ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ನಾಡಿಗೆ ಆಯುಧ ಪೂಜೆಯ ಹಸಿರು ತೋರಣ

By Prasad
|
Google Oneindia Kannada News

Dasara festivities in Karnataka (pic : pittuspics)
ವಿದ್ಯಾಬುದ್ಧಿಗಾಗಿ ಕೈಯಲ್ಲಿ ಹಿಡಿದ ಪೆನ್ನಿನಿಂದ ಹಿಡಿದು ಬದುಕಿನ ಒಂದಿಲ್ಲೊಂದು ಹಂತದಲ್ಲಿ ನಾವು ಹೊಟ್ಟೆಹೊರೆಯಲು ಸಹಾಯ ಮಾಡುವ, ನಮ್ಮನ್ನು ಕಾಪಾಡುವ ಆಯುಧಗಳನ್ನು ದೇವರುಗಳ ಸನ್ನಿಧಿಯಲ್ಲಿ ಇಟ್ಟು ಭಕ್ತಿಭಾವದಿಂದ ಪೂಜಿಸುವ ಸಮಯ ಬಂದಿದೆ. ಅದೇ ಆಯುಧ ಪೂಜೆ. ವಿಜಯದಶಮಿಯ ಮುನ್ನಾದಿನ ಬರುವ ಮಹತ್ವದ ಹಬ್ಬ.

ಈ ಹಬ್ಬದೊಡನೆ ಎರಡು ಪೌರಾಣಿಕ ಕಥೆಗಳು ಬೆಸೆದುಕೊಂಡಿವೆ. ದೇವತೆಗಳಿಗೆ ವಿಪರೀತ ಕಾಟ ಕೊಡುತ್ತಿದ್ದ ಮಹಿಷಾಸುರನನ್ನು ನವರಾತ್ರಿಯ ಒಂಬತ್ತನೇ ದಿನ, ಅಂದರೆ ಆಯುಧ ಪೂಜೆಯ ದಿನ ಚಾಮುಂಡೇಶ್ವರಿ ಸಂಹರಿಸಿದಳೆಂಬ ಪ್ರತೀತಿ. ಇನ್ನೊಂದು ಕಥೆ, ದ್ವಾಪರಯುಗದಲ್ಲಿ ಪಾಂಡವರು 1 ವರ್ಷ ಅಜ್ಞಾತವಾಸ ಮುಗಿಸಿದ ನಂತರ ಬನ್ನಿಮರದಲ್ಲಿ ಅಡಗಿಸಿಟ್ಟಿದ್ದ ಆಯುಧಗಳ ಪೂಜೆ ಮಾಡುತ್ತಾರೆ. ವಿಜಯದಶಮಿಯ ಹಿಂದಿನ ದಿನವನ್ನೇ ಆಯುಧ ಪೂಜೆಗೆ ಮೀಸಲಿಡಲಾಗಿದೆ. ವಿಜಯದಶಮಿಯಂದು ಬನ್ನಿಎಲೆಗಳನ್ನು ಬಂಗಾರವೆಂದು ಪರಿಗಣಿಸಿ ಪರಸ್ಪರ ಕೊಟ್ಟು ಒಳಿತಾಗಲೆಂದು ಆಶಿಸುವ ಪರಿಪಾಠ ಚಾಲ್ತಿಯಲ್ಲಿದೆ.

ಜಿಟಿಜಿಟಿ ಮಳೆಯಲ್ಲಿ ಗಿಜಿಗುಡುವ ರಸ್ತೆಗಳಲ್ಲೆಲ್ಲ ತೋರಣಕಟ್ಟಲು ಮಾವಿನ ಸೊಪ್ಪು, ಬಾಳೆ ಕಂಬ, ಬನ್ನಿಪತ್ರಗಳು, ಹೂವುಗಳು, ಹಣ್ಣುಗಳು, ನಿವಾಳಿಸಲು ಬುದೂಗುಂಬಳಕಾಯಿಗಳು ಬಂದು ಕುಳಿತಿವೆ. ಬೆಲೆ ಗಗನಕ್ಕೇರಿದ್ದರೂ ಹಬ್ಬದ ಉತ್ಸಾಹದಲ್ಲಿ ಎಳ್ಳಷ್ಟೂ ಉತ್ಸಾಹ ಕಡಿಮೆಯಾಗಿಲ್ಲ. ಮುಡಿಗೇರುತ್ತಿದ್ದ ಮಲ್ಲಿಗೆ ದೇವರಿಗೆ ಮಾತ್ರ ಮೀಸಲು. ಐದು ರುಪಾಯಿಗೆ ಸಿಗುತ್ತಿದ್ದ ಮಾವಿನ ಸೊಪ್ಪು ಕೂಡ ಹತ್ತು ರುಪಾಯಿಗೇರಿದೆ. ಇನ್ನು ಮಾರುದ್ದ ಸೇವಂತಿಗೆ ದರ 60ರಿಂದ 80.

ತರಕಾರಿ ಮಾರುವ ತಳ್ಳುಗಾಡಿಯಿಂದ ಹಿಡಿದು ಫ್ಯಾಕ್ಟರಿ, ಸಾಫ್ಟ್ ವೇರ್ ಕಂಪನಿಗಳಲ್ಲೆಲ್ಲ ಆಯುಧ ಪೂಜೆಯಂದು ಸಂಭ್ರಮದ ವಾತಾವರಣ. ಸೈಕಲ್, ಬೈಕ್, ಕಾರು, ಲಾರಿ, ಕಂಪ್ಯೂಟರ್, ವೈವಿಧ್ಯಮಯ ಮಷಿನರಿಗಳನ್ನೆಲ್ಲ ನೀಟಾಗಿ ಒರೆಸಿ, ಸುಣ್ಣ ಬಳಿದು, ಹೂವಿಟ್ಟು, ಊದುಬತ್ತಿ ಬೆಳಗಿ ಪೂಜಿಸುತ್ತಾರೆ. ಎಲ್ಲ ಕಾರ್ಮಿಕರೂ ಅವತ್ತೊಂದು ದಿನ ಕೆಲಸಕ್ಕೆ ಸಲಾಂ ಹೊಡೆದು ಪೂಜೆ ಮಾಡಿ, ಸಿಹಿ ಹಂಚಿ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ.

ಮನೆ, ಕಚೇರಿಗಳ ಮುಂದೆ ಹೆಂಗಳೆಯರು ಥಳಿ ಹೊಡೆದು, ಚೆಂದದ ರಂಗೋಲಿ ಬಿಡಿಸಿ, ಹೂವಿನಿಂದ ಅಲಂಕಾರ ಮಾಡಿ ಪೂಜೆಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ತೋರಣ ಕಟ್ಟುವ, ಬಾಳೆಕಂಬ ನಿಲ್ಲಿಸುವ, ವಾಹನ ಆಯುಧಗಳನ್ನು ತೊಳೆದು ಅಣಿಗೊಳಿಸುವ ಜವಾಬ್ದಾರಿ ಗಂಡಸರದ್ದು. ಕರ್ಪೂರದಾರತಿ ಬೆಳಗಿ ಪೂಜೆ ಮುಗಿಸುವ ಹೊತ್ತಿಗೆ ಎಲ್ಲರ ಲಕ್ಷ್ಯ ಬೇರೆಡೆ ಸಾಗಿರುತ್ತದೆ. ಕಚೇರಿಯಲ್ಲಾದರೆ ಪೂಜೆಯ ನಂತರ ಕಾಲು ಕೆಜಿ ಸ್ವೀಟ್ ಡಬ್ಬ, ನೂರು ಗ್ರಾಂ ಕಾರದ ಕಾಳುಗಳ ಬಳುವಳಿ. ಮನೆಯಲ್ಲಾದರೆ ಭರ್ಜರಿ ಹೋಳಿಗೆ ಊಟದ ಸುಯೋಗ.

English summary
Entire Karnataka decked up to celebrate Ayudha Pooja and splendorous Dasara. Even in costly days the festival fervor has not diminished. People was their vehicles, day-to-day usable metal instruments, decorate with flowers and worship.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X