ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಸ್ಮಯ : ಗಣಪನ ನೋಡಲು ಬಂದ ಬೀನ್ಸ್ ನಾಗಪ್ಪ!

By ವಸಂತ ಕುಮಾರಿ, ಚಿತ್ರದುರ್ಗ
|
Google Oneindia Kannada News

ಸ್ನೇಹಿತರೆ, ಈ ವರ್ಷ ಗಣಪತಿ ಹಬ್ಬ ಹೇಗಿತ್ತು? ಎಂಥ ಗಣೇಶನ ಮನೆಗೆ ಕರೆಸಿಕೊಂಡಿದ್ರಿ? ಮಣ್ಣಿನ ಗಣಪತಿಯಾ, ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ್ದಾ? ಗಣೇಶನ ಹಬ್ಬ ಮುಗಿಯಿತಲ್ಲ, ಅದರ ಬಗ್ಗೆ ಏನು ಮಾತನಾಡುವುದು ಅಂತೀರಾ? ಸರಿಬಿಡಿ. ನಾವಂತೂ ಈ ಬಾರಿ ನೈಸರ್ಗಿಕ ಬಣ್ಣದಿಂದ ಅಲಂಕೃತಗೊಂಡಿದ್ದ ಮುದ್ದಾದ ವಿಘ್ನ ವಿನಾಯಕರನ್ನೇ ತಂದಿದ್ದೆವು.

ಒಂದೂವರೆ ಗೇಣಿನಷ್ಟು ಇದ್ದ ಗಣಪ ಎಷ್ಟು ಮುದ್ದಾಗಿದ್ದ ಅಂತೀರಾ? ನೋಡಲು ಕಣ್ಣುಗಳೆರಡು ಸಾಲದಾಗಿತ್ತು, ಹೊಗಳಲು ಪದಗಳೇ ಹೊರಳುತ್ತಿಲ್ಲ. ಹಬ್ಬ ಅಚ್ಚಕಟ್ಟಾಗಿಯೇ ಇತ್ತು. ಗಂಡಸರಿಗೆಲ್ಲ ಮನೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ ಅಂದಗೊಳಿಸಿದ್ದರೆ, ಹೆಂಗಸರು ಪೂಜೆಗೆ ಸಹಕರಿಸಿ, ಗಣಪನ ಬಣ್ಣಿಸುವ ಹಾಡುಗಳನ್ನು ಹಾಡಿ, ರುಚಿಕಟ್ಟಾಗಿ ಕಡುಬು, ಮೋದಕ ಮತ್ತಿತರ ಖಾದ್ಯಗಳಿದ್ದ ಮೃಷ್ಟಾನ್ನ ಭೋಜನ ತಯಾರಿಸಿ ಬಡಿಸುವಲ್ಲಿಯೇ ತೃಪ್ತಿಪಟ್ಟುಕೊಂಡೆವು.

ಇದು ಎಲ್ಲರ ಮನೆಯಲ್ಲಿಯ ನಡೆಯುವ ವಿದ್ಯಮಾನವೇ. ಇದರಲ್ಲಿ ಅಂತಹ ವಿಶೇಷವೇನೂ ಇಲ್ಲವೆನ್ನಿ. ಆದರೆ, ನಮ್ಮ ಮನೆಯಲ್ಲಿ ಗಣೇಶ ಚತುರ್ಥಿಯಂದು ವಿಶೇಷ ಸಂಗತಿಯೊಂದು ಘಟಿಸಿತು. ಅನ್ನ, ಕಟ್ಟಿನ ಸಾರು, ಕಡುಬು, ಆಂಬೋಡೆ, ಮೋದಕ, ಕುಚ್ಚಿದ ಕಡುಬು, ಚಟ್ನಿ, ಪಾಯಸದ ಜೊತೆಗೆ ಎರಡು ಬಗೆಯ ಪಲ್ಯಗಳನ್ನೂ ಮಾಡಲಾಗಿತ್ತು. ಅದರಲ್ಲಿ ಒಂದು ಬೀನ್ಸ್ ಪಲ್ಯ. ಇದರಲ್ಲೇನು ವಿಶೇಷವಿದೆ ಅಂತೀರಾ? ಸ್ವಲ್ಪ ತಡಕೊಳ್ಳಿ ಸ್ವಾಮಿ.

ಇಲ್ಲೇ ಇರುವುದು ವಿಶೇಷ. ಹದಿನೈದಿಪ್ಪತ್ತು ಬೀನ್ಸ್‌ಗಳನ್ನು ಒಟ್ಟುಗೂಡಿಸಿ ಇನ್ನೇನು ಈಳಿಗೆಮಣೆಯ ಚೂಪಾದ ಈಳಿಗೆಯಿಂದ ಕತ್ತರಿಸಬೇಕು, ಅಷ್ಟರಲ್ಲಿಯೇ ಥಟ್ಟನೆ ಎಲ್ಲ ಬೀನ್ಸ್‌ಗಳಿಗಿಂತ ಭಿನ್ನವಾದ ಬೀನ್ಸೊಂದು ಕಣ್ಣಿಗೆ ಬಿದ್ದಿತು. ನನ್ನ ಕಣ್ಣನ್ನು ನನಗೇ ನಂಬಲಾಗಲಿಲ್ಲ. ಆ ಬೀನ್ಸ್ ಥೇಟ್ ನಾಗರಹಾವಿನ ರೂಪದಲ್ಲಿತ್ತು. ಚಿತ್ರ ನೋಡಿದರೆ ನಿಮಗೇ ಗೊತ್ತಾಗುತ್ತದೆ. ನನ್ನ ಕಣ್ಣುಗಳನ್ನು ನನಗೇ ನಂಬಲಾಗಲಿಲ್ಲ. ಕಣ್ಣಿಗೆ ಸುಲೋಚನ ಹಾಕಿಕೊಂಡಿದ್ದರಿಂದ ಈ ವಿಸ್ಮಯ ನನ್ನ ಕಣ್ಣಿಗೆ ಬಿದ್ದಿತು.

ಕೂಡಲೆ ಮನೆಯವರನ್ನೆಲ್ಲ ಕೂಗಿ ಕರೆದೆ. ಏನೋ ಆಯಿತೆಂದು ಎಲ್ಲರೂ ತಮ್ಮ ಕೆಲಸಗಳನ್ನೆಲ್ಲ ಅಲ್ಲಿಯೇ ಬಿಟ್ಟು ಧಡಪಡಿಸಿ ಬಂದರು. ಗಣೇಶನ ಹಬ್ಬದಂದು ಗಣಪನ ಹೊಟ್ಟೆಯನ್ನು ಅಲಂಕರಿಸಿರುವ ನಾಗರಹಾವು ಸಾಕ್ಷಾತ್ ನಮ್ಮನೆಗೆ ತರಕಾರಿಯ ರೂಪದಲ್ಲಿ ಬರುವುದೆಂದರೇನು? ಆ ಬೀನ್ಸ್ ನಾಗರ ಹಾವಿನ ಉದ್ದ ನಮ್ಮ ಗಜಾನನನ ಆಕಾರಕ್ಕೆ ಹೇಳಿ ಮಾಡಿಸಿದಂತಿತ್ತು. ಎಲ್ಲರೂ ಒಂದು ಕ್ಷಣ ಈ ವಿಸ್ಮಯಕ್ಕೆ ತಲೆಬಾಗಿ ಗಣೇಶನನ್ನು ಭಕ್ತಿಯಿಂದ ನಮಸ್ಕರಿಸಿದರು. ಮುಂದೇನಾಯಿತು?

ಇದೇನು ಪವಾಡವೋ, ಪ್ರಕೃತಿಯ ವಿಸ್ಮಯವೋ?

ಇದೇನು ಪವಾಡವೋ, ಪ್ರಕೃತಿಯ ವಿಸ್ಮಯವೋ?

ಗಣೇಶ ಹಾಲು ಕುಡಿದಿದ್ದನ್ನು ನಾವು ಕೇಳಿದ್ದೇವೆ. ಎಲ್ಲರಿಂದ ಪ್ರಥಮ ವಂದನೆ ಸ್ವೀಕರಿಸುವ ಗಣೇಶ ಪಪ್ಪಾಯದಲ್ಲಿ, ಗಿಡದ ಬೇರಿನಲ್ಲಿ, ಕಲ್ಲಿನ ಬಂಡೆಯಲ್ಲಿ, ಹಿಮಾಲಯದ ಬಂಡೆಯ ಮೇಲೆ ಒಡಮೂಡಿದ್ದಂತೆ ಕಂಡಿದ್ದನ್ನು ಕೇಳಿದ್ದೇವೆ. ಹಾಗೆಯೆ, ಸಾಯಿಬಾಬಾ ಕಣ್ಣು ತೆರೆದಿದ್ದು ಕೂಡ ಕೇಳಿದ್ದೇವೆ. ಇದೇನು ಪ್ರಕೃತಿಯ ವಿಸ್ಮಯವೋ, ಪವಾಡವೋ ನನಗಂತೂ ತಿಳಿದಿಲ್ಲ. ನನಗಂತೂ ಪವಾಡಗಳಲ್ಲಿ ನಂಬಿಕೆಯೇ ಇಲ್ಲ. ನಾಗರಹಾವು ತರಕಾರಿಯ ರೂಪದಲ್ಲಿ ಬಂದಿದ್ದು ಪ್ರಕೃತಿಯ ವೈಚಿತ್ರ್ಯವೇ ಇರಬೇಕೆಂದು ತಿಳಿದೆವು.

ನಾವು ಮಾಡಿದ ಅತ್ಯುತ್ತಮ ಕೆಲಸವೆಂದರೆ...

ನಾವು ಮಾಡಿದ ಅತ್ಯುತ್ತಮ ಕೆಲಸವೆಂದರೆ...

ಇಂಥ ವೈಚಿತ್ರ್ಯವನ್ನು ಕಂಡಕೂಡಲೆ ನಾವು ಮಾಡಿದ ಅತ್ಯುತ್ತಮ ಕೆಲಸವೆಂದರೆ, ಅಕ್ಕಪಕ್ಕದವರಿಗೆ, ನೆಂಟರಿಷ್ಟರಿಗೆ, ಸ್ನೇಹಿತರಿಗೆ, ಸಾರ್ವಜನಿಕರಿಗೆ ಈ ವಿಸ್ಮಯವನ್ನು ತೋರಿಸದಿರುವುದು. ಅವರನ್ನೆಲ್ಲಾ ಕರೆಸಿದ್ದರೆ ನಮ್ಮ ಗಣೇಶ ಚತುರ್ಥಿಯ ಸಂಭ್ರಮವೇ ಮಂಗಮಾಯವಾಗುತ್ತಿತ್ತು. ಅದನ್ನು ಕವರ್ ಮಾಡಲೆಂದು ಮೀಡಿಯಾದವರು ಬರುವುದು, ಅವರಿಗೆ ಸಂದರ್ಶನ ಕೊಡುವುದು, ಜನರಲ್ಲೆಲ್ಲ ಮೂಢನಂಬಿಕೆಯ ಬೀಜ ಬಿತ್ತುವುದು ನಮಗೆಲ್ಲ ಬೇಕಾಗಿರಲಿಲ್ಲ. ಸೋ, ಬೀನ್ಸ್ ನಾಗಪ್ಪನನ್ನು ನಾವಷ್ಟೇ ನೋಡಿ ತೃಪ್ತಿಪಟ್ಟುಕೊಂಡೆವು.

ಬೀನ್ಸ್ ನಾಗಪ್ಪನ ಜೊತೆ ಬೆಳ್ಳಿ ನಾಗಪ್ಪನ ಸಂಭಾಷಣೆ

ಬೀನ್ಸ್ ನಾಗಪ್ಪನ ಜೊತೆ ಬೆಳ್ಳಿ ನಾಗಪ್ಪನ ಸಂಭಾಷಣೆ

ಅದ್ಹೇಗೆ ಇಂಥ ನಾಗರಬೀನ್ಸ್ ಸೃಷ್ಟಿಯಾಯಿತೋ ಆ ದೇವರೇ ಬಲ್ಲ. ಹೆಡೆಯಿಂದ ಬಾಲದವರೆಗೂ ಥೇಟ್ ನಾಗರಹಾವು. ಹೆಡೆಯೆತ್ತಿ ಆಡುತ್ತಿರುವಂತೆ ಅದರ ಮುಖ, ಇನ್ನೊಂದು ತುದಿಯಲ್ಲಿ ಪಕ್ಕಾ ಹಾವಿನ ಬಾಲದಂತೆ ಚೂಪಾಗಿತ್ತು. ಕಣ್ಣು, ಎರಡು ನಾಲಿಗೆ ಇಲ್ಲ ಎನ್ನುವುದನ್ನು ಬಿಟ್ಟರೆ ಇದು ನಾಗರಹಾವಿನಂತೆ ಇಲ್ಲ ಎಂದು ಯಾರೂ ಅಲ್ಲಗಳೆಯಲಾರರು. ಇನ್ನು ಬೆಳ್ಳಿ ನಾಗರ ಮೂರ್ತಿಯ ಮುಂದೆ ಇಟ್ಟಾಗ, ಎರಡೂ ಸಂಭಾಷಿಸುತ್ತಿವೆಯೇನೋ ಎಂಬಂತಿತ್ತು.

ಆ ಬೀನ್ಸ್ ನಾಗಪ್ಪನ ಕಥೆ ಮುಂದೇನಾಯಿತು?

ಆ ಬೀನ್ಸ್ ನಾಗಪ್ಪನ ಕಥೆ ಮುಂದೇನಾಯಿತು?

ಆ ಬೀನ್ಸ್ ನಾಗಪ್ಪನನ್ನು ಮರುದಿನ ತುಂಡುತುಂಡಾಗಿ ಕತ್ತರಿಸಿ ಪಲ್ಯ ಮಾಡಿ ತಿಂದೆವು ಎಂದು ನೀವಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು ತಪ್ಪು ತಪ್ಪು. ನಮ್ಮ ಗಣಪನಿಗೆ ಹೇಳಿ ಮಾಡಿಸಿದಂತಿದ್ದ, ಆ ಗಣಪನಿಗಾಗಿಯೇ ನಮ್ಮ ಮನೆಗೆ ಆಗಮಿಸಿದ್ದ ಬೀನ್ಸ್ ನಾಗಪ್ಪನನ್ನು ನಾವು ಶೋಕೇಸಿನಲ್ಲಿ ಹಾಗೆಯೇ ತೆಗೆದಿಟ್ಟಿದ್ದೇವೆ. ಎಷ್ಟು ದಿನ ಇರುತ್ತದೋ ಇರಲಿ. ಮುಂದೆ ಯಾರಿಗಾದರೂ ತೋರಿಸಲು ಬರುತ್ತದೆಂದು ಫೋಟೋಗಳನ್ನು ಸಾಕಷ್ಟು ತೆಗೆದಿದ್ದೇವೆ.

ಇಂಥ ನಾಗಪ್ಪ ಸಿಕ್ಕರೆ ನೀವೇನು ಮಾಡುತ್ತಿದ್ದಿರಿ?

ಇಂಥ ನಾಗಪ್ಪ ಸಿಕ್ಕರೆ ನೀವೇನು ಮಾಡುತ್ತಿದ್ದಿರಿ?

ಎಲ್ಲರಿಗೂ ಎಲ್ಲ ಸಂದರ್ಭದಲ್ಲಿಯೂ ಇಂಥ ವಿಸ್ಮಯದ ಅನುಭವ ಆಗಲು ಸಾಧ್ಯವಿಲ್ಲ. ಇದು ನಮಗೆ ಸಿಕ್ಕಿದ್ದು ನಮ್ಮ ಅದೃಷ್ಟವೆಂದೇ ಭಾವಿಸುತ್ತೇವೆ. ಅದೇನೇ ಇರಲಿ, ಇಂಥ ನಾಗಪ್ಪ ಸಿಕ್ಕಿದ್ದರೆ ನೀವೇನು ಮಾಡುತ್ತಿದ್ದಿರಿ? ಪವಾಡ ಎಂದು ಜನರನ್ನು ಸೇರಿಸುತ್ತಿದ್ದಿರಾ, ಅಥವಾ ಕೂಡಲೆ ಪಲ್ಯ ಮಾಡಿಕೊಂಡು ಹೊಟ್ಟೆಗೆ ಹಾಕಿಕೊಳ್ಳುತ್ತಿದ್ದಿರಾ? ಕಾಮೆಂಟ್ ವಿಭಾಗದಲ್ಲಿ ಬರೆದು ತಿಳಿಸಿ.

English summary
Miracle or nature's beauty? On the occasion of Gowri Ganesha festival we had a surprise. A serpent lookalike beans stunned us. We did not call the public to show this beauty of nature. An article by Vasantha Kumar, PU college lecturer, Chitradurga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X