ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಲಿಗೆಯಂಥ ಮಕ್ಕಳ ಮನಸ್ಸನ್ನು ನೋಯಿಸಬೇಡಿ

By ಮಾಧವ ವೆಂಕಟೇಶ್
|
Google Oneindia Kannada News

"ಒಂದು ಕೆಟ್ಟ ಮಗು ಎಲ್ಲೂ ಇರುವುದಿಲ್ಲ; ಆದರೆ ಆಲಸಿ ಪೋಷಕರು ಹಿಂಡುಹಿಂಡಿನಲ್ಲಿ ಸಿಗುತ್ತಾರೆ." ಹೀಗಂತ ಯಾರಾದರೂ ಭಾಷಣದ ಮಧ್ಯೆ ಹೇಳಿದಾಗ, ಅಪ್ಪಿತಪ್ಪಿ ಈ ಮಾತಿಗೆ ಚಪ್ಪಾಳೆ ಸಿಕ್ಕರೆ, ಅದು ಮಕ್ಕಳಿಂದಲೇ ಬರಬೇಕು; ಅವರ ಅಪ್ಪ-ಅಮ್ಮಂದಿರು ಸ್ವಲ್ಪ ಸೀಟಿನಲ್ಲಿ ಕೆಳಗೆ ಜಾರಿ ಕೊಂಡಿರುತ್ತಾರೆ.

ಕೆಟ್ಟ ಪೋಷಕರೂ ಕೂಡ ಈ ಜಗತ್ತಿನಲ್ಲಿ ಇರಬಹುದು ಎಂಬ ಅಭಿಪ್ರಾಯ ನಮ್ಮ ಸಮಾಜದಲ್ಲಿ ತುಂಬಾ ಜನಪ್ರಿಯವಲ್ಲ. ಕೆಟ್ಟವರು ಅಂದರೆ ಹಿಂಸಾತ್ಮಕವಾಗಿ ನಡೆದುಕೊಳ್ಳುವ ವಿಕೃತಮನಸ್ಸಿನವರು ಅಂತಾನೆ ಅಲ್ಲ. ದೈನಂದಿನ ಬದುಕಿನಲ್ಲಿ ಪುಟಾಣಿಗಳ ಬಗ್ಗೆ ಸೂಕ್ಷ್ಮತೆಯನ್ನು ತೋರಿಸದ, "ಎಲ್ಲಾ ಕೊಟ್ಟಿಲ್ವ, ನಿನ್ಗೇನ್ ಧಾಡಿ" ಎಂದು ದರ್ಪ ತೋರಿಸಿ, ಮಕ್ಕಳ ಮೇಲೆ ರಾಜ್ಯಭಾರ ಮಾಡುವವರೂ ಕೆಟ್ಟ ಪೋಷಕರೇ.

ಮಕ್ಕಳನ್ನು ಬೆಳೆಸುವುದು ಸುಲಭದ ಮಾತಲ್ಲ. ಕೆಲವು ಬಾರಿ ಅವರಿಗೆ ಸರಿ ದಾರಿ ತೋರಿಸಬೇಕು. ತಿದ್ದಬೇಕು. ಆದರೆ, ಇದನ್ನು ಮಾಡುವ ಒಂದು ಶಾಂತ ವಿಧಾನವಿದೆ. ಅವರೊಂದಿಗೆ ನಡೆದುಕೊಳ್ಳುವ ಒಂದು ಸೌಜನ್ಯ ರೀತಿ ಇದೆ. ಏನಪ್ಪಾ ಅದು ಅಂದ್ರ? ಮುಂದೆ ಓದಿ ನೋಡಿ... [ಮಕ್ಕಳನ್ನು ಬೆಳೆಸೋದು ಅಂದ್ರೆ ತಮಾಷೆ ಅಲ್ಲರೀ!] [ಭಾಗ 2 : ಮಲ್ಲಿಗೆಯಂಥ ಮಕ್ಕಳು]

ನಿಮ್ಮಂತೆ ಮಕ್ಕಳಲ್ಲೂ ಎಲ್ಲಾ ಭಾವನೆಗಳು ಇರುತ್ತವೆ

ನಿಮ್ಮಂತೆ ಮಕ್ಕಳಲ್ಲೂ ಎಲ್ಲಾ ಭಾವನೆಗಳು ಇರುತ್ತವೆ

ಮೊದಲನೆಯದಾಗಿ, ಮಕ್ಕಳೂ ಕೂಡ ಸಂಪೂರ್ಣ ಮನುಷ್ಯರು ಎಂಬುದನ್ನು ನಿಮ್ಮಲ್ಲಿ ಖಚಿತ ಮಾಡಿಕೊಳ್ಳಿ. ಅವರು "ಅರ್ಧ" ಮನುಷ್ಯರಲ್ಲ. ನಿಮಗೆ ವಿಶ್ವದ ಬಗ್ಗೆ ಸ್ವಲ್ಪ ಜಾಸ್ತಿ ಗೊತ್ತಿರಬಹುದು ಮತ್ತು ಗಾತ್ರದಲ್ಲಿ ಅವರಿಗಿಂತ ದೊಡ್ಡವರಿರಬಹುದು. ಆದರೆ ಅವರಿಗೂ ಕೂಡ ನಿಮ್ಮಂತೆ ಎಲ್ಲಾ ಭಾವನೆಗಳು, ಕಲ್ಪನೆಗಳು, ಅನಿಸಿಕೆಗಳು, ಅವರ ತಿಳಿವಳಿಕೆಗೆ ತಕ್ಕಂತೆ ಇರುತ್ತವೆ.

ಆತ್ಮವಿಶ್ವಾಸ ಯಾವುದೇ ಕಾರಣಕ್ಕೂ ಕುಗ್ಗಿಸಬೇಡಿ

ಆತ್ಮವಿಶ್ವಾಸ ಯಾವುದೇ ಕಾರಣಕ್ಕೂ ಕುಗ್ಗಿಸಬೇಡಿ

ಮಕ್ಕಳ ಆತ್ಮವಿಶ್ವಾಸವನ್ನು ಯಾವುದೇ ಕಾರಣಕ್ಕೂ ಕುಗ್ಗಿಸಬೇಡಿ. ನೀವು ಇದನ್ನ ಅರಿವಿಲ್ಲದೆ ಮಾಡುತ್ತಿರಬಹುದು. ಹೊರಗಿನವರ ಮುಂದೆ ಅವರ "ಕೊರತೆ"ಗಳನ್ನು ಹೇಳುವುದು, ಹಿಗ್ಗಾಮುಗ್ಗಾ ಬಯ್ಯುವುದು, "ಓಹೋಹೋ, ಸಮಾಜ ಸೇವೆ ಮಾಡ್ತಾಳಂತೆ. ಏನ್ ಭಾರಿ ಮದರ್ ತೆರೇಸಾನಾ ನೀನು?" ಅಂತ ಹೀನಾಯವಾಗಿ ಗೇಲಿ ಮಾಡುವುದು, ಮುಂತಾದ ವರ್ತನೆಗಳು ತೀರ ಅಸಹ್ಯಕರ.

ಮೊಂಡಾಟ ಹೆಚ್ಚಾಗುತ್ತದೆ, ಚೈತನ್ಯ ಕುಗ್ಗುತ್ತದೆ

ಮೊಂಡಾಟ ಹೆಚ್ಚಾಗುತ್ತದೆ, ಚೈತನ್ಯ ಕುಗ್ಗುತ್ತದೆ

ಸದಾಕಾಲ ನಿಮ್ಮ ಮಕ್ಕಳನ್ನು ತಿದ್ದುವುದನ್ನು ಮತ್ತೆ ವಿಮರ್ಶಿಸುವುದನ್ನು ಬಿಡಿ. ತುಂಬಾ ಮನೆಗಳು ಮಕ್ಕಳಿಗೆ 24 ಘಂಟೆಯ ಆರ್ಮಿ ಕ್ಯಾಂಪ್ ಗಳಾಗಿಬಿಟ್ಟಿರುತ್ತವೆ. "ಏಯ್ ಸರಿಯಾಗಿ ಕೂತ್ಕೋ! ಏಯ್ ಜೋರಾಗಿ ಮಾತಾಡು! ಏಯ್ ಆ ಬಟ್ಟೆ ಹಾಕೋಬೇಡ! ಏಯ್ ಯಾಕೆ ಬೇಜಾರ್ಮಾದ್ಕೊಂಡಿದ್ಯ? ನಗು! ಐ ಸೆಡ್ ನಗು!". ಮಕ್ಕಳಿಗೆ ಮಾಡು-ಮಾಡಬೇಡಗಳನ್ನು ಹೇಳುವುದು ಕೆಲವು ಬಾರಿ ಸೂಕ್ತ. ಆದರೆ, ನೀವು ಇದನ್ನು ನಿಮ್ಮ ಜೀವನದ ಮೂಲ ಉದ್ದೇಶವನ್ನಾಗಿ ಮಾಡಿಕೊಂಡರೆ, ಅವರ ಮೊಂಡಾಟ ಹೆಚ್ಚುತ್ತಾ ಹೋಗುತ್ತದೆ, ನಿಮ್ಮ ಚೈತನ್ಯ ಕುಗುತ್ತಾ ಹೋಗುತ್ತದೆ.

ನೀವೇನು ಶಿವಾಜಿನಗರದ ರೌಡಿನಾ?

ನೀವೇನು ಶಿವಾಜಿನಗರದ ರೌಡಿನಾ?

ಹಾಗೆಯೇ, ಪುಟಾಣಿಗಳಿಗೆ ಧಮ್ಕಿ ಹಾಕುವುದನ್ನು ಬಿಡಿ. "ಬಟ್ಟೆ ಮಡ್ಚಿಟ್ಕೋ, ಇಲ್ದಿದ್ರೇ... " ಅಂತ ಶಿವಾಜಿನಗರದ ರೌಡಿ ತರ ಆವಾಜ್ ಹಾಕುವ ಬದಲು, "ರೂಂ ನೀಟ್ ಆಗಿ ಇಟ್ಕೊ. ಆಗ ನಿಂಗೇ ಇನ್ನೂ ಚೆನ್ನಾಗಿ ಅನ್ಸತ್ತೆ " ಅಂತ ಸಮಾಧಾನಕರವಾದ ಒಂದು ವಿವರಣೆ ನೀಡಿ. ಮಹತ್ವ ವಿಷಯಗಳ ಬಗ್ಗೆ ಸ್ಥಿರವಾಗಿರಿ, ಆದರೆ ಹಿಟ್ಲರ್ ತರ ನಿರ್ದಯಿಗಳಾಗಬೇಡಿ.

ಮಕ್ಕಳನ್ನು ಸ್ವಂತ ಮಾಡಿಕೊಳ್ಳುವುದನ್ನು ಬಿಡಿ

ಮಕ್ಕಳನ್ನು ಸ್ವಂತ ಮಾಡಿಕೊಳ್ಳುವುದನ್ನು ಬಿಡಿ

ನಿಮ್ಮ ಮಕ್ಕಳನ್ನು "ಸ್ವಂತ" ಮಾಡಿಕೊಳ್ಳುವುದನ್ನು ಬಿಡಿ. "ನನ್ ಮಕ್ಳು ನಾನ್ ಹೇಳ್ದಂಗೆ ಕೇಳ್ಬೇಕು" ಅಂತ ಗಬ್ಬರ್ ಸಿಂಗ್ ತರ ಅಬ್ಬರ ಮಾಡಿದರೆ, ಅದು ಅಹಂಕಾರ ಮತ್ತು ಅಧಿಕಾರದ ಕಡುಬಯಕೆಯ ಸಂಕೇತ.

ಮನೆಯನ್ನು ಕುರುಕ್ಷೇತ್ರ ಮಾಡಬೇಡಿ

ಮನೆಯನ್ನು ಕುರುಕ್ಷೇತ್ರ ಮಾಡಬೇಡಿ

"ಇನ್ಮುಂದೆ ಕುಟುಂಬ ಕದನಗಳಿಗೆ ನಾನು ಭಾಗಿಯಾಗುವುದಿಲ್ಲ" ಎಂದು ನಿರ್ಧರಿಸಿ. ನಿಮ್ಮ ಮನೆಯ ಮಕ್ಕಳಿಗೆ ಆಗೋ ಮಾನಸಿಕ ನೋವನ್ನು ಈ ಮೂಲಕ ತಪ್ಪಿಸಿ. ಪ್ರಾಣಿಗಳ ತರ ಹಾಹೂ ಅಂತ ಮನೆ ಮಂದಿಯೆಲ್ಲಾ ಎಗರಾಡಿದರೆ, ಮನೆಯವರ ಆರೋಗ್ಯ ಕೆಡುತ್ತದೇ ಹೊರತು, ಸಮಸ್ಯೆ ಬಗೆಹರಿಯುವುದಿಲ್ಲ. ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿ, ಆದರೆ ಮನೆಯನ್ನು ಕುರುಕ್ಷೇತ್ರ ಮಾಡಬೇಡಿ.

ಮಗುವಿನ ಮೇಲೆ ಕೈ ಮಾಡುವ ಮುನ್ನ

ಮಗುವಿನ ಮೇಲೆ ಕೈ ಮಾಡುವ ಮುನ್ನ

ಮುಂದಿನ ಬಾರಿ ನಿಮ್ಮ ಮಗುವಿನ ಮೇಲೆ ಕೈ ಮಾಡುವ ಮುನ್ನ, ಒಂದು ಆಳವಾದ ಉಸಿರು ತೊಗೊಂಡು ನಿಮ್ಮ ಕೋಪವನ್ನು ಮತ್ತು ಇತರ ಭಾವನೆಗಳನ್ನು ಗಮನಿಸಿ. ನಮ್ಮ ಮಾನಸಿಕ ವಾಕ್ಯಗಳ ವಿಮರ್ಶಾರಹಿತ ವೀಕ್ಷಣೆಯಿಂದ ಮನಶ್ಶಾಂತಿ ಅನುಭವಿಸಬಹುದು. ಕ್ರೋಧಾವೇಶದಿಂದ ಮೈಮರೆತು, ಪುಟಾಣಿಗಳಿಗೆ ಮಕಮಕನೆ ಹೊಡೆಯುವ ತಂದೆ-ತಾಯಿಯರು ನಮ್ಮಲ್ಲಿ ಅನೇಕ ಮಂದಿ ಇದ್ದಾರೆ. ಈ ಕ್ರೂರ ವರ್ತನೆಯಿಂದ ಮಕ್ಕಳು ಮಾನಸಿಕ ತೊಂದರೆಗಳಿಗೆ ಈಡಾಗುತ್ತಾರೆ ಮತ್ತು ಮೊಂಡು ಬೀಳುತ್ತಾರೆ. ಕಲಿಸಬೇಕಾದ ಶಿಸ್ತನ್ನು ಅಹಿಂಸಾತ್ಮಕವಾಗೇ ತಿಳಿಸಿ.

ರಿಸ್ಕ್ ಎದುರಿಸುವ ಸ್ವಾತಂತ್ರ್ಯ ಮಕ್ಕಳಿಗೆ ಕೊಡಿ

ರಿಸ್ಕ್ ಎದುರಿಸುವ ಸ್ವಾತಂತ್ರ್ಯ ಮಕ್ಕಳಿಗೆ ಕೊಡಿ

ಎಲ್ಲಾ ತೊಂದರೆಗಳಿಂದ ಮಕ್ಕಳನ್ನು ರಕ್ಷಿಸುವ ಸೂಪರ್ಮ್ಯಾನ್ ಆಗಬೇಡಿ. ಅವರಿಗೆ ಉಸಿರು ಕಟ್ಟುವಂತೆ ಹಿಂಬಾಲಿಸಬೇಡಿ. ನಿಮ್ಮ ಮಕ್ಕಳ ವಯಸ್ಸಿಗೆ ತಕ್ಕಂತೆ ಕೆಲವು ನಿರುಪದ್ರವಿ ರಿಸ್ಕ್ ಗಳನ್ನು ಎದುರಿಸುವ ಸ್ವಾತಂತ್ರ್ಯವನ್ನು ಅವರಿಗೆ ಕೊಡಿ.

ನಿಮ್ಮ ಮಕ್ಕಳ ಸ್ಪೋಕ್ಸ್ ಪರ್ಸನ್ ಆಗಬೇಡಿ

ನಿಮ್ಮ ಮಕ್ಕಳ ಸ್ಪೋಕ್ಸ್ ಪರ್ಸನ್ ಆಗಬೇಡಿ

ಮುಂದಿನ ಬಾರಿ ನೀವು ಮಗಳೊಂದಿಗೆ ಯಾವುದೋ ಮದುವೆ ಊಟಕ್ಕೆ ಕೂತಾಗ, ಪಕ್ಕದವರು ನಿಮ್ಮ ಮಗಳಿಗೆ, "ಮರಿ, ಇನ್ನೊಂದು ಸ್ವೀಟ್ ಹಾಕಿಸ್ಕೋ. ಯಾಕ್ ಸಂಕೋಚ ಪಟ್ಕೋತ್ಯ?" ಅಂತ ಹೇಳಿದಾಗ, "ಓ, ಅವಳು ಏನೂ ತಿನ್ನಲ್ಲ ಕಣ್ರೀ. ತುಂಬಾ ನಾಜೂಕು. ಊಟ ಮಾಡ್ವಾಗ್ಲೂ ಮೊಬೈಲು" ಅಂತ ನಿಮ್ಮ ಮಗಳಿಗೆ spokesperson ಆಗಬೇಡಿ. ಅವಳಿಗೆ ಏನ್ ಅನ್ಸತ್ತೋ ಅದನ್ನ ವ್ಯಕ್ತಪಡಿಸಲಿ. ಅದೇ ರೀತಿ, ನಿಮ್ಮ ಮಗಳಿಗೆ ಮಾತನಾಡುವ ಬದಲು, ನಿಮ್ಮ ಮಗಳೊಂದಿಗೆ ಮಾತನಾಡಲು ಆರಂಭಿಸಿ. ಸುಮ್ನೆ ರಾಜಕಾರಣಿ ತರ ನೀವೇ ಭಾಷಣ ಮಾಡ್ತಾ ಇದ್ರೆ, ಕೇಳೋರು ಯಾರು ಹೇಳಿ?

ಮತ್ತೊಂದಿಷ್ಟು ಸೂತ್ರಗಳು ಮುಂದಿನ ವಾರ

ಮತ್ತೊಂದಿಷ್ಟು ಸೂತ್ರಗಳು ಮುಂದಿನ ವಾರ

ಮಕ್ಕಳನ್ನು ಪ್ರಜ್ಞಾವಂತ ನಾಗರಿಕರನ್ನಾಗಿ ಮಾಡಲು, ಅವರನ್ನು ಸ್ವತಂತ್ರ ಪ್ರಜೆಗಳನ್ನಾಗಿ ಮಾಡಲು ಮತ್ತೊಂದಿಷ್ಟು ಸೂತ್ರಗಳನ್ನು ಮುಂದಿನ ವಾರ ಚರ್ಚಿಸಲಾಗುವುದು...

English summary
Bringing up children is not an easy task. Never ever act like a Hilter. Understand the mind of your children and act accordingly to make them responsible citizen. Madhava Venkatesh explains few tips for the parents. Be a good parent to make your child good person.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X