ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾಲಕ್ಕಿ ತಿಂದ್ರೆ ಮಾಟ ಹೊಟ್ಟೆಗೆ ಹತ್ತಕ್ಕಿಲ್ಲ!

By * ಸಿದ್ದು ಯಾಪಲಪರವಿ, ಗದಗ
|
Google Oneindia Kannada News

Siddu Yapalaparavi, Gadag
21ನೇ ಶತಮಾನದಲ್ಲಿಯೂ ಮಾಟ ಮಾಡಿಸುತ್ತಾರೆ! ಹಿಂದಿನ ಕಾಲದಲ್ಲಿಯೂ ಮಾಟ ಮಂತ್ರ ಮಾಡಿಸುತ್ತಿದ್ದ ಸಂಗತಿ ಕೇಳಿದರೆ, ವಿಧಾನಸೌಧಕ್ಕೆ, ಮುಖ್ಯಮಂತ್ರಿಗಳಿಗೆ ಮಾಟ ಮಂತ್ರ ಮಾಡಿಸುತ್ತಿರುವುದು ಅಂತಹ ಪರಮಾಶ್ವರ್ಯದ ಸಂಗತಿಯಲ್ಲ ಬಿಡಿ. ನಾನು ಹನ್ನೆರಡರ ಪ್ರಾಯದಲ್ಲಿದ್ದಾಗಲೇ ಈ ಶಬ್ದಗಳನ್ನು ಕೇಳಿದ್ದೆ.

ಅವಿಭಕ್ತ ಕುಟುಂಬ, ವಿಭಕ್ತಗೊಳ್ಳುವದನ್ನು ಗ್ರಾಮ್ಯ ಭಾಷೆಯಲ್ಲಿ ಬ್ಯಾರೆ ಆಗುವುದು ಅನ್ನುತ್ತಿದ್ದರು. ಬ್ಯಾರೆ ಆಗುವುದು ಆ ಕಾಲದಲ್ಲಿ ದೇಶ ವಿಭಜನೆ ಆದಂತೆಯೇ. ಕಾರಟಗಿಯ ಪ್ರತಿಷ್ಠಿತ ಯಾಪಲಪರವಿ ಮನೆತನದವರು ಬ್ಯಾರೆ ಆಗ್ತಾರೆ ಅಂದದ್ದು ಇಡೀ ಊರನ್ನೇ ಬೆರಗುಗೊಳಿಸಿತ್ತು. ಸಾವಿರ ವರ್ಷ ಬದುಕಿದ್ರು ಸಾಯೋದು ತಪ್ಪಲಿಲ್ಲ, ನೂರು ವರ್ಷ ಕೂಡಿದ್ರು ಬ್ಯಾರೆ ಆಗೋದು ತಪ್ಪಲಿಲ್ಲ ಎಂಬುದೊಂದು ನಮ್ಮೂರಲ್ಲಿ ಪ್ರಚಲಿತ ಗಾದೆ.

1972ರಲ್ಲಿ ನಮ್ಮ ಮನೆತನದ ಬ್ಯಾರೆ ಆಗೋ ಪ್ರಕಿಯೆ ಶುರು ಆಯಿತು. ಕೂಡಿದ್ದಾಗ ಹಾಲು-ಜೇನಿನಂತೆ ಇರುವ ಕುಟುಂಬಗಳು ಬ್ಯಾರೆ ಆಗುವ ಸಂದರ್ಭದಲ್ಲಿ ದಾಯಾದಿ ಕಲಹದ ಸ್ವರೂಪ ತಾಳುವುದು ಕುಟುಂಬ ವ್ಯವಸ್ಥೆಯ ವಿಪರ್ಯಾಸ. ಒಂದರ್ಥದಲ್ಲಿ ಇದು ಕೂಡಾ ಅತ್ತೆ-ಸೊಸೆ ಸಂಬಂಧ ಇದ್ದ ಹಾಗೆ, ನೆವರ್ ಎಂಡಿಂಗ್ ಪ್ರಾಬ್ಲಂ ಅಂತಾರೆಲ್ಲ ಹಾಗೆ.

ಅಂತೂ ಇಂತೂ ಹತ್ತು ಹಲವು ಹೊಡೆದಾಟ ತಾಕಲಾಟಗಳ ನಡುವೆ ಬ್ಯಾರೆ ಆದದ್ದೇನೋ ಆಯಿತು. ಆದರೆ ನಂತರದ ಸಮಸ್ಯೆಗಳು ಅದಕ್ಕಿಂತಲೂ ಭಯಾನಕ. ಸರಿಯಾಗಿ ಪಾಲು ಕೊಡಲಿಲ್ಲ ಎಂಬ ಅಸಹನೆ ಅವ್ವನದಾದರೆ, ಸುರಕ್ಷಿತ ಬ್ಯಾರೆ ಆಗಲಿಲ್ಲ ಎಂಬ ಸಿಟ್ಟು ಅಮ್ಮನದು. ಇದು, ಮಾಟ ಮಾಡಿಸಿದ್ದಾರೆ ಎಂಬ ಹಂತಕ್ಕೆ ತಲುಪಿತು. ಮನೆತನದ ಹಿರಿಯ ಅಮ್ಮ, ಅವ್ವನ ಮೇಲಿನ ಸಿಟ್ಟಿಗೆ ಮಾಟ ಮಾಡಿಸುತ್ತಾಳೆ ಎಂಬ ಭಾವನೆ ಅವ್ವಗೆ ಬಂದಿದ್ದೆ ಮುಂದಿನ ಅವಾಂತರಗಳಿಗೆ ಕಾರಣವಾಯಿತು.

ಅವಿಭಕ್ತ ಕುಟುಂಬದಲ್ಲಿದ್ದಾಗ ಇದ್ದ ದನದ ಮನೆ ನಮ್ಮ ಪಾಲಿಗೆ ಬಂತು. ಹಾಗೆಯೆ, ಅದರ ಪಕ್ಕದಲ್ಲಿದ್ದ ಭಾವಿಯನ್ನು ಭಾಗ ಮಾಡಿದ್ದು ನಮ್ಮೂರ ಮಟ್ಟಿಗೆ ಇತಿಹಾಸವೇ. ದುಂಡಗಿನ ನೀರಿನಿಂದ ಆವೃತವಾದ ಜಾಗೆಯನ್ನು ಬಿಟ್ಟು ಉಳಿದ ಭಾವಿಮನೆಯನ್ನು ವಿಭಜಿಸಲು ಗೋಡೆ ಕಟ್ಟಲಾಯಿತು. ಹೀಗೆ ನೀರು ಕೊಡುವ ಭಾವಿಯನ್ನು ಹಂಚಿಕೊಂಡಿದ್ದು, ಅದಕ್ಕಾಗಿ ನಡುರಸ್ತೆಯಲ್ಲಿ ನಿಂತು ಅಮ್ಮ ಅವ್ವ ಚೀರಾಡಿದ್ದು ಇನ್ನೂ ಹಚ್ಚ ಹಸಿರಾಗಿದೆ. ಮಾತಿಗೆ ಮಾತು ಬೆಳೆದು ಅಮ್ಮ ಸಿಟ್ಟಿನಲ್ಲಿ ನೀರು ಹಂಚಿಕೊಂಡ ನಿನ್ನ ಹೊಟ್ಟೇಲಿ ನೀರು ತುಂಬಲಿ ಅಂದಳಂತೆ. ಮುಂದಿನ ದಿನಗಳಲ್ಲಿ ಆ ಮಾತು ಸತ್ಯ ಅನುವಂತೆ ಬಸುರಿಯಾಗಿದ್ದ ಅವ್ವನ ಹೊಟ್ಟೆಯಲ್ಲಿ ನೀರು ತುಂಬಿತ್ತಂತೆ ನೀರು ತುಂಬಿದ ಕಾರಣಕ್ಕೆ ಮಗು ಬದುಕಲಿಲ್ಲವಂತೆ. ಈ ಎಲ್ಲ ಅಂತೆ-ಕಂತೆಗಳಿಗೆ ಕಾರಣವಾದದ್ದು ಮಾಟ ಎಂಬ ಮಹಾಭೂತ.

ಅಮ್ಮ ಸಿಟ್ಟಿನಿಂದ ಅವ್ವಗೆ ಮಾಟ ಮಾಡಿಸಿದ್ದರಿಂದ ಹೊಟ್ಟೆಯಲಿ ನೀರು ತುಂಬಿ ಮಗು ಬದುಕಲಿಲ್ಲ ಅನಿಸಿ ಕುಟುಂಬದ ಮಧ್ಯೆದ ದ್ವೇಷ ಹೆಚ್ಚಾಯಿತು. ಹಳೆ ದೊಡ್ಡ ಮನೆಗೆ ಹೋಗಬಾರದು ಎಂದು ಅವ್ವ ತಾಕೀತು ಮಾಡಿದಳು, ಹಳೆಯ ಮನೆಯ ಸೆಳೆತದಿಂದ ನಾನು ತಪ್ಪಿಸಿಕೊಳ್ಳಲಿಲ್ಲ. ಕದ್ದು ಮುಚ್ಚಿ ಹೋಗಿ ಅಮ್ಮ ಕೊಟ್ಟ ಹಾಲು ಕುಡಿದು ಬರುತ್ತಿದ್ದೆ. ವಿಷಯ ತಿಳಿದು ಅವ್ವ ಕೆಂಡ ಮಂಡಲವಾದಳು. ಹೆಂಗಾದರೂ ಹಾಳಾಗಿ ಹೋಗಲಿ ಎಂದು ಬೈದು ಯಾಲಕ್ಕಿ ತಿನಿಸಿ ಕಳಿಸುತ್ತಿದ್ದಳು. ಯಾಲಕ್ಕಿ ತಿಂದು ಹೋದರೆ ಮಾಟ ಮಾಡಿದ್ದು ಹೊಟ್ಟೆಗೆ ಹತ್ತುವುದಿಲ್ಲ ಎಂಬ ವಿಚಿತ್ರ ನಂಬಿಕೆ ಬೇರೆ!

ನಾನು ಮನೆ ಬಿಟ್ಟು ಹೊರಗೆ ಹೋಗುವ ಮುಂಚೆ ಯಾಲಕ್ಕಿ ತಿನ್ನುವುದು ಕಡ್ಡಾಯವಾಯಿತು. ಮಾಟ ಎಂದರೆ ಏನು? ಅದು ಯಾವ ಸ್ವರೂಪದಲ್ಲಿರುತ್ತದೆ ಎಂಬುದನ್ನು ಅರಿಯದ ಮುಗ್ದ ವಯಸ್ಸಿನಲ್ಲಿ ಇಂತಹ ಪದಗಳು ಅನಿವಾರ್ಯವಾಗಿ ಕಿವಿಗೆ ಅಪ್ಪಳಿಸುತ್ತಿದ್ದವು. ಆಗ ಬಹಳಷ್ಟು ಯಾಲಕ್ಕಿ ತಿಂದದ್ದಕ್ಕೋ ಏನೋ ನನಗೆ ಇಲ್ಲಿಯವರೆಗೆ ಯಾವ ಮಾಟಗಳು ನನ್ನ ತಂಟೆಗೆ ಬಂದಿಲ್ಲ ಎನಿಸುತ್ತದೆ. ಅಮ್ಮ ಮಾಡಿಸಿರಬಹುದಾದ ಮಾಟ ತೆಗೆಸಲು ತಜ್ಞರು ಬೇರೆ ಊರಿಂದ ಬಂದದ್ದು, ಭಾವಿ ಮನೆಯ ನೆಲದಲ್ಲಿ ಹೂತಿಟ್ಟ ಗೊಂಬೆ ತೆಗೆದದ್ದು ಅಸ್ಪಷ್ಟವಾಗಿ ನೆನಪಿದೆ. ಹೀಗೆ ಅಮ್ಮ ಅವ್ವ ಹತ್ತಾರು ವರ್ಷ ಬಡಿದಾಡಿ ಸುಸ್ತಾದರು. ಬರು ಬರುತ್ತಾ ಸಂಬಂಧಗಳು ಸುಧಾರಿಸಿದವು. ಭಾವಿ ಮಧ್ಯೆ ಕಟ್ಟಿದ ಗೋಡೆ ಶಿಥಿಲವಾಗಿ ಸಂಬಂಧಗಳು ಗಟ್ಟಿಯಾಗುತ್ತ ಹೋದದ್ದು ವಿಪರ್ಯಾಸವಲ್ಲವೇ? [ಸಿದ್ದು ಕಾಲ]

English summary
Here is fantastic experience of Siddu Yapalaparavi from Gadag about black magic, which divided an undivided family. His mother would give him cardamom to eat thinking that it would nullify the black magic effect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X