ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ ಬಡ್ಡೀಮಗಂದು ಧೈರ್ಯ ಅಂತಾರಲ್ಲ?

By * ಎಆರ್ ಮಣಿಕಾಂತ್
|
Google Oneindia Kannada News

Ashok Kashyap, Cinematographer
ಯಾರು ಏನೇ ಹೇಳಲಿ, ಆ ಬಡ್ಡೀಮಗಂದು ಧೈರ್ಯ ಅಂತಾರಲ್ಲ? ಅದು ಜಾಸ್ತಿಯಾಗೋದು ಮನುಷ್ಯ ಒಬ್ಬಂಟಿಯಾದ ಸಂದರ್ಭದಲ್ಲಿ. ನನಗಿನ್ನು ಯಾರೂ ದಿಕ್ಕಿಲ್ಲ ಅನ್ನಿಸಿದಾಗ ಅದು ಹೇಗೋ ಏನೋ-ಧೈರ್ಯ ಬಂದುಬಿಡುತ್ತೆ. ನನ್ನ ವಿಷಯದಲ್ಲೂ ಹಾಗೇ ಆಯಿತು. ಅಶೋಕ್‌ರನ್ನು ಉಳಿಸಿಕೊಂಡೇ ಸಿದ್ಧ ಎಂದು ಈ ವೇಳೆಗೆ ನಾನು ನಿರ್ಧರಿಸಿ ಆಗಿತ್ತು. ಅರ್ಜೆಂಟಾಗಿ ಚಿಕಿತ್ಸೆಗೆ ದುಡ್ಡು ಬೇಕಿತ್ತಲ್ಲ? ಆಗ ಒಂದು ಐಡಿಯಾ ಮಾಡಿದೆ. ಐದಾರು ಧಾರಾವಾಹಿಗಳಿಗೆ ಕಥೆ ಬರೆದೆ. ಸಂಭಾಷಣೆ ಬರೆದೆ. ನನಗೆ ಅರ್ಜೆಂಟಾಗಿ ದುಡ್ಡು ಬೇಕೇ ಹೊರತು ಹೆಸರು ಬೇಡ ಎಂದು ಘಂಟಾಘೋಷವಾಗಿ ಹೇಳಿದೆ. ಕೆಲವರು ನನ್ನ ಕಥೆ-ಸಂಭಾಷಣೆಗೆ ತಮ್ಮ ಹೆಸರು ಹಾಕಿಕೊಂಡರು. ಆದರೆ ಪ್ರಾಮಾಣಿಕವಾಗಿ ದುಡ್ಡುಕೊಟ್ಟರು. ಹೀಗೇ ಒಂದಿಷ್ಟು ದುಡ್ಡು ಜತೆಯಾದಾಗ ಮತ್ತೆ ಆಸ್ಪತ್ರೆ, ಆಸ್ಪತ್ರೆ ಅಲೆಯಲು ಶುರು ಮಾಡಿದೆ' ಅನ್ನುತ್ತಾರೆ ರೇಖಾ ರಾಣಿ.

ಪ್ರೈವೇಟ್ ನರ್ಸಿಂಗ್ ಹೋಂಗಳಲ್ಲಿ ಮಾತ್ರ ಚೆನ್ನಾಗಿ ನೋಡ್ತಾರೆ ಎಂಬ ನಂಬಿಕೆ ನಮ್ಮಲ್ಲಿ ಹಲವರಿಗಿದೆ. ರೇಖಮ್ಮನಿಗೂ ಅಂಥದೇ ಮನೋಭಾವ ಇತ್ತಂತೆ. ಹಾಗೆಂದೇ ಅವರು ಅಶೋಕ್ ಜತೆ ಒಂದೊಂದೇ ನರ್ಸಿಂಗ್ ಹೋಂಗೆ ಹೋಗಿಬಂದರು. ಅಲ್ಲಿನ ಜನ ಯಾವ್ಯಾವುದೋ ಚಿಕಿತ್ಸೆಯ ನೆಪದಲ್ಲಿ ಅಲ್ಲಿಂದಿಲ್ಲಿಗೆ-ಇಲ್ಲಿಂದಲ್ಲಿಗೆ ಲೆಫ್ಟ್-ರೈಟ್ ಮಾಡಿಸಿದರು. ನಾಲ್ಕೈದು ಬಾರಿ ಸುತ್ತಾಡುವ ವೇಳೆಗೆ ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಸುಲಿಗೆ ಡಾಕ್ಟರ್‌ಗಳ ಚೈನ್‌ಲಿಂಕ್ ವ್ಯವಸ್ಥೆ ಇದೆ ಎಂಬುದು ರೇಖಾ-ಅಶೋಕ್ ಅರಿವಿಗೆ ಬಂತು. ಮುಂದೇನು ಮಾಡುವುದು ಎಂದು ಯೋಚಿಸುತ್ತಿದ್ದಾಗ ಮತ್ತದೇ ಪ್ರತಿಭಾ ನಂದಕುಮಾರ್ ಫೋನ್ ಮಾಡಿ ಹೇಳಿದರಂತೆ : ರೇಖಮ್ಮ, ಸುಮ್ನೆ ಯಾವ್ಯಾವುದೋ ಆಸ್ಪತ್ರೆ ಸುತ್ತಬೇಡ. ಮೊದಲು ಡಾ. ಆಶಾ ಬೆನಕಪ್ಪ ಅವರನ್ನು ಭೇಟಿ ಮಾಡು'.

ಬೆಂಗಳೂರಿನ ಖ್ಯಾತ ಶಿಶುತಜ್ಞೆ ಡಾ. ಆಶಾ ಬೆನಕಪ್ಪ. ಮಮತೆ' ಎಂಬ ಮಾತಿಗೆ ಇನ್ನೊಂದು ಉದಾಹರಣೆಯಂತಿರುವ ಈಕೆ ಅದೆಷ್ಟೋ ಮಂದಿಗೆ ಅಕ್ಕರೆಯ ಅಮ್ಮ. ಎಂಥ ಸಂಕಟದ ಸಂದರ್ಭದಲ್ಲೂ ಧೈರ್ಯ ಹೇಳುವ ಅಕ್ಕ. ನಾನಿದ್ದೀನಿ, ಹೆದರಬೇಡ ಎಂದು ಹೆಗಲು ತಟ್ಟುವ ಆತ್ಮಬಂಧು. ರೇಖಾರಾಣಿಯ ಫೋನ್ ಬರುವ ವೇಳೆಗೆ ಅವರಿವರಿಂದ ವಿಷಯ ತಿಳಿದಿದ್ದ ಆಶಾ ಬೆನಕಪ್ಪ ನಿರ್ಧಾರದ ದನಿಯಲ್ಲಿ ಹೇಳಿದರಂತೆ : ನಾಡಿದ್ದು ಅಶೋಕ್ ಕಶ್ಯಪ್‌ನ ಕರ್‍ಕೊಂಡು ಕಿದ್ವಾಯಿ ಆಸ್ಪತ್ರೆಗೆ ಬಾ. ಅಲ್ಲಿ ನನ್ನ ಪರಿಚಯದ ವೈದ್ಯರಿದ್ದಾರೆ...'

***

ಯಾವುದೋ ಒಂದು ಕತೆಯಲಿ ಹೀಗಾಗುತ್ತೆ: ಅವನೊಬ್ಬ ಅಪಾರ ದೈವಭಕ್ತ. ಆದರೆ ತುಂಬ ಬಡವ. ದೇವರ ದರ್ಶನಕ್ಕೆಂದು ಅದೊಮ್ಮೆ ಮಟಮಟ ಮಧ್ಯಾಹ್ನ ದೇವಸ್ಥಾನಕ್ಕೆ ಬರುತ್ತಾನೆ. ಬಿಸಿಲಲ್ಲಿ ನಡೆದೂ ನಡೆದೂ ಕಾಲು ಚುರುಗುಟ್ಟಿರುತ್ತದೆ. ಆಗಲೇ ಅವನು ದೇವರನ್ನು ಕೇಳುತ್ತಾನೆ. ಭಗವಂತಾ, ನಿನ್ನನ್ನು ನೋಡಲೆಂದು ಅದೆಷ್ಟೋ ಮೈಲಿ ದೂರದಿಂದ ನಡೆದು ಬಂದೆ ನಾನು. ನನಗೆ ಒಂದು ಜತೆ ಚಪ್ಪಲಿಗೆ ಆಗುವಷ್ಟು ಹಣವನ್ನೂ ನೀನು ದಯಪಾಲಿಸಲಿಲ್ಲವಲ್ಲ? ನೀನು ಯಾವ ಸೀಮೆಯ ದೇವರು? ಸಣ್ಣದೊಂದು ಸಹಾಯವನ್ನೂ ಮಾಡದ ನಿನ್ನನ್ನು ಅನಾಥರಕ್ಷಕ ಎಂದು ಯಾಕಾದ್ರೂ ಕರೆಯಬೇಕು?

ಈ ಭಕ್ತ ಸಿಡಿಮಿಡಿಯಿಂದ ಹೀಗೆ ಕೇಳಿ ನಾಲ್ಕು ನಿಮಿಷ ಕಳೆದಿರುವುದಿಲ್ಲ. ಆಗಲೇ ದೇವಾಲಯದ ಮುಂದೆ ಒಬ್ಬ ಅಂಗವಿಕಲ ತೆವಳಿಕೊಂಡು ಬರುತ್ತಾನೆ. ಅವನಿಗೆ ಎರಡೂ ಕಾಲುಗಳಿರುವುದಿಲ್ಲ. ಹಾಗಿದ್ದರೂ ಅವನು ದೇವರಿಗೆ ಭಕ್ತಿಯಿಂದ ನಮಸ್ಕರಿಸಿ ಹೋಗುತ್ತಾನೆ. ಇದನ್ನು ಕಂಡ ಭಕ್ತ- ದೇವಾ, ನನ್ನ ಪ್ರಶ್ನೆಗೆ ಎಂಥ ಉತ್ತರ ಕೊಟ್ಟೆಯಲ್ಲ ನೀನು? ನನಗಾದರೋ ಕಾಲುಗಳಿಗೆ ಚಪ್ಪಲಿ ಇಲ್ಲ, ಅಷ್ಟೇ. ಆದರೆ, ಆ ನತದೃಷ್ಟನಿಗೆ ಕಾಲುಗಳೇ ಇಲ್ಲ. ಅವನಿಗಿಂತ ನನ್ನ ಪರಿಸ್ಥಿತಿ ಸಾವಿರಪಟ್ಟು ಚೆನ್ನಾಗಿದೆ. ನನ್ನ ಕಣ್ತೆರೆಸಿದ್ದಕ್ಕೆ ನಿನಗೆ ಋಣಿ' ಎನ್ನುತ್ತಾನೆ.

ಮುಂದೆ ಓದಿ : ಪ್ರತಿ ಕ್ಷಣವನ್ನೂ ಸಂಭ್ರಮದಿಂದಲೇ ಕಳೆಯಬೇಕು »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X