ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಸ್! ಇದು ಬಿಟಿಎಸ್! : ಬಸ್ಸಲ್ಲಿ ಓಡಾಡುವವಳ ಸ್ವಗತ

By ಕುಮುದವಲ್ಲಿ ಅರುಣ್, ಬೆಂಗಳೂರು
|
Google Oneindia Kannada News

Soliloquy of a bus commuter in Bangalore
ಜಯನಗರ 4ನೇ ಬ್ಲಾಕ್ ಬಸ್‍ಸ್ಟಾಂಡ್‍ನಲ್ಲಿ ಮೆಜೆಸ್ಟಿಕ್ ಬಸ್‍ಗಾಗಿ ಸುಮಾರು ಅರ್ಧಗಂಟೆಯಿಂದ ಕಾದೂ ಕಾದೂ ಸಾಕಾಗಿತ್ತು. ಏನಿಲ್ಲಾ ಅಂದ್ರೂ ಒಂದೈವತ್ತು ಅರವತ್ತು ಜನ ಇದ್ರು. ಅದೇನೋ ಶಿವಾಜಿನಗರದ ಬಸ್‍ಗೆ ಕಾಯ್ತಿದ್ರೆ, ಸಾಲು ಸಾಲಾಗಿ ಮೆಜೆಸ್ಟಿಕ್ ಬಸ್‍ಗಳು ಬರುತ್ತೆ... ಮೆಜೆಸ್ಟಿಕ್ ಬಸ್‍ಗೆ ಕಾಯ್ತಾ ಇರೋವಾಗ ಮಾತ್ರ ಅದು ಬರೋಲ್ಲ, ಬೇರೆ ಎಲ್ಲಾ ಬಸ್ಸೂ ಬರುತ್ತೆ! ಅದು ನನಗೆ ಮಾತ್ರ ಹಾಗೇನಾ? ಅಥ್ವಾ ಎಲ್ಲಾರ್ಗೂನಾ ಅನ್ನೋ ಜಿಜ್ಞಾಸೆಯಲ್ಲೇ ಉಗುರುಕಚ್ಚುತ್ತಾ ಕಾಯ್ತಾನೇ ಇದ್ದೆ.

ಅಬ್ಬಾ, ಅಂತೂ 7 ತಿಂಗಳ ಬಸುರಿ ಸೀಮಂತ ಮಾಡಿಸಿಕೊಂಡು ಭಾರವಾದ ಹೆಜ್ಜೆಯಿಡುತ್ತಾ ನಡೆದು ಬರುವಂತೆ ಮೆಜೆಸ್ಟಿಕ್ ಬಸ್ ಬಂದೇ ಬಿಡ್ತು. ಸರಿ, ಇನ್ನು ಹತ್ತೋಕೆ ನೂಕು ನುಗ್ಗಲು. ಥತ್! ಕ್ಯೂ ಸಿಸ್ಟಮ್ ಯಾಕಿಲ್ಲಾ ಅನ್ಕೊಂಡು ನಾನೂ ಹತ್ತೇ ಬಿಟ್ಟೆ. ನಂಜೊತೇನೇ ಏಮಾರಿ ಹಂಗೂಹಿಂಗೂ ಇನ್ನೊಬ್ಳೂ ಹತ್ತಿದ್ಲು... ನೋಡ್ತೀನಿ, ಬಸ್‍ಗಿಂತಾ ದೊಡ್ಡಾದಾದ ಹೊಟ್ಟೆ, ತುಂಬು ಗರ್ಭಿಣಿ! "ಯಾಕೆ ಈ ರಶ್‍ನಲ್ಲಿ ಹತ್ತಿದ್ರಿ? ಇನ್ನೊಂದು ಬಸ್‍ಗೆ ಕಾಯ್ಬೋದಿತ್ತಲ್ಲಾ" ಅಂದೆ! "ಇನ್ನೊಂದ್ ಯಾವಾಗ ಬರುತ್ತೋ ಏನೋ... ಬೇಗ ಮನೆ ಸೇರ್ಕೋಬೇಕಲ್ಲಾ"... ಅಂದಳು.

ಬಸ್ ಹತ್ತಿ ಸುತ್ತಲೂ ನೋಡಿದ್ರೆ, ಎಲ್ಲಿದೆ ಸೀಟು? ಕಿವಿಗೆ ಎಫ್.ಎಂ, ಹಾಕ್ಕೊಂಡು ಕುಳಿತ ಕಾಲೇಜು ಕನ್ಯೆಯರು. ಒಬ್ಬರಿಗಾದ್ರೂ ಯಾರು ಹತ್ತಿದ್ರು, ಯಾರು ಇಳಿದ್ರು ಅನ್ನೋ ಪರಿಜ್ಞಾನವಿಲ್ಲ. ಅವರದೇ ಪ್ರಪಂಚ. ತುಂಬು ಗರ್ಭಿಣಿಗೆ ಸೀಟು ಬಿಟ್ಟುಕೊಡಲೂ ಯಾರಿಗೂ ಇಷ್ಟವಿದ್ದಂತಿಲ್ಲ. ಯಾರೋ ಅಜ್ಜಿ, ಅಲ್ಲೇ ಬಸ್‍ಬಾಗಿಲ ಪಕ್ಕದಲ್ಲೇ ಕುಕ್ಕರಿಸಿದ್ದಳು. ಇನ್ನೊಬ್ಬಳು ಒಂದು ಕೈಯಲ್ಲಿ ತನ್ನ ಮಗುವನ್ನೆತ್ತಿಕೊಂಡು ಇನ್ನೊಂದು ಕೈಲಿ ಬಸ್ಸಿನ ಕಂಬಿ ಹಿಡಿದು ಸರ್ಕಸ್ ಮಾಡುತ್ತಿದ್ದಳು.

ನನಗೆ ರೇಗಿ ಹೋಯಿತು... ಒಬ್ಬ ಹುಡುಗಿಯನ್ನ ಅಲ್ಲಾಡಿಸಿ ರೇಡಿಯೋ ಪ್ರಪಂಚದಿಂದ ಎಬ್ಬಿಸಿ, ಅಟ್ಲೀಸ್ಟ್ ಆ ಬಸುರಿ ಹೆಣ್ಣಿಗಾದ್ರೂ ಸೀಟು ಬಿಟ್ಟುಕೊಡಿ ಅಂತ ಕೇಳಿದ್ರೆ, ನಾನೇನೋ ಅವಳಿಗೆ ಸುಪಾರಿ ಕೊಟ್ಟ ಥರ ನೋಡಿ, ಮತ್ತೆ ಯಥಾಸ್ಥಿತಿ ರೇಡಿಯೋ ಒಳಕ್ಕೆ ಹೊರಟೇಹೋದ್ಲು. ಕಂಡಕ್ಟರ್‌ನ ಕರೆದು ಕೇಳಿದೆ... ಯಾರಾದ್ರೂ ಸೀಟು ಬಿಟ್ಟು ಕೊಟ್ರೆ ಕೂತುಕೊಳ್ಳಿ ಅಂತ ಕೈಝಾಡಿಸಿ ಹೊರಟೇಹೋದ. ಯಾಕೋ ಏನೋ ತುಂಬಾ ಬೇಜಾರಾಯ್ತು. ಆ ಬಸುರಿ ಹೆಂಗ್ಸು ಮಾತ್ರ ಬೇಜಾರಿಲ್ಲದೆ ರಷ್‍ನಲ್ಲೇ ಕಂಬಿ ಹಿಡಿದು ನಿಂತಳು. ಮೆಜೆಸ್ಟಿಕ್ ತಲುಪೋವರೆಗೂ ನಂಜೊತೆ ಅವಳೂ ನಿಂತೇ ಇದ್ಳು.

ಇದು ಕಥೆಯಲ್ಲ! ನಿಜವಾಗ್ಲೂ ನಿಜ! ಯಾಕೆ ಹೀಗೆ ನಮ್ಮ ನಡುವೆ...? ಬಿಎಂಟಿಸಿ ಪ್ರಯಾಣ ಅಂದ್ರೆ ಪ್ರಯಾಸ ಅನ್ನೋದು ನಿಜವೇ. ಸರ್ಕಾರ ಹೆಣ್ಣುಮಕ್ಕಳಿಗೆ ಸೀಟು ಅಂತ ಮೀಸಲಾತಿ ಮಾಡಿದ್ರೂ... ಅಲ್ಲಿಯೇ ಬಂದು ಕೂರುವ ಗಂಡಸರಿಗೇನು ಕಮ್ಮಿ ಇಲ್ಲ. ನಾವು ಹೋಗಿ ಸೀಟು ಕೇಳಬೇಕು. ಅವರು ಹರಳೆಣ್ಣೆ ಕುಡಿದ ಮುಖ ಮಾಡಿ ಏಳಬೇಕು. ಇದು ನಿತ್ಯದ ಸೀನ್. ಹೋಗ್ಲೀ ಹುಡುಗಿಯರೇನು ಕಮ್ಮಿನೇ? "ಹಿರಿಯ ನಾಗರಿಕರಿಗೆ"... "ವಿಕಲ ಚೇತನರಿಗೆ" ಎಂಬ ಬೋರ್ಡ್ ಇದ್ರೂ ಅಂಥವರು ಬಸ್ ಹತ್ತಿದಾಗ, ಸೀಟು ಬಿಟ್ಟುಕೊಡುವರು ಬಹುಶಃ ಶೇಕಡ 20 ಮಂದಿ ಮಾತ್ರ. ನಮ್ಮ ಹೆಂಗಸರಲ್ಲೇ ಅಂತಃಕರಣವಿಲ್ಲವೇ ಎಂದು ಅನೇಕ ಬಾರಿ ಯೋಚಿಸಿದ್ದುಂಟು. ಹೋಗ್ಲೀ ಬಸ್ ಹತ್ತೋಕೂ ನೂಕು-ನುಗ್ಗಲು. ವಯಸ್ಸಾದೋರನ್ನ ತಳ್ಳಿಯಾದ್ರೂ ಮೊದಲು ಸೀಟು ಹಿಡಿಯುವ ಹುನ್ನಾರ. ಇದರ ಬಗ್ಗೆ ಬಸ್ಸಿನ ಡ್ರೈವರ್, ಕಂಡಕ್ಟರ್ (ಹೆಣ್ಣಾಗಿದ್ರೂ) ಕಂಡೂ...ಕಾಣದಂತೆ ಇರುವುದು ಶೋಚನೀಯ.

ಹೌದು, ಈಗಿನ ಹೆಣ್ಣುಮಕ್ಕಳು, ಗಂಡಸರಿಗೆ ಸರಿಸಮಾನರಾಗಿ ಶಿಫ್ಟಲ್ಲೂ ದುಡಿಯುತ್ತಿರುವುದು ಸರಿ. ಆಫೀಸ್ ಮಾತ್ರವಲ್ಲದೇ, ಮನೆಗೂ ಹೋಗಿ ಮತ್ತೆ ಅವರೇ ಕೆಲಸ ಮಾಡಬೇಕು, ಅದೂ ಸರಿ! ಅದಕ್ಕೇ ಬಸ್‍ನಲ್ಲಾದ್ರೂ ಕೂತು... ಸ್ವಲ್ಪ ತೂಕಡಿಸಿದ್ರೆ ಮೈ-ಮನಸ್ಸಿಗೆ ಹಾಯ್. ಅದು ಖಂಡಿತಾ ಸರಿ! ಆದ್ರೆ, ನಾವು ಸ್ವಾರ್ಥಿಗಳಾಗುವುದು ಎಷ್ಟು ಸರಿ? ಅಟ್‍ಲೀಸ್ಟ್ ವೃದ್ಧರಿಗೆ, ಅಂಗವಿಕಲರಿಗೆ, ಮಕ್ಕಳಿಗೆ, ಗರ್ಭಿಣಿಯರಿಗೆ... ಆದ್ಯತೆ ನೀಡಬೇಕಾದ್ದು ನಮ್ಮ ಕರ್ತವ್ಯವಲ್ಲವೇ? "ನಿಮ್ಮದೇ ರಿಸರ್ವ್‍ರ‍್ಡ್ ಸೀಟು ಇದ್ಯಲ್ಲಾ... ಅಲ್ಲೇ ಹೋಗಿ ಕುಳಿತುಕೊಳ್ಳಿ" ಅನ್ನೋ ಗಂಡಸರಿಗೇನೂ ಕಮ್ಮಿ ಇಲ್ಲ. ಮತ್ತದೇ ಪ್ರಶ್ನೆ, ನಾವೇಕೆ ಹೀಗಾಗಿದ್ದೇವೆ?

ಬಸ್‍ನಲ್ಲಿ ಕೂತಾಗ ಪಕ್ಕದವರ ಜೊತೆ ಮಾತನಾಡೋದು ಇರಲಿ, ನಗುವುದನ್ನೂ ನಾವು ಮರೆತಿದ್ದೇವೆ. ಇವತ್ತಿನ ಟ್ರಾಫಿಕ್, ಸಿಗ್ನಲ್ಲು ಎಲ್ಲಾ ದಾಟಿ ನಮ್ಮ ಸ್ಟಾಪ್ ತಲುಪೋಕೆ ನಮಗೆ ಏನಿಲ್ಲಾ ಅಂದ್ರೂ ಕನಿಷ್ಟ ಒಂದು ಗಂಟೆಯಾದ್ರೂ ಬೇಕು. ಇಷ್ಟು ದೂರದ ದಾರಿಯನ್ನು ಬಾಯಿಗೆ ಹೊಲಿಗೆ ಹಾಕಿ ಪ್ರಯಾಣಿಸುವುದು ನನಗಂತೂ ಸಾಧ್ಯವಿಲ್ಲ. ನಿತ್ಯ ಒಂದೇ ಬಸ್‍ನಲ್ಲಿ ಪ್ರಯಾಣಿಸುವವರಲ್ಲಿ ಸ್ನೇಹ ಪ್ರಕ್ರಿಯೆ ಸಹಜ. ಅದನ್ನೇ ಇತರರಲ್ಲೂ ಉಪಯೋಗಿಸಿದರೆ, ನಮ್ಮ ಸಮಾಜ ಸ್ನೇಹಮಯಿಯಾಗುವುದಲ್ಲವೇ? [ಕೃಪೆ : ಕುಮುದವಲ್ಲಿ ಫೇಸ್ ಬುಕ್ ಪುಟ]

English summary
Soliloquy of a bus commuter in Bangalore. Kumudavalli, RJ, actor, writer, social media enthusiast shares her experience when she boarded a BMTC bus in Jayanagar 4th block. No one was bothered to leave seat for a pregnant woman. She asks, why don't we have humanity?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X