ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಯಾಗ ಮಚ್ಚೆ ಇದ್ರ ಗಂಡ ಆಗೋದ ಗ್ಯಾರಂಟಿ!

By ಪ್ರಶಾಂತ ಕೆ. ಅಡೂರ, ಹುಬ್ಬಳ್ಳಿ
|
Google Oneindia Kannada News

ಇವತ್ತ ಬೆಳಿಗ್ಗೆ ಬೆಳಿಗ್ಗೆ ರಾಜಾ ಫೋನ ಮಾಡಿದಾ. ಪಾಪ ಅವನ ಹೆಂಡತಿ ದಿಂದಾಗ ಇದ್ಲು, ಒಂದ ವಾರದಿಂದ ಇವತ್ತ ನಾಳೆ ಇವತ್ತ ನಾಳೆ ಅಂತ ನಡದಿತ್ತು, ನಾನು ತಾಸ ತಾಸಿಗೊಮ್ಮೆ ಆತೇನು ಆತೇನು ಅಂತ ಕೇಳಿ ಕೇಳಿ ಅವನ ಜೀವಾ ತಿನ್ನಲಿಕತ್ತಿದ್ದೆ. ಅಲ್ಲಾ, ಹಂಗ ಅವಂದ ಇದ ಎರಡನೇದ ಹಂತಾ ಕ್ಯೂರಿಯಾಸಿಟಿ ಏನ ಇದ್ದಿದ್ದಿಲ್ಲಾ. ಮ್ಯಾಲೆ ಅಂವಾ ಹಡೆಯೋದಕ್ಕ ನಾ ತಲಿಕೆಡಸಿಗೊಳ್ಳೊ ಅವಶ್ಯಕತೆ ಏನ ಇದ್ದಿದ್ದಿಲ್ಲಾ, ಆ ಮಾತ ಬ್ಯಾರೆ.

ಆದರ ಅವಂಗ ಒಂದನೇದ ಹೆಣ್ಣಾಗಿತ್ತ. ಹಿಂಗಾಗಿ ಅವಂಗ ಗಂಡ ಒಂದ ಬೇಕಾಗಿತ್ತ. ಅವನ ಹೆಂಡತಿಗರ ಎರಡನೇದ ಇಂಟರೆಸ್ಟ ಇರಲಿಲ್ಲಾ. ಆದರು ಇಂವಾ ಹಟ ಹಿಡದ ಒಂದನೇದ ಹಡದ ಹತ್ತ ವರ್ಷ ಆದ ಮ್ಯಾಲೆ ಎಡನೇದ ರೆಡಿ ಮಾಡಿದ್ದಾ. ನಾ ಅದರಾಗ ಅವಂಗ ದೊಡ್ಡಿಸ್ತನ ಮಾಡಿ...

"ಲೇ ನನ್ನ ಬಾಯಾಗ ಮಚ್ಚೆ ಅದ. ನಾ ಹೇಳಿದ್ದ ಸುಳ್ಳ ಆಗಂಗಿಲ್ಲಾ. ಈ ಸರತೆ ಗಂಡ ಆಗ್ತದ. ಇಷ್ಟ ಲಗೂ ಆಶಾ ಬಿಡಬ್ಯಾಡ. ಮನಿಗೆ ಒಂದ ಗಂಡ ಬೇಕsಬೇಕ. ಹಂಗ ನಾಳೆ ನೀ ಸತ್ತರ ನೀರ ಬೀಡೋರ ಯಾರು? ಈಗ ನಿನ್ನ ಹೆಂಡತಿಗೆ ವಯಸ್ಸ ಇರ್ತನ ಹಡದ ಬಿಡ, ಮುಂದ ವಯಸ್ಸಾದ ಮ್ಯಾಲೆ ಇನ್ನೊಂದ ಬೇಕ ಅಂದರ ಆಗಂಗಿಲ್ಲಾ" ಅಂತ ಹವಾ ಬ್ಯಾರೆ ಹಾಕಿದ್ದೆ.


ಅಂವಾ ಕಡಿಕೂ ಅವನ ಹೆಂಡ್ತಿಗೆ ವರ್ಷ ಗಟ್ಟಲೇ ಕನ್ವಿನ್ಸ್ ಮಾಡಿ 'ಆಡ್ಯಾ ಹೇಳ್ಯಾನ ಅವನ ಬಾಯಾಗ ಮಚ್ಚೆ ಬ್ಯಾರೆ ಅದ. ಅಂವಾ ಹೇಳಿದ ಮಾತ ಖರೇ ಆಗ್ತದ' ಅಂತ ರೆಡಿ ಮಾಡಿಸಿ ತಯಾರ ಮಾಡಿದ್ದಾ. ಅವಂಗ ಅಂತೂ ದೇವರ ಕಿಂತಾ ಜಾಸ್ತಿ ನನ್ನ ಬಾಯಾಗಿನ ಮಚ್ಚೆ ಮ್ಯಾಲೆ ಭಾಳ ಕಾನ್ಫಿಡೆನ್ಸ್ ಇತ್ತ. ಹಿಂಗಾಗಿ ನಾನೂ ತಾಸಿಗೊಮ್ಮೆ ಅವಂಗ ಫೋನ ಮಾಡಿ ಮಾಡಿ ಕೇಳಲಿಕತ್ತಿದ್ದೆ 'ಗಂಡ ಆತೊ ಇಲ್ಲೊ ಗಂಡ ಆತೊ ಇಲ್ಲೊ' ಅಂತ.

ಇನ್ನ ಅವನ ಫೋನ ಅಂದ ಕೂಡಲೇ ನಂಗ ರಿಸಲ್ಟ ಬಂದದ ಅಂತ ಖಾತ್ರಿ ಆಗಿ ನಾ ಫೋನ ಎತ್ತಿದೆ. ಅಂವಾ ನಾ ಫೋನ ಎತ್ತೊ ಪುರಸತ್ತ ಇಲ್ಲದ 'ಏ, ಮತ್ತ ಲಕ್ಷ್ಮೀನ ಬಂದ್ಲಪಾ' ಅಂದಾ. ಅಂವಾ ಹಂಗ ಅಂದ ಕೂಡಲೇನ ನಂಗ ಖರೇನ ಭಾಳ ಕೆಟ್ಟ ಅನಸ್ತ. ಅವಂಗ ಮತ್ತ ಹೆಣ್ಣ ಆಗಿದ್ದಕ್ಕಲ್ಲಾ, ನನ್ನ ಮಾತ ಸುಳ್ಳ ಆಗಿದ್ದಕ್ಕ. ಪಾಪ ಎಷ್ಟ ಆಶಾ ಇಟಗೊಂಡ ಗಂಡ ಒಂದ ಆಗಲಿ ಅಂತ ಪ್ರಯತ್ನ ಮಾಡಿದ್ದಾ ಹಿಂಗಾ ಆಗಬಾರದಿತ್ತ ಅನಸ್ತ. [ರೀ ನಿಮ್ಮನ್ನ ಕೇಳೋದು ಮಿಡ್ ವೈಫ್ ಅಂದ್ರೇನ್ರೀ!]

ಆದರು ನಾ ಸುಮ್ಮನ ಕೂಡಲಿಲ್ಲಾ, ಅವಂಗ ಧೈರ್ಯ ತುಂಬಿದರಾತಂತ... "ಲೇ ನೀ ಏನ ಹೆದರ ಬ್ಯಾಡ ಮೂರನೇದ ರೆಡಿ ಮಾಡ, ನೆಕ್ಸ್ಟ ಗಂಡ ಆಗ್ತದ ತೊಗೊ ಮಗನ" ಅಂತ ಹೇಳಿದೆ. ಅಂವಾ ಅದಕ್ಕ "ಎಲ್ಲಿದ ಹೋಗಲೇ ಮಗನ, ನನ್ನ ಹೆಂಡ್ತಿ ಎರಡನೇದಕ್ಕ ಇಷ್ಟ ಹೋಯ್ಕೊಂಡಾಳ" ಅಂತ ನಂಗ ಜೋರ ಮಾಡಿದಾ.

'ಏ, ಹಂಗ ಯಾಕ ಅಂತಿ... ನಾ ಹೇಳ್ತೇನ ಕೇಳ.. ಈ ಸರತೆ ಗ್ಯಾರಂಟೀ ಗಂಡಾಗತದ. ನನ್ನ ಮಾತ ಸುಳ್ಳ ಆಗಂಗಿಲ್ಲಾ, ನನ್ನ ಬಾಯಾಗ ಮಚ್ಚೆ ಅದ" ಅಂತ ಬೈ ತಪ್ಪಿ ಮತ್ತ 'ಮಚ್ಚೆ' ಅಂದ ಬಿಟ್ಟೆ. ತೊಗೊ ಆ ಮಗಗ ಸಿಟ್ಟ ಬಂತ...

"ಲೇ... ಇನ್ನೊಮ್ಮೆ ಏನರ ಯಾವದರ ವಿಷಯದಾಗ ನನ್ನ ಬಾಯಾಗ ಮಚ್ಚೆ ಅದ, ನನ್ನ ಮಾತ ಖರೇ ಆಗ್ತದ ಅಂತ ಅಂದರ ನಿನಗ ಮಚ್ಛಿ (ಚಪ್ಪಲ್) ತೊಗೊಂಡ ಹೋಡಿತೇನಿ ಮಗನ" ಅಂತ ನಂಗ ಬೈಲಿಕತ್ತಾ. ಅಲ್ಲಾ, ನನ್ನ ಬಾಯಾಗ ಮಚ್ಚಿ ಇದ್ದದ್ದ ಅಂತು ಖರೆ. ಆದರ ಅದು ಸುಳ್ಳ ಆದರ ನಾ ಏನ ಮಾಡ್ಬೇಕ? ಈ ಮಗಾ ಬರೇ ನನ್ನ ಬಾಯಾಗಿನ ಮಚ್ಚೆ ನೆಚ್ಚಿ ಹಡದರ ನಂದೇನ ತಪ್ಪ ಅಂತೇನಿ? ಆದರು ನಾನ ಅವಂಗ ಸಮಾಧಾನ ಮಾಡಿ 'ಹೋಗ್ಲಿ ತೊಗೊ ಈಗ ನೀ ಭಾಳ ಸಿಟ್ಟನಾಗ ಅದಿ, ಆಮ್ಯಾಲೆ ಮೂರನೇದರ ಬಗ್ಗೆ ವಿಚಾರ ಮಾಡಿದರಾತು' ಅಂತ ನಾ ಅಂದರ...

'ಲೇ ಎಲ್ಲಿ ಮೂರನೇದ ಮಗನ. ನನ್ನ ಹೆಂಡತಿ ಸಿಜರಿನಗೆ ಒಳಗ ಹೋಗೊ ಮುಂಚೆನ ಗಂಡರ ಆಗಲಿ ಹೆಣ್ಣರ ಆಗಲಿ ಆಪರೇಶನ್ ಮಾಡ್ರಿ ಅಂತ ಹೇಳೆ ಕಳಸಿದ್ದೆ... ನಿನ್ನ ಬಾಯಾಗಿನ ಮಚ್ಚೆ ನೆಚ್ಚಿ ಹಡಕೋತ ಕೂಡಲಿಕ್ಕೆ ನಂಗೇನ ಹುಚ್ಚ ಹಿಡದದೇನ' ಅಂದಾ.

World contraception day and birthmark on tongue

'ಅಲ್ಲಲೇ ಆದರೂ ಹಂತಾದೇನ ಅರ್ಜೆಂಟ್ ಇತ್ತ ಮಗನ... ಇನ್ನೊಂದ ಎರಡ ವರ್ಷ ಬಿಟ್ಟ ಮಾಡಸಿದ್ದರ ನಡಿತಿತ್ತಲಾ' ಅಂತ ನಾ ಅಂದರ... 'ಇಲ್ಲಾ ನಂದು ಹಂಗ ವಿಚಾರ ಇತ್ತು. ಆದರ ಡಾಕ್ಟರ ಇವತ್ತ world contraception day, ನಮಗೂ ಟಾರ್ಗೆಟ್ ಕೊಟ್ಟರ, ಹಿಂತಾ ಛಲೊ ದಿವಸ ಮತ್ತ ಸಿಗಂಗಿಲ್ಲಾ, ಇವತ್ತಿಲ್ಲಾ ನಾಳೆ ಆಪರೇಷನ್ ಮಾಡಸೋದ ಖರೇ ಅಂದ ಮ್ಯಾಲೆ ಇವತ್ತ ಮಾಡಿಸಿಬಿಡ್ರಿ. ಹೆಂಗಿದ್ದರೂ ನಿಮ್ಮ ಮನಿಯವರದ ಸಿಜರಿನ್ ಆಗೋದ ಅದ.. ಒಂದರಾಗ ಒಂದ ಮುಗದ ಹೋಗ್ತದ ಅಂದರು' ಅಂದಾ.

ಹಕ್ಕ.. ಏನ ಮನಷ್ಯಾ ಅಂತೇನಿ.. ಈ ಮಗಾ ತಾ ಹಡದಿದ್ದ world contraception day ದಿವಸ, ಮ್ಯಾಲೆ ಇವತ್ತ ಕಾಂಟ್ರಾಸೆಪ್ಶನ್ ಡೇ, ಛಲೋ ದಿವಸ ಅಂತ ಆಪರೇಶನ್ನು ಮಾಡಿಸಿ ಬಿಟ್ಟನಂತ. ಅಲ್ಲಾ ಆದರೂ ಪಾಪ ಅವಂಗ ನೀರ ಬಿಡಲಿಕ್ಕೆ ಒಂದ ಗಂಡ ಬೇಕಾಗಿತ್ತು, ದೇವರ ಹಿಂಗ ಮಾಡಬಾರದಿತ್ತು... ಅಲ್ಲಾ ಹಂಗ ನಮ್ಮ ಮಂದ್ಯಾಗ ಕನ್ನ್ಯಾದ ಶಾರ್ಟೇಜ ಭಾಳ ಅದ.. ಎಷ್ಟ ಕನ್ಯಾ ಹುಟ್ಟಿದರು ಪರ್ವಾಗಿಲ್ಲಾ ಖರೇ... ಆದರು ಇಂವಾ ಮೂರನೇದ ಟ್ರೈ ಮಾಡಬೇಕಿತ್ತು ಅಂತ ನಾ ಮತ್ತೊಮ್ಮೆ 'ಅಲ್ಲಲೇ ನೀರ ಬಿಡಲಿಕ್ಕರ ಒಂದ ಗಂಡ ಆಗೋತನಕಾ ತಡಿಬೇಕಿತ್ತ ಬಿಡಪಾ' ಅಂದೆ ಅದಕ್ಕ ಅಂವಾ...

'ಏ, ಹೋಗ್ಲಿ ಬಿಡ್ಲೆ.. ಮನ್ಯಾಗ ಹೆಂಡ್ತಿ ಇದ್ದಾಳಲಾ... ಗಂಡಸ ಮಗಾ ಇಲ್ಲಾಂದರ ಏನಾತ... ಹೆಂಡತಿನ ನೀರ ಬಿಡ್ತಾಳ ತೊಗೊ ಮಗನ' ಅಂದಾ. ಹಂಗ ಅಂವಾ ಹೇಳಿದ್ದು ಖರೇ ಅನಸ್ತ ಹಂಗ ಗಂಡಸ ಮಕ್ಕಳ ಸಿಂಬಾಲಿಕ್ ಆಗಿ ನೀರ ಬಿಟ್ಟರು, ದಿವಸಾ ನೀರ ಬಿಡೋರ ಅಂದರ ಹೆಂಡಂದರ. ಅದು ಒಮ್ಮಿಕ್ಕಲೇ ಬಿಡಂಗಿಲ್ಲಾ ಅಗದಿ ಇನ್ಸ್ಟಾಲಮೆಂಟ ಮ್ಯಾಲೆ ಬಿಡ್ತಾರ.

ಅಲ್ಲಾ ಅನ್ನಂಗ ಇವತ್ತ 'ವಿಶ್ವ ಸಂತಾನ ನಿಯಂತ್ರಣ ದಿನ' ಅಂತ... i wish you all a very happy contraception day (ಯಾರಿಗ applicable ಅದ ಅವರಿಗೆ ಇಷ್ಟ ಮತ್ತ, ಆಲರೆಡಿ ಆಪರೇಶನ್ ಮಾಡಿಸಿಗೊಂಡೊರಿಗೆ ಇಲ್ಲಾ!) [ನಮ್ಮ ಮನೆಯವರಿಗೆ Ig Nobel ಅವಾರ್ಡ ಕೊಡರಿ]

English summary
World contraception day : There is a belief that if one has mole or birthmark on his tongue, he never lies. Do you believe it? Believe it or not read this humorous write up by Prashant Adur, Hubli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X