ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಪೊರಕೆ ಬೆಲೆಯಲ್ಲಿ ದಿಢೀರನೆ ಏರಿಕೆ!

By ಪ್ರಸಾದ ನಾಯಿಕ
|
Google Oneindia Kannada News

ದೆಹಲಿಯ ಸೇರಿದಂತೆ ಉತ್ತರ ಭಾರತದ ನಾಲ್ಕು ರಾಜ್ಯಗಳ ಫಲಿತಾಂಶದ ಬಗ್ಗೆ ಕಿಂಚಿತ್ ಆಸಕ್ತಿ ಅತ್ತಾಗಿರಲಿ, ನಮ್ಮ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಏರಿಳಿತಗಳ ಬಗ್ಗೆ ಸಾಸಿವೆಕಾಳಿನಷ್ಟು ಆಸಕ್ತಿ ಇಲ್ಲದಿರುವಂಥ ಗೃಹಿಣಿ ನನ್ನ ಅರ್ಧಾಂಗಿ ಸುಬ್ಬಿ. ಗಂಡ, ಮನೆ, ಮಕ್ಕಳು, ಪಕ್ಕದ ಮನೆಯಲ್ಲಿ ನಡೆಯುವ ಗುಸುಗುಸು ಪಿಸುಪಿಸುಗಳಲ್ಲಷ್ಟೇ ಅವಳಿಗೆ ಅಪಾರವಾದ ಆಸಕ್ತಿ.

ಹೂವು, ತರಕಾರಿ, ಗಾಡಿ ಅಂಗಡಿಗಳವರೊಂದಿಗೆ ಚೌಕಾಸಿ ಮಾಡಿ ಕನಿಷ್ಠ ಬೆಲೆಯ ಸಾಮಗ್ರಿಗಳನ್ನು ತರುವುದೆಂದರೆ ಆಕೆಗೆ ಇನ್ನಿಲ್ಲದ ತೃಪ್ತಿ. ಅದನ್ನು ಪಕ್ಕದವರಿಗೆ ಹೇಳಿ, ಅವರು ಕೊಟ್ಟ ದುಬಾರಿ ಬೆಲೆಯೊಂದಿಗೆ ತುಲನೆ ಮಾಡಿ, ತನ್ನನ್ನು ತಾನು ಜಾಣೆ ಅಂತ ಪ್ರೂವ್ ಮಾಡಿ ಬರುವುದೆಂದರೆ ಅವಳಿಗೆ ಅಭಿಮಾನದ ಸಂಕೇತ. ಬೆಲೆ ಏರಿಕೆಯ ಜಮಾನಾದಲ್ಲೂ ಸ್ಥಿತಪ್ರಜ್ಞತೆ ಕಾಪಾಡಿಕೊಂಡ ಜಾಣೆ ಆಕೆ.

ಅಂಥವಳಿಗೆ ಭಾನುವಾರ ಸಂಜೆ ಒಂದು ಶಾಕಿಂಗ್ ಸುದ್ದಿ ಕಾದಿತ್ತು. ಮನೆಯ ಹಿತ್ತಲಲ್ಲಿ ತನ್ನ ಅಂಗಾಂಗ ಕಳೆದುಕೊಂಡು ಕುಬ್ಜ ಸ್ವರೂಪ ಪಡೆದಿದ್ದ ಪೊರಕೆಯನ್ನು ಬದಲಾಯಿಸಬೇಕೆಂದು ಅಂದುಕೊಳ್ಳುತ್ತಿರುವಾಗಲೇ ಮನೆಯ ಮುಂದೆ ಪೊರಕೆ ಮಾಡುವವಳು 'ಓ ಪರಕೆ ಪರಕೆ ಪರಕೆ' ಅಂತ ಚೀರುದನಿಯಲ್ಲಿ ಕೂಗುತ್ತ ಬಂದಿದ್ದಳು. ಸುಬ್ಬಿಗೆ ಶಾಕ್ ಆಗಿದ್ದು ಯಾವಾಗೆಂದರೆ ಅದರ ರೇಟ್ ಕೇಳಿದಾಗ! [ಭ್ರಷ್ಟರ ವಿರುದ್ಧ ಪೊರಕೆ ಎತ್ತಿದ ಕೇಜ್ರಿವಾಲ್]

Political satire : Broomstick price hiked steeply

ಪೊರಕೆ ರೇಟಿಗಿಂತ, ಮಾರುವವಳು ಬಾಯಲ್ಲಿ ಕವಳ ಹಾಕಿಕೊಂಡು, ಕಣ್ಣನ್ನು ಕೊಂಕಿಸಿ, ತಲೆಯನ್ನು ಅಲ್ಲಾಡಿಸುತ್ತ ಧಿಮಾಕಿನಿಂದ ಹೇಳುತ್ತಿದ್ದುದು ಸುಬ್ಬಿಯನ್ನು ಇನ್ನಷ್ಟು ರೇಗಿಸಿತ್ತು, ಆಕೆಯ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. "ಏನು, ಕಡ್ಡಿ ಪೊರಕೆಯ ಬೆಲೆ ನೂರಾ ಇಪ್ಪತ್ತು ರುಪಾಯಿಯಾ?" ಅಂತ ಬಾಯಿ, ಕಣ್ಣು ಅಗಲಿಸಿಕೊಂಡು ಸುಬ್ಬಿ ಕೇಳಿದ್ದಳು.

"ಯಮ್ಮೋ ಇದು ಅಂತಿಂಥಾ ಪರಕೆಯಲ್ಲ. ಎಎಪಿ ಬಿರಾಂಡಿನ ಪರಕೆ. ಅಷ್ಟೊಂದು ಕೀಳಾಗಿ, ಚೀಪಾಗಿ ನೋಡಾಕೆ ಓಗ್ಬೇಡಿ. ಕೈಯಲ್ಲಿ ಎತ್ತಿಹಿಡಿದರೆ ಸಾಕು ವೋಟು ಬೀಳ್ತಾವೆ. ಝಾಡಿಸಿದರೆ ಸಾಕು ಕಾಂಗ್ರೆಸ್ ಪಕ್ಸದಂತೋವು ನಿರ್ಮಾಮ ಆಗ್ತಾವೆ. ಹಿಡಕೊಂಡೋದ್ರೆ ಸಾಕು ಬ್ರಸ್ಟಾಚಾರ ನಿರ್ಮೂಲನ ಆಗತೈತೆ. ದಿಲ್ಲಿಯಲ್ಲಿ ಈ ಪರಕೆಗೆ ಎಂತಾ ಡಿಮ್ಯಾಂಡ್ ಗೊತ್ತಾ? ಅದರ ಗಾಳಿ ಇಲ್ಲೂ ಬೀಸೈತೆ. ಎದ್ದೂಬಿದ್ದೂ ಕೊಳ್ತಾವ್ರೆ ಗೊತ್ತೇನಮ್ಮ..." ಅಂತ ಬಡಬಡನೆ ಒದರಿದಳು.

ಎಎಪಿ, ಬಿರಾಂಡು, ದಿಲ್ಲಿ, ವೋಟು, ಕಾಂಗ್ರೆಸ್, ಬ್ರಸ್ಟಾಚಾರ... ಒಂದಕ್ಷರವೂ ಅರ್ಥವಾಗದ ಸುಬ್ಬಿ ಕಕ್ಕಾಬಿಕ್ಕಿಯಾಗಿದ್ದಳು. 'ಎಎಪಿ ಬಿರಾಂಡು ಪರಕೆ' ಹೆಸರು ಕೇಳುತ್ತಿದ್ದಂತೆ ಆರಾಮ ಕುರ್ಚಿಯಲ್ಲಿ ಕುಳಿತು ಟಿವಿ ನೋಡನೋಡುತ್ತಲೇ ಗೊರಕೆ ಹೊಡೆಯುತ್ತಿದ್ದ ನನಗೆ ಧಿಗ್ಗನೆ ಜ್ಞಾನೋದಯದಂತಾಗಿ ಹೊರಗಡೆ ಬಂದಿದ್ದೆ. ಬೆಲೆ ವಿರುದ್ಧದ ಸಮರಕ್ಕೆ ನಾನು ಬಂದೆ ಅಂತ ಸುಬ್ಬಿ ಸೀರೆ ನೆರಿಗೆಯನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಚೌಕಾಶಿ ಮಾಡಲು ನಿಂತಳು.

"ಬೇಕಾದ್ರೆ ತಕ್ಕಳ್ಳಿ ಬೇಡ್ವಾದ್ರೆ ಬಿಡಿ" ಅಂತ ಅಂದೋಳೆ ಮಾರೋಳು 'ಓ ಪರಕೆ ಪರಕೆ ಪರಕೆ, ಎಎಪಿ ಬಿರಾಂಡಿನ ಪರಕೆ' ಅಂತ ಚೀರುತ್ತ ಹೊರಟೇಹೋದಳು. ಅವಳು ಅತ್ತ ಹೋಗುತ್ತಲೇ, ಇತ್ತ ಇವಳ ಚೀರಾಟ ಶುರುವಾಯಿತು. "ಓಹೋಹೊ ನೂರಾ ಇಪ್ಪತ್ತು ರುಪಾಯಂತೆ, ಅದೇನೋ ಎಎಪಿ ಬಿರಾಂಡಂತೆ, ಇವರದ್ಯಾಕೋ ಜಾಸ್ತಿ ಆಯಿತು" ಅಂತ ಆಕಾರವನ್ನು ಕಳೆದುಕೊಂಡಿದ್ದ ಚೋಟುದ್ದ ಕಡ್ಡಿ ಪೊರಕೆಯಲ್ಲಿ ಅಂಗಳ ಗುಡಿಸುತ್ತ ಧೂಳು ಎಬ್ಬಿಸಿದಳು.

ಅವಳು ಒಳಗೆ ಬಂದ ಮೇಲೆ... ಅದರ ಹಿನ್ನೆಲೆಯನ್ನೆಲ್ಲ ವಿವರಿಸಿದೆ. ದೆಹಲಿಯಲ್ಲಿ ಚುನಾವಣೆ ನಡೆದಿದ್ದು, ಪೊರಕೆ ಲಾಂಛನ ಮಾಡಿಕೊಂಡು ಆಮ್ ಆದ್ಮಿ ಪಕ್ಷ ಚುನಾವಣೆ ಸ್ಪರ್ಧಿಸಿದ್ದು, ಫಲಿತಾಂಶ ಹೊರಬಿದ್ದಾಗ ಕಾಂಗ್ರೆಸ್ ಧೂಳಿಪಟವಾಗಿದ್ದು, ಪೊರಕೆ ಲಾಂಛನದ ಪಕ್ಷ ಜಯಭೇರಿ ಬಾರಿಸಿದ್ದು, ಅದರ ನಾಯಕ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ್ದು ಎಲ್ಲವನ್ನು ಕೇಳಿ ಸುಬ್ಬಿ ಮತ್ತೆ ಓರಿಜಿನಲ್ ಸ್ಥಿತಿಗೆ ಬಂದಳು. ಆಕೆಗೆ ಪೊರಕೆ ರೇಟು ಏರಿದ್ದರ ಹಿಂದಿನ ಮರ್ಮ ಅರ್ಥ ಆಗಿತ್ತು.

ಇದನ್ನೆಲ್ಲ ಕೇಳಿದ ಕೂಡಲೆ ಅವಳಲ್ಲೊಂದು ಆವೇಶ ಬಂದಂತಾಗಿತ್ತು. ಬೆಳಗ್ಗೆದ್ದು ನೋಡಿದರೆ ಅಪಶಕುನ ಎನಿಸಿಕೊಳ್ಳುವ, ಒಬ್ಬರಿಂದೊಬ್ಬರಿಗೆ ಹಸ್ತಾಂತರಿಸಬಾರದು ಎನ್ನುವ, ಚೂಪು ಕಡ್ಡಿ ನೆಲಕ್ಕೆ ತಾಕುವಂತೆ ಇಟ್ಟರೆ ಕೆಡಕಾಗುತ್ತದೆ ಎಂಬ ಅಪವಾದಕ್ಕೆ ಗುರಿಯಾಗಿರುವ, ಸ್ಪರ್ಶಿಸಿದರೆ ಏನೋ ಹೆಚ್ಚುಕಡಿಮೆ ಆಗುತ್ತದೆ ಎಂಬ ಆರೋಪಕ್ಕೆ ಗುರಿಯಾಗಿರುವ... ಮುಂತಾದ ಮೂಢನಂಬಿಕೆಗೆ ಗುರಿಯಾಗಿರುವ ಕಡ್ಡಿ ಪೊರಕೆಯ ಬಗ್ಗೆ ಆಕೆಗೆ ಒಂದು ಬಗೆಯ ಗೌರವ ಭಾವನೆ ಮೂಡಿತು.

ದುಡುದುಡನೆ ಹೊರಗಡೆ ಓಡಿದವಳೆ ಅಕ್ಕಪಕ್ಕದವರನ್ನು ಗುಂಪು ಸೇರಿಸಿ ಸುಮಾರು ಅರ್ಧ ಗಂಟೆಯ ಕಾಲ ಏನೇನೋ ಹೇಳಿದಳು. ನನಗೆ ಒಂದು ಮಾತು ಕೂಡ ಕೇಳದಿದ್ದ ಕಾರಣ ಒಂದು ರೀತಿಯ ಕುತೂಹಲ ಮೂಡಿತ್ತು. ಇನ್ನು ಇವರೆಲ್ಲ ಸೇರಿಕೊಂಡು ಲಂಚ ತೆಗೆದುಕೊಳ್ಳುವವರ ವಿರುದ್ಧ ಪೊರಕೆ ಕೈಯಲ್ಲಿ ಹಿಡಿದುಕೊಂಡು ದಂಗೆ ಏಳುತ್ತಾರೆ, ಹೊಸದೊಂದು ಕ್ರಾಂತಿಗೆ ನಾಂದಿ ಹಾಡುತ್ತಾರೆ, ಕರ್ನಾಟಕದಲ್ಲಿ ಹೊಸ ಶಕೆ ಆರಂಭವಾಗುತ್ತದೆ ಎಂದೆಲ್ಲ ಕಲ್ಪಿಸಿಕೊಂಡಿದ್ದ ನನಗೆ ನಂತರ ಆಕೆಯ ಮಾತು ನೆತ್ತಿಯ ಮೇಲೆ ರಪ್ಪನೆ ಕುಕ್ಕಿತ್ತು.

ಅದೇನೆಂದರೆ, ಹೋಲ್ ಸೇಲ್ ದರದಲ್ಲಿ ಕಡಿಮೆ ರೇಟಿಗೆ ಪೊರಕೆಗಳನ್ನು ತಂದಿಟ್ಟುಕೊಂಡು, ಅದಕ್ಕೊಂಡು ಬ್ರಾಂಡ್ ಹೆಸರಿಟ್ಟು, ಹೆಚ್ಚಿಗೆ ರೇಟಿಗೆ ಮಾರಾಟ ಮಾಡುವ ಪ್ಲಾನ್ ಆಕೆಯದಾಗಿತ್ತು. ಈಕೆ ತಲೆತಿರುಕ ಪ್ಲಾನ್ ಕೇಳಿ ಉಳಿದವರೆಲ್ಲ ಮುಖ ಸಿಂಡರಿಸಿಕೊಂಡು ಹೊರಟುಹೋಗಿದ್ದರು. ಅವಮಾನ ಸಹಿಸಲಾರದೆ ಸುಬ್ಬಿ ಮತ್ತೆ ತನ್ನ ರೌದ್ರಾವಕ್ಕೆ ಮರಳಿದ್ದಳು. ಅದಕ್ಕೆ ಬಲಿಪಶು ನಾನೇ ಅಂತ ಬೇರೆಯಾಗಿ ಹೇಳಬೇಕಾಗಿಲ್ಲ.

ಹೋಗ್ಲಿ ಬಿಡೇ ಸುಬ್ಬಿ ಅಂತ ಅನ್ನುವಷ್ಟರಲ್ಲಿ ನನ್ನ ಪ್ರಾಣ ಸ್ನೇಹಿತ ಡಿಬ್ಬಿ ದುಡುದುಡನೆ ಬಂದಿದ್ದ. ನಮ್ಮ ಬಡಾವಣೆಯ ಗೃಹಮಂಡಳಿಯ ಅಧ್ಯಕ್ಷನೂ ಆಗಿದ್ದ ಡಿಬ್ಬಿ ಯಾಕೋ ಸಿಡಿಮಿಡಿಗೊಂಡಿದ್ದ. ಏನೆಂದು ಕೇಳಿದಾಗ, ಆತ ಪೊರಕೆ ಮಾಡಿದ ಮತ್ತೊಂದು ಆವಾಂತರದ ಬಗ್ಗೆ ವಿವರಣೆ ನೀಡಿದ. ಅದೇನೆಂದರೆ, ಪ್ರತಿದಿನ ನಮ್ಮ ಬಡಾವಣೆಯ ಗಲ್ಲಿಗಳನ್ನು ಗುಡಿಸುವ ಮಹಿಳೆಯರು ಕೂಡ ತಮ್ಮ ಸಂಬಳವನ್ನು ಕೂಡಲೆ ಏರಿಸಬೇಕೆಂದು ಬೇಡಿಕೆ ಮುಂದಿಟ್ಟುಕೊಂಡು ಧರಣಿ ಕುಳಿತಿದ್ದಾರೆಂದು ಹೇಳಿದ. ಸೆಕ್ರೆಟರಿ ಆಗಿದ್ದ ನಾನು ಮತ್ತು ಆತ ಅವರ ಧರಣಿ ಸ್ಥಳಕ್ಕೆ ದೌಡಾಯಿಸಿದೆವು.

ಅವರೆಲ್ಲರ ಕೈಯಲ್ಲಿ ಎಎಪಿ ಬ್ರಾಂಡಿನ ಕಡ್ಡಿ ಪೊರಕೆ ಝಳಪಿಸುತ್ತಿತ್ತು. ಎಲ್ಲರೂ ಪೊರಕೆಯನ್ನು ಮೇಲಕ್ಕೆತ್ತಿ ಘೋಷಣೆ, ಧಿಕ್ಕಾರಗಳನ್ನು ಕೂಗುತ್ತಿದ್ದರು. ಪೊರಕೆ ಡೌನ್ ಚಳವಳಿ ಆರಂಭಿಸುವ ಬೆದರಿಕೆ ಒಡ್ಡಿದ್ದರು. ನಾವೇ ಪೊರಕೆ ಸಪ್ಲೈ ಮಾಡುತ್ತೇವೆ ಎಂಬುದಕ್ಕೂ ಒಪ್ಪದಿದ್ದರಿಂದ ಅಲ್ಪ ಸಂಬಳ ಜಾಸ್ತಿ ಮಾಡುವ ಭರವಸೆ ನೀಡಿದ ಮೇಲೆ ಎಲ್ಲರೂ ಪೊರಕೆಗೆ ಜೈಕಾರ ಕೂಗುತ್ತ ಯಾಕೋ ಈ ಕಡ್ಡಿ ಪೊರಕೆ ವಿಪರೀತ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ ಅಂತ ನನಗಾಗ ಅರ್ಥವಾಗಲು ಆರಂಭಿಸಿತು. ಇದೇ ಪೊರಕೆಯನ್ನು ಸಾಮಾನ್ಯ ಜನರು ಎತ್ತಿಕೊಂಡು ಆರ್ಟಿಓ, ಸಬ್ ರಿಜಿಸ್ಟ್ರಾರ್ ಆಫೀಸು, ಬಿಬಿಎಂಪಿ ಆಫೀಸಿಗೆ ಹೋದ್ರೆ ಭ್ರಷ್ಟತೆ ಕಡಿಮೆಯಾಗಬಹುದಾ ಎಂಬ ಯೋಚನೆಯೂ ತಲೆಯನ್ನು ಕೊರೆಯಲು ಆರಂಭಿಸಿತು.

English summary
Political satire. Broomstick price hiked steeply in Bangalore after Aam Admi Party, headed by Arvind Kejriwal did stupendous job in Delhi assembly election. All of a sudden broomstick has received some respectability too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X