ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಟಿಎಂ ಲೇಔಟ್ ಅಭ್ಯರ್ಥಿ ರವಿರೆಡ್ಡಿ ಸಂದರ್ಶನ

By ಶಾಮ್
|
Google Oneindia Kannada News

Ravi Krishna Reddy interview
ಭ್ರಷ್ಟಾಚಾರವನ್ನು ಬುಡಮೂಲದಿಂದ ಕಿತ್ತೊಗೆಯುವ ಮತ್ತು ಸ್ವಚ್ಛ ಆಡಳಿತ ನೀಡುವ ಉದ್ದೇಶದಿಂದ ಲೋಕಸತ್ತಾ ಪಕ್ಷ ಬೆಂಗಳೂರು ನಗರ ಜಿಲ್ಲೆಯಲ್ಲಿ ತನ್ನ ಅಭ್ಯರ್ಥಿಗಳನ್ನು ವಿಧಾನಸಭೆ ಚುನಾವಣಾ ಕಣದಲ್ಲಿ ಇಳಿಸಿದೆ. ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ಬಿಟಿಎಮ್ ಲೇಔಟ್‌ನಿಂದ ಅಮೆರಿಕದಿಂದ ಮರಳಿರುವ ಸಾಫ್ಟ್ ವೇರ್ ಇಂಜಿನಿಯರ್ ರವಿ ಕೃಷ್ಣಾರೆಡ್ಡಿ ಅವರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. 2008ರ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ರವಿ ಕೃಷ್ಣಾರೆಡ್ಡಿ ಅವರು ಈ ಬಾರಿ ಗೆದ್ದೇಗೆಲ್ಲುವ ಉಮೇದಿಯಿಂದ ಜನಬೆಂಬಲ ಗಳಿಸುವ ಕಾಯಕದಲ್ಲಿ ತೊಡಗಿದ್ದಾರೆ.

ಒನ್ಇಂಡಿಯಾ ಜೊತೆ ಅವರು ನಡೆಸಿದ ಮಾತುಕತೆಯಲ್ಲಿ, ತಾವು ಚುನಾವಣೆಗೆ ನಿಂತಿದ್ದೇಕೆ, ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಮತ್ತು ಜನರನ್ನು ಸೆಳೆಯಲು ಏನೇನು ಕಾರ್ಯಕ್ರಮ ಹಾಕಿಕೊಂಡಿದ್ದಾರೆ, ಪ್ರಚಾರ ಕಾರ್ಯವನ್ನು ಹೇಗೆ ಕೈಗೊಂಡಿದ್ದಾರೆ ಎಂಬ ಕುರಿತು ವಿಸ್ತೃತವಾಗಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಸ್ವಚ್ಛ ಆಡಳಿತ ಕೊಡುವ, ಭ್ರಷ್ಟಾಚಾರವನ್ನು ವಿರೋಧಿಸುವ ಅಭ್ಯರ್ಥಿಯನ್ನು ಪ್ರಜ್ಞಾವಂತ ಮತದಾರರು ಈ ಬಾರಿ ಖಂಡಿತ ಕೈಬಿಡುವುದಿಲ್ಲ ಎಂಬುದು ರವಿ ಕೃಷ್ಣಾರೆಡ್ಡಿ ಅವರ ದೃಢವಾದ ನಂಬಿಕೆ. ಸಂದರ್ಶನದ ವಿವರಗಳು ಇಲ್ಲಿವೆ.

ಪ್ರಶ್ನೆ : ಚುನಾವಣೆಯಲ್ಲಿ ಸ್ಪರ್ಧಿಸಲು ಸ್ಫೂರ್ತಿ ಏನು?

ಉತ್ತರ : ಕಳೆದ ಒಂದು ದಶಕದಲ್ಲಿ ಕರ್ನಾಟಕ ಅತಿ ಕೆಟ್ಟ ರಾಜಕೀಯ ಪರಿಸ್ಥಿತಿಯನ್ನು ಕಂಡಿದೆ. ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳ ಅಧಃಪತನವಾಗಿದೆ. ಈ ಕೊಳಕು ರಾಜಕೀಯ ಸಂಸ್ಕೃತಿಯನ್ನು, ಅನೀತಿಯುಕ್ತ ರಾಜಕಾರಣವನ್ನು ನಾವೆಲ್ಲ ಸೇರಿ ಬದಲಾಯಿಸಬೇಕಿದೆ. ಇಲ್ಲದಿದ್ದರೆ ದೇಶದಲ್ಲಿ ಪ್ರಜಾಪ್ರಭುತ್ವವಾಗಲಿ, ಶಾಂತಿ ಮತ್ತು ಘನತೆಯುಕ್ತ ಜೀವನವಾಗಲಿ ಸಾಧ್ಯವಾಗುವುದಿಲ್ಲ. ಪ್ರಜಾಪ್ರಭುತ್ವದ ಪರಿಕಲ್ಪನೆ ಇರುವ, ನ್ಯಾಯಾನ್ಯಾಯ ವಿವೇಚನೆ ಇರುವ ಯೋಗ್ಯರು ರಾಜಕೀಯ ಕ್ಷೇತ್ರಕ್ಕೆ ಬಂದು ಇಲ್ಲಿ ಒಂದು ಮೌಲ್ಯಾಧಾರಿತ ರಾಜಕೀಯ ಪರ್ಯಾಯ ನೀಡಬೇಕಿದೆ. ನಮ್ಮ ಇಂದಿನ ಬಹುತೇಕ ರಾಜಕಾರಣಿಗಳು ರಿಯಲ್ ಎಸ್ಟೇಟ್ ಮತ್ತು ಗಣಿ ಮಾಫಿಯಾದವರು, ಅನೈತಿಕ ಮಾರ್ಗಗಳಿಂದ ಮತ್ತು ಅಧಿಕಾರ ದುರುಪಯೋಗದಿಂದ ಹಣ ಮಾಡಿದ ಭ್ರಷ್ಟ ರಾಜಕಾರಣಿಗಳು, ಮತ್ತು ಅವರ ಕುಟುಂಬದವರೇ ಆಗಿದ್ದಾರೆ. ಅವರಿಗೆ ಪ್ರಜಾಪ್ರಭುತ್ವದ ಕಲ್ಪನೆಯಾಗಲಿ, ಜನರ ಕಲ್ಯಾಣದ ಕಾಳಜಿಗಳಾಗಲಿ ಇಲ್ಲ. ವಿದ್ಯಾವಂತ, ಯೋಗ್ಯ, ತಿಳಿವಳಿಕಸ್ಥ, ಸ್ವಚ್ಛ ಮತ್ತು ನೀತಿವಂತ ಸಮಾಜ ಬಯಸುವ ಜನ ಹೆಚ್ಚುಹೆಚ್ಚು ಸಂಖ್ಯೆಯಲ್ಲಿ ರಾಜಕಾರಣಕ್ಕೆ ಬಂದು ನಾಯಕತ್ವ ನೀಡಲು ಮುಂದಾದರೆ ಮಾತ್ರ ನಮ್ಮ ಈಗಿನ ಭ್ರಷ್ಟ ರಾಜಕೀಯ ವ್ಯವಸ್ಥೆ ಬದಲಾಗುತ್ತದೆ.

ಪ್ರ : ಚುನಾವಣೆಗೆ ಹಣ ಅಗತ್ಯವಿರುವುದರಿಂದ ನಿಮ್ಮ ಪ್ರಚಾರ ಹೇಗಿರುತ್ತದೆ?

ಉ : ಚುನಾವಣಾ ಆಯೋಗದ ಪ್ರಕಾರ ಒಬ್ಬ ಎಮ್‍ಎಲ್‍ಎ ಅಭ್ಯರ್ಥಿ ಕೇವಲ 16 ಲಕ್ಷ ರೂಪಾಯಿಯಲ್ಲಿ ತನ್ನ ಚುನಾವಣಾ ಖರ್ಚುಗಳನ್ನು ನಿಭಾಯಿಸಬೇಕು. ಆದರೆ ನಮ್ಮ ಬಹುತೇಕ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಕೆಲವು ಪಕ್ಷೇತರ ಅಭ್ಯರ್ಥಿಗಳು ಹತ್ತಾರು ಕೋಟಿಗಳನ್ನು ಕಾನೂನು ಬಾಹಿರವಾಗಿ ಚುನಾವಣೆಗೆ ಖರ್ಚು ಮಾಡುವುದು ನಮಗೆಲ್ಲ ತಿಳಿದಿರುವ ವಿಷಯವೆ. ಅವರು ಈ ಹಣವನ್ನು ತಮ್ಮ ಮತ್ತು ತಮ್ಮ ಪಕ್ಷದ ಪ್ರಚಾರಕ್ಕೆಂದು ಬಳಸುವುದಿಲ್ಲ. ಬದಲಿಗೆ ಓಟು ಕೊಳ್ಳಲೆಂದು ಬಳಸುತ್ತಾರೆ. ಹಣ ನಿಡುವುದು, ಸೀರೆ-ಉಂಗುರ-ಹೆಂಡ ಹಂಚುವುದು, ಬಾಡೂಟ-ಭೋಜನಗಳನ್ನು ಏರ್ಪಡಿಸುವುದು, ಮತದಾರರನ್ನು ದೂರದ ಊರುಗಳಿಗೆ ಮೋಜಿನ ಪ್ರವಾಸ ಕರೆದುಕೊಂಡು ಹೋಗುವುದು, ಇತ್ಯಾದಿ ಅನೈತಿಕ ಆಮಿಷಗಳನ್ನು ಒಡ್ದಲು ಬಳಸುತ್ತಾರೆ. ಇವ್ಯಾವುದನ್ನೂ ಮಾಡದೆ ಕೇವಲ ಚುನಾವಣಾ ಪ್ರಚಾರ ಮಾಡಿದರೆ 16 ಲಕ್ಷ ರೂಪಾಯಿಯಲ್ಲಿಯೇ ಒಬ್ಬ ಅಭ್ಯರ್ಥಿ ಉತ್ತಮ ಪ್ರಚಾರ ಮಾಡಬಹುದು. ನಾನು ನನ್ನ ಚುನಾವಣಾ ಖರ್ಚುಗಳನ್ನು ಜನರ ದೇಣಿಗೆ ಮತ್ತು ಸಹಾಯದಿಂದ ನಡೆಸಲು ತೀರ್ಮಾನಿಸಿದ್ದೇನೆ. ಈಗಾಗಲೆ ಜನ ಹಣ ನೀಡಲು ಮುಂದೆ ಬರುತ್ತಿದ್ದಾರೆ ಮತ್ತು ನಾವು ಪ್ರತಿಯೊಂದು ದೇಣಿಗೆ ಮತ್ತು ಖರ್ಚುಗಳಿಗೆ ಲೆಕ್ಕ ಇಡುತ್ತೇವೆ ಹಾಗೂ ಆ ಎಲ್ಲಾ ವಿವರಗಳನ್ನು ನನ್ನ ವೆಬ್‌ಸೈಟ್‌ನಲ್ಲಿ (www.ravikrishnareddy.com) ಪ್ರಕಟಿಸಲಾಗುತ್ತದೆ. ಇಂತಹ ಪ್ರಯತ್ನದ ಮೂಲಕವೇ ನಾವು ಚುನಾವಣೆಯಲ್ಲಿ ಹಣದ ಪ್ರಾಬಲ್ಯವನ್ನು ನಿಲ್ಲಿಸಲು ಸಾಧ್ಯ ಎಂದು ನಾನು ನಂಬಿದ್ದೇನೆ.

ಪ್ರ : ಚುನಾವಣೆಯಲ್ಲಿ ನಗರದ ಮತದಾರರಿಗೆ ಆಸಕ್ತಿಯೇ ಇಲ್ಲ. ಪರಿಸ್ಥಿತಿ ಹೀಗಿರುವಾಗ ಜನರಲ್ಲಿ ಹೇಗೆ ಜಾಗೃತಿ ಬೆಳೆಸುತ್ತೀರಿ ಮತ್ತು ಮತದಾನದಲ್ಲಿ ಭಾಗವಹಿಸುವಂತೆ ಹೇಗೆ ಮಾಡುತ್ತೀರಿ?

ಉ : ಕಳೆದ ಒಂದೆರಡು ದಶಕಗಳಿಂದ ನಗರವಾಸಿ ಮತದಾರರಿಗೆ ಒಳ್ಳೆಯ ಆಯ್ಕೆಗಳೇ ಇರಲಿಲ್ಲ ಮತ್ತು ಇದು ಅವರು ಚುನಾವಣಾ ಪ್ರಕ್ರಿಯೆಯಿಂದ ದೂರ ಸರಿಯಲು ಒಂದು ಕಾರಣವಾಗಿತ್ತು. ಬಿಲ್ಡರ್ಸ್‌ಗಳು, ರಿಯಲ್ ಎಸ್ಟೇಟ್ ಡೆವಲಪರ್ಸ್‌ಗಳು, ಕಾಂಟ್ರಾಕ್ಟರುಗಳು, ಇಂತಹವರೇ ಪ್ರಮುಖ ರಾಜಕೀಯ ಪಕ್ಷಗಳಿಂದ ಸೀಟು ಕೊಂಡುಕೊಂಡು ಹಣದ ಆಧಾರದ ಮೇಲೆ ಚುನಾವಣೆಗೆ ನಿಲ್ಲುತ್ತಿದ್ದಾರೆ. ನಗರಗಳ ಪ್ರಜ್ಞಾವಂತ ಮತದಾರರಿಗೆ ಇಂತಹ ವ್ಯಕ್ತಿಗಳ ಮೇಲೆ ನಂಬಿಕೆಯಾಗಲಿ ಮತ್ತು ಅವರು ಪ್ರತಿನಿಧಿಸಲಿರುವ ಸ್ಥಾನಕ್ಕೆ ಅರ್ಹರೆಂದಾಗಲಿ ಅನಿಸುತ್ತಿರಲಿಲ್ಲ. ಈ ಬಾರಿ ಬೆಂಗಳೂರಿನ ಅನೇಕ ಕಡೆ ನಮ್ಮ ಲೋಕ್‌ಸತ್ತಾ ಪಕ್ಷದಿಂದ ಅರ್ಹ ಮತ್ತು ಸ್ವಚ್ಛ ಅಭ್ಯರ್ಥಿಗಳನ್ನು ನಾವು ಚುನಾವಣೆಗೆ ನಿಲ್ಲಿಸುತ್ತಿದ್ದೇವೆ. ಇದು ಈ ಬಾರಿ ಬೆಂಗಳೂರಿನ ನಿರಾಸಕ್ತ ಮತದಾರರಿಗೆ ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸುತ್ತಿದ್ದು, ರಾಜ್ಯದ ಅನೈತಿಕ ರಾಜಕಾರಣದಿಂದ ರೋಸತ್ತಿರುವ ಇವರು ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿ ಮತ ಹಾಕುವ ವಿಶ್ವಾಸ ನಮಗಿದೆ.

English summary
Ravi Krishna Reddy is contesting from Lok Satta party for BTM Layout constituency in assembly election to be held on May 5, 2013. In an interview with Oneindia Ravi Reddy talks about his plans to fight against corruption and improve the infrastructure if he wins. Excerpts from the interview.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X