ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮಾಜಿಕ ದಾರಿದ್ರ್ಯಂ ಯುಪಿಎ ಬಹುಮಾನಂ!

By ಮಹಾಂತೇಶ್ ವಕ್ಕುಂದ
|
Google Oneindia Kannada News

ಭಾರತ ಅಭಿವೃದ್ಧಿಶೀಲ ರಾಷ್ಟ್ರ, ಕಳೆದೆರಡು ದಶಕಗಳಿಂದ ನಾವು ನಾಗಾಲೋಟದಲ್ಲಿ ಬೆಳೆಯುತ್ತಿದ್ದೇವೆ ಎಂಬುದು ಈ ಜಗತ್ತಿಗೆ ತಿಳಿದಿರುವ ವಿಷಯ. ನೂರಿಪ್ಪತ್ತು ಕೋಟಿ ಜನಸಂಖ್ಯೆ, ಅತ್ಯಾದುನಿಕ ತಂತ್ರಜ್ಞಾನ, ಬೆಳೆದು ನಿಂತಿರುವ ಯುವಕರು, ಕಣ್ಣು ಹಾಯಿಸಿದಲ್ಲೆಲ್ಲ ಸಿಗುವ ಸಂಪತ್ತು, ಅತಿ ಕಡಿಮೆ ಪ್ರಕೃತಿ ವಿಕೋಪಗಳನ್ನು ಕಾಣುವ ನಾವು, ನಮ್ಮ ದೇಶ ಏನೆಲ್ಲ ಪ್ರಗತಿ ಮಾಡಬಹುದು ಎಂಬುದನ್ನು ಊಹಿಸುವುದು ಅಸಾಧ್ಯ. ಈ ಎಲ್ಲ ಸೌಕರ್ಯಗಳ ಪರಿಷ್ಕೃತ ಬಳಕೆಯಾದಲ್ಲಿ ನಮ್ಮ ಮುಂದೆ ಚೀನಾ ಯಾವ ಲೆಕ್ಕ..?

ಆದರೆ ನಾವೆತ್ತ ಸಾಗುತ್ತಿದ್ದೇವೆ ಎನ್ನುವುದು ಇಂದಿನ ಪ್ರಶ್ನೆ..? ಶ್ರಮಜೀವಿಗಳೆಂದು ಹೆಸರುವಾಸಿಯಾಗಿರುವ ಧಕ್ಷಿಣ ಭಾರತೀಯರ ಪೈಕಿ ಮುನ್ನುಗುತ್ತಿರುವ ಕನ್ನಡಿಗರ ರಾಜಧಾನಿ ಬೆಂಗಳೂರನ್ನೇ ವಿಶ್ಲೇಷಿಸಿ ನೋಡಿ, ಹೇಗಿದೆ ನಮ್ಮ ಪರಿಸ್ಥಿತಿ. ನಮ್ಮ ಬೆಂಗಳೂರಿನ ಪ್ರತಿಷ್ಠಿತ ಔಧ್ಯಮಿಕ ಕ್ಷೇತ್ರ ಪೀಣ್ಯಕ್ಕೆ ಕಾಲಿಟ್ಟರೆ ಅಲ್ಲಿನ ಉದ್ಯಮಿಗಳ ಗೋಳು ಏನೆಂಬುದು ಅರ್ಥವಾಗುತ್ತದೆ. ಸಣ್ಣ ಪುಟ್ಟ ಕೈಗಾರಿಕೆಗಳು, ಯಂತ್ರೋಪಕರಣಗಳನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿರುವ ಅದೆಷ್ಟೋ ಉಧ್ಯಮಗಳ, ಉಧ್ಯಮಿಗಳ ಗೋಳು ಹೇಳುವುದು ಕಷ್ಟ ಸಾಧ್ಯ. ಈ ಉಧ್ಯಮಗಳಲ್ಲಿ ಕೆಲಸ ಮಾಡಲು ನೌಕರರೇ ಸಿಗುತ್ತಿಲ್ಲ. ITI, ಮೆಕ್ಯಾನಿಕ್ ಮುಂತಾದ ಸಣ್ಣ ಪುಟ್ಟ ಕೆಲಸಗಳನ್ನು ಮಾಡಲು ಯುವಕರು ಇಂದು ಮುಂದೆ ಬರುತ್ತಿಲ್ಲ, ಯಾರಾದರು ಬಂದರೂ ಕೂಡ ಹೆಚ್ಚು ಸಮಯ ನಿಲ್ಲುವುದಿಲ್ಲ. ಹೀಗೆ ಅನಿರೀಕ್ಷಿತವಾಗಿ ಕೈ ಕೊಡುವ ಕಾರ್ಮಿಕರನ್ನಿಟ್ಟುಕೊಂಡು ಕೆಲಸ ಮಾಡುವ ಉಧ್ಯಮಗಳ ಪರಿಸ್ಥಿತಿ ಏನು? ಸಮಯಕ್ಕೆ ತಕ್ಕಂತೆ ಪ್ರಾಡಕ್ಟ್ ಡೆಲಿವರಿ ಕೊಡುವುದಾಗಲೀ, ವಿದೇಶಗಳಿಗೆ ರಫ್ತಾಗುವ ಉತ್ಪನ್ನಗಳ ವಿಲೆವಾರಿಯಾಗಲಿ, ಮಾಡುವ ಕೆಲಸದಲ್ಲಿ ಖುಶಲತೆ ಸಾಫಲ್ಯ ಇವೆಲ್ಲವನ್ನೂ ಸಾಧಿಸಲಾಗುವುದೇ? ಬೆಂಗಳೂರಿನ ಗತಿಯೇ ಹೀಗಾದರೆ ಇನ್ನು ನಮ್ಮ ಇತರ ನಗರಗಳ ಗತಿ ಏನು?

Food Security Bill

ಆ ಕೆಲವು ವರ್ಷಗಳ ಹಿಂದೆ ಅದೆಷ್ಟೋ ಯುವಕರು ಉದ್ಯೋಗ ಹುಡುಕಿಕೊಂಡು ಬೆಂಗಳೂರಿನಂತಹ ಮಹಾನಗರಗಳಿಗೆ ವಲಸೆ ಬರುತ್ತಿದ್ದರು, ಈಗಲು ಬರುತ್ತಾರೆ. ಆದರೆ ಅವರಿಬ್ಬರಲ್ಲಿ ಸಾಕಷ್ಟು ವ್ಯತ್ಯಾಸವಿದೆ, ಹಳಬರಿಗೆ ಕೆಲಸ ಬೇಕಿತ್ತು, ಮೈ ಬಗ್ಗಿಸಿ ದುಡಿಯುವ ಮನಸ್ಸಿತ್ತು, ಆದರೆ ಇಂದಿನ ಪೀಳಿಗೆಯ ಕನಿಷ್ಠ ವಿದ್ಯಾರ್ಹತೆಯ ಅದೆಷ್ಟೋ ಯುವಕರಿಗೆ ಫ್ಯಾಕ್ಟರಿಗಳಲ್ಲಿ, ಮೆಕ್ಯಾನಿಕಲ್ ಇಂಡಸ್ಟ್ರಿಗಳಲ್ಲಿ ಕೆಲಸ ಮಾಡಲು ಆಸಕ್ತಿ ಇಲ್ಲ. ಬಂದವರಿಗೆಲ್ಲ ಅರಾಮವೆನಿಸುವ ಉದ್ಯೋಗ ಬೇಕು, ಮೊದಲಾಗಿ ನಮ್ಮ ಯುವಕರು ಹಳ್ಳಿಯಿಂದ ಇಂದು ನಗರಗಳಿಗೆ ವಲಸೆ ಬರುವುದು ಜಾಸ್ತಿಯಾಗಿದೆ, ಅಂತದ್ರಲ್ಲಿ ಬಂದವರಿಗೆಲ್ಲ ವೈಟ್ ಕಾಲರ್ ಜಾಬ್ ಬೇಕು, ೮೦೦೦ ರೂಪಾಯಿ ಸಂಬಳ ಕೊಡುವ ಫ್ಯಾಕ್ಟರಿ ಅಥವಾ ಮೆಕ್ಯಾನಿಕಲ್ ಉಧ್ಯಮಗಳಿಗಿಂತ 6000 ರೂಪಾಯಿ ಸಿಕ್ಕರೂ ಮಂತ್ರಿ ಮಾಲ್ ಮುಂದೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಲು ಅದೆಷ್ಟೋ ಜನ ಇಚ್ಚಿಸುತ್ತಾರೆ. ಕಿವಿಗಿಡಿಚಿಕ್ಕುವ ಯಂತ್ರಗಳ ಮಧ್ಯೆ, ಕೈ ಮೈ ಮಸಿ ಮಾಡಿಕೊಂಡು ಆ ಉದ್ಯಮಗಳಲ್ಲಿ ಬೆವರು ಸುರಿಸುವ ಬದಲು ಹವಾನಿಯಂತ್ರಿತ ಮಾಲ್‌ನಲ್ಲಿ ಬೆದುರು ಗೊಂಬೆಗಳ ತರಹ ನಿಂತು ಹೋಗು ಬರುವ ಹೆಣ್ಣು ಮಕ್ಕಳಿಗೆ ಸೆಕ್ಯೂರಿಟಿ ಗಾರ್ಡ್ ಅಥವಾ ಒಬ್ಬ ಸೇಲ್ಸ್ ಮ್ಯಾನ್ ಆಗಿ ಕಾಳು ಹಾಕುವ ಸೌಭಾಗ್ಯ ಪಡೆದುಕೊಳ್ಳುತ್ತಿದ್ದಾರೆ. ಆದರೆ ಯುವಕರಲ್ಲಿ ಇಂತಹ ಸೋಮಾರಿತನದ ಭಾವನೆ ಮೂಡುತ್ತಿರುವುದಕ್ಕೆ ಕಾರಣವೇನು? ಹಾಗಿದ್ದರೂ ಪರವಾಗಿಲ್ಲ ಆದರೆ ಇನ್ನು ಅದೆಷ್ಟೋ ಜನ ಓದಿದ ಯುವಕರು ತಮ್ಮ ತಮ್ಮ ಊರು ಅಥವಾ ಹಳ್ಳಿಗಳನ್ನು ಬಿಟ್ಟು ಆಚೆ ಕಾಲೇ ಇಡುತ್ತಿಲ್ಲ.

ಮಹಾತ್ಮ ಗಾಂಧೀಜಿಯವರು ಆ ಕಾಲಕ್ಕೆ ಒಂದು ಮಾತು ಹೇಳಿದ್ದರಂತೆ "ಓದಿದ ಯುವಕರೆಲ್ಲ ತಮ್ಮ ತಮ್ಮ ಹಳ್ಳಿಗಳಿಗೆ ಹಿಂದಿರುಗಿದರೆ ಈ ದೇಶ ಉನ್ನತಿಯ ಉತ್ತುಂಗಕ್ಕೆರುವದು" ಎಂದು. ಆದರೆ ಇಲ್ಲಿ ಉಲ್ಲೇಖಿಸಿರುವ ಈ ಮೇಲಿನ ಯುವಕರಿಗೆ ಈ ಮಾತು ಅನ್ವಯಿಸುವುದಿಲ್ಲ. ಇವರ್ಯಾರು ಹಳ್ಳಿಗಳನ್ನು ಉದ್ಧಾರ ಮಾಡಲಿಕ್ಕಾಗಿ ಅಲ್ಲಿ ಕುಳಿತಿಲ್ಲ, ಬದಲಾಗಿ ಹಳ್ಳಿಯಲ್ಲಿದ್ದರೆ ಸಿಗುವ ಬಿಟ್ಟಿ ಸೌಲಭ್ಯಗಳನ್ನು ಬಳಸಿಕೊಳ್ಳಲಿಕ್ಕಾಗಿ ಅಲ್ಲಿ ಉಳಿದವರು. ಈ ಮಾತು ಗೊತ್ತಿದ್ದಿದ್ದರೆ ಆ ಕಾಲಕ್ಕೆ ಆ ಮಹಾತ್ಮ ಹಾಗೆ ಹೇಳುತ್ತಿರಲಿಲ್ಲವೇನೋ .... ಆದರೆ ಇದು ನಿಜ. ಅದೇ ಮಹಾತ್ಮರ ಹೆಸರಿಟ್ಟುಕೊಂಡು ಕೇಂದ್ರ ಸರಕಾರ ನಡೆಸುತ್ತಿರುವ ಗಾಂಧೀ ಪರಿವಾದವರು ನಮ್ಮ ಯುವಕರಿಗೆ ನೀಡಿರುವ ಹೊಸ ಹೊಸ ಸ್ಕೀಮ್ ಗಳ ಪರಿಣಾಮವಿದು.

ರಾಣೇಬೆನ್ನೂರು ತಾಲೂಕಿನ ಒಂದು ಹಳ್ಳಿ, ಅಲ್ಲಿ ಸರಿಯಾಗಿ ಕುಡಿಯಲು ನೀರಿಲ್ಲ , ಮಳೆ ಬೆಳೆ ಅಷ್ಟಕ್ಕಷ್ಟೇ ಆದರೆ ಮಾನವ ಸಂಪನ್ಮೂಲಕ್ಕೆನೂ ಬರವಿಲ್ಲ. ಈ ಒಂದು ಹಳ್ಳಿಯ ಉದಾಹರಣೆ ಅಷ್ಟೇ, ನಮ್ಮ ದೇಶದಲ್ಲಿ ಇದೆ ತರವಾದ ಸಾವಿರಾರು ಹಳ್ಳಿಗಳಿವೆ, ಇನ್ನು ಉತ್ತರ ಭಾರತದ ಬಗ್ಗೆ ವಿಶೇಷವಾಗೇನೂ ಹೇಳಬೇಕಿಲ್ಲ, ಆ ಹಳ್ಳಿಯ ಅದೆಷ್ಟೋ ಜನ ಯುವಕರು ಆ ಹಳ್ಳಿಯಲ್ಲೇ ಇದ್ದಾರೆ, ಗಾಂಧೀಜಿಯವರ ಕನಸು ನನಸಾಗಿಸುವ ಉದ್ದೇಶ ಅವರಿಗಿದ್ದಿದ್ದರೆ ಬರಗೆಟ್ಟ ಆ ಊರಿಗೆ ಅವರೆಲ್ಲ ಯುವಶಕ್ತಿಯ ಬಲ ತೋರಿಸಿ ಬಿತ್ತಿ ಬೆಳೆದು ಬಾಳು ಬಂಗಾರವಾಗಿಸಬಹುದಿತ್ತು. ಆದರೆ ಅಲ್ಲಿ ನಡೆಯುತ್ತಿರುವದೇ ಬೇರೆ, ಮಳೆ ಬೆಳೆ ಇಲ್ಲದ ಆ ಎಲ್ಲ ದಿನಗಳಲ್ಲಿ ಪಂಚಾಯಿತಿ ಕಟ್ಟೆಯ ಮೇಲೆ ಕೂತು ದಿನಪೂರ್ತಿ ಹರಟೆ, ತಲೆಹರಟೆ ಮಾಡುವುದೇ ಅವರ ಕಾಯಕ. ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಬಿಸಿಲಿನ ಬೇಗೆ ತಣಿಸಲು ಯಾರದೋ ಬಾವಿಯಲ್ಲಿ ಈಜು. ಸಂಜೆ ಮೃಷ್ಟಾನ್ನ, ರಾತ್ರಿ ಸುಖ ನಿದ್ರೆ ಇದೆ ಅವರ ದಿನಚರಿ... ಹೀಗೆ ವ್ಯಥಾ ಕಾಲಹರಣ ಮಾಡುತ್ತಿದ್ದ ಕೆಲ ಹುಡಗರನ್ನು ಪ್ರಶ್ನಿಸಿದ್ದು ಹೀಗೆ "ತಮ್ಮ ನಿಮಗೆಲ್ಲ ಕೆಲಸ ಇಲ್ಲೆನ್ರೆಪ್ಪ? ಇಲ್ಲ ಅಂದರೆ ಹೇಳ್ರಿ ನಾನು ಬೆಂಗಳೂರಿಗೆ ಕರಕೊಂಡ ಹೋಗಿ ಕೈಲಾಗಿದ್ದ ಕೆಲಸ ಕೊಡಸ್ತೆನಿ ಮಾಡ್ತಿರಾ? ಸುಮ್ಮನ ಕೂರೋ ಬದಲು ತಿಂಗಳಿದೆ ಖರ್ಚು ಕಳೆದು ೩ - ೪ ಸಾವಿರ ರುಪಾಯಿ ಉಳಿಸಬಹುದು, ಅದೆಷ್ಟೋ ಜನ ಫ್ಯಾಕ್ಟರಿ ಇಟ್ಟಕೊಂಡವರು ಕೆಲಸಗಾರರು ಇಲ್ಲ ಅಂತ ಹೇಳಿ ಬಾಳ ಕಷ್ಟ ಪಡಾಕತ್ತಾರ, ಅಲ್ಲಿಗೆ ಹೋದರೆ ನಿಮಗೂ ಅನುಕೂಲ ಅವರಿಗೂ ಸ್ವಲ್ಪ ಸಹಾಯ ಆಗ್ತದ". ಸುಮಾರು ಜನ ತಲೆ ಕೆಳಗೆ ಹಾಕಿದರು ಆದರೆ ಅಲ್ಲಿದ್ದ ಒಬ್ಬ ಭಂಡ ಉತ್ತರಿಸಿದ "ಸರಾ ನಾವ ಇಲ್ಲೇ ಕುಂತಾ ವರ್ಷ ೪೦ - ೫೦ ಸಾವ್ರ ಮಾಡ್ತೇವ್ ರೀ, ದುಡಿಯುದಿಲ್ಲ ಬಿಡುದಿಲ್ಲ. ಅದ ರೊಕ್ಕಕ್ಕ ಬೆಂಗಳೂರು ತನಕ ಯಾಕೆ ಬರಬೇಕ್ರಿ ?". ಒಂದು ಕ್ಷಣ ಬೆರಗಾದರು ಅವರು ಹೇಗೆ ಆ ದುಡ್ಡು ಹುಟ್ಟಿಸುತ್ತಾರೆ ಎಂಬುದನ್ನು ತಿಳಿಯುವ ಕುತೂಹಲದಿಂದ ನಾನು ಅವರನ್ನು ಕೇಳಿದೆ, "ಅದ್ಹೇಗೆ ? ಕೆಲಸ ಮಾಡದೆ ಎಲ್ಲಿಂದ ದುಡ್ಡು ಬರುತ್ತೆ ?" ಎಂಬಿತ್ಯಾದಿ ಪ್ರಶ್ನೆಗಳಿಗೆ ಆ ಯುವಕ ಉತ್ತರಿಸಿದ್ದನ್ನು ಕಂಡು ನಾನು ಕಂಗಾಲಾಗಿದ್ದೆ .

ಯುವಕರನ್ನು ಹಳ್ಳಿಗೆ ಕಳಿಸಿ ದೇಶ ರೂಪಿಸುವ ಕನಸ್ಸು ಕಂಡಿದ್ದ ಪಿತಾ ಮಹಾ ಮಹಾತ್ಮ ಗಾಂಧೀಜಿಯ ಹೆಸರಿಟ್ಟುಕೊಂಡು ಇದೆ UPA-1 ಕೇಂದ್ರ ಸರ್ಕಾರ 2005 ರಲ್ಲಿ 'ಮಹಾತ್ಮ ಗಾಂಧೀ ನ್ಯಾಷನಲ್ ರೂರಲ್ ಎಂಪ್ಲಾಯ್ಮೆಂಟ್ ಗ್ಯಾರಂಟಿ ಆಕ್ಟ್ (MGNREGA) ' ಅನ್ನೋ ಯೋಜನೆಯೊಂದನ್ನು ರೂಪಿಸಿತು. ಈ ಯೋಜನೆಯ ಪ್ರಕಾರ ಹಳ್ಳಿಯ ಯುವಕರಿಗೆ ವರ್ಷಕ್ಕೆ 100 ದಿನಗಳ ಸಂಬಳ ಖಚಿತ, ದಿನಕ್ಕೆ 120 ರುಪಾಯಿಯಂತೆ ಒಟ್ಟು 12 ಸಾವಿರ ರುಪಾಯಿಗಳನ್ನು ಯುವಕನೊಬ್ಬನಿಗೆ ಕೂತಲ್ಲೇ ಕೊಡುವದು ಈ ಯೋಜನ., ಈ ಯೋಜನೆಯ ಪ್ರಕಾರ ಆ ಹಳ್ಳಿಯ ಅಥವಾ ಗ್ರಾಮೀಣ ವಲಯದಲ್ಲಿ ಯುವಕರು ಕೆಲಸ ಮಾಡಬೇಕು. ಕೆಲಸ ಕೊಡುವುದು ಸರ್ಕಾರದ ಅಥವಾ ಆಯಾ ಇಲಾಖೆಯ ಜವಾಬ್ದಾರಿ ಆದರೆ ಕೆಲಸವಿಲ್ಲದಿದ್ದರೂ ಸಂಬಳ ಮಾತ್ರ ಕೊಡಲೇ ಬೇಕು. ಹೀಗೆ ಕೂತಲ್ಲೇ ತುತ್ತಿಡುವ ನಮ್ಮ ಸರಕಾರದ ಈ ಯೋಜನೆಯ ಪಲಾನುಭಾವಿ ಬೆಂಗಳೂರಿಗೆ ಬಂದು ಬೆನ್ನು ಬಗ್ಗಿಸಿ ದುಡಿಯುವುದೆಂದರೆ? ಕಷ್ಟವಲ್ಲವೋ ಮಾರಾಯರೇ ..... ಅಂದ ಹಾಗೆ ಈ ಯೋಜನೆಯಿಂದ ಆದ ಒಂದೇ ಒಂದು ಉಪಯೋಗದ ಅಥವಾ ಒಳ್ಳೆ ಕೆಲಸದ ನಿದರ್ಶನಗಳು ಕಂಡು ಬಂದಿಲ್ಲ. ಪ್ರತಿಷ್ಟಿತ ವಾಲ್ ಸ್ಟ್ರೀಟ್ ಜರ್ನಲ್ ನ ೨೦೧೧ ರ ವರದಿಯ ಪ್ರಕಾರ ಈ ಯೋಜನೆ ಒಂದು ದೊಡ್ಡ FAILURE. ಇನ್ನು ಈ ಯೋಜನೆಯಡಿ ನೊಂದಾಯಿಸಿಕೊಂಡ ಅದೆಷ್ಟೋ ಯುವಕರಿಗೆ ಸರಿಯಾಗಿ ಸಂಬಳ ಸಿಗದೇ ಅದನ್ನು ನುಂಗಿ ನೀರು ಕುಡಿದ ಹಲವಾರು ಉದಾಹರಣೆಗಳು ಉಂಟು.

MGNREGA ಯೋಜನೆಯಡಿ ನಮ್ಮ ಕೇಂದ್ರ ಸರ್ಕಾರ ಹೀಗೆ ಕೂತು ತಿನ್ನಲೆಂದು ಯುವಕರಿಗಾಗಿ 2006 - 07 ನೆ ಸಾಲಿನಲ್ಲಿ ಸರಾಸರಿ 12500 ಕೋಟಿ ರುಪಾಯಿಗಳನ್ನು ವ್ಯಯಿಸಿತ್ತು ಅದು 2010 - 11 ರ ಹೊತ್ತಿಗೆ ಸುಮಾರು 45 ಸಾವಿರ ಕೋಟಿ ರುಪಾಯಿಯ ಗಡಿ ದಾಟಿದೆ ಎಂದರೆ ಏನರ್ಥ ? ಒಬ್ಬ ಸಾಮಾನ್ಯ tax payer ಆಗಿ ನಮ್ಮ ಹೊಟ್ಟೆಯ ಮೇಲೆ ಇದು ಒಂದು ಬರೆ ಅಲ್ಲವೇ ?

ಆಗ ''आराम हराम है'' ಎಂದಿದ್ದ ನೆಹರು ರವರು ಬದುಕಿದ್ದಿದ್ದರೆ ಆ ಮಾತನ್ನು ಇಂದು 'आराम ही आराम है, जिंदगी हराम ही हराम है ' ಎಂದೆನ್ನುತ್ತಿದ್ದರೋ ಅಥವಾ ನನ್ನ ಪೀಳಿಗೆಯೇ (ಇಂದಿನ ಗಾಂಧಿ ಪರಿವಾರ ) ಈ ಪರಿಸ್ಥಿತಿ ಹುಟ್ಟು ಹಾಕಿದ್ದು ಎಂದು ತೆಪ್ಪಗಿರುತ್ತಿದ್ದರೋ ಯಾರಿಗೆ ಗೊತ್ತು ? ಹೇಗೊ ಎಡವತ್ತಾದಾಗ ತೆಪ್ಪಗಿರುವುದರಲ್ಲೂ ಕಾಂಗ್ರೆಸ್ಸಿಗರದು ಎತ್ತಿದ ಕೈ ಅಲ್ಲವೇ ?

ಯಾಕೆ ಈ U P A ಹೀಗೆ ? ಬಲಿಷ್ಠ ರಾಷ್ಟ ಕಟ್ಟುವುದು ಇವರ ಉದ್ದೇಶವೋ ಇಲ್ಲ ಬಲಿ ಕುರಿಗಳನ್ನು ಬೆಳೆಸುವುದೇ ಇವರ ಧ್ಯೇಯವೋ ? ವೋಟು ಬ್ಯಾಂಕ್ ರಾಜಕಾರಣಕ್ಕಾಗಿ ದುಡಿಯುವ ಕೈಗಳಿಗೆ ಬಳೆ ತೊಡಿಸಿ ದೇಶದ ಬೆನ್ನೆಲುಭಾಗಿರುವ ಯುವಶಕ್ತಿ ಗೆ ನರ ದೌರ್ಭಲ್ಯ ತುಂಬುತ್ತಿರುವ ಈ ಸರಕಾರ ಯಾವ ಪುರುಷಾರ್ಥಕ್ಕಾಗಿ ಇಂತಹ ಯೋಜನೆಗಳನ್ನು ಜಾರಿಗೆ ತರುತ್ತಿದೆ ? ಹಸಿದವನಿಗೆ ಕೆಲಸ ಕೊಡಿ, ದುಡಿಯುವವನಿಗೆ ಸಂಬಳ ಕೊಡಿ ಎಂಬ ಮಾತು ಇನ್ನು ಮಣ್ಣು ಪಾಲು ಅಷ್ಟೇ ...

ಇವೆಲ್ಲದರ ಮಧ್ಯೆ ಇನ್ನಷ್ಟೇ ಜಾರಿಯಾಗಲಿರುವ '' ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ '' ಬರಿ ಸೋಮಾರಿಗಳನ್ನೇ ಹುಟ್ಟು ಹಾಕುತ್ತದೆಯೇ ಹೊರತು ದುಡಿಯುವ ಕೈಗಳನ್ನಲ್ಲ. ಹೆಂಗೋ ಇದಾಗಲೇ ನಮ್ಮ ಸಿದ್ರಾಮಣ್ಣ ರೂಪಾಯಿ ಒಂದರಂತೆ ೩೦ ಕೆ.ಜಿ ಅಕ್ಕಿ ಕೊಡ್ತಾ ಇದ್ದಾರೆ, ಇದರ ಜೊತೆ ಎಣ್ಣೆ, ಗೋಧಿ, ಬೇಳೆ ಕೂಡ ಸೇರುತ್ತದೆ. ಇನ್ನು ಕೇಂದ್ರ ಸರ್ಕಾರ ಆಹಾರ ಭದ್ರತಾ ಯೋಜನೆಯನ್ನು ಜಾರಿಗೊಳಿಸಿ ಬಡವರನ್ನು ಬಡವರಾಗೇ ಉಳಿಸುವ ಒಂದು ದೊಡ್ಡ ತಪ್ಪು ಹೆಜ್ಜೆ ಇಡಲು ಹೊರಟಿರುವದು ನಿಜಕ್ಕೂ ವಿಪರ್ಯಾಸವೇ ಸರಿ. ಒಂದು ಕುಟುಂಬಕ್ಕೆ ರಾಜ್ಯ ಸರ್ಕಾರ 30 ಕ. ಜಿ ಅಕ್ಕಿ ಕೊಡುತ್ತದಂತೆ, ಇನ್ನು ಕೇಂದ್ರ ಸರ್ಕಾರದ ಕಾಳು ಕಡಿ ಬೇರೆ, ಒಂದು ಸಂಸಾರಕ್ಕೆ ಇಷ್ಟೆಲ್ಲ ಬೇಕಾ? ಹಾಗಾದರೆ ಇದೆ ಸರ್ಕಾರ ನ್ಯಾಯ ಬೆಲೆ ಅಂಗಡಿಗಳಿಂದ ಪಡೆಯುವ ಹೆಚ್ಚುವರಿ ಧಾನ್ಯಗಳನ್ನು ಕಳ್ಳ ಸಂತೆಯಲ್ಲಿ ಮಾರಲು ಜನರಿಗೆ ಮುಕ್ತ ಮಾರುಕಟ್ಟೆಯೊಂದನ್ನು ಶುರು ಮಾಡಿದರೆ ಎಲ್ಲರಿಗೂ ಅನುಕೂಲವಾಗಬಹುದೇನೋ. ಮನೆಗೆ ಉಪಯೋಗವಾಗುವ 8 - 10 ಕೆ ಜಿ ಅಕ್ಕಿ ಉಪಯೋಗಿಸಿ ಮಿಕ್ಕಿದ 20 ಕೆ ಜಿ ಅಕ್ಕಿಯನ್ನು 20 - 25 ರುಪಾಯಿಗೆ ಕಾಳ ಸಂತೆಯಲ್ಲಿ ಮಾರುವ ಮಹಾನುಭಾವರು ಸದ್ಯದಲ್ಲೇ ಹುಟ್ಟಿಕೊಂಡರೆ ಅವರನ್ನು ಹುಟ್ಟು ಹಾಕಿದ ಕೀರ್ತಿಯೂ ಕೂಡ ಕೇಂದ್ರದ UPA ಗೆ ಅಥವಾ ನಮ್ಮ ರಾಜ್ಯದ ಸಿದ್ರಾಮಣ್ಣ ನವರ ಸರ್ಕಾರಕ್ಕೆ ಸಲ್ಲುತ್ತದೆ. ಹೇಗೂ ಮಧ್ಯಮ ವರ್ಗದವರು ಹಾಗೂ ಅಲ್ಪ ಸ್ವಲ್ಪ ಶ್ರೀಮಂತರು ಟ್ಯಾಕ್ಸ್ ಕಟ್ಟುವುದಲ್ಲದೆ 60 - 70 ರುಪಾಯಿಗೆ ಕ. ಜಿ ಲೆಕ್ಕದಲ್ಲಿ ಅಕ್ಕಿ ಕೊಳ್ಳುತ್ತಾರೆ. ಇನ್ನು ಸರ್ಕಾರದವರು ಹೀಗೆ ಸಬ್ಸಿಡಿ ಕೊಟ್ಟು ಇದೆ ಮಧ್ಯಮ ವರ್ಗದವರು ಹಾಗೂ ಅಲ್ಪ ಸ್ವಲ್ಪ ಶ್ರೀಮಂತರ ಮೇಲೆ ಬರೆ ಎಳೆದು 1 ರುಪಾಯಿಗೆ ಕೆ.ಜಿ ಯಂತೆ ಇನ್ನುಳಿದವರಿಗೆ ಅಕ್ಕಿ ಕೊಡ್ತಾರೆ. ಹೀಗಾದಲ್ಲಿ ನಮ್ಮ ದೇಶ ಆಗೋದು ನಿರ್ನಾಮ, ಆಗ ಕಾಂಗ್ರೆಸ್ಸ್ ಹೇಳೋದು "हो रहा भारत निर्माण" ಅಲ್ಲ " हो गया भारत निर्नाम".

ಇವನ್ನೂ ಓದಿ: ಆಟೋಮೊಬೈಲ್ ದಿಗ್ಗಜರ ಶಿಸ್ತು ಹಾಗೂ ಸಹಕಾರ ಜೀವನ

ಹಗಲು ದರೋಡೆ ಮಾಡುತ್ತಿವೆಯೇ ನಮ್ಮ ಆಟೋಗಳು ?

English summary
Here is the Interesting article about UPA's MGNREGA Act and Upcoming Food security bill written by Mahentesh Vakkund expressed his personal experiences in this regard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X