ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮುಂಡೇಶ್ವರಿ ಮೈಸೂರಿನಲ್ಲಿ ನೆಲೆನಿಂತಿದ್ದು ಹೇಗೆ?

By * ಬಿ.ಎಂ. ಲವಕುಮಾರ್, ಮೈಸೂರು
|
Google Oneindia Kannada News

Chamundeshwari temple in Mysore
ಚಾಮುಂಡೇಶ್ವರಿಯು ಮೈಸೂರಿನಲ್ಲಿ ಹೇಗೆ ನೆಲೆ ನಿಂತಳು, ಚಾಮುಂಡಿಬೆಟ್ಟ ಎಂಬ ಹೆಸರು ಹೇಗೆ ಬಂತು ಎಂಬುವುದಕ್ಕೂ ಪೌರಾಣಿಕ ಕಥೆಗಳಿರುವುದನ್ನು ನಾವು ಕಾಣಬಹುದು. ಹಿಂದೆ ಈಗಿನ ಮೈಸೂರು "ಮಹಿಷಮಂಡಲ"ವಾಗಿತ್ತಂತೆ. ಇಲ್ಲಿ ಮಹಿಷಾಸುರನೆಂಬ ರಾಕ್ಷಸ ದರ್ಬಾರ್ ಮಾಡುತ್ತಿದ್ದನಲ್ಲದೆ, ಮಾನವರು ಹಾಗೂ ದೇವತೆಗಳಿಗೆ ಕಾಟ ಕೊಡುತ್ತಿದ್ದನಂತೆ. ಈತ ಯಾವುದೇ ಗಂಡು ಹಾಗೂ ಪ್ರಾಣಿಯಿಂದ ನನಗೆ ಸಾವು ಬರಬಾರದೆಂದು ಶಿವನಿಂದ ವರಪಡೆದಿದ್ದರಿಂದ ನನಗೇನು ಆಗಲಾರದು ಎಂಬ ಅಹಂಕಾರದಿಂದ ಮೆರೆಯುತ್ತಿದ್ದನಂತೆ.

ಈತನ ಹಿಂಸೆಯಿಂದ ನಲುಗಿದ ಜನ ಹಾಗೂ ದೇವತೆಗಳು ತಮ್ಮನ್ನು ಕಾಪಾಡುವಂತೆ ಶಿವನಿಗೆ ಮೊರೆಯಿಡುತ್ತಾರೆ. ಕೊಟ್ಟ ವರವನ್ನು ಹಿಂಪಡೆಯಲು ಸಾಧ್ಯವಾಗದ ಶಿವ ಪಾರ್ವತಿಯ ಬಳಿಗೆ ಹೋಗುವಂತೆ ಹೇಳುತ್ತಾನೆ. ಅದರಂತೆ ಪಾರ್ವತಿಯ ಬಳಿಗೆ ಹೋದ ದೇವತೆಗಳು ತಮ್ಮ ಶಕ್ತಿಯನ್ನೆಲ್ಲಾ ಪಾರ್ವತಿಗೆ ಧಾರೆ ಎರೆಯುತ್ತಾರೆ. ಆ ಸಂದರ್ಭ ಪಾರ್ವತಿಯು ಶಕ್ತಿ ರೂಪಿಣಿಯಾಗಿ ಚಾಮುಂಡೇಶ್ವರಿಯ ಅವತಾರ ತಾಳಿ ಬಂದು ಮಹಿಷಾಸುರನನ್ನು ಸಂಹರಿಸುತ್ತಾಳೆ. ಅಲ್ಲದೆ, ಮಹಿಷಾಸುರ ಮರ್ಧಿನಿಯಾದ ಶ್ರೀ ಚಾಮುಂಡೇಶ್ವರಿಯು ಮಹಿಷ ಮಂಡಲದ ಮಹಾಬಲಬೆಟ್ಟದಲ್ಲಿ ನೆಲೆಸುತ್ತಾಳೆ. ಅಲ್ಲಿಂದೀಚೆಗೆ ತಾಯಿ ಚಾಮುಂಡೇಶ್ವರಿ ನೆಲೆಯಿಂದಾಗಿ ಮಹಾಬಲಬೆಟ್ಟವು ಚಾಮುಂಡಿಬೆಟ್ಟವಾಗಿ ಪುಣ್ಯಕ್ಷೇತ್ರವಾಗಿ ಭಕ್ತರನ್ನು ಸೆಳೆಯುತ್ತಿದೆ. ಯದುವಂಶಸ್ಥರಾದ ಮೈಸೂರು ಮಹಾರಾಜರು ತಮ್ಮ ಕುಲದೇವತೆಯಾಗಿ ಚಾಮುಂಡೇಶ್ವರಿಯನ್ನು ಸ್ವೀಕರಿಸಿದ ಕಾರಣದಿಂದಾಗಿ ಚಾಮುಂಡಿಬೆಟ್ಟ ಮತ್ತು ಅಮ್ಮನವರ ದೇಗುಲ ಪ್ರಖ್ಯಾತಿಯನ್ನು ಪಡೆದಿದೆ.

ದ್ರಾವಿಡ ಶೈಲಿಯ ದೇಗುಲ : ಚಾಮುಂಡೇಶ್ವರಿ ದೇವಾಲಯವು ದ್ರಾವಿಡ ಶೈಲಿಯಲ್ಲಿ ಚೌಕಾಕೃತಿಯಲ್ಲಿ ನಿರ್ಮಾಣಗೊಂಡಿದ್ದು ದೇಗುಲದ ಹೆಬ್ಬಾಗಿಲು, ಪ್ರವೇಶದ್ವಾರ, ನವರಂಗ, ಒಳಾಂಗಣ, ಗರ್ಭಗುಡಿ ಮತ್ತು ಪ್ರಕಾರಗಳನ್ನು ಹೊಂದಿದೆ. ಮಹಾದ್ವಾರದ ಮೇಲೆ ಸುಂದರವಾದ ಗಗನಚುಂಬಿ ಗೋಪುರ ಮತ್ತು ಗರ್ಭಗುಡಿಯ ಮೇಲೆ ವಿಮಾನ ಶಿಖರಗಳಿವೆ. ಇದು ಏಳು ಅಂತಸ್ತುಗಳುಳ್ಳ ಗೋಪುರವಾಗಿದ್ದು 19ನೇ ಶತಮಾನದಲ್ಲಿ ಪಿರಮಿಡ್ ಆಕಾರದಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು ಗೋಪುರದ ಮೇಲೆ ಏಳು ಚಿನ್ನದ ಕಳಶಗಳಿವೆ. 1827ರಲ್ಲಿ ಮೈಸೂರು ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಸಾವಿರ ವರ್ಷಕ್ಕೂ ಹಿಂದಿನ ಇತಿಹಾಸವುಳ್ಳ ಈ ದೇವಸ್ಥಾನವನ್ನು ಆಸಕ್ತಿಯಿಂದ ಜೀರ್ಣೋದ್ಧಾರ ಮಾಡಿ ಮಹಾದ್ವಾರದ ಮೇಲೆ ಈ ಬೃಹತ್ ಗೋಪುರಗಳನ್ನು ಕಟ್ಟಿಸಿದ್ದಾರೆ.

ಚಾಮುಂಡಿಬೆಟ್ಟವು ಸಮುದ್ರ ಮಟ್ಟಕ್ಕಿಂತ 3489 ಅಡಿ ಎತ್ತರದಲ್ಲಿದ್ದು ಇದನ್ನು ಹತ್ತಿಹೋಗಲು ದೊಡ್ಡದೇವರಾಜ ಒಡೆಯರ್ ಅವರು ಒಂದು ಸಾವಿರ ಮೆಟ್ಟಿಲುಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಹಾಗೆಯೇ 700 ಮೆಟ್ಟಿಲುಗಳ ಬಳಿಯಲ್ಲಿ ಕಲ್ಲಿನ ಬೃಹತ್ ನಂದಿಯನ್ನು ಸ್ಥಾಪಿಸಿದ್ದಾರೆ.

English summary
3 days rathotsava at Chamundi hills in Mysore is beginning from Oct 11. Thousands of devotees take the trekking route to reach the abode of mother Chamundeshwari on this occasion. Mantapotsava, theppotsava will also be held on this auspicious occasion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X