ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೀಗೊಂದು ಪ್ರೇಮ ಪತ್ರ, ಕೊನೆಯ ಸಾಲುಗಳು

By ಅಮರನಾಥ್ ವಿ.ಬಿ, ಹರಪನಹಳ್ಳಿ
|
Google Oneindia Kannada News

ನನ್ನಲ್ಲಿ ಖುಷಿಯ ಜಲಪಾತ ಧೋ ಎಂದು ಧುಮ್ಮಿಕ್ಕುತ್ತಿತ್ತು. ಇಲ್ಲಿಂದ ಮುಂದಕ್ಕೆ ...

ಚೆಲುವೆಯ ನೋಟ ಚೆನ್ನ
ಒಲವಿನ ಮಾತು ಚೆನ್ನ
ಮಲ್ಲಿಗೆ ಹೂವೇ ನಿನ್ನ
ನಗುವು ಇನ್ನೂ ಚೆನ್ನ...

ಪ್ರತಿದಿನ ಹೀಗೆ ಕಳೆಯುತ್ತಿದ್ದ ಐದೇ...ಐದು ನಿಮಿಷಗಳು, ನನ್ನ ಬದುಕಿಗೆ ನವೋಲ್ಲಾಸ ತಂದ್ವು.

ಕಣ್ಣಿನ ನೋಟಗಳು ಕೋಲ್ಮಿಂಚಿನ ಬಾಣಗಳು
ಕಣ್ಣಿನ ಮಾತುಗಳು ಬಿಡಿಸ್‍ಹೇಳದ ಒಗಟುಗಳು

ನಿನ್ನ ಮನಸ್ಸಿನಲ್ಲಿ ಏನಿದೆ ಅಂತ ಇದುವರೆಗೂ ನನಗೆ ಗೊತ್ತಿಲ್ಲ...ನಿನಗೆ ಹೇಗೆ ಕೇಳ್ಬೇಕು-ಹೇಳ್ಬೇಕು ಅಂತ ತೋಚದಂತಾಗಿ ಪತ್ರದ ಮೊರೆಹೊಕ್ಕೆ...ಗಂಟಲಿನಲ್ಲಿ ಆಡದೆ ಸಿಕ್ಕಿ ಹಾಕೊಳ್ಳೋ ನೂರೆಂಟು ಮಾತುಗಳನ್ನ ಕೈಬೆರಳ ತುದಿಯಲ್ಲಾದರೂ ನಿನಗೆ ತಿಳಿಸಲೇ ಬೇಕೆಂದು ಬರೆಯಲು ಪ್ರಾರಂಭಮಾಡಿದೆ, ಆದರೆ ಬರೆದ ಪತ್ರ ಅರ್ಧ ಆಗಿತ್ತಷ್ಟೆ ಆಗ ನನ್ನ ಒಲವಿನ ಬದುಕಿಗೆ ಸಿಡಿಲು ಬಡಿತು.

First Love Letter

ಮೊನ್ನೆ ಆಫಿಸ್-ನಲ್ಲಿ ಯಾಕೋ ನೀನು ತುಂಬಾ ನೆನಪಾದೆ, ನಿನ್ನನ್ನ ನೋಡಬೇಕು ಅಂತ ತುಂಬಾ ಅನ್ನ್ಸಿಸಲಿಕ್ಕೆ ಪ್ರಾರಂಭವಾಯ್ತು...

ಅದಕ್ಕೆ ಬೇಗ ಹೊರಟು ನೀನು ಮನೆಗೆ ಹೊರಡೋಕೆ ಮುಂಚೆ ಸರಿಯಾಗಿ 22ನೇ ಪ್ಲಾಟ್-ಫಾರಂ ಹತ್ತಿರ ಇರ್ಬೇಕು ಅಂತ ಅನ್ಕೋತಾ ಇರ್ಬೇಕಾದ್ರೆ ಮನೆಯಿಂದ ಫೋನ್-ಕಾಲ್ ಬಂತು "ಸಂಜೆ ಬೇಗ ಬಾ ಮನೆಗೆ,ಎಲ್ಲೋ ಹೊರಗಡೆ ಹೋಗ್ಬೇಕು" ಅಂತ ಅಂದ್ರು, ಎಲ್ಲಿಗೆ ಅಂತ ಹೇಳಲಿಲ್ಲ.

ಹೇಗಿದ್ದರೂ ನಾನು ಬೇಗ ಹೊರಡಬೇಕು ಅಂದುಕೊಂಡಿದ್ದರಿಂದ, ನಿನ್ನನ್ನ ನೋಡಿ ಆಮೇಲೆ ಮನೆಗೆ ಹೋದರಾಯ್ತು ಅಂತ ಅನ್ಕೊಂಡೆ.ಆದರೆ ಮುಂದೆ ಎದುರಾಗಬಹುದಾದ ಯಾವುದರ ಕಲ್ಪನೆಯಿರದೆ ಅದೇ ಉಲ್ಲಾಸದಿಂದ ಆಫೀಸ್ ಕೆಲ್ಸ ಬೇಗ ಮುಗಿಸಿ ಹೊರಟೆ. ಎಂದಿನಂತೆ ಬೆಂಗಳೂರಿನ ಟ್ರಾಫಿಕ್ ಜಾಮ್-ನಲ್ಲಿ ಸಿಕ್ಕಿಹಾಕೊಂಡೆ,

ಎಲ್ಲಿ ನಾನು ಬರೋದರೊಳಗೆ ನೀನು ಹೋಗ್ಬಿಡ್ತಿಯೋ ಅಂತ ಆತಂಕ ಒಂದೆಡೆಯಾದ್ರೆ, ಎಲ್ಲಿದ್ದಿಯಾ ಬೇಗ ಬಾ ಹೊತ್ತಾಗುತ್ತೆ ಅಂತ ಮನೆಯಿಂದ ಕರೆ ಮೇಲೆ ಕರೆ...ತಲೆಕೆಟ್ಟು ಮಸರ್ಗಡಗಿ ಆಗಿತ್ತು...ಮತ್ತೆ ಐದು ನಿಮಿಷ ಬಿಟ್ಟು ಫೋನ್ ಬಂದಾಗ,"ಟ್ರಾಫಿಕ್ ಜಾಮ್-ನಲ್ಲಿ ಸಿಕ್ಕಿಹಾಕೋಂಡೀನಿ ಇನ್ನಾ ಒಂದು ಘಂಟೆ ಆಗುತ್ತೆ" ಅಂದಿದ್ದಕ್ಕೆ...ಸರಿ ನಾವೇ ಕಾರ್ಪೋರೇಶನ್ ಹತ್ತಿರ ಬರ್ತೀವಿ ನೀನು ಅಲ್ಲೇ ಇಳ್ಕೋ ಅಂತ ಅಂದು, ನಿನ್ನ ನೋಡುವ ನನ್ನಾಸೆಗೆ ನೀರೆರೆಚಿದ್ರು...ಒಲ್ಲದ ಮನಸ್ಸಿನಿಂದ ಹೂಂ ಎನ್ನಲೇಬೇಕಾಯ್ತು.

ಮನಸ್ಸಿನಲ್ಲಿ ಬರೀ ನಿನ್ನದೇ ಯೋಚನೆ ಈಗ ನೀನು 22ನೇ ಪ್ಲಾಟ್-ಫಾರಂಗೆ ಬಂದಿರಬಹುದಾ? ಅಥವಾ ಆವಾಗ್ಲೆ ಬಂದು ಹೋಗ್ಬಿಟ್ಟಿರ ಬಹುದಾ? ನೀನೂ ನನಗೋಸ್ಕರ ಅಲ್ಲಿ-ಇಲ್ಲಿ ಹುಡುಕುತ್ತಿರಬಹುದಾ? ಹೀಗೆ ನೂರೆಂಟು ಆಲೋಚನೆಗಳು ನನ್ನ ಮನಸ್ಸಾಗರದಿಂದ ತೇಲಿ ಬಂದು ಅಪ್ಪಳಿಸುತ್ತಾ ಇದ್ದವು.

ಏನ್ ಮಾಡ್ಬೇಕು ಅಂತ ತೋಚಲಿಲ್ಲ...ಆಮೇಲೆ ಸುಮಾರು ಹೊತ್ತಿನ ನಂತರ ಕಾರ್ಪೋರೇಶನ್ ಸ್ಟಾಪ್ ಬಂತು, ಹ್ಯಾಪ್ ಮೋರೆ ಹಾಕೊಂಡು ಇಳಿದೆ...ಮನೆಯವರೆಲ್ಲಾ ಕಾಯ್ತಾ ಇದ್ರು, ಬೇಗ ಕಾರು ಹತ್ತು ಅಂದ್ರು. ಎಲ್ಲಿಗೆ ಅಂದಿದ್ದಕ್ಕೆ... ಕೃತಿ,.. ನಿನ್ನ ಬದುಕ ಪುಟಗಳಲ್ಲಿ ಬೆರೆಯಲು ಹವಣಿಸುತ್ತಿದ್ದ ನನಗೆ...ಅವರು ಕೊಟ್ಟ ಉತ್ತರ ಕೇಳಿ...ಆಘಾತವಾಯ್ತು...

"ನಿಂಗೆ ಹೆಣ್ಣು ನೋಡೋಕೆ ಹೋಗ್ತಾ ಇರೋದು, ಆ ಹುಡುಗಿ ನಾಳೆ ವಿದೇಶಕ್ಕೆ ಅವರ ಕಂಪೆನಿಯಿಂದ ಟ್ರೈನಿಂಗ್ ಅಂತ ಹೋಗ್ತಾ ಇದ್ದಾಳಂತೆ ಅದಕ್ಕೆ ಈ ಅವಸರ. ಅವಳು ವಾಪಾಸು ಬಂದಕೂಡಲೆ ನಿಮ್ಮ ಮದುವೆ" ಅಂತ ಒಂದೇ ಉಸಿರಿನಲ್ಲಿ ಅಮ್ಮ ಹೇಳಿದಾಗ ನನ್ನುಸಿರೇ ನಿಂತಂಗಾಯ್ತು.

ನಂಗೆ ಒಂದು ಮಾತಾದ್ರು ಕೇಳ್ಬೇಕು ಅನ್ನಿಸ್ಲಿಲ್ವ ನಿಮಗೆ ಅಂದಿದ್ದಕ್ಕೆ, "ನಮಗೂ ಗೊತ್ತಿರಲಿಲ್ಲ ನಿಮ್ಮ ತಂದೆ ಮೊನ್ನೆ ಧಾರವಾಡದಿಂದ ವಾಪಾಸು ಬರುವಾಗ ರೈಲ್ನಲ್ಲಿ ಸಿಕ್ಕಿದ್ದರಂತೆ ಆ ಹುಡುಗಿ ತಂದೆ, ಅವರು ನಿಮ್ಮ ತಂದೆ ಹಳೆಯ ಸ್ನೇಹಿತರಂತೆ, ಅವರ ಮಗಳೂ ಜೊತೆಗಿದ್ದಳಂತೆ, ನೋಡಿದ್ದಾರೆ ಇಷ್ಟ ಆಗಿದೆ, ನಿನ್ನ ಮೇಲೆ ನಿಮ್ಮ ತಂದೆಗೆ ಎಷ್ಟೊಂದು ಪ್ರೀತಿ ಯಾವಾಗ್ಲೂ ನಿನ್ನ ಫೋಟೊ ಅವರ ಪರ್ಸ್-ನಲ್ಲಿರುತ್ತೆ,ಅದು ಆವತ್ತು ಉಪಯೋಗಕ್ಕೆ ಬಂದಿದೆ,ಅದನ್ನ ತೋರಿಸಿದ್ದಾರೆ,ಹುಡುಗಿ ಮತ್ತು ಹುಡುಗಿ ಅಪ್ಪ ಇಬ್ಬರೂ ಒಪ್ಪಿದ್ದಾರೆ, ಅಲ್ಲೇ ಮಾತುಕತೆ ಮುಗಿಸಿದ್ದಾರೆ. ನವೆಂಬರ್ 1ನೇ ತಾರೀಖು ಮದುವೆ" ಅಂತ ಅಮ್ಮ ಅಂದ್ರು.

ಅಷ್ಟರಲ್ಲಿ ಅಪ್ಪ "ಏನೋ ಅವಗಾದ್ರು ನಿಂಗೆ ಆಫೀಸ್ ನಲ್ಲಿ ರಜೆ ಸಿಗುತ್ತೋ ಇಲ್ಬೋ ಅಥವಾ ನಿನ್ನ ಆಫೀಸ್ ಟೈಮಿಗಿಂತ ಮುಂಚೇನೆ ಮುಹೂರ್ತ ಇಟ್ಕೋ ಬೇಕಾ?" ಅಂತ ತಮಾಷೆ ಮಾಡಿದ್ರು.ಒಲ್ಲದ ಮನಸ್ಸಿನಿಂದ ಸುಮ್ನೆ ನಕ್ಕೆ. ಈ ತರಹ ಅಪ್ಪ ತಮಾಷೆಮಾಡಿ ಎಷ್ಟೊಂದು ವರುಷಗಳಾಗಿದ್ದವು. ಈ ಸಂಬಂಧದಿಂದ ಅವರಿಗೆ ತುಂಬಾನೆ ಖುಷಿಯಾಗಿದೆ,ಮೊದಲೇ ಅವರು ಹಾರ್ಟ್,ಬಿ.ಪಿ,ಸುಗರ್ ಪೇಶಂಟ್ ಎಲ್ಲಿ ಏನಾದ್ರು ಆಗಿ ಬಿಡುತ್ತೋ ಅಂತ ಸುಮ್ಮನಿದ್ದೆ.

ಏನ್ ಮಾಡ್ಬೇಕು ಅಂತ ತೋಚದಂತಾಗಿ ಕೈಕಾಲು ಕಟ್ಟಿಹಾಕಿದಹಾಗೆ ಆಗಿದೆ. ನಾನು ತಗೊಂಡಿದ್ದ ಒಲವಿನ ಟಿಕೆಟ್-ನ ರೈಲು ಬರೋದ್ಕಿಂತ ಮುಂಚೆ ಮನೆಯವರು ಟಿಕೆಟ್ ತಗೊಂಡ ರೈಲು ಬಂದಿದೆ ಹತ್ತಿ ಪಯಣಿಸಲೇ ಬೇಕಾದಂತಹ ಪರಿಸ್ಥಿತಿ, ಮುಂದೊಂದು ಜನ್ಮದ ನಿಲ್ದಾಣದಲ್ಲಿ ನಿನ್ನೊಲವ ರೈಲು ಕಂಡರೆ ಖಂಡಿತ ನಿನ್ನವನಾಗಬೇಕೆಂದು ಆಶಿಸುತ್ತಾ...

ನಿನ್ನಲ್ಲಿ ಭಾವನೆಗಳ ಅಲೆಗಳೇಳಲು ನಾನು ಕಾರಣವಾಗಿದ್ರೆ ಈ ಜನ್ಮಕ್ಕೆ ಆಗುವಷ್ಟು ಕ್ಷಮೆಯಿರಲಿ...

ಬಾಳೆಂಬ ಪಥದಲ್ಲಿ,
ಒಲವೆಂಬ ರಥದಲ್ಲಿ
ಕನಸೆಲ್ಲಾ ಕನಸಾಗಿ
ಕ್ಷಣವೊಂದು ಯುಗವಾಗಿ...
ಇಂತಿ ಇಲ್ಲೀವರೆಗೆ ನಿನ್ನವನಾಗಿದ್ದವ,

ವಾಸ್ತವ್

English summary
Valentine's Day Special : First Love Letter By Amarnath VB, Harapanahalli with imaginary love characters Kruti and Vastav.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X