ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಸ್ಯಮೇಳದಲ್ಲಿ ಜೋಕಾನುಭವಗಳು

By Staff
|
Google Oneindia Kannada News
  • ದಟ್ಸ್‌ಕನ್ನಡ ಬ್ಯೂರೋ
ಬೆಂಗಳೂರಿನ ಎಚ್‌.ಎನ್‌.ಕಲಾಕ್ಷೇತ್ರ ಭಾನುವಾರ (ನ. 09) ನಗೆಯ ಅಲೆಗಳಿಂದ ಭರ್ತಿಯಾಗಿತ್ತು. ಕಾರ್ಯಕ್ರಮದ ಹೆಸರು ಹಾಸ್ಯ ಮೇಳ- 03. ಮೂರು ದಿನಗಳ ಕಾಲದ ಈ ಹಾಸ್ಯೋತ್ಸವ ಉದ್ಘಾಟಿಸಿದ್ದು ರಮಶ್ರೀ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಷಡಕ್ಷರಿ ಹಾಗೂ ವಿಧಾನ ಪರಿಷತ್‌ ಸದಸ್ಯ ಮುಖ್ಯಮಂತ್ರಿ ಚಂದ್ರು.

ಹಾಸ್ಯ ಚಟಾಕಿಗಳನ್ನು ಹಾರಿಸಲು ಹೆಚ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟ, ಹಾಸ್ಯ ಮೇಳ ಸಮಿತಿ ಅಧ್ಯಕ್ಷ ಮೇಕಪ್‌ ನಾಣಿ, ಭುವನೇಶ್ವರಿ ಹೆಗಡೆ, ಸುಧಾ ಬರಗೂರು ಮೊದಲಾದವರಿದ್ದರು. ಅಲ್ಲಿ ಜೋಕುಗಳದ್ದೇ ಭರಾಟೆ. ಉದ್ಘಾಟನಾ ಭಾಷಣದಿಂದ ಹಿಡಿದು ಕಾರ್ಯಕ್ರಮಕ್ಕೆ ತೆರೆ ಹಾಕುವವರೆಗೆ ಎಲ್ಲ ಕ್ಷಣಗಳಲ್ಲೂ ಮಾತು ಕಚಗುಳಿ. ಅಲ್ಲಿ ನಗಿಸಿದ ಕೆಲವು ಜೋಕುಗಳನ್ನು ಓದಿ, ನೀವೂ ನಕ್ಕುಬಿಡಿ.

ಮುಖ್ಯಮಂತ್ರಿ ಚಂದ್ರು ಜೋಕುಗಳು

Mukhyamantri Chandru1979- 80ರಲ್ಲಿ ಬೇಲೂರಿನಲ್ಲಿ ‘ಹೊಸ ಮೇಡಂ’ ಚಿತ್ರದ ಶೂಟಿಂಗ್‌ ಇತ್ತು. ಭಾರತಿ ಚಿತ್ರದ ನಾಯಕಿ. ನಾಯಕ ಬಂದಿರಲಿಲ್ಲ. ನನ್ನನ್ನೇ ನಾಯಕನ ಪಟ್ಟಕ್ಕೆ ಕೂರಿಸಿಬಿಟ್ಟರು. ಮೊದಲ ದಿನವೇ ನಾಯಕಿ ಜೊತೆ ಡ್ಯೂಯೆಟ್‌ ಸಾಂಗ್‌. ನಾಯಕಿಯ ಮೂಗಿಗೆ ಮೂಗು ಉಜ್ಜುವ ದೃಶ್ಯ ಇತ್ತು. ಮೂರು ದಿನದಿಂದ ಸ್ನಾನ ಮಾಡಿರಲಿಲ್ಲ. ಬೇಡಪ್ಪ, ಆಗಲ್ಲ ಅಂದೆ. ಬಲವಂತ ಮಾಡಿದರು. ಆಮೇಲೆ ಮೂಗು ಉಜ್ಜಿದ್ದೂ ಆಯಿತು. ಆದರೆ, ಶಾಟ್‌ ಮಾತ್ರ ಫ್ಲಾಪ್‌. ಮೂಗು ಉಜ್ಜುವ ಅಭ್ಯಾಸ ಇರದಿದ್ದ ನಾನು ಭಾರತಿ ಅವರ ಮೂಗಿನ ಮೇಕಪ್‌ ಅಳಿಸಿಹೋಗುವಷ್ಟು ಜೋರಾಗಿ ಉಜ್ಜಿದ್ದೆ. ಅಷ್ಟಕ್ಕೇ ನಿಲ್ಲಲಿಲ್ಲ. ಆಮೇಲೆ, ಭಾರತಿಯವರನ್ನು ನಾನು ಎತ್ತಿಕೊಳ್ಳುವ ದೃಶ್ಯ ನಡೆಯಿತು. ಆಗ ಸಣ್ಣಗಿದ್ದ ನಾನು ಅವರನ್ನು ಎತ್ತಿಕೊಂಡು, ಧೊಪ್ಪನೆ ಕೆಳಕ್ಕೆ ಬಿದ್ದೆ. ನಂತರ ನಾಲ್ಕು ದಿನ ಶೂಟಿಂಗ್‌ ಕ್ಯಾನ್ಸಲ್‌.

*

ರಮಶ್ರೀ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಷಡಕ್ಷರಿ ಜೋಕುಗಳು

60 ವರ್ಷ ವಯಸ್ಸಿನ ವೃದ್ಧೆ ಒಂದು ಪುಸ್ತಕದಂಗಡಿಗೆ ಬಂದು, ಸೆಕ್ಸ್‌ ಪುಸ್ತಕಗಳು ಎಲ್ಲಿರುತ್ತವೆ ಅಂತ ಕೇಳ್ತಾಳೆ. ‘ಅಲ್ಲಮ್ಮಾ , ನಿಮ್ಮ ವಯಸ್ಸೇನೂ ನೀವು ಓದೋದೇನೂ’ ಅಂತ ಬಾಯಿ ಬಿಟ್ಟುಕೊಂಡು ಕೇಳುತ್ತಾನೆ ಅಂಗಡಿ ಮಾಲೀಕ. ಅದಕ್ಕೆ ಆಕೆ- ‘ಅಯ್ಯೋ ನನ್ನ ಗಂಡ ನಾಪತ್ತೆಯಾಗಿದ್ದಾರೆ. ಬಹುಶಃ ಅವರು ‘ಅಲ್ಲಿ’ ಇರಬಹುದಾ ಅಂತ’ ಎನ್ನುತ್ತಾಳೆ.

*

ಅಮೆರಿಕಾದ ಒಂದು ಸಂಸಾರ. ಅದರಲ್ಲಿ ಗಂಡ, ಹೆಂಡತಿ ಮತ್ತು ಒಬ್ಬ ಮಗಳು. ವಯಸ್ಸಿಗೆ ಬಂದ ಮಗಳು ಒಂದು ದಿನ ತನ್ನ ತಂದೆಯ ಬಳಿ ಬಂದು, ‘ಅಪ್ಪ ನಾನು ಸ್ಟೀಫನ್‌ ಎಂಬುವನನ್ನು ಇಷ್ಟ ಪಟ್ಟಿದ್ದೇನೆ. ಅವನನ್ನೇ ಮದುವೆಯಾಗೋದು’ ಅಂತಾಳೆ. ‘ಅಯ್ಯೋ ಬೇಡಮ್ಮಾ, ಆ ಸ್ಟೀಫನ್‌ನ ತಾಯಿಗೂ ನನಗೂ ಮೊದಲಿಂದ ಸಂಬಂಧ ಇತ್ತು. ಅವನು ನಿನ್ನ ಅಣ್ಣ ಆಗ್ತಾನೆ’ ಅಂತಾನೆ ಅಪ್ಪ . ‘ಸರಿ ಬಿಡಪ್ಪಾ ’ ಎಂದು ಮಗಳು ಸುಮ್ಮನಾಗುತ್ತಾಳೆ. ಸ್ವಲ್ಪ ದಿನಗಳ ನಂತರ ಮತ್ತೊಮ್ಮೆ ಮದುವೆಯ ಪ್ರಸ್ತಾವನೆ ಇಡುತ್ತಾಳೆ. ಈ ಸಲ ಗಂಡಿನ ಹೆಸರು ಜಾನ್‌. ಈ ಸಲವೂ ಅಪ್ಪ ಹಳೆಯ ವರಸೆಯನ್ನೇ ಮೆರೆಯುತ್ತಾನೆ. ಬೇಸರಗೊಂಡ ಮಗಳು ಅಮ್ಮನ ಹತ್ತಿರ ಹೋಗಿ ‘ಅಪ್ಪ ಎಂಥಾ ಮನುಷ್ಯ’ ಅಂತ ಪ್ರಶ್ನಿಸುತ್ತಾಳೆ. ಆಗ ಅಮ್ಮ ಹೇಳ್ತಾಳೆ- ‘ಅಯ್ಯೋ ನಿಮ್ಮಪ್ಪನ ಮಾತನ್ನ ಕೇಳಬೇಡ, ಅವರು ನಿನ್ನ ತಂದೆ ಅಲ್ಲ. ನೀನು ಯಾರನ್ನ ಬೇಕಾದರೂ ಮದುವೆಯಾಗು’ !

*

ಅರ್ಥಶಾಸ್ತ್ರದ ಉಪನ್ಯಾಸಕಿ ಭುವನೇಶ್ವರಿ ಹೆಗಡೆಯವರ ಅನುಭವದ ಜೋಕುಜೋಕಾಲಿ

ಇದು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಬರೆದ ಉತ್ತರಗಳ ವಿವಿಧ ನಮೂನೆಗಳು-

ಪ್ರಶ್ನೆ- ಅರ್ಥಶಾಸ್ತ್ರ ಎಂದರೇನು?
ಉತ್ತರ- ಹೆಣ್ಣು ಕೊಟ್ಟ ಮಾವನನ್ನು ಹಿಡಿದು ಅಲುಗಾಡಿಸಿದಾಗ ಉದುರುವ ವಸ್ತು.

ಪ್ರಶ್ನೆ- ಅರ್ಥಶಾಸ್ತ್ರ ಎಂದರೇನು?
ಉತ್ತರ- ನೆರೆ ಹೊರೆಯವರು ಮತ್ತು ಸ್ನೇಹಿತರಿಂದ ಸಾಲ ದೊರೆಯದಿದ್ದಾಗ ಅನಿವಾರ್ಯವಾಗಿ ಎಡತಾಕಬೇಕಾದ ಜಾಗ.

ಪ್ರಶ್ನೆ- ಅರ್ಥಶಾಸ್ತ್ರ ಎಂದರೇನು?
ಉತ್ತರ- ಪ್ರತಿ ಪದಗಳು ಹಲವು ಅರ್ಥಗಳನ್ನು ಹೊಂದಿರುತ್ತವೆ. ಹೀಗೆ ಪ್ರತಿ ಪದದ ಅರ್ಥವನ್ನು ತಿಳಿಸುವ ಶಾಸ್ತ್ರವೇ ಅರ್ಥಶಾಸ್ತ್ರ.

ಪ್ರಶ್ನೆ- ಅರ್ಥಶಾಸ್ತ್ರ ದಲ್ಲಿ ಎಷ್ಟು ವಿಧ?
ಉತ್ತರ- ಅರ್ಥಶಾಸ್ತ್ರದಲ್ಲಿ ಎರಡು ವಿಧ. ಅವು- ಅಪಾರ್ಥ ಶಾಸ್ತ್ರ ಮತ್ತು ಅನರ್ಥ ಶಾಸ್ತ್ರ.

*

ಒಮ್ಮೆ ಕಾಲೇಜಿನ ಹತ್ತಿರದ ಹಳ್ಳವೊಂದರಲ್ಲಿ ಆಕಸ್ಮಿಕವಾಗಿ ಬಿದ್ದುಬಿಟ್ಟೆ. ಕೊನೆಗೆ ವಿದ್ಯಾರ್ಥಿಗಳು ಏಣಿಯಾಂದನ್ನು ಅದರೊಳಗೆ ಇಳಿಬಿಟ್ಟು, ನಾನು ಮೇಲೆ ಹತ್ತಲು ಸಹಾಯ ಮಾಡಿದರು. ಇನ್ನೂ ಮೇಲೆ ಪೂರ್ತಿ ಹತ್ತೇ ಇರಲಿಲ್ಲ, ಒಬ್ಬ ವಿದ್ಯಾರ್ಥಿ ಹೇಳಿದ- ‘ಸ್ವಪ್ರಯತ್ನದಿಂದ ಮೇಲೆ ಬರಬೇಕು ಅಂತ ಮೇಡಂ ಹೇಳುತ್ತಿದ್ದರು. ಈಗ ನೋಡ್ರೋ ನಾವೆಲ್ಲ ಸೇರಿ ಅವರನ್ನೇ ಮೇಲೆತ್ತ ಬೇಕಾಯಿತು’. ಅದೇ ಕೊನೆ, ಉಪದೇಶ ಮಾಡೋದನ್ನ ಕಡಿಮೆ ಮಾಡಿಬಿಟ್ಟೆ.

ಸುಧಾ ಬರಗೂರರ ಹಾಸ್ಯಾನುಭವ

ಒಂದು ಸಲ ಯಜಮಾನರ ಜೊತೆ ಮಾರ್ಕೆಟ್‌ಗೆ ಹೋಗಿದ್ದೆ. ತರಕಾರಿಯವನು ‘ನೀವು ಗ್ರಾಜುಯೇಟಾ’ ಅಂತ ಕೇಳಿದ. ಯಜಮಾನ್ರು ‘ಹೌದಪ್ಪಾ , ಡಬ್ಬಲ್‌ ಗ್ರಾಜುಯೇಟು’ ಅಂದರು. ‘ಅದಿರಲಿ, ನಿನಗೆ ಹೇಗೆ ಗೊತ್ತಾಯಿತು’ ಅಂತ ಕೇಳಿದರು. ಅದಕ್ಕೆ ಆತ ಹೇಳಿದ- ‘ಅವರು ಬ್ಯಾಗ್‌ಗೆ ಮೊದಲು ಟೊಮೆಟೋ ಹಾಕ್ಕೊಂಡು ಆಮೇಲೆ ತೆಂಗಿನಕಾಯಿ ಹಾಕ್ಕೊಂಡರಲ್ಲ, ಆವಾಗ್ಲೇ ಗೊತ್ತಾಯಿತು’ !

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X