ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದಿ ಹೇರಿಕೆ : ಸಂವಿಧಾನವೇ ಹುಳುಕನ್ನು ಪೊರೆದಿರುವಾಗ

By ಆನಂದ್ ಜಿ
|
Google Oneindia Kannada News

ಕೇಂದ್ರ ಸರ್ಕಾರ ಇತ್ತೀಚಿಗೆ ಇಟ್ಟ ಎರಡು ಹೆಜ್ಜೆಗಳು ಬಹಳಷ್ಟು ಅಲ್ಲೋಲಕಲ್ಲೋಲಕ್ಕೆ ಕಾರಣವಾಯಿತು. ರಾಜ್ಯಗಳು ಇನ್ಮುಂದೆ ಕೇಂದ್ರ ಸರ್ಕಾರದ ಜೊತೆಯಲ್ಲಿ ಹಿಂದಿಯಲ್ಲಿ ವ್ಯವಹರಿಸಬೇಕು ಮತ್ತು ಕೇಂದ್ರ ಸರ್ಕಾರದ ಎಲ್ಲಾ ಸಚಿವರು, ಅಧಿಕಾರಿಗಳು ಸಾಮಾಜಿಕ ತಾಣಗಳಲ್ಲಿ ಹಿಂದಿಯನ್ನೇ ಬಳಸಬೇಕು ಎನ್ನುವ ಆದೇಶಗಳು ದೇಶದ ಹಿಂದೀಯೇತರ ಭಾಷಿಕರಲ್ಲಿ ಆತಂಕ ಮತ್ತು ಪ್ರತಿರೋಧಕ್ಕೆ ಕಾರಣವಾಯಿತು.

ನಂತರ ಸಂಬಂಧಪಟ್ಟವರು ತೋರಿಕೆಯ ಸಮಾಧಾನದ ಹೇಳಿಕೆ ನೀಡಿ ಹೊತ್ತಿದ ಉರಿಯನ್ನು ಆರಿಸಲು ಪ್ರಯತ್ನಿಸಿದರು. ತಾವು ಹೊಸದಾಗಿ ಏನೂ ಮಾಡಿಲ್ಲಾ, ಈ ಹಿಂದಿನ ನೀತಿಯನ್ನೇ ಮುಂದುವರಿಸಿದ್ದಾಗಿ ಹೇಳಿ ತಮ್ಮ ನಿರಪರಾಧಿತ್ವ ಸಾಬೀತು ಮಾಡಲು ಮುಂದಾದರು. ಸರ್ಕಾರದ ಈ ನಡೆಗೆ ಕಾರಣವೇನು, ಯಾಕಾಗಿ ಬಿಜೆಪಿ ಸರ್ಕಾರ ಪಟ್ಟವೇರಿದ ತಿಂಗಳೊಪ್ಪತ್ತಿನಲ್ಲೇ ಇಂಥ ಅಪಾಯಕಾರಿ ಆಟಕ್ಕೆ ಕೈಹಾಕಿತು ಎನ್ನುವುದನ್ನು ನೋಡಿದರೆ ಭಾರತ ದೇಶ ಅನುಸರಿಸುತ್ತಿರುವ ಭಾಷಾನೀತಿಯ ಹುಳುಕು ಗೋಚರಿಸುತ್ತದೆ.

Directive on Hindi : What is the solution

ಭಾಷಾನೀತಿಯ ಹುಳುಕು

ಬಹುಭಾಷಿಕ ಪ್ರದೇಶಗಳು ಸೇರಿ ಆದ ಭಾರತವೆನ್ನುವ ಈ ದೇಶಕ್ಕೆ ಸ್ವತಂತ್ರ ಬಂದಾಗಲೇ ನಮ್ಮ ಹಿರಿಯರು ಮಾಡಿದ ಮೊದಲ ಎಡವಟ್ಟು, "ಒಂದು ದೇಶಕ್ಕೆ ಒಂದು ಭಾಷೆಯಿರಬೇಕು ಮತ್ತು ಅದು ದೇಶವನ್ನು ಬಲಿಷ್ಠಗೊಳಿಸುತ್ತದೆ" ಎನ್ನುವ ಭ್ರಮೆಗೆ ಬಿದ್ದದ್ದು. ಈ ಕಾರಣಕ್ಕೇ ಹಿಂದಿಯನ್ನು ರಾಷ್ಟ್ರಭಾಷೆಯ ಜಾಗದಲ್ಲಿ ಕೂರಿಸಲು ಮುಂದಾಗಿ, ಅದಕ್ಕೆ ತೀವ್ರ ಪ್ರತಿರೋಧ ಎದುರಾದಾಗ ಮಣಿದು. ಕೊನೆಗೆ ಕೇಂದ್ರ ಸರ್ಕಾರದ ಆಡಳಿತ ಭಾಷೆಯ ಪಟ್ಟ ನೀಡುವ ಮೂಲಕ ಹಿಂಬಾಗಿಲಿನ ಪ್ರಯತ್ನ ಮಾಡಿ ಅಲ್ಪತೃಪ್ತಗೊಂಡಿತು. [ಹಿಂದಿ ವಿರುದ್ಧ ಎಂಕೆ ಯುದ್ಧ, ಸಿದ್ದು ಏಕೆ ನಿಶ್ಶಬ್ದ?]

ಸಂವಿಧಾನದ 343ನೇ ವಿಧಿಯಿಂದ 351ನೇ ವಿಧಿಯವರೆಗೆ ಉಳಿದೆಲ್ಲಾ ಭಾಷೆಗಳಿಗೆ ಮುಳುವಾಗುವಂತೆ ಹಿಂದಿಭಾಷೆಯನ್ನು ಭಾರತದ ಸಂವಿಧಾನ ಮೆರೆಸಿದೆ. "ಸಮಾನತೆ ಈ ದೇಶದ ಜೀವಾಳ ಎನ್ನುವುದು ಸುಳ್ಳುಘೋಷಣೆ, ವಾಸ್ತವದಲ್ಲಿ ಇಲ್ಲಿರುವುದು ಬರೀ ತಾರತಮ್ಯ" ಎನ್ನುವಂತೆ ಹಿಂದಿಯೊಂದಕ್ಕೇ ವಿಶೇಷ ಸ್ಥಾನಮಾನ ನೀಡಲಾಯಿತು. ಬೀಸೋದೊಣ್ಣೆ ತಪ್ಪಿತೆಂಬಂತೆ ಹಿಂದೀಯೇತರರೂ ಕೂಡ ಸುಮ್ಮನಾದರು. ಮುಂದೆ 60ರ ದಶಕದಲ್ಲಿ ತಮಿಳುನಾಡಿನಲ್ಲಿ ನಡೆದ ಹೋರಾಟದ ನಡುವೆ ಒಳಗೊಳಗೇ ಹಿಂದಿಯನ್ನು ಪಸರಿಸುವ, ಹಿಂದಿಗೆ ರಾಷ್ಟ್ರಭಾಷೆ ಪಟ್ಟಕಟ್ಟಲು ಸಿದ್ಧತೆಯ ಕೆಲಸಗಳನ್ನು ಭಾರತ ಸರ್ಕಾರ ನಡೆಸುತ್ತಲೇ ಬಂದಿದೆ.

ಹಿಂದಿ ಹೇರಿಕೆಗೆ ನೂರಾರು ಅಸ್ತ್ರ!

ಹಿಂದಿ ಪ್ರಚಾರಕ್ಕಾಗೇ ಒಂದು ಇಲಾಖೆ, ರಾಜ್‌ಭಾಷಾ ಆಯೋಗ, ಸಂಸತ್ ಸಮಿತಿಯನ್ನು ರಚಿಸಿಕೊಂಡು ಕಾಲಕಾಲಕ್ಕೆ ಇಂತಿಷ್ಟು ಪ್ರಮಾನದಲ್ಲಿ ಹಿಂದಿ ಪ್ರಸಾರ ಆಗಬೇಕೆಂದು ಯೋಜನೆ ಮಾಡಿ, ಜನರ ಕೋಟ್ಯಾಂತರ ರೂಪಾಯಿ ತೆರಿಗೆ ಹಣವನ್ನು ಇದಕ್ಕೆಂದೇ ಮೀಸಲಿರಿಸಿ, ವರ್ಷಕ್ಕೊಮ್ಮೆ ಎಲ್ಲಿಲ್ಲಿ ಯಾವ್ಯಾವ ಪ್ರಮಾಣದಲ್ಲಿ ಹಿಂದಿ ಜಾರಿಯಾಗಿದೆ ಎಂದು ಭಾರತ ಸರ್ಕಾರವೇ ಲೆಕ್ಕಾಚಾರ ಹಾಕುತ್ತಾ ಕುಳಿತಿದ್ದು ಪ್ರತಿರೋಧ ಎದುರಾದಾಗ ನಿಧಾನಿಸುತ್ತಾ, ಇಲ್ಲದಿದ್ದರೆ ವೇಗವಾಗಿ ಹಿಂದಿಯನ್ನು ಹರಡುತ್ತಿದೆ.

ಇದಕ್ಕಾಗಿ ಸಂವಿಧಾನವೇ ಸೂಚಿಸಿರುವಂತೆ ಒತ್ತಾಯ, ಆಮಿಷ ಮತ್ತು ವಿಶ್ವಾಸಗಳೆಂಬ ಮೂರು ಅಸ್ತ್ರಗಳನ್ನು ಬಳಸುತ್ತಲೇ ಇದೆ. ಇದಕ್ಕೆಂದೇ ಹಿಂದೀದಿವಸ್, ಹಿಂದೀ ಸಪ್ತಾಹ್, ಹಿಂದೀಪಾಕ್ಷಿಕಗಳನ್ನು ದೇಶದ ಉದ್ದಗಲಕ್ಕೂ ಆಚರಿಸುತ್ತಿದೆ. ಈ ಬಾರಿಯೂ ಸಾಮಾಜಿಕ ತಾಣದಲ್ಲಿ ಹಿಂದಿಯನ್ನು ಬಳಸುವವರಿಗೆ 1200, 650 ರೂ ಬಹುಮಾನ ನೀಡುವ ಆದೇಶವನ್ನು ಸರ್ಕಾರ ಹೊರಡಿಸಿದೆ. [ಕನ್ನಡ ನೆಲದಲ್ಲಿ ಕನ್ನಡಿಗ 2ನೇ ದರ್ಜೆಯ ಪ್ರಜೆ!]

ಮೂಲತಃ ವೈವಿಧ್ಯತೆಯನ್ನು ಶಾಪವೆಂದು ಪರಿಗಣಿಸಿದೆಯೇನೋ ಎನ್ನುವಂತಹ ಸೈದ್ಧಾಂತಿಕ ಹಿನ್ನೆಲೆಯ ಬಿಜೆಪಿ ಸರ್ಕಾರಕ್ಕೆ ಭಾರತೀಯವಾದ ಹಿಂದಿ, ವಿದೇಶಿ ಇಂಗ್ಲಿಷಿಗೆ ಬದಲಿಯಾಗಬೇಕೆಂಬ ಉತ್ಸಾಹ! ಇದು ಎಲ್ಲಾ ಭಾರತೀಯ ಭಾಷೆಗಳನ್ನೂ ಸಮಾನವಾಗಿ ಕಾಣಲಾರದ ಕುರುಡಿಗೆ ಕಾರಣವಾಗಿದ್ದೇ ಮೊನ್ನೆಯ ಇಡೀ ತಳಮಳಕ್ಕೆ ಕಾರಣ. ಸಂವಿಧಾನವೇ ಒತ್ತಾಸೆಯಾಗಿ ನಿಂತು "ಹಿಂದಿ ಪ್ರಸಾರವನ್ನು ಹೆಚ್ಚಿಸುವುದು ಭಾರತ ಸರ್ಕಾರದ ಕರ್ತವ್ಯ" ಎಂದಿರುವುದಕ್ಕೆ ಬಿಜೆಪಿ ಭರ್ಜರಿಯಾಗೇ ಸ್ಪಂದಿಸಿದ್ದು ಈ ಗೋಜಲಿಗೆ ಕಾರಣ. ಇಂದು ಬಿಜೆಪಿ ಮಾಡಿದ್ದನ್ನು ನಾಳೆ ಕಾಂಗ್ರೆಸ್ ಮಾಡಬಹುದು, ನಾಡಿದ್ದು ಮತ್ತೊಂದು ಮಾಡಬಹುದು. [ಹಿಂದಿ ವಿರೋಧಿಸಿ ಪ್ರಧಾನಿಗೆ ಜಯಾ ಪತ್ರ]

ಸಂವಿಧಾನ ತಿದ್ದುಪಡಿಯೊಂದೇ ಮಾರ್ಗ!

ಸಮಸ್ಯೆಯ ಮೂಲ ಭಾರತೀಯ ಸಂವಿಧಾನ. ಎಲ್ಲಾ 22 ಭಾಷೆಗಳಿಗೂ ರಾಷ್ಟ್ರದ ಆಡಳಿತ ಭಾಷೆಗಳನ್ನಾಗಿಸುವುದೇ ಇದಕ್ಕೆ ಪರಿಹಾರ. ಸಿಂಗಪುರ, ಬೆಲ್ಜಿಯಂ, ಕೆನಡಾ ದೇಶಗಳಲ್ಲಿ ಒಂದಕ್ಕಿಂತ ಹೆಚ್ಚು ಆಡಳಿತ ಭಾಷೆಗಳಿರುವಾಗ ಭಾರತದಲ್ಲಿ 22 ಏಕೆ ಸಾಧ್ಯವಿಲ್ಲ? ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಇವೆಲ್ಲಾ ಇರುವುದು ಜನಸಾಮಾನ್ಯರ ಸೇವೆಗಾಗಿ, ಜನರ ಭಾಷೆಯನ್ನೇ ಕಡೆಗಣಿಸೋ ಇಂದಿನ ವ್ಯವಸ್ಥೆ ಬದಲಾಗದೆ ಹಿಂದಿಯನ್ನು ಎಲ್ಲೆಡೆ ಹರಡುವ ಆ ಮೂಲಕ ಹಿಂದಿ ಭಾಷಿಕರಿಗೆ ದೇಶದ ಯಾವಮೂಲೆಯಲ್ಲೂ ಯಾವ ತೊಡಕೂ ಆಗದಂತೆ ಎಚ್ಚರ ವಹಿಸುವ ತಾರತಮ್ಯ ತೋರುವ ಮೂಲಕ ಭಾರತ ಏಕತೆಯನ್ನು ಕಟ್ಟಲು ಸಾಧ್ಯವಿಲ್ಲ. ವಾಸ್ತವವಾಗಿ ಇದು ದೇಶದ ಒಡಕಿಗೇ ಕಾರಣವಾದೀತು!

English summary
Govt's directive on Hindi by union ministry is widely criticized by many non-Hindi speaking people across India. But, other languages like Kannada are not getting fair treatment. Why is that so? What is the solution?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X