ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ನೆಲದಲ್ಲಿ ಕನ್ನಡಿಗ 2ನೇ ದರ್ಜೆಯ ಪ್ರಜೆ!

By ಗಿರೀಶ್ ಕಾರ್ಗದ್ದೆ
|
Google Oneindia Kannada News

Girish Kargadde
ಕೇಂದ್ರ ಸರ್ಕಾರವು ಪ್ರತಿವರ್ಷ ಸೆಪ್ಟೆಂಬರ್ ಹದಿನಾಲ್ಕರಂದು 'ಹಿಂದಿ ದಿವಸ'ವನ್ನಾಗಿ ಆಚರಿಸುತ್ತದೆ. ಭಾರತದಂತಹ ವೈವಿಧ್ಯತೆಯ ದೇಶದಲ್ಲಿ ಕೇವಲ ಒಂದು ಭಾಷೆಗೆ ಮಾತ್ರ ವಿಶೇಷ ದಿನವನ್ನಾಗಿ ಆಚರಿಸುವುದರ ಹಿಂದಿನ ಸತ್ಯಗಳನ್ನು ಕೆದಕುತ್ತಾ ಹೋದರೆ ಕೇಂದ್ರ ಸರ್ಕಾರವು ಪಾಲಿಸುತ್ತಿರುವ ಹುಳುಕಿನ ಭಾಷಾ ನೀತಿಯ ಕರಾಳ ಮುಖಗಳು ನಮಗೆ ಕಂಡು ಬರುತ್ತವೆ. ಕೆಲ ಕನ್ನಡಿಗರಿಗೆ ಹಿಂದಿಯು ರಾಷ್ಟ್ರಭಾಷೆ ಹಾಗಾಗಿ ಅದನ್ನು ಕಲಿಯಬೇಕು ಪೋಷಿಸಬೇಕು ಎಂಬ ಭಾವನೆಯಿದೆ. ಮೊದಲನೆಯದಾಗಿ ಹಿಂದಿ ರಾಷ್ಟ್ರಭಾಷೆ ಎಂಬುದು ನಿಜವಲ್ಲ, ನಮ್ಮ ದೇಶದ ಸಂವಿದಾನದಲ್ಲಿ ಯಾವುದೇ ನುಡಿಗೆ ರಾಷ್ಟ್ರಭಾಷೆಯ ಮನ್ನಣೆ ಕೊಟ್ಟಿಲ್ಲ. ಇದನ್ನು ಗುಜರಾತ್ ಹೈಕೋರ್ಟ್ ಸಹ 2010ರಲ್ಲಿ ತನ್ನ ತೀರ್ಪೊಂದರಲ್ಲಿ ಸ್ಪಷ್ಟವಾಗಿ ಹೇಳಿದೆ.

ಆದರೆ ಕೇಂದ್ರ ಸರ್ಕಾರವು ಕರ್ನಾಟಕ ತ್ರಿಭಾಷಾ ಸೂತ್ರವನ್ನು ಪಾಲಿಸುವಂತೆ ಮಾಡುವ ಮೂಲಕ ಹಿಂದಿಯನ್ನು ರಾಷ್ಟ್ರಭಾಷೆಯೆಂಬಂತೆ ಬಿಂಬಿಸುತ್ತಲೇ ಇದೆ. ಕೇಂದ್ರ ಸರ್ಕಾರವು ರಾಜಭಾಷಾ ಆಯೋಗದ ಮೂಲಕ ಹಿಂದಿಯನ್ನು ಕರ್ನಾಟಕದಂತಹ ಹಿಂದಿಯೇತರ ರಾಜ್ಯಗಳ ಮೇಲೆ ನಿರಂತರವಾಗಿ ಹೇರಿಕೆ ಮಾಡುತ್ತಿದೆ. ಹಿಂದಿಯನ್ನು ಪ್ರಚಾರ ಮಾಡುವುದಕ್ಕಾಗಿ ಹತ್ತು ಹಲವು ಯೋಜನೆಗಳನ್ನು ಹಾಕುತ್ತಾ, ಕೇಂದ್ರ ಸರ್ಕಾರವು ತನ್ನ ಕೈ ಕೆಳಗೆ ಇರುವ ಸರ್ಕಾರಿ ಸಂಸ್ಥೆಗಳನ್ನು ಇದಕ್ಕಾಗಿ ಬಳಸುತ್ತಿದೆ ಹಾಗೂ ಇದೇ ಉದ್ದೇಶಕ್ಕಾಗಿ ಕೋಟಿಗಟ್ಟಲೆ ಹಣವನ್ನು ಸಹ ಒದಗಿಸುತ್ತಿದೆ. ಇಂತಹ ಸತತ ಪ್ರಯತ್ನಗಳಿಂದ ಕೆಲವು ಕನ್ನಡಿಗರು ಹಿಂದಿ ರಾಷ್ಟ್ರಭಾಷೆ ಹಾಗಾಗಿ ಅದನ್ನು ಕಲಿಯಬೇಕು ಪೋಷಿಸಬೇಕು ಎಂಬ ಭಾವನೆಯನ್ನು ತೆಳೆದಿದ್ದಾರೆ. ಇಲ್ಲದೇ ಹೋದಲ್ಲಿ ಕನ್ನಡಿಗರಿಗೆ ಪಕ್ಕದ ರಾಜ್ಯದ ಭಾಷೆಗಳಾದ ತಮಿಳು, ತೆಲುಗು, ಮಲಯಾಳಂಗಿಂತ ಹೆಚ್ಚಿನ ಸಂಪರ್ಕವು ದೂರದ ಹಿಂದಿಯೊಡನೆ ಹೊಂದಲು ಸಾದ್ಯವಾದುದಾರೂ ಹೇಗೆ?

ದೇಶದೆಲ್ಲೆಡೆ ಒಂದೇ ಭಾಷೆಯಾದರೆ ಅದು ಒಗ್ಗಟ್ಟಿಗೆ ಪೂರಕವಲ್ಲವೇ ಎಂದು ಹೇಳುವವರೂ ಇದ್ದಾರೆ. ಆದರೆ ಇದು ಹೇಗೆ ಮಾರಕ ಎಂಬುದನ್ನು ಕೆಲ ತಿಂಗಳುಗಳ ಹಿಂದೆ ಯುಪಿಎಸ್ಸಿಯು (Union Public service commission) ತನ್ನ ಪರೀಕ್ಷೆಗಳಿಗೆ ಮಾಡಲು ಬಯಸಿದ್ದ ಕೆಲವು ಬದಲಾವಣೆಗಳ ಹಿನ್ನೆಲೆಯಲ್ಲಿ ನೋಡಬಹುದಾಗಿದೆ. ಯುಪಿಎಸ್ಸಿ ಮಾಡಬಯಸಿದ್ದ ಬದಲಾವಣೆಗಳು, ಹಿಂದಿ ಅರಿಯದ, ಕನ್ನಡವನ್ನು ಪರಿಸರದ ನುಡಿಯನ್ನಾಗಿ ಹೊಂದಿರುವ ಅಭ್ಯರ್ಥಿಗಳಿಗೆ ಮಾರಕವಾಗುವಂತಿದ್ದವು. ಕನ್ನಡಿಗರಿಗೆ ಕನ್ನಡವನ್ನು ಒಂದು ವಿಷಯವನ್ನಾಗಿ ತೆಗೆದುಕೊಳ್ಳಲು ಬೇಷರತ್ತಾದ ಆಯ್ಕೆ ಇಲ್ಲದಿರುವುದು, ಕನ್ನಡದಲ್ಲೇ ಯುಪಿಎಸ್ಸಿ ಪರೀಕ್ಷೆ ಬರೆಯುವ ಅವಕಾಶ ಸಿಗಲು ಕನಿಷ್ಟ ಇಷ್ಟು ಜನರಿರಲೇಬೇಕು ಎಂಬ ಷರತ್ತು ವಿಧಿಸುವುದು, ಇವೆಲ್ಲವೂ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಚಿಗುರೊಡೆಯುತ್ತಿರುವ ಪ್ರತಿಭೆಗಳು ಐ.ಎ.ಎಸ್ ಪರೀಕ್ಷೆ ಎದುರಿಸಲಾರದಂತೆ ಮಾಡಿಹಾಕುತ್ತಿತ್ತು. ಹಿಂದಿ ಭಾಷಿಕರಿಗೆ ಈ ಯಾವುದೇ ಷರತ್ತುಗಳು ಇಲ್ಲದಿರುವುದು ಕೇಂದ್ರ ಸರ್ಕಾರದ ಹಿಂದಿಯೇತರ ಭಾಷಿಕರ ವಿರೋಧಿ ನಿಲುವನ್ನು ತೋರಿಸುತ್ತಿತ್ತು. ಕೆಲವು ಕನ್ನಡಪರ ಸಂಘಟನೆಗಳನ್ನು ಹೊರತುಪಡಿಸಿ, ಬೇರೆ ಯಾವ ಕನ್ನಡಿಗ ಸಂಸದರೂ ಸಹ ಈ ಬಗ್ಗೆ ಸೊಲ್ಲೆತ್ತಲ್ಲಿಲ್ಲ. ಆದರೆ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳ ರಾಜಕಾರಾಣಿಗಳು ಹೋರಾಡಿದ್ದರಿಂದ ಯುಪಿಎಸ್ಸಿಯು ಈ ಬದಲಾವಣೆಗಳನ್ನು ಕೈಬಿಟ್ಟಿತು.

ಕೇಂದ್ರ ಸರ್ಕಾರವು ಮೊದಲಿನಿಂದಲೂ ಹಿಂದಿ ಭಾಷಿಕರಿಗೆ ಹೆಚ್ಚಿನ ಸ್ಥಾನಮಾನವನ್ನು ಕೊಡುತ್ತಾ ಬಂದಿದೆ. ಕೇಂದ್ರ ಸರ್ಕಾರ ನಡೆಸುವ ಹೆಚ್ಚಿನ ಸ್ಪರ್ಧಾತ್ಮಕ ಪರೀಕ್ಷೆಗಳು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯ. ಕೇಂದ್ರ ಸರ್ಕಾರ ನಡೆಸುವ ಪರೀಕ್ಷೆಗಳ ಕಥೆ ಒಂದೆಡೆಯಾದರೆ ಕೇಂದ್ರ ಸರ್ಕಾರದ ಕೈಕೆಳಗೆ ಕೆಲಸ ನಿರ್ವರ್ಹಿಸುವ ಇಲಾಖೆಗಳು ಸಹ ನಿರಂತರವಾಗಿ ಹಿಂದಿ ಬಳಕೆಯನ್ನು ಹೆಚ್ಚಿಸುತ್ತಿವೆ. ಇದಕ್ಕಾಗಿ ಹಿಂದಿಯೇತರರು ಅಪಾರವಾದ ಬೆಲೆ ತೆರಬೇಕಾಗಿದೆ. ಎಲ್.ಪಿ.ಜಿ. ಸಿಲಿಂಡರುಗಳ ಮೇಲೆ ಕೇವಲ ಹಿಂದಿ ಮತ್ತು ಇಂಗ್ಲಿಷಿನಲ್ಲಿ ಸೂಚನೆಗಳನ್ನು ಕೊಡಲಾಗುತ್ತದೆ. ಇತ್ತೀಚೆಗೆ ನಡೆಯುತ್ತಿರುವ ಗ್ಯಾಸ್ ಅಪಘಾತಗಳ ಹಿನ್ನೆಲೆಯಲ್ಲಿ ಇದನ್ನು ನೋಡಿದಾಗ ಇದು ಎಷ್ಟರ ಮಟ್ಟಿಗೆ ಅಪಾಯಕಾರಿ ಎಂಬುದು ನಮಗೆ ಅರಿವಾಗುತ್ತದೆ. ಇನ್ನು ಬ್ಯಾಂಕುಗಳಲ್ಲಿ, ರೈಲ್ವೇ ಸೇವೆ, ಅಂಚೆಕಚೇರಿ ಮೊದಲಾದಲ್ಲೆಲ್ಲಾ ಕನ್ನಡವನ್ನು ಕಡೆಗಣಿಸಿ ಹಿಂದಿಯನ್ನು ತುರುಕಲಾಗುತ್ತಿದೆ. ಇದಕ್ಕೆಲ್ಲಾ ಭಾರತದ ಹುಳುಕಿನ ಭಾಷಾ ನೀತಿಯೇ ಕಾರಣವಾಗಿದೆ.

ಹೀಗೆ ಹಿಂದಿಗೆ ವಿಶೇಷ ಸವಲತ್ತುಗಳನ್ನು ಕೊಡಮಾಡುವ ಭಾಷಾನೀತಿಯಿರುವ ಕಾರಣ ಹಿಂದಿಯೇತರರ ಭಾಷಿಕ ಹಕ್ಕುಗಳನ್ನು ಧಮನಿಸುವ ಪ್ರಯತ್ನಗಳು ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲೇ ನಡೆಯುತ್ತಿರುವುದು ಸಮಾನತೆಯೇ ಜೀವಾಳವಾಗಬೇಕಾದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕಿಯಿದ್ದಂತೆ. ದೇಶದ ಎಲ್ಲಾ ಭಾಷಿಕರಿಗೂ ಸಮಾನ ಗೌರವ ಮತ್ತು ಸಮಾನ ಅವಕಾಶ ಕೊಡಮಾಡುವುದರ ಮೂಲಕ ನಮ್ಮ ಒಕ್ಕೂಟ ವ್ಯವಸ್ಥೆಯನ್ನು ಇನ್ನೂ ಶಕ್ತಿಶಾಲಿಯಾಗಿಸಬಹುದು. ಯೂರೋಪ್ ಒಕ್ಕೂಟವು ಇದಕ್ಕೆ ಒಳ್ಳೆಯ ಉದಾಹರಣೆಯಾಗಿದೆ. ಯೂರೋಪ್ ಒಕ್ಕೂಟದ ಸಂಸತ್ತಿನಲ್ಲಿ ಎಲ್ಲಾ ಇಪ್ಪತ್ತಮೂರು ಭಾಷೆಗಳನ್ನು ಬಳಸಬಹುದಾಗಿದೆ, ತನ್ನೆಲ್ಲಾ ವ್ಯವಹಾರಗಳನ್ನು ತನ್ನ ನುಡಿಯಲ್ಲೇ ನಡೆಸುವ ಅವಕಾಶ ಯೂರೋಪಿನ ಒಕ್ಕೂಟದ ಪ್ರಜೆಗಳಿಗೆ ಇದೆ. ಆದರೆ ಭಾರತದ ಸಂಸತ್ತಿನಲ್ಲಿ ಇತ್ತೀಚೆಗೆ ತನ್ನ ತಾಯಿನುಡಿಯಾದ ತೆಲುಗಿನಲ್ಲಿ ಮಾತನಾಡಿದ ಟಿಡಿಪಿ ಪಕ್ಷದ ಸದಸ್ಯರೊಬ್ಬರನ್ನು ಬಹಿರಂಗವಾಗಿ ಅಪಹಾಸ್ಯಕ್ಕೀಡುಮಾಡಲಾಗಿತ್ತು. ಇಂದಿಗೂ ರಾಜ್ಯಗಳ ಹೈಕೋರ್ಟುಗಳಲ್ಲಿ ಕೇವಲ ಹಿಂದಿ ಅಥವಾ ಇಂಗ್ಲಿಷನ್ನು ಬಳಸಬಹುದಾಗಿದ್ದು ರಾಜ್ಯದ ಭಾಷೆಗಳನ್ನು ಬಳಸುವ ಅವಕಾಶವಿಲ್ಲವಾದ್ದರಿಂದ ತನ್ನ ನುಡಿಯಲ್ಲೇ ನ್ಯಾಯದಾನವನ್ನು ಪಡೆಯುವ ಹಕ್ಕಿನಿಂದ ಹಿಂದಿಯೇತರರು ವಂಚಿತರಾಗಿದ್ದಾರೆ. ಚೆನ್ನೈನ ಹೈಕೋರ್ಟಿನಲ್ಲಿ ತಮಿಳು ಬಳಕೆಗೆ ಅವಕಾಶಕೊಡಬೇಕೆಂದು ಒತ್ತಾಯಿಸಿ ಕಳೆದವಾರ ನ್ಯಾಯವಾದಿಗಳು ಕಲಾಪವನ್ನು ಬಹಿಷ್ಕರಿಸಿದ ಘಟನೆಯನ್ನು ಇಲ್ಲಿ ನೆನೆಯಬಹುದು.

ರಾಜ್ಯದ ರಾಜಕಾರಣಿಗಳು ಈಗಲಾದರೂ ತಮ್ಮ ಮೌನ ಮುರಿದು ಕನ್ನಡಿಗರ ಹಿತಕಾಯುವ ಕೆಲಸಕ್ಕೆ ಮುಂದಾಗಬೇಕು ಈ ರೀತಿಯ ಭಾಷಾ ತಾರತಮ್ಯವನ್ನು ವಿರೋಧಿಸಬೇಕು. ಭಾರತೀಯ ಸಂವಿದಾನ ಅನುಮೋದಿಸಿರುವ ಎಲ್ಲಾ ಭಾಷೆಗಳಿಗೂ ಸಹ ಸಮಾನ ಹಕ್ಕುಗಳು ಸಿಗಬೇಕು. ಇಲ್ಲದೇ ಹೋದಲ್ಲಿ ನಮ್ಮ ನೆಲದಲ್ಲೇ ಎರಡನೆಯ ದರ್ಜೆಯ ಪ್ರಜೆಯಾಗಿ ಬದುಕುವ ಬೇಡದ ಕರ್ಮ ಕನ್ನಡಿಗರದ್ದಾಗಲಿದೆ.

English summary
In the name of Hindi Diwas on September 14, Hindi language is being forced on Kannadigas in Karnataka. In Banks, central govt offices and in many places Hindi is given more prominence than Kannada. If this continues, Kannada will be treated as second language in karnataka, beware! Article by Girish Kargadde.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X