದು. ಕೇವಲ ಕೆಲವು ಕನ್ನಡ ಅಂತರ್ಜಾಲದ ಫೋರಮ್‌ಗಳಲ್ಲಿ ಮಾತ್ರ ಇದು ಸುದ್ದಿಯಲ್ಲಿತ್ತು ಎನ್ನಿಸುತ್ತದೆ. ನನಗಂತೂ ಈ ಸುದ್ದಿ ಇತ್ತೀಚೆಗೆ(ಏ.5) ಕನ್ನಡಆಡಿಯೊ.ಕಾಮ್‌ನ ಫೋರಮ್‌ ನೋಡುವ ತನಕ ಗೊತ್ತಿರಲಿಲ್ಲ. ಈ ಸುದ್ದಿ ಯಾವುದೇ ಮುಖ್ಯವಾಹಿನಿ ಮಾಧ್ಯಮದಲ್ಲಿ ಪ್ರಕಟಗೊಂಡಿಲ್ಲದೆ ಇರಬಹುದು.

ಸುಮಾರು ಎರಡು ವರ್ಷದ ಹಿಂದೆ ನಾನು ಬರೆದ ಬೆಳೆಯಬೇಕಿದೆ ಕನ್ನಡ ‘ಬರಹ-ನುಡಿ’ಯಿಂದಾಚೆಗೆ ಲೇಖನದಲ್ಲಿ ಚರ್ಚಿಸಿದಂತೆ, ಕಂಪ್ಯೂಟರ್‌ ಎನ್ನುವುದು ಇನ್ನೂ ನಮ್ಮ ದೇಶದಲ್ಲಿ ಸ್ವಲ್ಪವಾದರೂ ಇಂಗ್ಲಿಷ್‌ ಜ್ಞಾನವಿರುವವರು ಬಳಸುವ ಒಂದು ಎಲೆಕ್ಟ್ರಾನಿಕ್‌ ಉಪಕರಣ. ಆದರೆ, ನಮ್ಮಲ್ಲಿ ಇಂಗ್ಲಿಷ್‌ ಸರಿಯಾಗಿ ಗೊತ್ತಿರದ, ಆದರೆ ಹಣಕಾಸಿನಲ್ಲಿ ಸಾಕಷ್ಟು ಸ್ಥಿತಿವಂತರಾಗಿರುವ, ಕನ್ನಡ ಚೆನ್ನಾಗಿ ಬಲ್ಲ ಅನೇಕ ಗ್ರಾಮೀಣ ಜನರು ಇದ್ದಾರೆ. ಅವರಿಗೆಲ್ಲ ಕಂಪ್ಯೂಟರ್‌ನಿಂದ ಏನು ಲಾಭ, ಪ್ರಯೋಜನ, ಎಂಬ ಸಿನಿಕ ಪ್ರಶ್ನೆಯನ್ನು ಒತ್ತಟ್ಟಿಗಿಟ್ಟು ಯೋಚಿಸಿದರೆ, ಅವರ್ಯಾರಿಗೂ ಕಂಪ್ಯೂಟರ್‌ ಬಳಸಲು, ಅದೂ ಇಂಗ್ಲಿಷ್‌ ಅನ್ನು ಕಲಿಯದೆ ಆಗುವುದಿಲ್ಲ ಎನ್ನುವುದು ಸತ್ಯ.

ಆದರೆ ಇದೇ ಪರಿಸ್ಥಿತಿ ಪ್ರಪಂಚದ ಬೇರೆ ಕಡೆಗಳಲ್ಲಿ ಇಲ್ಲ. ಬಹಳಷ್ಟು ಮುಂದುವರಿದ ರಾಷ್ಟ್ರಗಳಲ್ಲಿ ಕಂಪ್ಯೂಟರ್‌ ಮತ್ತು ಅದನ್ನು ಉಪಯೋಗಿಸಲು ಸಹಾಯ ಪಠ್ಯಗಳು ಅವರದೇ ಭಾಷೆಯಲ್ಲಿ ದೊರಕುತ್ತವೆ. ಇಂದು ಅಮೇರಿಕದಲ್ಲಿ ನಾನು ಡೆಲ್‌ ಕಂಪನಿಯಿಂದಲೋ ಅಥವಾ ಮತ್ಯಾವ ಕಂಪನಿಯಿಂದಲೋ ಕಂಪ್ಯೂಟರ್‌ ಕೊಂಡರೆ, ಅದನ್ನು ಮನೆಯಲ್ಲಿ ಸೆಟ್‌ಅಪ್‌ ಮಾಡಲು ನನಗೆ ಯಾರ ಸಹಾಯವೂ ಬೇಕಾಗಿಲ್ಲ.

ಕಂಪ್ಯೂಟರ್‌ನೊಂದಿಗೆ ಬರುವ ಉಪಯೋಗಿ ಕೈಪಿಡಿ ಓದಿಕೊಂಡು ಯಾರು ಬೇಕಾದರೂ ಮಾಡಿಕೊಳ್ಳಬಹುದು. ಆದರೆ, ಅದೇ ಬೆಂಗಳೂರಿನಲ್ಲಿಯೋ, ಕರ್ನಾಟಕದ ಮತ್ತೆಲ್ಲಿಯೋ ಕಂಪ್ಯೂಟರ್‌ ಕೊಂಡರೆ ಹಾಗೆ ಮಾಡಿಕೊಳ್ಳಬಲ್ಲವರು ಕೆಲವೇ ಜನ. ಯಾಕೆಂದರೆ ಕೈಪಿಡಿಗಳು ಇರುವುದೆಲ್ಲ ಇಂಗ್ಲಿಷ್‌ನಲ್ಲಿ. ಅಂತಿಮವಾಗಿ ಕಂಪ್ಯೂಟರ್‌ ಇರುವುದು ಇಂಗ್ಲಿಷ್‌ನಲ್ಲಿಯೆ. ಅದನ್ನು ಅರ್ಥ ಮಾಡಿಕೊಳ್ಳಲು, ಉಪಯೋಗಿಸಲು ಇಂಗ್ಲಿಷ್‌ ಭಾಷಾಜ್ಞಾನ ಮತ್ತು ಪದಸಂಪತ್ತು ತಿಳಿದಿರಬೇಕು. ಹಾಗಾದರೆ, ಈ ವಿಷಯದಲ್ಲಿ, ನಮ್ಮಲ್ಲಿನ ಎಲ್ಲರೂ ಸ್ವತಂತ್ರರಾಗುವುದು ಸಾಧ್ಯವಿಲ್ಲವೇ?

ಸಾಧ್ಯ. ಆದರೆ ಎಂದು? -ಯಾವಾಗ ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್‌ ಕಂಪನಿಗಳು, ಸ್ಥಳೀಯ ಭಾಷೆಯಲ್ಲಿ ತಮ್ಮ ಉತ್ಪನ್ನಗಳನ್ನು ಕೊಟ್ಟರೆ ಅವುಗಳಿಗೆ ಹೆಚ್ಚಿನ ಬೇಡಿಕೆ ಬರುತ್ತದೆ ಎಂದು ಭಾವಿಸಿದಾಗ. ನಮ್ಮ ಪರಿಸ್ಥಿತಿ ಏನು? ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಉಪಯೋಗಿಸಬೇಕಾದ ಸರ್ಕಾರ ತನ್ನ ಅಯೋಗ್ಯತನದಿಂದ ಇಂಗ್ಲಿಷ್‌ ಸಾಫ್ಟ್‌ವೇರ್‌ ಅನ್ನೇ ಬಯಸುತ್ತದೆ. ಇಂಗ್ಲಿಷ್‌ ಗೊತ್ತಿರುವ ಕನ್ನಡಿಗರು ಕನ್ನಡ ಸಾಫ್ಟ್‌ವೇರ್‌ ಅನ್ನು ಒತ್ತಾಯಿಸದೆ, ಇಂಗ್ಲಿಷ್‌ ಸಾಫ್ಟ್‌ವೇರನ್ನು ಉಪಯೋಗಿಸುತ್ತಾರೆ. ಕನ್ನಡ ಮಾತ್ರ ಬಲ್ಲ, ಅಥವ ಇಂಗ್ಲಿಷ್‌ ಸರಿಯಾಗಿ ಗೊತ್ತಿಲ್ಲದ ಕನ್ನಡಿಗರು, ತೆಪ್ಪಗಾಗುತ್ತಾರೆ. ಕಂಪ್ಯೂಟರ್‌ ತಮ್ಮ ಪಾಲಿಗೆ ಮತ್ತೊಂದು ಇಂಗ್ಲಿಷ್‌ ಆಗಿದೆ. ಕಂಪ್ಯೂಟರ್‌ ನಮಗೆ ಗೊತ್ತಾಗದ ವಿಷಯ ಎಂದುಕೊಂಡು ಸುಮ್ಮನಾಗುತ್ತಾರೆ. ವರ್ತಮಾನದ ಜಾಗತೀಕರಣ, ಅಭಿವೃದ್ಧಿ ಮತ್ತು ಅದರ ವೇಗವನ್ನು ಗಮನಿಸಿದರೆ, ಈ ಕಡೆಯ ಗುಂಪಿನಲ್ಲಿರುವ ಜನ ಭವಿಷ್ಯದಲ್ಲಿ ಹಿಂದುಳಿದ, ದಲಿತ ಜನಾಂಗಕ್ಕೆ ಸೇರುತ್ತಾರೆ ಎಂದು ಯಾರಿಗಾದರೂ ಅನ್ನಿಸುವ ಸರಳ ಚಿಂತನೆ.

ಇವೆಲ್ಲವು ಬದಲಾಗಲು ಸಾಧ್ಯವಿದೆ. ಮೊದಲು, ಸರ್ಕಾರ ಪ್ರಜ್ಞಾಪೂರ್ವಕವಾಗಿ ಕನ್ನಡ ತಂತ್ರಾಂಶದ ಬಳಕೆಯನ್ನು ಹೆಚ್ಚಿಸಬೇಕು. ಸರ್ಕಾರದಿಂದ, ಅಂದರೆ ಸರ್ಕಾರಿ ಹಣದ ನೆರವಿನಿಂದ ಅಥವ ಸರ್ಕಾರಿ ಸಂಸ್ಥೆಗಳಿಂದ ತಂತ್ರಾಂಶ ಅಭಿವೃದ್ಧಿಯನ್ನು ಬಯಸುವುದು ಸದ್ಯದ ಸಹಜ ಕಾರಣಗಳಿಂದಾಗಿ ಅವಾಸ್ತವ. ಅದರ ಬದಲು, ಅವರು ದುಡ್ಡು ಕೊಟ್ಟು ಕನ್ನಡದಲ್ಲೇ ನಮಗೆ ಸಾಫ್ಟ್‌ವೇರ್‌ ಬೇಕು ಎಂದರೆ ಸಾಕು, ಅಲ್ಲಿ ಮಾರುಕಟ್ಟೆ ನೋಡಿ, ಈಗಾಗಲೇ ಎಲ್ಲಾ ಮೂಲಭೂತ ಸೌಲಭ್ಯ ಹೊಂದಿರುವ ಉದ್ಯಮಿಗಳು ಅದನ್ನು ಅಭಿವೃದ್ಧಿ ಮಾಡಿಕೊಡುತ್ತಾರೆ. ಸದ್ಯದ, ಜಾಗತೀಕರಣಗೊಂಡ ಪ್ರಪಂಚ ಇರುವುದೇ ಹಾಗೆ. ತದನಂತರದಲ್ಲಿ, ಕೈಗೆಟಕುವ ಬೆಲೆಯಲ್ಲಿ ಸಿಕ್ಕಾಗ ಸಾಮಾನ್ಯ ಜನರೂ ಅದನ್ನು ಉಪಯೋಗಿಸಲು ಪ್ರಾರಂಭಿಸುತ್ತಾರೆ.

ಇನ್ನು ಮೈಕ್ರೋಸಾಫ್ಟ್‌ ಅಂತಹ ಕಂಪನಿಗಳಿಗೆ ಇದನ್ನು ಅಭಿವೃದ್ಧಿ ಪಡಿಸುವುದರಲ್ಲಿ ಅವರದೇ ಶ್ರೇಯಸ್ಸಿದೆ. ಈಗಾಗಲೇ ಕೆಲವು ಭಾಷೆಗಳಲ್ಲಿ ಎರಡು ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಗೆ ವಿಂಡೋಸ್‌ ಎಕ್ಸ್‌ಪಿ ಸ್ಟಾರ್ಟರ್‌ ಎಡಿಷನ್‌ ಅನ್ನು ಅದು ಹೊರತಂದಿದೆ. ಅದು ಇಂಗ್ಲಿಷ್‌ನಲ್ಲಿನ ಪೂರ್ಣಪ್ರಮಾಣದ ಎಕ್ಸ್‌ಪಿ 7-8 ಸಾವಿರಕ್ಕಿಂತ ಕಮ್ಮಿ ಇಲ್ಲ.

ಭಾರತದಂತಹ ದೇಶದಲ್ಲಿ ಸ್ಟಾರ್ಟರ್‌ ಎಡಿಷನ್‌ ಕೊಡುವ ಸೇವೆ ಬಹಳಷ್ಟು ಬಳಕೆದಾರರಿಗೆ ಸಾಕಾಗುವಷ್ಟು ಇದೆ. ಜೊತೆಗೆ ತಂತ್ರಜ್ಞಾನ ಸ್ಥಳೀಯ ಭಾಷೆಯಲ್ಲಿದ್ದರೆ ಇನ್ನೂ ಸುಲಭ. ಅಲ್ಲದೆ ಅವರು ತಮ್ಮ ಕಂಪ್ಯೂಟರ್‌ಗಳಲ್ಲಿ ವಿಂಡೋಸ್‌ 98, ವಿಂಡೋಸ್‌ 2000 ಅಥವ, ವಿಂಡೋಸ್‌ ಎಕ್ಸ್‌ಪಿಯನ್ನು ಕಳ್ಳತನದಲ್ಲಿ ಉಪಯೋಗಿಸುವ ಅವಶ್ಯಕತೆಯಿರುವುದಿಲ್ಲ. ಈ ಕಳ್ಳತನವನ್ನು ತಡೆಗಟ್ಟಲೆಂದೇ, ಮೈಕ್ರೋಸಾಫ್ಟ್‌ ಕಡಿಮೆ ಬೆಲೆಯಲ್ಲಿ ಸ್ಟಾರ್ಟರ್‌ ಎಡಿಷನ್‌ ತರುತ್ತಿರುವುದು.

ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ, ಭಾರತದ ಅನೇಕ ಭಾಷೆಗಳಲ್ಲಿ ವಿಂಡೋಸ್‌ ಎಕ್ಸ್‌ಪಿ ಆಪರೇಟಿಂಗ್‌ ಸಿಸ್ಟಂಗಾಗಿ ಭಾಷಾ ಅಂತರ್ಮುಖ ಪ್ಯಾಕ್‌ ಅನ್ನು ಮೈಕ್ರೋಸಾಫ್ಟ್‌ ಬಿಡುಗಡೆ ಮಾಡಿದೆ. ವಿಂಡೋಸ್‌ ಎಕ್ಸ್‌ಪಿ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಯಾರು ಬೇಕಾದರೂ ಈ ಪ್ಯಾಕ್‌ ಅನ್ನು ಡೌನ್‌ಲೋಡ್‌ (ಕನ್ನಡ ವಿವರಣೆ ಪುಟ, ಇಂಗ್ಲಿಷ್‌ ವಿವರಣೆ ಪುಟ) ಮಾಡಿಕೊಂಡು ತಮ್ಮ ಕಂಪ್ಯೂಟರ್‌ನ ಕೆಲವು ಭಾಗಗಳನ್ನು ಕನ್ನಡೀಕರಿಸಿಕೊಳ್ಳಬಹುದು.

ಕೆಲವು ಎಂದು ಯಾಕೆ ಹೇಳಿದೆನೆಂದರೆ, ವಿಂಡೋಸ್‌ನ ಅಂತರ್ಗತ ಅಪ್ಲಿಕೇಶನ್ಸ್‌ ಬಿಟ್ಟರೆ ಮಿಕ್ಕ ಬಹಳಷ್ಟು ಅಪ್ಲಿಕೇಶನ್ಸ್‌, ಮೊದಲಿನಂತೆಯೇ ತಮ್ಮ ಮೆನು, ಸೂಚನೆ, ಇತ್ಯಾದಿಗಳನ್ನು ಇಂಗ್ಲಿಷ್‌ನಲ್ಲಿಯೇ ತೋರಿಸುತ್ತವೆ. ಆದರೆ ಇದು ಪ್ರಾರಂಭ ಮಾತ್ರ. ಹತಾಶರಾಗುವ ಅವಶ್ಯಕತೆ ಇಲ್ಲ. ಆದರೆ ಅತೃಪ್ತಿ ಇರಲಿ.

ಕಂಪ್ಯೂಟರ್‌ ಅನ್ನು ಕನ್ನಡಮಯ ಮಾಡಿಕೊಂಡಾಗ, ಹೆಚ್ಚು ಉಪಯೋಗಿಸುವ ವಿಂಡೋಸ್‌ ಸೇವೆಗಳೆಲ್ಲ ಕನ್ನಡದಲ್ಲಿಯೇ ಇರುತ್ತವೆ. ಒಂದೆರಡು ಗಂಟೆಗಳ ಬಳಕೆಯ ನಂತರ ಕಂಪ್ಯೂಟರ್‌ ಕನ್ನಡ ಪದಗಳ ಅರ್ಥ ಸುಲಭವಾಗಿಬಿಡುತ್ತದೆ.

ದೊಡ್ಡ ಚಿತ್ರಕ್ಕಾಗಿ ಕ್ಲಿಕ್ಕಿಸಿKannada on Windows XPಇದನ್ನು ಇನ್ಸ್‌ಟಾಲ್‌ ಮಾಡುವ ವಿಧಾನ :

* ಈ ಪುಟದಿಂದ ಡೌನ್‌ಲೋಡ್‌ ಮಾಡಿಕೊಳ್ಳಿ.

* ಡೌನ್‌ಲೋಡ್‌ ಮಾಡಿಕೊಂಡ್‌ ಫೈಲ್‌ ಅನ್ನು ಓಡಿಸಿ.

* ಕಂಪ್ಯೂಟರ್‌ ಅನ್ನು ಮತ್ತೆ ಆರಂಭಿಸುವ ಬಗ್ಗೆ ಸೂಚನೆ ಬರುತ್ತದೆ. ಪುನಾರಂಭಿಸಿ.

* ಮುಂದಿನ ಬಾರಿ ಕಂಪ್ಯೂಟರ್‌ ಪ್ರಾರಂಭವಾಗುವಾಗ, ನಿಮಗೆ ಕನ್ನಡ ಸ್ವಾಗತ ಸಿಗುತ್ತದೆ.

ನಿಮಗೆ ಮತ್ತೆ ಇಂಗ್ಲಿಷ್‌ಗೆ ಬದಲಾಯಿಸಿಕೊಳ್ಳಬೇಕಾಗಿ ಬಂದರೆ :

* ನಿಯಂತ್ರಣ ಫಲಕಕ್ಕೆ ಹೋಗಿ, ‘ಪ್ರೋಗ್ರಾಂಗಳು ಸೇರಿಸು ಅಥವಾ ತೆಗೆ’ ಆಯ್ಕೆ ಮಾಡಿಕೊಳ್ಳಿ.

* ಮುಂದೆ ಬರುವ ಪಟ್ಟಿಯಿಂದ Windows Kannada Interface Packಅನ್ನು ತೆಗೆದುಹಾಕಿ.

* ಕಂಪ್ಯೂಟರ್‌ ಪುನಾರಂಭಿಸಿ. ಅದು ಮುಂದಿನ ಸಲದಿಂದ ಮೂಲ ಇಂಗ್ಲಿಷ್‌ಗೆ ವಾಪಸು ಬರುತ್ತದೆ.

ದೊಡ್ಡ ಚಿತ್ರಕ್ಕಾಗಿ ಕ್ಲಿಕ್ಕಿಸಿKannada on Windows XPಸದ್ಯದಲ್ಲಿ ಕಂಪ್ಯೂಟರ್‌ ಉಪಯೋಗಿಸುತ್ತಿರುವ ಬಹಳಷ್ಟು ಕನ್ನಡಿಗರಿಗೆ ಬೇಕಾದಷ್ಟು ಇಂಗ್ಲಿಷ್‌ ಬರುತ್ತಿರುವುದರಿಂದ ಇದರಿಂದ ಅವರಿಗೆ ಅಷ್ಟೇನೂ ಉಪಯೋಗ ಇಲ್ಲದೇ ಇರಬಹುದು. ಆದರೆ ಇದು ಇರುವವರಿಗಾಗಿ ಇರುವ ಪ್ರಶ್ನೆಯಲ್ಲ. ಇಲ್ಲದವರಿಗಾಗಿ. ಆ ನಿಟ್ಟಿನಲ್ಲಿ ಇದೊಂದು ಗಂಭೀರ ಪ್ರಯತ್ನ. ಇದನ್ನು ಪ್ರಯತ್ನಿಸಿಯಾದ ಮೇಲೆ, ಮುಂದಕ್ಕೆ ಕ್ರಮಿಸಬೇಕಾದ ದಾರಿ ದುರ್ಗಮವಾಗಲಿ, ದೀರ್ಘವಾದದ್ದಾಗಲಿ ಅಲ್ಲ ಎನ್ನುವುದು ನನ್ನ ನವೀಕರಣಗೊಂಡ ಆಶಾಭಾವ.

ಇದೇ ಸಮಯದಲ್ಲಿ, ಇನ್ನೊಂದು ಮಾತು. ಬಹಳಷ್ಟು ಜನ ಲಿನಕ್ಸ್‌ ಅಂತಹ ಉಚಿತ ತಂತ್ರಾಂಶವನ್ನು ನಾವು ಯಾಕೆ ಅಭಿವೃದ್ಧಿ ಪಡಿಸಬಾರದು, ಮೈಕ್ರೋಸಾಫ್ಟ್‌ನಂತಹ ಬಹುರಾಷ್ಟ್ರೀಯ, ಬಂಡವಾಳಶಾಹಿ ಕಂಪನಿಯದನ್ನು ಏಕೆ ಉಪಯೋಗಿಸಬೇಕು, ಎನ್ನುತ್ತಾರೆ. ನನ್ನ ಪ್ರಕಾರ ಪ್ರಶ್ನೆಯಲ್ಲಿ ತಪ್ಪೇನಿಲ್ಲ. ಆದರೆ ಅದರಂತೆಯೇ ಚಾಚೂ ತಪ್ಪದೆ ಮಾಡೋಣ ಎನ್ನುವುದು ಅರ್ಥಹೀನ. ಹೀಗೆನ್ನಲು ಮುಖ್ಯವಾದ ಕೆಲವು ಕಾರಣಗಳನ್ನು ನಾನು ಕೆಳಗೆ ಪಟ್ಟಿ ಮಾಡುತ್ತೇನೆ

* ಈಗ ಸೂಸ್‌, ರೆಡ್‌ಹ್ಯಾಟ್‌, ಲಿನ್‌ಸ್ಪೈರ್‌ನಂತಹ ಅನೇಕ ಉತ್ತಮ ಲಿನಕ್ಸ್‌ ಆಪರೇಟಿಂಗ್‌ ಸಿಸ್ಟಮ್‌ಗಳು ಲಭ್ಯವಿದ್ದರೂ, ಅವೆಲ್ಲವೂ ಕನ್ನಡಕ್ಕೆ ಸರಳವಾಗಿ ಬರುವ ತನಕ ಕಾಲ ನಿಲ್ಲುವುದಿಲ್ಲ.

* ಈಗಲೂ ಲಿನಕ್ಸ್‌ ಅನ್ನು ವಿಂಡೋಸ್‌ ಅನ್ನು ಉಪಯೋಗಿಸಿದಷ್ಟು ಸರಳವಾಗಿ ಉಪಯೋಗಿಸಲು ಆಗುವುದಿಲ್ಲ. ಕೆಲವು ಕನಿಷ್ಠ ತಂತ್ರಜ್ಞಾನ ಸಂಬಂಧಿ ತಿಳುವಳಿಕೆ ಅಗತ್ಯ. (ಕರ್ನೆಲ್‌/ಮಾಡ್ಯೂಲ್‌ ಕಂಪೈಲಿಂಗ್‌ ಮತ್ತು ಲೋಡಿಂಗ್‌ - ಹೊಸ ಹಾರ್ಡ್‌ವೇರ್‌ ಜೋಡಿಸಬೇಕಾದ ಪ್ರಮೇಯ ಬಂದಾಗ.)

* ಸದ್ಯದ ಬಹುತೇಕ ಕನ್ನಡ ಜಾಲತಾಣಗಳ ಜಾಲಾಟ ಅಸಾಧ್ಯ. ಈ ಬಹುತೇಕ ಅಂತರ್ಜಾಲ ತಾಣಗಳು ಡೈನಾಮಿಕ್‌ ಫಾಂಟ್ಸ್‌ ಅನ್ನು ಬಳಸುತ್ತಿದ್ದು, ಅವುಗಳನ್ನು ಸೂಕ್ತ ಫಾಂಟ್‌ ಇನ್ಸ್‌ಟಾಲ್‌ ಮಾಡುವ ತೊದರೆಯಿಲ್ಲದೆ ನೋಡಬಹುದಾದರೆ ಅದು ವಿಂಡೋಸ್‌ ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ನಿಂದ ಮಾತ್ರ. ಲಿನಕ್ಸ್‌ನಲ್ಲಿ, ಆ್ಯಪಲ್‌ಗಳಲ್ಲಿ ಕೆಲವು ಒಳದಾರಿಗಳನ್ನು ಬಳಸದೆ ಸುಲಭವಾಗಿ ಈ ಕನ್ನಡ ಅಂತರ್ಜಾಲ ತಾಣಗಳನ್ನು ಬ್ರೌಸ್‌ ಮಾಡುವುದು ಅಸಾಧ್ಯ.

* ವಿಂಡೋಸ್‌ಗೆ ಹೋಲಿಸಿದರೆ, ಬಹಳ ಕಮ್ಮಿ ಜನ ಅದನ್ನು ಉಪಯೋಗಿಸುತ್ತಿರುವುದರಿಂದ ಏನಾದರೂ ತೊಂದರೆಯಾದಾಗ ಪರಿಹಾರ ಕೇಳಬೇಕಾಗಿ ಬಂದರೆ, ನಿಮ್ಮ ಸ್ನೇಹಿತರಲ್ಲಿ, ಪರಿಚಯದವರಲ್ಲಿ ಅದರ ಬಗ್ಗೆ ತಿಳಿವಳಿಕೆಯೆ ಇಲ್ಲದಿರಬಹುದು.

* ಲಿನಕ್ಸ್‌ ಅನ್ನು ಜನಪ್ರಿಯ ಗಳಿಸಲು ನಮ್ಮಲ್ಲಿ ಅವಶ್ಯಕವಾದ ಸರ್ಕಾರದ ಅಥವ ಹಾರ್ಡ್‌ವೇರ್‌ ಕಂಪನಿಗಳ ಬೆಂಬಲ ಇಲ್ಲ ಎಂತಲೇ ಹೇಳಬೇಕು. ಹೀಗಾಗಿ, ಅದು ಬೇಗ (ಕನ್ನಡ) ಮಾರುಕಟ್ಟೆ ವಿಸ್ತರಣೆ ಪಡೆಯುತ್ತದೆ ಎಂದು ಹೇಳುವುದು ಕಷ್ಟ.

* ಕನ್ನಡ ಲಿನಕ್ಸ್‌ ಬೆಳವಣಿಗೆ ವ್ಯಕ್ತಿಗಳ ಮೇಲೆ ಅವಲಂಭಿಸಿದೆಯೆ ಹೊರತು ಅದಕ್ಕೆ ಸಂಸ್ಥೆಗಳು ಹೊಂದಿರುವ ಆರ್ಥಿಕ ಭದ್ರತೆ ಇಲ್ಲ. ದೀರ್ಘಕಾಲೀನ ಬದ್ಧತೆ ಅನುಮಾನ. ಹೀಗಾಗಿ ಯಾವಾಗ, ಏನನ್ನು ಬಯಸಬಹುದು ಎಂದು ಹೇಳುವುದು ಕಷ್ಟ. ವ್ಯವಹಾರದಲ್ಲಿ ಲಾಭವೇ ಇಲ್ಲದಿರುವುದರಿಂದ ಯಾವುದೇ ತರಹದ ಸುದ್ದಿಗೆ, ಅಪ್‌ಡೇಟ್‌ಗಳಿಗೆ ಅಂತರ್ಜಾಲವನ್ನೇ ನೋಡಬೇಕು. ಕಂಪ್ಯೂಟರ್‌ ಬಳಕೆ ಕೇವಲ ಅಂತರ್ಜಾಲ ಜಾಲಾಡಿಸುವುದಕ್ಕೆ ಮಾತ್ರ ಅಲ್ಲವಲ್ಲ?

* ಎಲ್ಲಕ್ಕಿಂತ ಮುಖ್ಯವಾಗಿ, ಇಂದು ಕಂಪ್ಯೂಟರ್‌ ದಿನಬಳಕೆಯ ವಸ್ತುವಾಗುತ್ತಿರುವುದು ನಾವು ಅದಕ್ಕೆ ಜೋಡಿಸಬಹುದಾದ ಕ್ಯಾಮರಾ, ಪ್ರಿಂಟರ್‌, ಸ್ಕ್ಯಾನರ್‌, ಟ್ಯೂನರ್‌ ಮುಂತಾದ ಸಲಕರಣೆಗಳ ಸುಲಭ ಸಂಯೋಜನೆಯಿಂದ. ಬಹುಪಾಲು ಈ ಹಾರ್ಡ್‌ವೇರ್‌ ಉತ್ಪಾದಕರು ಅದಕ್ಕಾಗಿ ವಿಂಡೋಸ್‌ ಡ್ರೈವರ್‌ ಮತ್ತು ಅಪ್ಲಿಕೇಶನ್‌ಗಳನ್ನು ಕೊಡುತ್ತಿದ್ದಾರೆಯೇ ಹೊರತು ಲಿನಕ್ಸ್‌ನಲ್ಲಿ ಕಮ್ಮಿಯೇ.

* ಕಂಪ್ಯೂಟರ್‌ಗೆ ಈ ಉಪಕರಣಗಳನ್ನು ಜೋಡಿಸಿ ಕೆಲಸ ಮಾಡಲಾಗಲಿಲ್ಲ ಎಂದರೆ ಕಂಪ್ಯೂಟರ್‌ ಅನ್ನು ಕೆಲವೇ ಶತಾಂಶ ಉಪಯೋಗಿಸುತ್ತಿದ್ದೇವೆ, ಅದರ ಪೂರ್ಣ ಉಪಯೋಗ ಪಡೆದುಕೊಳ್ಳುತ್ತಿಲ್ಲ ಎಂದರ್ಥ. ಪದೇ ಪದೇ ಬದಲಾಯಿಸಬೇಕಾದ ತಂತ್ರಾಂಶ ಹೊಸಬರನ್ನು ನಿರುತ್ಸಾಹಿಗಳನ್ನಾಗಿ ಮಾಡುತ್ತದೆ.

* ಉಚಿತ ತಂತ್ರಾಂಶ ಬರಲಿ, ಆದರೆ ಅದಕ್ಕಾಗಿಯೇ ಕಾದು ಕುಳಿತು ವರ್ತಮಾನದಲ್ಲಿ ಹಿಂದುಳಿಯುವುದು ಬೇಡ. ಬಹುಜನರಿಗೆ ಸದ್ಯದ ಜರೂರು ಆಗಿರುವುದನ್ನು ಇನ್ನೊಬ್ಬರು ದುಡ್ಡಿಗೆ ಕೊಡುತ್ತಿದ್ದಾರೆ ಎಂದು ದ್ವೇಷ ಬೆಳೆಸಿಕೊಳ್ಳುವುದು ಬೇಡ. ಅವರು ಕೇಳುವುದು ಅವರ ದುಡಿಮೆ ಮತ್ತು ಲಾಭಾಂಶ. ವ್ಯವಹಾರವೇ ಹಾಗೆ.

* ಬಂಡವಾಳಶಾಹಿಗಳಿಂದ, ಬಹುರಾಷ್ಟ್ರೀಯ ಕಂಪನಿಗಳಿಂದ ಬಂದದ್ದೆಲ್ಲವನ್ನೂ ಧಿಕ್ಕರಿಸಬೇಕು, ಲಾಭಕ್ಕಾಗಿ ಮಾಡುವುದು ಅನೈತಿಕ ಎನ್ನುವುದು ತಪ್ಪು. ಕಂಪನಿಗಳಿಗೂ ತಮ್ಮದೇ ಆದ ಸಾಮಾಜಿಕ ಬದ್ಧತೆಗಳು ಇರುತ್ತವೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳಿಗೆ, ಅಂದರೆ ಅಂತಿಮವಾಗಿ ಜನರಿಗೆ ಅವುಗಳ ಮೇಲೆ ನಿಯಂತ್ರಣವಿರುತ್ತದೆ.

ಕನ್ನಡದ ಸಂದರ್ಭದಲ್ಲಿ ‘ಕನ್ನಡದಲ್ಲಿ ಕಂಪ್ಯೂಟರ್‌’ ಎನ್ನುವುದು ಕೇವಲ ಶ್ರೀಮಂತರ, ಆರ್ಥಿಕ ದೃಷ್ಟಿಯಿಂದ ಮಾತ್ರ ನೋಡಬೇಕಾದ ವಿಷಯವಲ್ಲ. ಅದಕ್ಕೆ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತಿತರ ಸಮಗ್ರ ಆಯಾಮಗಳಿವೆ. ಇವುಗಳಲ್ಲಿ ಯಾವುದೇ ಒಂದನ್ನು ಬಿಟ್ಟು ಇನ್ನೊಂದನ್ನು ಮುಖ್ಯವಾಗಿಸಿಕೊಂಡರೆ ನಾವು ಅರೆಕುರುಡಾದಂತೆ. ಕೇವಲ ಭೂತ ಅಥವ ವರ್ತಮಾನವನ್ನು ಮಾತ್ರ ಗಣನೆಗೆ ತೆಗೆದುಕೊಂಡಂತೆ. ಜೀವನ ಇವೆಲ್ಲವನ್ನೂ ಮೀರಿದ್ದು. ಇವೆಲ್ಲವನ್ನೂ ಒಳಗೊಂಡದ್ದು. ಯಾರಿಗೆ ಇಷ್ಟವಾಗಲಿ ಬಿಡಲಿ, ಇಂದು ಪ್ರತ್ಯಕ್ಷವಾಗಿ ಇಲ್ಲವೆ ಪರೋಕ್ಷವಾಗಿ ಕಂಪ್ಯೂಟರ್‌ ಎಲ್ಲರ ಜೀವನದ ಮೇಲೂ, ಕೃಷಿ, ಸಾರಿಗೆ, ಮನರಂಜನೆಯಿಂದ ಹಿಡಿದು ಅಂತರಿಕ್ಷ ವಿಜ್ಞಾನದವರೆಗೂ, ಬಳಕೆ ಮತ್ತು ಪ್ರಭಾವ ಹೊಂದಿದೆ.


ಕಂಪ್ಯೂಟರ್‌ನಲ್ಲಿ ಕನ್ನಡ : ಲೇಖನ ಸೊಗಸಾಗಿದೆ


ಮುಖಪುಟ
/ ಸಾಹಿತ್ಯ-ಸಂಸ್ಕೃತಿ


User Comments
jayadeva 04 May 2009 05:30 pm
computernalli kannada ondu uttama prayatna.idu english baradavaru kooda athi shigrabagi kannadadalli computer kaliyalu sahayakavagide inthaha ondu uttama karyakramavannu parichayisidavarige krutagnategalu.
[ ಅಭಿಪ್ರಾಯ ಬರೆಯಿರಿ ]
IPL, Himachal Pradesh Cricket Association Stadium, Dharmasala
Kings XI Punjab: 59 / 2, 9.2 Overs
1st Test , Lord's Cricket Ground, St John's Wood
West Indies: 86 / 3, 33.1 Overs
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article