•  

ಚುನಾವಣಾ ಕೊಳದಲ್ಲಿ ಐಟಿ ಹುಡುಗ

ಗುರುವಾರ, ಏಪ್ರಿಲ್ 17, 2008, 15:41 [IST]
Ravi Krishna Reddyರೆಡ್ಡಿ ಈ ಸರತಿ ಎಲೆಕ್ಷನ್‌ಗೆ ನಿಲ್ತಾರಂತೆ ನಿಮಗೆ ಗೊತ್ತಾ? ಹಾಗಂತ ವಿಚಾರಿಸಿ ಕೇಳುವ ಇಮೇಲುಗಳು ಎಸ್ಎಂಎಸ್ ಸಂದೇಶಗಳು ನನಗೆ ಕಳೆದವಾರದಿಂದ ಬರುತ್ತಿವೆ. ರೆಡ್ಡಿ ಅಂದಾಕ್ಷಣ ಥಟ್ಟನೆ ಯಾವ ರೆಡ್ಡಿ ಎಂದು ಹೊಳೆಯಲಿಲ್ಲ. ಇವತ್ತಿನ ಕರ್ನಾಟಕ ಚುನಾವಣಾ ರಂಗದಲ್ಲಿ ಚುರುಕಾಗಿರುವ ಹೆಸರುಗಳಲ್ಲಿ ರೆಡ್ಡಿ ಹೆಸರಿನವರು ಬೇಕಾದಷ್ಟಿದ್ದಾರೆ. ನಮ್ಮ ದಟ್ಸ್‌ಕನ್ನಡ ಕಚೇರಿ ಇರುವ ಪ್ರದೇಶವು ನೂತನವಾಗಿ ನಿರ್ಮಾಣವಾಗಿರುವ ಬಿಟಿಎಂ ಲೇಔಟ್ ಕ್ಷೇತ್ರ ವ್ಯಾಪ್ತಿಗೆ ಬರುತ್ತಿದ್ದು ಇಲ್ಲಿಂದಲೇ ಇಬ್ಬರು ರೆಡ್ಡಿಗಳು ಸ್ಪರ್ಧೆಯಲ್ಲಿ ಇದ್ದಾರೆ. ಜಯನಗರದ ಹಳೆ ಹುಲಿ ಕಾಂಗ್ರೆಸ್ಸಿನ ರಾಮಲಿಂಗಾರೆಡ್ಡಿ ಮತ್ತು ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾಗಿರುವ ರಿಯಲ್ ಎಸ್ಟೇಟ್ ಕುಳ ಪ್ರಸಾದ್ ರೆಡ್ಡಿ.

ಆನಂತರ ಗೊತ್ತಾಯಿತು. ಜಯನಗರ ಕ್ಷೇತ್ರದಿಂದ ಸ್ಪರ್ದಿಸಲು ಸಿದ್ಧತೆ ನಡೆಸಿರುವ ಆಸಾಮಿ ಸಾಫ್ಟ್‌ವೇರ್ ಇಂಜಿನಿಯರ್, ದಟ್ಸ್‌ಕನ್ನಡ ಬರಹಗಾರ ರವಿಕೃಷ್ಣಾರೆಡ್ಡಿ ಅಂತ. ಹದಿನಾರು ಸಾವಿರ ಕಿಲೋಮೀಟರ್ ದೂರದ ಅಮೆರಿಕಾದ ಸಿಲಿಕಾನ್ ವ್ಯಾಲಿಯಲ್ಲಿ ಉದ್ಯೋಗ ಮಾಡಿಕೊಂಡಿರುವ ಬೊಮ್ಮಸಂದ್ರದ ರೆಡ್ಡಿ ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆ ಅಖಾಡಕ್ಕೆ ಅಲ್ಲಿಂದಲೇ ಧುಮುಕುತ್ತಿರುವ ಸಂಗತಿ ನನಗೇನೂ ಅಂತಹ ಆಶ್ಚರ್ಯತರುವ ಸುದ್ದಿಯಾಗಿರಲಿಲ್ಲ. ಯಾಕೆಂದರೆ, ಬೈ ಛಾನ್ಸ್ ಅವಕಾಶ ಸಿಕ್ಕರೆ ಗಗನೌಕೆಯಲ್ಲಿ ಕುಳಿತು ಕಲ್ಪನಾ ಚಾವ್ಲಾ ರೀತಿ ಚಂದ್ರಲೋಕ ಸಂಚಾರಕ್ಕೆ ಹೊರಡುವುದಕ್ಕೂ ಈ ರೆಡ್ಡಿಯವರ ಹುಡುಗ ಸಿದ್ಧ. ಮೇಲು ಕೀಳು ವ್ಯವಸ್ಥೆಯ ಮೇಲಾಟದ ವಿರುದ್ಧ ಹೋರಾಡಲು ಅವರು ಅಲ್ಲಿ ಧರಣಿ ಸತ್ಯಾಗ್ರಹ ಹೂಡುವುದಕ್ಕೂ ಸಿದ್ಧ. ರವಿರೆಡ್ಡಿ ಅಂಥ ಮನುಷ್ಯ.

ಇವರಿಗೇನಾಗಿದೆ? ಇವರಿಗೇಕೆ ಈ ಎಲೆಕ್ಷನ್ ಹುಚ್ಚು? ಕೈಯಲ್ಲಿರೋ ಕೆಲಸ ಕಾರ್ಯ ಬಿಟ್ಟು ಎಲೆಕ್ಷನ್‌ಗೆ ನಿಲ್ಲೋದಾ?ಎಂದು ಕೇಳಿದವರು ಇದ್ದಾರೆ. ಪಳಗಿದ ರಾಜಕಾರಣಿಗಳ ಹೂಡುವ ವಿಷಚಕ್ರದ ಗಾಡಿಯಲ್ಲಿ ಇವರು ಓಡುವುದಕ್ಕೆ ಆಗತ್ತಾ? ಚುನಾವಣೆ ಎಂದರೆ ಏನು ಸಾಮಾನ್ಯನಾ? ದುಡ್ಡನ್ನು ನೀರಿನಂತೆ ಸುರೀಬೇಕು, ಅಬ್ಬರದ ಪ್ರಚಾರ ಮಾಡಬೇಕು. ಅವೆಲ್ಲ ಇವರಿಂದ ಸಾಧ್ಯವೇ ಎಂದು ಸ್ನೇಹಿತರ ಕೂಟದಲ್ಲಿ ಮಾತು ಸಾಗುತ್ತಿರುವಾಗ ಒಬ್ಬ ಹುಡುಗ ಹೇಳಿದ. ಸಾರ್, ರೆಡ್ಡಿ ಅವರಿಗೆ ಈ ಸಮಾಜ ಗೊತ್ತಿರಬಹುದು, ಆದರೆ ಸಮಾಜಕ್ಕೆ ಈ ರೆಡ್ಡಿ ಯಾರೂ ಅಂತಲೇ ಗೊತ್ತಿಲ್ಲ.

ಹೊಸೂರು ರಸ್ತೆಯ ಬೊಮ್ಮಸಂದ್ರದ ಹುಡುಗ ರವಿಕೃಷ್ಣಾರೆಡ್ಡಿ ರೈತರ ಕುಟುಂಬದಲ್ಲಿ ಹುಟ್ಟಿಬೆಳೆದ ಹುಡುಗ. ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದು ಸದ್ಯ ಕ್ಯಾಲಿಫೋರ್ನಿಯಾದ ಒಂದು ಸಾಫ್ಟ್‌ವೇರ್ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದಾರೆ. ಅಲ್ಲಿದ್ದರೂ ಸದಾ ಅವರಿಗೆ ಇಲ್ಲಿಯದೇ ಚಿಂತೆ. ಕರ್ನಾಟಕದ ಸಾಮಾಜಿಕ, ಆರ್ಥಿಕ, ಧಾರ್ಮಿಕ ವಲಯಗಳಲ್ಲಿನ ಆಗುಹೋಗುಗಳನ್ನು ನಿತ್ಯ ಕುಲಂಕಷವಾಗಿ ಗಮನಿಸುವ ರೆಡ್ಡಿ ಅವರಿಗೆ ನಮ್ಮ ಸಮಾಜವನ್ನು ಕಿತ್ತುತಿನ್ನುತ್ತಿರುವ ಅಸಮಾನತೆ, ರಾಜಕೀಯ ದೊಂಬರಾಟಗಳು, ಧರ್ಮಾಂಧತೆ ಮತ್ತು ಆಡಳಿತಶಾಹಿಯ ನಿಷ್ಕ್ರಿಯತೆಯ ಬಗ್ಗೆ ತುಂಬಾ ಸಿಟ್ಟಿದೆ. ಆ ಸಿಟ್ಟನ್ನು ತೀರಿಸಿಕೊಳ್ಳುವುದಕ್ಕಾಗಿ ರೆಡ್ಡಿ ಏನು ಬೇಕಾದರೂ ಮಾಡಲು ರೆಡಿ.

ಒಂದು ಉದಾಹರಣೆ : ಕಳೆದ ವರ್ಷ ರವಿಕೃಷ್ಣಾರೆಡ್ಡಿ ಅಮೆರಿಕಾದಲ್ಲೇ ಕುಳಿತುಕೊಂಡು ಕರ್ನಾಟಕದಿಂದ ಒಂದು ವಾರ ಪತ್ರಿಕೆ ಹೊರಡಿಸಿದರು. ಪತ್ರಿಕೆಯನ್ನು ಒಂದು ಅಸ್ತ್ರವಾಗಿಟ್ಟುಕೊಂಡು ಈ ಸಮಾಜದ ಅನಿಷ್ಟಗಳ ವಿರುದ್ಧ ದನಿ ಎತ್ತುವ ಅಪಾರ ಆಸೆ ಇಟ್ಟುಕೊಂಡಿದ್ದರು. ಜಡ್ಡುಹಿಡಿದ ಓದುಗರು ಮತ್ತು ಜಿಡ್ಡುಮೆತ್ತಿಕೊಂಡಿರುವ ಪತ್ರಕರ್ತರನ್ನು ನಂಬಿಕೊಂಡು ಹೊರಡಿಸಿದ ಪತ್ರಿಕೆಯಿಂದ ರೆಡ್ಡಿ ಅವರ ಸಿಟ್ಟು ಕಡಿಮೆಯಾಗಲಿಲ್ಲ. ವ್ಯತಿರಿಕ್ತವಾಗಿ ಸುಮಾರು 30 ಲಕ್ಷ ರೂಪಾಯಿ ಕೈಜಾರಿ ಪತ್ರಿಕೆಯಲ್ಲಿ ಮಾರಿಕೊಂಡದ್ದೇ ಲಾಭವಾಯಿತು.

ಪತ್ರಿಕಾರಂಗದಿಂದ ಭ್ರಮನಿರಸನಗೊಂಡ ಕೃಷ್ಣಾರೆಡ್ಡಿ ಅವರ ಕತ್ತು ಈಗ ಶಾಸಕಾಂಗದತ್ತ ಹೊರಳಿದೆ. ಶತಾಯಗತಾಯ ಚುನಾವಣೆಯಲ್ಲಿ ಹೋರಾಡಿ ವಿಧಾನಸೌಧದ ಮೆಟ್ಟಿಲು ಏರಿ ಆಡಳಿತಕ್ಕೆ ಅಂಟಿಕೊಂಡಿರುವ ತುಕ್ಕನ್ನು ತಿಕ್ಕಿ ತೊಳೆಯುವ ಮಹತ್ವಾಕಾಂಕ್ಷೆಯಿಂದ ಅವರು ಚುನಾವಣಾ ರಂಗಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಫರ್ಲಾಂಗ್ ದೂರ, ಜೆಡಿಎಸ್‌ನಿಂದ ಮೈಲಿ ದೂರ ಮತ್ತು ಭಾಜಪದಿಂದ ಯೋಜನದೂರ ಇರುವ ರೆಡ್ಡಿ ಅವರಿಗೆ ಯಾವುದೇ ಪಕ್ಷಗಳ ಟಿಕೆಟ್ ಹಂಗು ಬೇಡ. ಪಕ್ಷಬಲ, ಚಿನ್ಹೆಯಬಲ, ಧನಬಲವಿಲ್ಲದೆ ಕೇವಲ ಆತ್ಮಬಲವನ್ನು ಪಣಕ್ಕಿಟ್ಟು ಸ್ವತಂತ್ರವಾಗಿ ಸ್ಪರ್ಧೆಗೆ ಧುಮುಕುತ್ತಿರುವ ರೆಡ್ಡಿ , ಅಧಿಕಾರದ ಆಸೆಗೆ ನಾನೇಕೆ ಬಿದ್ದೆ ಎನ್ನುವುದನ್ನು ತಮ್ಮ ದೀರ್ಘವಾದ ಒಂದು ಪತ್ರದಲ್ಲಿ ವಿವರಿಸಿದ್ದಾರೆ. ಓದಿ.

ರಾಜಕೀಯವಾಗಿ ಹೋರಾಡಿ ಗೆಲುವು ಸಾಧಿಸಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಬದ್ಧರಾಗಲು ಸನ್ನದ್ಧರಾಗಿರುವ ರೆಡ್ಡಿ ಈ ಚುನಾವಣೆಯಲ್ಲಿ ಇಣುಕು ಹಾಕುತ್ತಿರುವ ಒಬ್ಬ ಏಕಲವ್ಯ. ಇನ್ನೊವಾ ಕಾರಿನಲ್ಲಿ ನೋಟಿನ ಪೆಂಡಿಗಳನ್ನು ಸಾಗಿಸುವ ಅಥವಾ ಮಾರುತಿ ಕಾರಿನಲ್ಲಿ ಸೀರೆಯ ಬಂಡಲ್ಲುಗಳನ್ನು ಸಾಗಿಸಿ ಮತದಾರರಿಗೆ ಹಂಚುವ ಯೋಚನೆ ಅವರಿಗಿಲ್ಲ. ಕಟ್ ಔಟ್, ಬ್ಯಾನರ್ , ಬಂಟಿಂಗ್ ತೂಗುಹಾಗಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುವ ಉದ್ದೇಶಗಳಿಲ್ಲ. ಕರಪತ್ರಗಳನ್ನು ಮುದ್ರಿಸಿ ಹಂಚುವುದರ ಮೂಲಕ ತಾವ್ಯಾರು, ಚುನಾವಣೆಗೆ ಏಕೆ ಬಂದಿದ್ದೇನೆ ಎಂದು ಮತದಾರರಿಗೆ ಹೇಳುವುದಷ್ಟೇ ಅವರ ಪ್ರಯತ್ನ.

ಬೆಂಗಳೂರಿನಲ್ಲಿರುವ ಸುಮಾರು 2 ಲಕ್ಷಕ್ಕೂ ಹೆಚ್ಚಿನ ಐಟಿ ನೌಕರರಿಗೆ ತಮ್ಮ ಸಂದೇಶವನ್ನು ಇಮೇಲ್ ಮುಖಾಂತರ ರವಾನಿಸಿ ಪ್ರೋತ್ಸಾಹ ಬೇಡುತ್ತಿದ್ದಾರೆ. ಅವರು ಪ್ರತಿನಿಧಿಸುತ್ತಿರುವ ಜಯನಗರ ಕ್ಷೇತ್ರದಲ್ಲಿ ನೀವು ಮತದಾರರಾಗಿದ್ದರೆ ನೀವು ಒಂದು ಓಟು ಹಾಕಬಹುದು. ಚುನಾವಣಾ ಖರ್ಚು ವೆಚ್ಚ ತೂಗಿಸುವುದಕ್ಕೆ ಅವರಿಗೆ ನೀವು ಪೇ ಪಾಲ್ ಮೂಲಕ ಧನಸಹಾಯವನ್ನೂ ಮಾಡಬಹುದು.

ಜಯನಗರ, ಪಟ್ಟಾಭಿರಾಮನಗರ, ಗುರಪ್ಪನಪಾಳ್ಯ, ಜೆಪಿ ನಗರ ಮತ್ತು ಸಾರಕ್ಕಿ ಬಡಾವಣೆಗಳನ್ನು ಒಳಗೊಳ್ಳುವ ಜಯನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಲು ಸಜ್ಜಾಗುತ್ತಿರುವ ರವಿಕೃಷ್ಣಾರೆಡ್ಡಿ ಮತ್ತು ಸುವರ್ಣ ಕರ್ನಾಟಕ ಪಕ್ಷದ ಚನ್ನಗಿರಿ ಕ್ಷೇತ್ರದ ಅಭ್ಯರ್ಥಿ ಮಹಿಮಾ ಪಟೇಲ್ ಮಾದರಿಯ ಹುರಿಯಾಳುಗಳಿಗೆ ಈ ಚುನಾವಣೆಯಲ್ಲಿ ಒಳ್ಳೆಯದಾಗಲಿ. ಲಗೇ ರಹೋ. ರಾಜಕೀಯವನ್ನೇ ವೃತ್ತಿ ಮಾಡಿಕೊಂಡಿರುವವರು, ಕ್ರಿಮಿನಲ್ ಹಿನ್ನೆಲೆವುಳ್ಳವರು, ಅಸಹ್ಯ ಹುಟ್ಟಿಸುವಷ್ಟು ಕಪ್ಪುಹಣದ ಬೆಂಬಲ ಇರುವವರು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯ ಎಂಬ ನಂಬಿಕೆಯನ್ನು ಸುಳ್ಳಾಗಿಸುತ್ತಿರುವ ರವಿ ಅವರಿಗೆ ನಿಮ್ಮೆಲ್ಲರ ಮಾರಲ್ ಸಪೋರ್ಟ್ ಪ್ರಾಪ್ತವಾಗಲಿ. ಅವರ ವೆಬ್ ತಾಣ : ರವಿಕೃಷ್ಣಾರೆಡ್ಡಿ.ಕಾಂ.
User Comments
Ranga 14 Oct 2008 03:37 pm
Do the thatskannada wants to keep this till next elections?Better to remove at once.
Ranga 14 Oct 2008 03:36 pm
Do the thatskannada wants to keep this till next elections?Better to remove at once.
[ ಅಭಿಪ್ರಾಯ ಬರೆಯಿರಿ ]
IPL, Himachal Pradesh Cricket Association Stadium, Dharmasala
Kings XI Punjab: 31 / 0, 3.2 Overs
1st Test , Lord's Cricket Ground, St John's Wood
West Indies: 83 / 2, 29 Overs
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article