ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಥವರು ಬರೆಯಲು ಕುಳಿತಾಗ ಅವರ ಕಸುವೇ ಕವಿತೆಯಾಗುತ್ತದೆ

By Oneindia Staff
|
Google Oneindia Kannada News

ರವಿ ಬೆಳಗೆರೆ

ಕಡೇ ಪಕ್ಷ ಅವರು ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಮಾತನಾಡುತ್ತಾರೆ ಅಂದುಕೊಂಡಿದ್ದೆ. ಪದೇ ಪದೇ ವರದಿಯಾಗುತ್ತಿರುವ ಆ್ಯಸಿಡ್‌ ಪ್ರಕರಣಗಳ ವಿರುದ್ಧ ದನಿಯೆತ್ತುತ್ತಾರೆ ಅಂದುಕೊಂಡಿದ್ದೆ. ನಿರಾಸೆಯಾಯಿತು. ಕಡೆಗೆ ಪ್ಲೇವಿನ್‌ ವಿರುದ್ಧ , ಹೊಸ ಬ್ರಾಂದಿ ಅಂಗಡಿಗಳ ವಿರುದ್ಧ ದನಿಯೆತ್ತಿದರಲ್ಲ ? ಅಷ್ಟೇ ಸಮಾಧಾನ ಅನ್ನಿಸಿ ಎದ್ದು ಬಂದೆ.

ಅದು ಅಖಿಲ ಕರ್ನಾಟಕ ಲೇಖಕಿಯರ ಸಂಘದ ಐದನೆಯ ಸಮ್ಮೇಳನ. ಅವರು ಅಕ್ಷರ ಲೋಕದ ಹೆಣ್ಣು ಮಕ್ಕಳು. ಅವರೊಂದಿಗೆ ಕಳೆದ ಅರ್ಧ ಭಾನುವಾರ ಚೇತೋಹಾರಿಯಾಗಿತ್ತು. ನಾನು ತುಂಬ ಗೌರವಿಸುವ, ನನ್ನ ಮೆಚ್ಚುಗೆಯ ಬರಹಗಾರ್ತಿ ವೀಣಾ ಶಾಂತೇಶ್ವರ, ಸಮ್ಮೇಳನದ ಅಧ್ಯಕ್ಷೆಯಾಗಿದ್ದರು. ಅವರ ಜೊತೆಗೆ ಅನೇಕ ಕತೆಗಾರ್ತಿಯರು, ಕಾದಂಬರಿಗಾರ್ತಿಯರು, ಮಾತುಗಾರ್ತಿಯರು, ಕಾದಂಬರಿಗಾರ್ತಿಯರು, ಮಾತುಗಾರ್ತಿಯರು, ಕವಯತ್ರಿಯರು, ದೊಡ್ಡ ಜಡೆಯವರು, ಪಟ್ಟೆ ಪೀತಾಂಬರದವರು, ಬಾಬ್‌ ಕಟ್ಟಿನವರು, ಗಟ್ಟಿ ಮಾತಿನವರು, ಚೊಕ್ಕ ನಗೆಯವರು ಚಿಕ್ಕೆಯಂಥವರು- ಎಲ್ಲರೂ ಇದ್ದರು. ಅನಾಮತ್ತು 25 ವರ್ಷಗಳ ನಂತರ ನನ್ನ ಸಹಪಾಠಿ ಭುವನೇಶ್ವರಿ ಹೆಗಡೆ ಸಿಕ್ಕಿದ್ದಳು. ಆಕೆ ಬರೆಯುವ ಸಟ್ಲ್‌ ಆದ ಸಭ್ಯ ಹಾಸ್ಯದ ದೊಡ್ಡ ಅಭಿಮಾನಿ ನಾನು. ಇಪ್ಪತ್ತೆೈದು ವಷಗಳ ಹಿಂದೆ ಒಟ್ಟಿಗೇ ಎಂ. ಎ. ಓದಿದವರು ನಾವು. ಆಕೆಯ ಭಾಷಣ ಮುಗಿಯಲೆಂದೇ ಮಧ್ಯಾಹ್ನ ತನಕ ನಾನು ಅಲ್ಲೇ ಕುಳಿತಿದ್ದೆ. ತುಂಬ ದಿನಗಳ ನಂತರ ನನ್ನಂಥ ಅನೇಕರ ಪಾಲಿನ ಹಿರಿಯಕ್ಕ ಸಾ.ರಾ.ಅಬೂಬಕರ್‌ ಅವರನ್ನು ಕಂಡು ಮಾತಾಡಿಸಿದ್ದಾಯಿತು. ಗೀತಾ ಸುರತ್ಕಲ್‌, ಹೇಮಾ ಪಟ್ಟಣ ಶೆಟ್ಟಿ, ಸ. ಉಷಾ, ದಾವಣಗೆರೆಯ ಅರುಂಧತಿ ರಮೇಶ್‌, ಗೀತಾ ಬಿ.ಯು, ಉಷಾ ರೈ, ಯಮುನಾ ಮೂರ್ತಿ, ಎನ್‌.ಗಾಯತ್ರಿ - ಹೀಗೆ ತುಂಬ ಜನ ಬರಹಗಾರ್ತಿಯರನ್ನು ಭೇಟಿಯಾದಂತಾಯಿತು. ಅವತ್ತು ರವೀಂದ್ರಕಲಾ ಕ್ಷೇತ್ರದ ತುಂಬಾ ಮಹಿಳಾ ಸಾಹಿತ್ಯ. ಥರೇವಾರಿ ಗೋಷ್ಠಿಗಳು. ಗೋಷ್ಠಿಯ ತುಂಬ ಲೇಖಕಿಯರು. ಚಿಟ್ಟು ಹಿಡಿದುಹೋಗುವಷ್ಟು ಮಾತು. ಈ ಹೆಣ್ಣು ಮಕ್ಕಳು ಎಷ್ಟು ಚೆನ್ನಾಗಿ ಮಾತಾಡುತ್ತಾರಲ್ಲ ? ಇವರು ಮಾತಾಡಿದಷ್ಟು ಚೆಂದವಾಗಿ ಬರೆದುಬಿಟ್ಟಿದ್ದಿದ್ದರೆ ಇನ್ನೆಷ್ಟು ಅದ್ಭುತವಾಗಿರುತ್ತಿತ್ತೋ! ಅಂತ ಗೊಣಗಿಕೊಂಡೆ. ವೇದಿಕೆಯಲ್ಲಿ ನನ್ನ ಪಕ್ಕದಲ್ಲಿ ಕುಳಿತಿದ್ದ ಜಿ.ರಾಮಕೃಷ್ಣ ನಕ್ಕರು.

ಹತ್ತು ವರ್ಷಗಳ ಹಿಂದೆ ಮಾತಾಡಿದ ಧಾಟಿಯಲ್ಲೇ ಇವತ್ತಿಗೂ ಮಾತಾಡುವವರಿದ್ದಾರೆ. ಯಥಾ ಪ್ರಕಾರದ ಅಭಿಪ್ರಾಯಗಳು. ನಾವು ಹೆಣ್ಮಕ್ಕಳು ಅನ್ನೋ ಕಾರಣಕ್ಕೆ ನಮ್ಮನ್ನು ರಿಯಾಯಿತಿ ಕೊಟ್ಟು ನೋಡಬೇಕಾಗಿಲ್ಲ. ನಮ್ಮದೇನೂ ಅಡುಗೆಮನೆ ಸಾಹಿತ್ಯವಲ್ಲ. ನಾವೂ ಅಧಿಕಾರಿಗಳಾಗಿದ್ದೇವೆ. ನಮ್ಮನ್ನು ಕಂಡರೆ ನಿಮಗೆ ಹೊಟ್ಟೆ ಉರಿ ! ಹೆಣ್ಣನ್ನು ಮಾಧ್ಯಮಗಳು ಶೋಷಣೆ ಮಾಡುತ್ತಿವೆ. ಹೆಣ್ಣು ಭೋಗದ ವಸ್ತುವಲ್ಲ.... ಇತ್ಯಾದಿ, ಇತ್ಯಾದಿ.

ತುಂಬ ವರ್ಷಗಳಿಂದ ಈ ಹೆಣ್ಣು ಮಕ್ಕಳ ಮನಸ್ಸು ಬೆಳೆದೇ ಇಲ್ಲವಾ ಅನ್ನಿಸಿದ್ದು ಹೌದು. ವೀಣಾ ಶಾಂತೇಶ್ವರ, ಗಾಯತ್ರಿ, ಸುಮಿತ್ರಾ ಮುಂತಾದ ಕೆಲವರ ಮಾತು ಹೊರತುಪಡಿಸಿದರೆ, ಇಡೀ ಸಮ್ಮೇಳನ ಅಂಗಳ ದಾಟಿ ಬಂದ ಲೇಖಕಿಯರ ಸಮ್ಮೇಳನದಂತೆ ಕಾಣಲಿಲ್ಲ.

ಹೇಮಲತಾ ಮಹಿಷಿಯಂಥ ವಯಸ್ಸಾದ ಲೇಖಕಿ ಮಾತಾಡಿದ್ದನ್ನೇ ನೋಡಿ- ಪಾಪ, ನಫೀಜಾ ಫಜಲ್‌ ಡ್ಯಾನ್ಸ್‌ ಮಾಡಿದ್ದು ಏನು ತಪ್ಪಾಯಿತು ಹೇಲಿ ? ಆಕೆ ಹೆಂಗಸು ಅನ್ನೋ ಕಾರಣಕ್ಕೆ ಆಕೆಯ ವಿರುದ್ಧ ಅಷ್ಟೆಲ್ಲ ಬರೆದು ಗಲಾಟೆ ಮಾಡಿದರು - ಅಂದರು ಮಹಿಷಿ. ಯಾಕೋ ಮೈ ಉರಿದು ಹೋಯಿತು.

ನಿಮಗೆ ನಫೀಸ್‌ ಫಜಲ್‌ ಹೆಂಗಸು ಅನ್ನೋ ಕಾರಣಕ್ಕೆ ಅಷ್ಟು ಇಷ್ಟವಾಗೋ ಹಾಗಿದ್ರೆ ಇಲ್ಲಿಗೇ ಕರೆಸಿ ಡ್ಯಾನ್ಸು ಮಾಡಿಸಿ ಅಂತ ರೇಗಿ ಹೇಳಿದೆ.

ಅದಕ್ಕೇಂತ ಒಂದು ಗೋಷ್ಠಿ ಇಟ್ಟುಕೊಂಡು ಚರ್ಚೆ ಮಾಡಾಣ ಬಿಡಿ ಎಂದು ಗೊಣಗಿಕೊಂಡರು ಮಹಿಷಿ. ಈಕೆಯ ರಿಸೀವರ್‌ ಕೆಟ್ಟು ಹೋಗಿದೆ ಅಂದುಕೊಂಡು ಸುಮ್ಮನಾದೆ.

ಎಲ್ಲೋ ಒಂದು ಕಡೆ, ನಾವು ಮಹಿಳೆಯರು ಪುರುಷರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ. ನಿಮ್ಮ ಸಲಹೆ ನಮಗೆ ಬೇಕಾಗಿಲ್ಲ. ನಮಗೆಲ್ಲ ಗೊತ್ತು ಎಂಬ ಸಿಂಡ್ರೋಮ್‌ ಈ ಮಹಿಷಿಯಂತಹ ಹಿರಿಯ ಮುತ್ತೆೈದೆಯರನ್ನು ಆವರಿಸಿಕೊಂಡಿದೆ. ಹೆಣ್ಣು ಮಕ್ಕಳು ಬರೆದುದರಲ್ಲಿ ಕಸುಬುದಾರಿಕೆಯ ಕೊರತೆಯಿದೆ ಅಂತ ಭೈರಪ್ಪನವರು ಮಾತಾಡಿದರೆ ನೋಡಿದಿರೇನ್ರಿ...ಕುಸುಬು ಅಂತಾನೇ... ಎಂದು ಹಲುಬಿ ಹೈರಾಣಾದರೇ ಹೊರತು ಭೈರಪ್ಪನವರು ಹೇಳಿದ ಬರಹದಲ್ಲಿನ ಕ್ರಾಫ್ಟ್‌ಮನ್‌ಶಿಪ್‌ ಅಂದರೇನು ಅಂತ ಅರ್ಥ ಮಾಡಿಕೊಳ್ಳುವ ಪ್ರಯತ್ನ ಅಲ್ಲಿ ನಡೆಯಲೇ ಇಲ್ಲ. ಪತ್ರಿಕೆಗಳವರು ಬರೀ ಭೈರಪ್ನೋರ ಫೋಟೋ ಹಾಕಿದರು, ಅವರದೇ ಭಾಷಣ ಪ್ರಕಟಿಸಿದರು ಎಂಬ ಹಳಹಳಿ. ಅದು ಲಗ್ನದ ಮನೆಯಲ್ಲಿ ಮಾತಿಗೆ ಕುಳಿತ ಓರಗಿತ್ತಿಯರ ಗೊಣಗಿನಂತಿತ್ತೇ ಹೊರತು ಸಮ್ಮೇಳನದ ಮಂಥನಕ್ಕೊಂದು ದಿಕ್ಕು ಹುಡುಕುವ ಪ್ರಯತ್ನದಂತೆ ಕಾಣಲಿಲ್ಲ.

ಇವತ್ತು ನಮ್ಮ ಲೇಖಕಿಯರು ಹೊಸ ದಿಕ್ಕು, ಹೊಸ ಸಾಧ್ಯತೆಗಳ ಕಡೆಗೆ ನೋಡಲೇಬೇಕಾಗಿದೆ. ಅಸಲು ಶ್ರೀರಾಮಚಂದ್ರನೆಂಬಾತ ಬಹಿರಂಗವಾಗಿ, ಖುಲ್ಲಂ ಖುಲ್ಲ ಸೀತಾ ದೇವಿಗೆ ಡೈವೋರ್ಸು ಕೊಟ್ಟು ನೆಲದ ಪಾಲು ಮಾಡಿದ್ದು ರುಜುವಾತಾಗಿರುವಾಗ ಅವನಂಥವನಿಗೆ ಅಯೋಧ್ಯೆಯಲ್ಲಿ ಗುಡಿ ಕಟ್ಟುವ ಹರಕತ್ತೇನಿದೆ ಅಂತ ಕೇಳಬೇಕಿದೆ ಮಹಿಳೆ. ಪಕ್ಕದ ಪಾಕಿಸ್ತಾನದಲ್ಲಿ, ಬಾಂಗ್ಲಾದೇಶದಲ್ಲಿ ದುಬಾಯಿಯಲ್ಲಿ, ನೈಜೀರಿಯಾದಲ್ಲಿ ಇಸ್ಲಾಮಿಕ್‌ ಪ್ರಭುತ್ವಗಳು ಷರಿಯಾ ಕಾನೂನು ಜಾರಿಗೆ ತಂದಿರುವುದನ್ನು ಆಕೆ ಪ್ರತಿಭಟಿಸಬೇಕಿದೆ.

ನಿಮಗೆ ಆಶ್ಚರ್ಯವೆನ್ನಿಸಬಹುದು. ಮುಸ್ಲಿಂ ಹೆಂಗಸರನ್ನು ಅತ್ಯಂತ ಹೀನಾಯವಾಗಿ ಕಾಣುವ ಷರಿಯಾ ಕಾನೂನು ಜಾರಿಗೆ ತರಕೂಡದು ಅಂತ ದನಿಯೆತ್ತಿರುವವರು ಪಾಶ್ಚಿಮಾತ್ಯರು! ಅದರಲ್ಲೂ ಕ್ರೆೃಸ್ತ ಮಹಿಳೆಯರು. ದಿನ ಬೆಳಗಾದರೆ ಮುಸ್ಲಿಂ ಮಹಿಳೆಯರೊಂದಿಗೆ ಒಡನಾಟವಿಟ್ಟುಕೊಂಡಿರುವ, ತಮ್ಮ ನಡುವೆಯೇ ಸಾರಾ ಅಬೂಬಕರ್‌, ಬಾನು ಮುಷ್ತಾಕ್‌, ರಜಿಯಾ ಮುಂತಾದ ಮುಸ್ಲಿಂ ಲೇಖಕಿಯರನ್ನು ಹೊಂದಿರುವ ನಮ್ಮ ಬರಹಗಾರ್ತಿಯರು ಪಕ್ಕದ ದೇಶದ ಹೆಣ್ಣು ಮಕ್ಕಳ ನರಕದ ಕುರಿತು ಯೋಚನೆ ಕೂಡ ಮಾಡುವುದಿಲ್ಲ . ನಿಮಗೆ ಗೊತ್ತಿರಲಿಕ್ಕಿಲ್ಲ. ಪಾಕಿಸ್ತಾನದಲ್ಲಿ ಹೆಣ್ಣು ಮಗಳೊಬ್ಬಳ ಮೇಲೆ ಅತ್ಯಾಚಾರ ನಡೆದರೆ ಶಿಕ್ಷೆಯಾಗುವುದು ಮಾನಭಂಗ ಮಾಡಿದವನಿಗಲ್ಲ. ಅವನ ವಿರುದ್ಧ ದೂರು ನೀಡಿದ ಬಲಿಪಶುವಿಗೆ. ನಾನು ಅವಳ ಮಾನಭಂಗ ಮಾಡಿಲ್ಲ ಅಂತ ಪವಿತ್ರ ಕುರಾನದ ಮೇಲೆ ಆಣೆಯಿಟ್ಟು ಹೇಳಿಬಿಟ್ಟರೆ ಮಾನಭಂಗ ಮಾಡಿದ ಗಂಡಸು ನಿರಪರಾಧಿ! ಅನಂತರ ಫಜೀತಿ ರೇಪ್‌ಗೆ ಒಳಗಾದ ಹೆಂಗಸಿನದು. ಆಕೆ ತನ್ನ ಮೇಲೆ ರೇಪ್‌ ನಡೆಯಿತೆಂಬುದನ್ನು ಸಾಬೀತುಪಡಿಸಬೇಕು. ಅದನ್ನು ಕಣ್ಣಾರೆ ಕಂಡ ನಾಲ್ವರು ಗಂಡಸರನ್ನು ಕರೆ ತಂದು ಸಾಕ್ಷ್ಯ ಹೇಳಿಸಬೇಕು. ಆಕೆ ವಿಫಲಳಾದರೆ ಆಕೆಗೆ ಶಿಕ್ಷೆ - ಮರಣದಂಡನೆ. ಆಕೆ ಅವಿವಾಹಿತೆಯಾಗಿ ರೇಪ್‌ಗೊಳಗಾಗಿದ್ದು, ಅದನ್ನು ಸಾಬೀತುಪಡಿಸಲಾಗದಿದ್ದರೆ- ಆಕೆಗೆ ನೂರು ಛಡಿಯೇಟು. ವಿವಾಹಿತಳಾಗಿದ್ದರೆ, ಮಾನಭಂಗಕ್ಕೆ ಒಳಗಾಗಿದ್ದು ಸಾಬೀತುಪಡಿಸಲಾಗದಿದ್ದರೆ ಆಕೆಯನ್ನು ಕುತ್ತಿಗೆಯ ತನಕ ನೆಲದಲ್ಲಿ ಹೂಳಬೇಕು. ನಂತರ ಕಲ್ಲೆಸೆದು ಸಾಯಿಸಬೇಕು. ಅದೂ ಏನು, ಕೈಗೆ ಸಿಕ್ಕ ಕಲ್ಲೆಸೆಯುವಂತಿಲ್ಲ. ಅವುಗಳ ಸೈಜಿನ ಬಗ್ಗೆಯೂ ಷರಿಯಾ ಕಾನೂನು ವಿವರಣೆ ನೀಡಿದೆ. ತೀರ ಚಿಕ್ಕ ಕಲ್ಲೆಸೆದರೆ ಬೇಗ ಸಾಯುವುದಿಲ್ಲ. ತೀರಾ ದೊಡ್ಡ ಕಲ್ಲು ಎತ್ತಿ ಹಾಕಿದರೆ ತಕ್ಷಣ ಸಾಯುತ್ತಾಳೆ. ಹಾಗಾಗದಂತೆ ಸರಿಯಾದ ಸೈಜಿನ ಕಲ್ಲು ಎಸೆದೂ ಎಸೆದು ಸಾಯಿಸಬೇಕು ಅನ್ನುತ್ತದೆ ಷರಿಯಾ. ಇಂಥದೊಂದು ಪೈಶಾಚಿಕ ಮರಣದಂಡನೆಗೆ ನೈಜೀರಿಯಾದಲ್ಲಿ ಇಬ್ಬರು ಹಾಗೂ ಪಾಕಿಸ್ತಾನದಲ್ಲಿ ಒಬ್ಬ ಹೆಂಗಸು ಗುರಿಯಾಗಿ ಜೀವ ಭಿಕ್ಷೆ ಬೇಡುತ್ತಿದ್ದಾರೆ. ದುಬಾಯಿಯಲ್ಲಿ ಮೂವರಿಂದ ರೇಪ್‌ಗೆ ಒಳಗಾಗಿ 18 ತಿಂಗಳ ಸೆರೆವಾಸ ಅನುಭವಿಸುತ್ತಿರುವ ಫ್ರಾನ್ಸ್‌ ಮಹಿಳೆಯಾಬ್ಬಳಿದ್ದಾಳೆ.

ಇಂಥ ಪ್ರಕರಣಗಳ ವಿರುದ್ಧ ಯಾರಾದರೊಬ್ಬರು ಮಾತಾಡಿ, ಜಗತ್ತಿನ ಎಲ್ಲ ಮಹಿಳಾ ಸಂಘಟನೆಗಳವರಂತೆ ನಮ್ಮ ಕನ್ನಡದ ಲೇಖಕಿಯರೂ ಷರಿಯಾ ವಿರುದ್ಧ ಒಂದು ಠರಾವು ಮಾಡಿದ್ದರೆ ಸಮ್ಮೇಳನ ಅರ್ಥ ಪೂರ್ಣವಾಗುತ್ತಿತ್ತಲ್ಲವೇ ?

ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ತುಂಬ ಕೆಲಸ ಮಾಡಿದಂತೆ ಕಾಣುವ ಡಾ.ವೀಣಾ ಭಾರತಿ ಎಂಬ ಲೇಖಕಿಗೆ ಇಲ್ಲಿ ದನಿ ಸಿಕ್ಕಂತೆ ಕಾಣಲಿಲ್ಲ. ರಾಜ್ಯದಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯೇ ಕಡಿಮೆಯಾಗುತ್ತಿದೆ. ಬೆಂಗಳೂರಿನಲ್ಲಿ ಮರಕ್ಕೊಬ್ಬ ಗೈನಕಾಲಜಿಸ್ಟ್‌ ಇದ್ದಾನೆ. ಪ್ರತಿ ಗೈನಕಾಲಜಿಸ್ಟ್‌ನ ಬಳಿಯೂ ಗರ್ಭ ಪತ್ತೆ ಮಾಡಿ ಹೇಳುವ ಯಂತ್ರಗಳಿವೆ. ಗಲ್ಲಿಗೊಂದರಂತೆ ಇರುವ ನರ್ಸಿಂಗ್‌ ಹೋಮ್‌ಗಳಲ್ಲಿ ಗಂಟೆಗೊಂದು ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಲೇ ಇದೆ. ಲೇಖಕಿಯರ ಸಂಘ ಅದನ್ನು ಖಂಡಿಸಿ ಠರಾವು ಪಾಸು ಮಾಡಿದ್ದಿದ್ದರೆ ಎಷ್ಟೊಂದು ಅರ್ಥಪೂರ್ಣವಾಗಿರುತ್ತಿತ್ತು ?

ಇಷ್ಟಾಗಿ ಅವರೊಂದಿಗೆ ಕಳೆದ ಮಧ್ಯಾಹ್ನ ನಿಜಕ್ಕೂ ಚೇತೋಹಾರಿಯಾಗಿತ್ತು. ತುಂಬ ಜನ ಹೆಣ್ಣು ಮಕ್ಕಳು ಅಕ್ಕರೆಯಿಂದ ಮಾತನಾಡಿಸಿದರು. ನೀನು ಚೆನ್ನಾಗಿರಬೇಕಪ್ಪಾ.. ಉಳಿದದ್ದೆಲ್ಲಾ ಹಾಗಿರಲಿ. ಸಾಹಿತ್ಯಿಕವಾಗಿ ನೀನು ತುಂಬ ಬರೀಬೇಕು ಅಂದರು. ಹಾಸನದ ಹೆಣ್ಣು ಮಗಳೊಬ್ಬಾಕೆ, ಅಮ್ಮನನ್ನು ಪ್ರೀತಿಸುವವರಿಗೆಲ್ಲ ರವಿಯ ಬರಹಗಳು ಇಷ್ಟವಾಗ್ತವೆ ಅಂದಳು. ಅನೇಕರ ಕೈಯಲ್ಲಿ ಓ ಮನಸೇ ಇತ್ತು. ತೀರ ಮನೆಗೆ ಹೊರಡೋಣವೆಂದುಕೊಳ್ಳುವಷ್ಟರಲ್ಲಿ ಹೊರಗೆ ದೊಡ್ಡ ಮಳೆ. ತುಂಬ ದಿನಗಳ ನಂತರ ಸಿಕ್ಕ ಮಲ್ಲಿಕಾ ಘಂಟಿಯಾಂದಿಗೆ ನಿಂತು ಬೀಳುತ್ತಿದ್ದ ಮಳೆಯನ್ನೇ ನೋಡುತ್ತಾ ಮಾತನಾಡಿದೆ. ಮಲ್ಲಿಕಾ ಕಮ್ಯೂನಿಸ್ಟ್‌ ಚಳವಳಿಯಲ್ಲಿ ಬೆಳೆದ ಹುಡುಗಿ. ಸಂಡೂರಿನಲ್ಲಿ ಆಕೆಯ ವಿರುದ್ಧ ನಡೆದ ತಂತ್ರ ಪಿತೂರಿಗಳು ಆಕೆಯನ್ನು ಬೇಸರಕ್ಕೆ ಈಡು ಮಾಡಿದ್ದವಾದರೂ ಮೊನ್ನೆ ಭೇಟಿಯಾದಾಗ ಪೂರ್ತಿ ಚೇತರಿಸಿಕೊಂಡವಳಂತೆಯೇ ಕಂಡಳು. ಹೋರಾಟದಲ್ಲಿ ಬೆಳೆದು ಬಂದವರಿಗೆ ಅಂಥದೊಂದು ಕಸುವು ಇದ್ದೇ ಇರುತ್ತದೆ. ಅಂಥವರು ಬರೆಯಲು ಕುಳಿತಾಗ ಆ ಕಸುವೇ ಕವಿತೆಯಾಗುತ್ತದೆ. ಸಾರ್ಥಕತೆಯತ್ತ ಸಾಗುತ್ತದೆ.

ಅಂಥವರ ಸಂಖ್ಯೆ ಹೆಚ್ಚಾಗಬೇಕಷ್ಟೇ.

(ಸ್ನೇಹ ಸೇತು : ಹಾಯ್‌ ಬೆಂಗಳೂರು)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X