ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ಣಾ, ಕೇಜ್ರಿ ಇಬ್ಬರೂ ಸಕ್ಸಸ್ ಆಗಲ್ಲ, ಬರೆದಿಡ್ತೀನಿ

By ಪ್ರಸಾದ ನಾಯಿಕ
|
Google Oneindia Kannada News

(ಮಾಸ್ಟರ್ ಹಿರಣ್ಣಯ್ಯ ಸಂದರ್ಶನದ 4ನೇ ಭಾಗ)

ಒನ್ಇಂಡಿಯಾ : ಪ್ರಸ್ತುತ ವಿಷಯಕ್ಕೆ ಬಂದಾಗ, ಭ್ರಷ್ಟಾಚಾರದ ವಿರುದ್ಧ ಒಟ್ಟಾಗಿಯೇ ಹೋರಾಟ ಆರಂಭಿಸಿದ ಅಣ್ಣಾ ಹಜಾರೆ ಮತ್ತು ಅರವಿಂದ್ ಕೇಜ್ರಿವಾಲ್ ಇಬ್ಬರೂ ಬೇರೆಬೇರೆಯಾಗಿದ್ದಾರೆ. ನಿಮ್ಮ ಬೆಂಬಲ ಯಾರಿಗೆ?

ಹಿರಣ್ಣಯ್ಯ : ನೋಡಿ, ಧರ್ಮಪತ್ನಿ ತನ್ನ ಗಂಡ ಚೆನ್ನಾಗಿರಲೆಂದು ಪ್ರಾರ್ಥನೆ ಮಾಡುತ್ತಿರುತ್ತಾಳೆ, ಆದರೆ ಗಂಡನಿಗೆ ಸೂಳೆ ಆಕರ್ಷಣೆ ಮಾಡುತ್ತಿರುತ್ತಾಳೆ. ಪತಿವ್ರತೆ ದೊಡ್ಡೋಳಾ, ಸೂಳೆ ದೊಡ್ಡೋಳಾ? ಹಾಗೆ ಅಣ್ಣಾ ಹಜಾರೆ ಪ್ರಾರ್ಥನೆ ಮಾಡ್ತಾರೆ, ಕೇಜ್ರಿವಾಲ್ ಸೂಳೆ ಹಿಂದೆ ಹೋಗ್ತಾರೆ. ಮಹಾತ್ಮಾ ಗಾಂಧಿ ಮತ್ತು ಸುಭಾಶ್ ಚಂದ್ರ ಬೋಸ್ ನಡುವೆ ಅಂದು ಏನು ಭಿನ್ನಾಭಿಪ್ರಾಯ ಬಂದಿತ್ತೋ ಅದೇ ಇವರಿಬ್ಬರ ನಡುವೆಯೂ ಬಂದಿದೆ. ಕೇಜ್ರಿ ಪ್ರಾಕ್ಟಿಕಲ್ಲು, ಅಣ್ಣಾ ಪ್ರಾರ್ಥನಾಕಲ್ಲು. ಇಬ್ಬರೂ ಸಕ್ಸಸ್ ಆಗಲ್ಲ, ಬರೆದುಕೊಡ್ತೀನಿ. (ಅರವಿಂದ್ ಕೇಜ್ರಿವಾಲ್ ಬದಲಾದ ಮನುಷ್ಯ)

Nataratnakara Master Hirannaiah interview part 4

ಒನ್ಇಂಡಿಯಾ : ಆದರೆ, ನಿಮ್ಮ ಮಾತಲ್ಲಿ ಆಶಾಭಾವನೆ ಕಾಣುತ್ತಿಲ್ಲವಲ್ಲ?

ಹಿರಣ್ಣಯ್ಯ : ಆಶಾಭಾವನೆ ಇದೆ. ಒಳ್ಳೇದು ಕೆಟ್ಟದ್ದು ಒಂದಿಲ್ಲೊಂದು ದಿನ ಕೊನೆ ಕಂಡೇ ಕಾಣುತ್ತದೆ. ಹಾಗೆಯೆ, ಲಂಚಾವತಾರಕ್ಕೂ ಕೊನೆ ಬಂದೇ ಬರುತ್ತದೆ. ಭ್ರಷ್ಟಾಚಾರ ಸೂಪರ್ ಸ್ಯಾಚುರೇಷನ್ ಪಾಯಿಂಟಿಗೆ ತಲುಪಿದಾಗ ಖಂಡಿತ ಕೊನೆಯಾಗುತ್ತದೆ. ಸಾಲಿಡು ಸ್ಟೇಟಲ್ಲಿ ಇದ್ದದ್ದು ಲಿಕ್ವಿಡ್ ಸ್ಟೇಟಿಗೆ ಬರದೆ ಎಪ್ಯಾಪೊರೇಟ್ ಆಗಿ ಹೋಗಿಬಿಡುತ್ತದೆ. ಅದು ಆಗಬಹುದು. ಆದರೆ, ನಿಧಾನವಾಗಿ ಆಗತ್ತೆ. ಸ್ಲೋ ಅಂಡ್ ಸ್ಟಡಿ ವಿನ್ಸ್ ದಿ ರೇಸ್ ಅನ್ನುವ ಹಾಗೆ. ನಾನು ಆಶಾವಾದಿ.

ಮೊದಲು ತಿನ್ನಬೇಡಿ ಅನ್ನುತ್ತಿದ್ದೆ. ಆದರೆ, ಈಗ ಹೇಳುತ್ತೇನೆ, ತಿನ್ನಿ ಆದರೆ ಎಷ್ಟುಬೇಕೋ ಅಷ್ಟು ತಿನ್ನಿ. ಸಮಾಜಕ್ಕೆ ಹೊರೆಯಾಗದಂತೆ ತಿನ್ನಬೇಡಿ. (ಅಂದ್ರೆ, ಲಂಚ ತಿನ್ನಿ ಅಂತ ಹೇಳ್ತೀರಾ?) ನೋಡಿ ತಿನ್ನಿ ಅಂದ್ರೂ ಅಷ್ಟೇ ತಿನ್ನಬೇಡಿ ಅಂದ್ರೂ ಅಷ್ಟೇ, ತಿನ್ನೋರು ತಿಂದೇ ತಿಂತಾರಿ. ಆದರೆ, ಚುನಾವಣೆ ಸಮಯದಲ್ಲಿ ಮತದಾರರಿಗೆ ತಿನ್ನಿಸಿ ಅವರನ್ನು ಭ್ರಷ್ಟರನ್ನಾಗಿ ಮಾಡಬೇಡಿ, ಇದು ನನ್ನ ಮನವಿ. ನಮ್ಮವರು ಫಂಡೂ ತಗೋತಾರೆ, ಅದನ್ನ ಮತಹಾಕುವವರ ಕೈಗೂ ಹಾಕುತ್ತಾರೆ. ಲಂಚದ ಮರುಹಂಚಿಕೆ ದುಡ್ಡು, ಸೀರೆ, ವಾಲೆ, ಹೆಂಡ, ಲ್ಯಾಪ್ಟಾಪು, ಲಂಚನ ನಾನಾ ವಿಧಗಳಿವೆ.

ಚುನಾವಣೆ ವ್ಯವಸ್ಥೆಯನ್ನು ಭ್ರಷ್ಟರನ್ನಾಗಿ ಮಾಡಬೇಡಿ, ಅದು ನಿಷ್ಕಲ್ಮಶವಾಗಿರಲಿ. ವೋಟಿಂಗ್ ಮಷೀನ್ ನಲ್ಲಿ 'ನನ್ ಆಫ್ ದೀಸ್' ಅಂತ ಬಟನ್ ಇರಬೇಕಿತ್ತು. 1963ರಿಂದಲೇ ಹೇಳುತ್ತಿದ್ದೇನೆ, ಚುನಾವಣೆಗೆ ನಿಂತಿದ್ದವರೆಲ್ಲರೂ ಅಯೋಗ್ಯರೆಂದು ತಿಳಿದಾಗ ಆ ಮತವನ್ನು ಕೊಂದುಬಿಡಿ, ನಿಮ್ಮ ಹೆಸರಲ್ಲಿ ಇನ್ನೊಬ್ಬ ನನ್ ಮಗಾ ವೋಟ್ ಹಾಕುವುದು ಬೇಡ. ಇದು ನನ್ನ ನೀತಿ. ಆಗ ಚೀಟಿ ಇರುತ್ತಿತ್ತು, ಆಗ ಬಟನ್ ಬಂದಿದೆ. ತಾಕತ್ತಿದ್ದರೆ ಇದನ್ನು ಜಾರಿಗೆ ತರಲಿ ನೋಡೋಣ.

ಒನ್ಇಂಡಿಯಾ : ನೀವು ನಾಟಕದಲ್ಲಿ ಸ್ಟಾರ್, ಹಣ ಕೀರ್ತಿ ಸಿಕ್ಕಿದೆ. ಆದರೆ, ಸಿನೆಮಾದಲ್ಲಿ ಆಮಟ್ಟಿನ ಗೌರವ ಸಿಕ್ಕಿಲ್ಲ, ಯಾಕೆ?

ಹಿರಣ್ಣಯ್ಯ : ಸಿನೆಮಾ ಯಾವತ್ತೂ ಇಷ್ಟವಿಲ್ಲ. ಹಿಡಿದಿಟ್ಟು ಕುಸ್ತಿಗೆ ಕರೆಯುತ್ತಾರೆ. ಅವರು ಹೇಳಿದ್ದೇ, ಬರೆದಿದ್ದೇ ಮಾತಾಡಬೇಕು. ನಾಟಕದಲ್ಲಿ ಹಾಗಿಲ್ಲ. ಅಲ್ಲಿ ಸೆನ್ಸಾರ್ ಇಲ್ಲ. ನಮಗೆ ಪ್ರೇಕ್ಷಕರೇ ಸೆನ್ಸಾರ್ ಬೋರ್ಡ್. ಬೇಕಾಗಿದ್ದನ್ನು ತಗೋತಾರೆ, ಬೇಡದ್ದನ್ನು ಬಿಡ್ತಾರೆ. ಅವರೇ ನಮ್ಮನ್ನು ತಿದ್ದುತ್ತಾರೆ. ರಂಗಭೂಮಿಯನ್ನು ತಿದ್ದಬೇಕಾಗಿಲ್ಲ, ರಂಗಭೂಮಿ ನನ್ನನ್ನು ತಿದ್ದಿದೆ. ಸರ್ವಸ್ವತಂತ್ರವಾಗಿ ಟೀಕೆ ಮಾಡಲು ಇರುವ ಏಕಮಾದ್ವಿತೀಯ ಜಾಗವೆಂದರೆ ಅದು ರಂಗಭೂಮಿ, ಸಿನೆಮಾ ಅಲ್ಲ. ರಂಗಭೂಮಿ ಜಂಗಮ. ಸಿನೆಮಾಗೆ ಸಾವಿದೆ, ರಂಗಭೂಮಿಗೆ ಸಾವಿಲ್ಲ. ರಂಗಭೂಮಿಯಲ್ಲಿ ಕೀರ್ತಿ, ಸಿನೆಮಾದಲ್ಲಿ ಹಣ. ಅಲ್ಲೂ ದುಡಿದಿದ್ದೇನೆ, ಇಲ್ಲೂ ದುಡಿದಿದ್ದೇನೆ. ಹೀಗಾಗಿ ಸಂಸಾರ ಸಾಗಿದೆ.

English summary
Nataratnakara Master Hirannaiah interview by Oneindia on the occasion of his 80th birthday on 15th February and 50th anniversary celebration of his masterpiece drama Lanchavatara. Hirannaiah spoke on variety of subjects ranging from drama, corruption to internet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X