ಬ್ಯಾಂಕ್ ಲೂಟಿ ಮಾಡಿದ್ದನ್ನು ಖಂಡಿತ ನೋಡಿಲ್ಲ!
2008ನೇ ವರ್ಷ ಇನ್ನೇನು ಮುಗಿಯುತ್ತ ಬಂದಿದೆ. ತಿಂಗಳ ಕೊನೆ. ಆರ್ಥಿಕ ಹೊಡೆತದಿಂದಾಗಿ ಬ್ಯಾಂಕಲ್ಲಿ ಹಣ ಉಳಿದಿರುವುದೂ ಅಷ್ಟಕ್ಕಷ್ಟೇ. ಆದರೆ, ಹೊಸ ವರ್ಷಾಚರಣೆಯ ನೆಪ ಕೇಳಬೇಕಲ್ಲ. ಅಳಿದುಳಿದ ದುಡ್ಡನ್ನು ಕೆಬರಿಕೊಂಡು ಡಿಸೆಂಬರ್ 31ರ ರಾತ್ರಿ ಪಾರ್ಟಿ ಮಾಡಬೇಕೆಂದು ಬ್ಯಾಂಕಲ್ಲಿ ಜನ ಜಮಾಯಿಸಿದ್ದಾರೆ.
ಗುಂಡಿನ ನೆನಪಲ್ಲಿ ಆಗಲೇ ಪಾರ್ಟಿಯ ಗುಂಗು. ಅಂಥ ಹೊತ್ತಿನಲ್ಲಿ ಬ್ಯಾಂಕನ್ನು ಲೂಟಿ ಮಾಡಬೇಕೆಂದು ಕಳ್ಳನೊಬ್ಬ ಬಂದೂಕು ಹಿಡಿದು ಬ್ಯಾಂಕ್ ಪ್ರವೇಶಿಸುತ್ತಾನೆ. ಇದ್ದಕ್ಕಿದ್ದಂತೆ ಬ್ಯಾಂಕಲ್ಲಿ ಗಲಿಬಿಲಿ. ಛಾವಣಿಯತ್ತ ಒಂದು ಗುಂಡು ಹಾರಿಸುತ್ತಿದ್ದಂತೆ ಎಲ್ಲವೂ ಸ್ತಬ್ಧ. ಬ್ಯಾಂಕ್ ಸೆಕ್ಯುರಿಟಿಯ ಹತ್ತಿರ ಬಂದೂಕಿದೆ ಆದರೆ ಗುಂಡಿಲ್ಲ. ಬ್ಯಾಂಕಿಗೆ ಬಂದವರಲ್ಲಿ ಕಳ್ಳನನ್ನು ಎದುರಿಸುವ ಗುಂಡಿಗೆಯೂ ಇಲ್ಲ.
ಕ್ಯಾಷಿಯರ್ ಗೆ ಬಂದೂಕು ತೋರಿಸಿ ಹಣ ಗಂಟು ಮೂಟೆ ಕಟ್ಟಿದ ನಂತರ ಕಳ್ಳ ಹೆದರಿ ಪತರಗುಡುತ್ತಿದ್ದ ಗಿರಾಕಿಯೊಬ್ಬನನ್ನು ಕೇಳುತ್ತಾನೆ, "ಬ್ಯಾಂಕ್ ಹಣ ಲೂಟಿ ಮಾಡಿದ್ದು ನೋಡಿದ್ಯಾ?"
ಏನು ಹೇಳಬೇಕೆಂದು ತಿಳಿಯದ ಗಿರಾಕಿ ಹೆದರುತ್ತಲೇ, "ಹೌದು ನೋಡಿದೆ" ಅಂದ.
ಢಮಾರ್! ಕಳ್ಳನ ಬಂದೂಕಿನಲ್ಲಿನ ಇನ್ನೊಂದು ಗುಂಡು ಗಿರಾಕಿಯ ಗುಂಡಿಗೆಯನ್ನು ಹೊಕ್ಕಿತ್ತು.
ಗಹಗಹಿಸಿ ನಕ್ಕ ಕಳ್ಳ ಇನ್ನೊಂದು ಬದಿಯಲ್ಲಿ ನಿಂತಿದ್ದ ಜೋಡಿಗೆ ಅದೇ ಪ್ರಶ್ನೆ ಹಾಕಿದ.
ಗಂಡ, "ಇಲ್ಲಪ್ಪ ಇಲ್ಲ ನಾನು ನೋಡಿಯೇ ಇಲ್ಲ. ಆದರೆ, ನನ್ನ ಹೆಂಡತಿ ಲೂಟಿ ಮಾಡಿದ್ದನ್ನು ನೋಡಿದಳು!"