ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉ.ಕರ್ನಾಟಕದಲ್ಲಿ ಸಂಕ್ರಾಂತಿ ಹೆಂಗ್ ಗೊತ್ತೇನ್ರೀ...

By * ಮೃತ್ಯುಂಜಯ ಕಲ್ಮಠ
|
Google Oneindia Kannada News

Ellu-Bella
ಉತ್ತರ ಕರ್ನಾಟಕ ಹೇಳಿಕೇಳಿ ಗಂಡು ಮೆಟ್ಟಿನ ನಾಡು. ಅಲ್ಲಿನ ಮಾತು, ಕತೆ, ನಡೆ, ನುಡಿ ಒಂದು ತೆರನಾದ ಆಕರ್ಷಣೆ. ಅಲ್ಲಿನ ಜನ ಹಬ್ಬ ಹರಿದಿನಗಳನ್ನು ಕೂಡ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ಇಂತಹ ವಿಶಿಷ್ಟ ಆಚರಣೆಯಲ್ಲಿ ಎಳ್ಳು ಕೊಟ್ಟು ಒಳ್ಳೆಯದನ್ನು ಮಾತನಾಡುವ ಸಂಕ್ರಾಂತಿಯೂ ಒಂದು. ದಂಡೀ ಗಾಳಿಯೊಳಗ ಕಟಕ ರೊಟ್ಟಿ, ಸಪ್ಪನಬ್ಯಾಳಿ, ಕೆಂಪಿಂಡಿ ಮೆಲ್ಲುವುದು ಇದೆಯಲ್ಲ ಅಬ್ಬಬ್ಬಾ, ಬಾಯಿಯೊಳಗೆ ಜುಳು ಜುಳು ನೀರು ಭರಿಸುವಷ್ಟು ಸೊಗಸು.

ಕುಟುಂಬದ ಹಿರಿಯರಿಗಂತೂ ಹರ್ಷ ತರುವ ಗಳಿಗೆ. ವರ್ಷಪೂರ್ತಿ ಕಷ್ಟ ಪಟ್ಟು ಬೆಳೆದ ಫಸಲುಗಳು ಕೈಗೆ ಬರುವ ಹೊತ್ತು ಇದಾಗಿದ್ದರಿಂದ ಸಹಜವಾಗಿ ಅವರಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಜೀವಜಾಲಕ್ಕೆ ಜಡತ್ವ ತುಂಬಿ ಏಕಚಕ್ರಾಧಿಪತ್ಯ ಸ್ಥಾಪಿಸಿದ್ದ ಚಳಿಯನ್ನು ಓಡಿಸುವುದರ ಜೊತೆಗೆ ಮರಣಶಯ್ಯೆಯಲ್ಲಿ ಮಲಗಿ ಭೀಷ್ಮ ಪಿತಾಮಹ ಬಾಳಯಾತ್ರೆಯ ಅಂತಿಮ ಕ್ಷಣಗಳನ್ನು ಪ್ರಾಣತ್ಯಾಗಕ್ಕೆ ಮೀಸಲಿಟ್ಟಿದ್ದು ಕೂಡ ಇದೇ ಉತ್ತರಾಯಣದ ಪುಣ್ಯಕಾಲದಲ್ಲಿ. ನೇಸರ ತನ್ನ ಚಲನೆಯನ್ನು ಉತ್ತರಾಭಿಮುಖವಾಗಿ ಆರಂಭಿಸುವ ಮಹತ್ವದ ದಿನವನ್ನು ರೈತ ಸಮೂಹ ಸಂಭ್ರಮದಿಂದಲೇ ಬರಮಾಡಿಕೊಳ್ಳುತ್ತದೆ.

ಉತ್ತರ ಕರ್ನಾಟಕ ಬಹುತೇಕ ಪ್ರದೇಶಗಳಲ್ಲಿ ಮುಖ್ಯವಾಗಿ ಕೃಷಿ ಆಧರಿಸಿದ ಕುಟುಂಬಗಳಲ್ಲಿ ಸಂಕ್ರಾಂತಿಯನ್ನು ನದಿ ಮತ್ತು ಹೊಲಗಳಲ್ಲಿ ಆಚರಿಸುವುದು ವಾಡಿಕೆ. ಬೆಳೆಗಳು ಒಕ್ಕಲುತನಕ್ಕೆ ಬರುವ ಗಳಿಗೆ ಇದಾಗಿದ್ದರಿಂದ ಎಲ್ಲರೂ ಆಯ್ಕೆ ಮಾಡಿಕೊಳ್ಳುವುದು ತಮ್ಮ ತಮ್ಮ ಜಮೀನುಗಳನ್ನೆ. ಕೃಷಿ ಆಧಾರಿತ ಕುಟುಂಬಗಳಲ್ಲಿ ಎತ್ತಿನ ಬಂಡಿಯಲ್ಲಿ ಹೊಲಗಳಿಗೆ ಹೋಗುವುದು ಸಂಪ್ರದಾಯ.

ನಾಳೆ ಸಂಕ್ರಾಂತಿ ಇದೆ ಎಂದರೆ ಅದರ ಹಿಂದಿನ ರಾತ್ರಿಯೆಲ್ಲಾ ಸಂಕ್ರಾಂತಿ ಹಬ್ಬಕ್ಕೆ ಪೂರ್ವ ತಯಾರಿ. ಕಟಕ ರೊಟ್ಟಿ, ಕರ್ಚಿಕಾಯಿ, ಹೂರಣದ ಹೋಳಿಗೆ, ಎಳ್ಳು ಹೋಳಿಗೆ, ಗೋಧಿ ಹುಗ್ಗಿ, ಮುಳ್ಳಗಾಯಿ ಪಲ್ಯೆ (ಬದ್ನೆಕಾಯಿ), ಹೆಸರು ಕಾಳು ಪಲ್ಯೆ, ಬುತ್ತಿ ಮಾಡಿಕೊಂಡು ಮನೆ ಜನರೆಲ್ಲಾ ಎತ್ತಿನ ಬಂಡಿಯಲ್ಲಿ ಹೊಲಕ್ಕೆ ತೆರಳುವುದೇ ಒಂದು ಸಂಭ್ರಮ. ಜೊತೆಗೆ ಎತ್ತುಗಳನ್ನು ವಿವಿಧ ಬಣ್ಣಗಳಿಂದ ಅಲಂಕರಿಸಿ, ಕಾಲಿಗೆ, ಕೊರಳಿಗೆ ಗೆಜ್ಜೆಗಳನ್ನು ಕಟ್ಟಿ ಎತ್ತಿನ ಬಂಡಿಗಳಲ್ಲಿ ಹೊಲಗಳಿಗೆ ಸವಾರಿ ಮಾಡುವುದು ಇದೆಯಲ್ಲಾ ಅದನ್ನು ಅನುಭವಿಸಿದರಿಗೆ ಗೊತ್ತು ಅದರ ಗಮ್ಮತ್ತು.

ಸೂರ್ಯ ದಿಕ್ಕು ಬದಲಿಸುವ ದಿನವಾಗಿದ್ದರಿಂದ ಇನ್ನು ಕೆಲವರು ನದಿಗೆ ತೆರಳಿ ಸ್ನಾನಾದಿಯ ನಂತರ ಸೂರ್ಯದೇವನಿಗೆ ನಮನ ಸಲ್ಲಿಸುವ ಮುಖಾಂತರ ಸಂಕ್ರಾಂತಿಯನ್ನು ವಿಭಿನ್ನವಾಗಿ ಆಚರಿಸುತ್ತಾರೆ. ನದಿಗಳಿಗೆ ಬುತ್ತಿ ಕಟ್ಟಿಕೊಂಡು ಹೋಗಿ ಅಥವಾ ನದಿತಟದಲ್ಲೇ ಅಡುಗೆ ಮಾಡಿ, ಎಳ್ಳು ಬೆಲ್ಲ ವಿನಿಮಯ ಮಾಡಿಕೊಳ್ಳುತ್ತಾರೆ. ಮಧ್ಯಾಹ್ನವರೆಗೆ ಸಂಕ್ರಾಂತಿ ಆಚರಣೆ ನಂತರ ಎಕ್ಕಾ ರಾಜ ರಾಣಿಯರು ಕೈಗೆ ಬರುತ್ತಾರೆ.

ಈ ಎರಡು ವಿಧಾನಗಳನ್ನು ಹೊರತುಪಡಿಸಿ ನಮ್ಮ ಗ್ರಾಮೀಣ ಪ್ರದೇಶದಲ್ಲಿ ಇನ್ನೊಂದು ಗುಂಪು ಇರುತ್ತದೆ ಅದು ನಾನ್ ವೆಜ್ ಗುಂಪು. ಅದರಲ್ಲಿ ಕಾಲೇಜು ವಿದ್ಯಾರ್ಥಿಗಳ ಜೊತೆಗೆ ನೌಕರಿ ಮಾಡುವವರೂ ಇರುತ್ತಾರೆ. ನದಿಯ ನಡುಗಡ್ಡೆಯ ದೂರಕ್ಕೆ ತೆರಳುತ್ತಾರೆ. ಸಂಕ್ರಾಂತಿ ಹಬ್ಬದಂದೂ ಎಲ್ಲರೂ ಎಳ್ಳು ಬೆಲ್ಲದಂತಹ ಸಹಿ ತಿನಿಸುಗಳನ್ನು ತಿಂದು ಹಬ್ಬ ಆಚರಿಸಿದರೆ, ಈ ಗುಂಪು ಮಾತ್ರ ನಾನ್ ವೆಜ್ ಫುಡ್ಡಿನ ಭೋರಿಬೋಜನ ಮಾಡುತ್ತದೆ. ಒಟ್ಟಿನಲ್ಲಿ ಉತ್ತರ ಕರ್ನಾಟಕದಲ್ಲಿ ಸಂಕ್ರಾಂತಿ ಮಜವೋ ಮಜಾ.(ಸಂಕ್ರಾಂತಿ)

English summary
Farmers from north Karnataka celebrated Makara Sankranthi in banks of river and in there cropped field with north Karnataka's special dishes, A brief note for North Karnataka Sankranti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X