ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಲಯ ಅಮಾವಾಸ್ಯೆ ನಿಮಿತ್ತ ಹಾಸ್ಯ ಲೇಖನ

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಅವರ ಮನೆಯಲ್ಲಿನ ಅಡುಗೆ ಕೆಟ್ಟದಾಗಿರುತ್ತೆ ಎಂಬ ಕಾರಣದಿಂದ ನಮ್ಮ ಮನೆಗೇ ಊಟಕ್ಕೆ ಬರುವ ಪಕ್ಕದ ಮನೆಯ ಟಾಮಿ, ಉಂಡಾದ ಮೇಲೆ ಸಣ್ಣ ನಿದ್ದೆ ತೆಗೆಯುವ ಮುನ್ನ ಚಿಕ್ಕ ವಾಕಿಂಗ್ ಹೋಗಿತ್ತು. ಆ ವೇಳೆಯಲ್ಲಿ ಮನೆ ಯಾರಾದರೂ ಕಾಯಲೇಬೇಕಲ್ಲವೇ ಎಂದು ನಾನೇ ಬಾಗಿಲಿಗೆ ಚೇರ್ ಹಾಕಿಕೊಂಡು ಕೂತಿದ್ದೆ. ಯಾವ ಸೊಳ್ಳೆಯೂ ವಿಸಿಟ್ ಮಾಡದ ನಮ್ಮ ಮನೆಗೆ ನಾನು ಹೆಚ್ಚು ಕಮ್ಮಿ ಟಾಮಿಯಂತೆಯೇ ಕಾದಿದ್ದೆ. ಅರ್ಥಾತ್, ರಾಮಣ್ಣಿಯಾದ ನಾನು, ಈಸಿ ಚೇರಿನ ಮೇಲೆ ಕೂತು ಕಣ್ಣು ಮುಚ್ಚಿದ್ದೆ. ಹಾಗೆ ಮಾಡುವಾಗ ಶಬ್ದ ಬಂದ ಕೂಡಲೇ ಕಣ್ಣೇನೋ ಬಿಡುತ್ತಿದ್ದೆ ಆದರೆ ಟಾಮಿಯಂತೆ ಕಿವಿಯನ್ನು ನಿಮಿರಿಸಲು ಆಗುವುದಿಲ್ಲ. ಅದು ಯಶಸ್ವಿಯಾದ ದಿನವೇ ನನ್ನ ಹೆಸರು ಗಿನ್ನೆಸ್ಸ್'ನಲ್ಲಿ ಗ್ಯಾರಂಟಿ!

ಹೀಗೇ ಒಂದು ಹತ್ತು ನಿಮಿಷಗಳ ಕಾಲ ಯಾವ ಸದ್ದೂ ಇರದೇ ಹೋಗಿದ್ದರಿಂದ, ಸ್ವಲ್ಪ ಹೆಚ್ಚಾಗಿಯೇ ನಿದ್ದೆ ಬಂದಿತ್ತು. ಟಾಮಿಯೂ ವಾಕಿಂಗ್ ಮುಗಿಸಿ ಬಂದು ಮಲಗಿತ್ತು. ತೆರೆದೇ ಇದ್ದ ಬಾಗಿಲನ್ನು ಯಾರೋ ಟಕ್ ಟಕ್ ಎಂದು ತಟ್ಟಿದರು. ನಾಲ್ಕು ಜನ ಬಂದು ನಿಂತಿದ್ದನ್ನು ನೋಡಿ ಟಾಮಿ ಬಾಲವನ್ನು ಕಾಲ್ಗಳ ಮಧ್ಯೆ ತುರುಕಿಕೊಂಡು ಕುಯ್ ಎಂದು ನನ್ನೆಡೆಗೆ ನೋಡಿ ತನ್ನ ಮನೆಗೆ ಹೊರಟೇ ಹೋಯ್ತು. ಅದೇನು "ನಾನಿನ್ನು ಬರಲಾ?" ಅಂದು ಹೋಯ್ತೋ ಏನೋ ಗೊತ್ತಿಲ್ಲ. ಈ ನಾಲ್ಕು ಜನರ ಮಧ್ಯೆ ನನ್ನನ್ನು ಮಾತ್ರ ಬಿಟ್ಟು ಹೋಗಿದ್ದು ಧರ್ಮವೇ? ಉಂಡ ಮನೆಗೆ ದ್ರೋಹ ಬಗೆಯಬಹುದೇ? ವಿಶಾಲೂ ಕೂಡ ಮನೆಯಲ್ಲಿ ಇಲ್ಲ!

ಬಂದವರನ್ನ ಸೂಕ್ಷ್ಮವಾಗಿ ಗಮನಿಸಿದೆ, ನಿದ್ದೆಗಣ್ಣಿನಲ್ಲಿ! ನೀಲಿ ಜೀನ್ಸ್, ಬಿಳೀ ಕುರ್ತಾ, ಮಡಿಸಿದ ತೋಳು, ಹಣೆಗೆ ಕುಂಕುಮ ಅರ್ಥಾತ್ ತಿಲಕ, ಬಲಗೈಗೊಂದು ಪಂಚಲೋಹದ ಕಂಕಣ, ಹತ್ತರಲ್ಲಿ ಎಂಟು ಬೆರಳುಗಳಿಗೆ ಉಂಗುರಗಳು ಅಂದರೆ ಶೇಕಡ ಎಂಬತ್ತಕ್ಕೆ ಬಂಗಾರ. ಮೂವತ್ತಕ್ಕೇ ಕೂದಲು ಬೆಳ್ಳಗಾಗಿ, ನೆತ್ತಿಯ ಮೇಲಣ ಖಾಲೀ ಪ್ರದೇಶ ಪಾತಿಯಂತಿದ್ದು, ಸುತ್ತಲೂ ಕುದುರೆ ಲಾಳವನ್ನು ನೆನಪಿಗೆ ತರುವಂತಹ ಕೂದಲು ಪ್ರದೇಶವಿರಲು ವಯಸ್ಸನ್ನು ಊಹಿಸುವುದು ಸ್ವಲ್ಪ ಚ್ಯಾಲಂಜಿಂಗ್ ಅನ್ನಬಹುದು.

Mahalaya Amavasye : Humorous story by Srinath Bhalle

ಅವರ ವಯಸ್ಸು ಏನಾದರೆ ನನಗೇನು ಎಂದುಕೊಂಡು "ಏನು?" ಎಂಬಂತೆ ನೋಡಿದೆ. ಹಾಗಂತ ಗತ್ತಿನಿಂದ ಕೇಳಿದೆ ಅಂತಲ್ಲ, ಕೆಲವೊಮ್ಮೆ ಸ್ವರವೇ ಮೇಲೆ ಏಳೋಲ್ಲ ಅದಕ್ಕೆ!!

"ನಮಸ್ಕಾರ ಸರ್!"

"ನಮಸ್ಕಾರ. ಏನಾಗಬೇಕಿತ್ತು? ಗಣೇಶ ಮುಗೀತಲ್ಲ? ಓಹೋ! ರಾಜ್ಯೋತ್ಸವಕ್ಕೆ ಚೆಂದಾನಾ?" ಅಂತ ಧೈರ್ಯವಾಗಿ ಕೇಳಿಯೇಬಿಟ್ಟೆ. ಇವರೇನಾದರೂ ಚೆಂದಾ ಅಂದ್ರೆ ಅಷ್ಟೇ! ಗಣೇಶನ ಹಬ್ಬಕ್ಕೆ ಚೆಂದಾ ಅಂತ ಬಂದವರ ಗತಿ ಏನಾಯ್ತೋ ಅದೇ ಇವರಿಗೂ.

ಛೇ! ಛೇ! ನಾನು ಯಾರ ಮೇಲೂ ಕೈ ಎತ್ತೋಲ್ಲ. ಗಣೇಶಕ್ಕೆ ಚೆಂದಾ ಅಂತ ಬಂದವರಿಗೆ ಐದು ನೂರರು ನೋಟನ್ನ ಕೈ ಎತ್ತಿ ಕೊಟ್ಟಿದ್ದೆ. ಈಗಲೂ ಅಷ್ಟೇ. ಒಂದು ಪೈಸಾ ಜಾಸ್ತಿ ಇಲ್ಲ ನಾನು ಅಂದಿದ್ದು!

"ಚೆಂದಾ, ಗಿಂದಾ ಅಲ್ಲಾ ಸಾರ್..."

ನಿಮ್ಮನ್ನ ಕಿಡ್ನ್ಯಾಪ್ ಮಾಡೋಕ್ಕೆ ಬಂದಿದ್ದೀವಿ ಅಂತ ಹೇಳಬಹುದಾ ಅಂತ ಕಾದೆ.

"ನಿಮ್ಮನ್ನ ಬಿಡುಗಡೆ ಸಮಾರಂಭಕ್ಕೆ ಕರೆಯೋಕ್ಕೆ ಬಂದಿದ್ದೀವಿ" ಅಂದನೊಬ್ಬ.

ಪ್ರತಿ ವಾರಾಂತ್ಯ ನಾಲ್ಕು ಕಡೆ ಪುಸ್ತಕ ಬಿಡುಗಡೆ ಸಮಾರಂಭ ಅಂತ ಇರೋದ್ರಿಂದ ಮುಖ್ಯ ಅತಿಥಿಗಳಿಗೂ ಬರ ಬಂದಿದೆ ಅಂತಾಯ್ತು. ಪ್ರತಿಭೆಗಳ ಕೊರತೆ ಎದ್ದು ಕಾಣುತ್ತಿದೆ. ಆಂಗ್ಲದ ಒಂದು ವಾಕ್ಯವನ್ನು ತರ್ಜುಮೆ ಮಾಡೋದಕ್ಕೆ ಕನ್ನಡ ಬಾರದೆ ಗೂಗಲ್ ಮೊರೆ ಹೋಗೋ ಪರಿಸ್ಥಿತಿ ಬಂದಿದೆ ಅಂದರೆ ನೀವೇ ಊಹಿಸಿ.

ಇವರು ಬಂದು ಕರೆದರೂ ಅಂತ ತಕ್ಷಣ ಒಪ್ಪಿಕೊಳ್ಳೋಕ್ಕೆ ನಾನು ಬಿಡುವಿದ್ದರೆ ತಾನೇ?

"ಸರಿಯಪ್ಪ, ಸಮಾರಂಭ ಎಂದು?" ಅಂದೆ.

"ಮಂಗಳವಾರ ಸರ್."

"ಓ! ಮಂಗಳವಾರ... ನಾನು ಬೆಳಿಗ್ಗೆ ಬ್ಯುಸಿ ಇದ್ದೀನಿ. ಸಮಾರಂಭ ಎಷ್ಟು ಹೊತ್ತಿಗೆ" ಅಂದೆ...

ಮಂಗಳವಾರ ನಾನು ಬಹಳಾ ಬ್ಯುಸಿ... ವಡೆ ತಿನ್ನೋದ್ರಲ್ಲಿ! ಪಿತೃ ಪಕ್ಷದ ಅಮಾವಾಸ್ಯೆ ಕಣ್ರೀ, ಊಟಕ್ಕೆ ಕರೆದಿದ್ದಾರೆ, ಹೋಗಬೇಕು. [ದೆವ್ವದ ಕತೆಗಳು ಅಂದರೇ...]

"ಸಮಾರಂಭ ಸಂಜೆಗೆ ಸಾರ್"

ಅಮಾವಾಸ್ಯೆ ಅಂದ್ರೆ ಕತ್ತಲಿರುತ್ತೆ. ಆಗೆಂಥಾ ಬಿಡುಗಡೆ ಇವರದ್ದು? ಅದೂ ಅಲ್ಲದೇ ವಾರಾಂತ್ಯ ಸಮಯ ಸಿಕ್ಕೋಲ್ಲ ಅಂತ ವಾರದ ದಿನ ಇಟ್ಟುಕೊಳ್ಳೋಕ್ಕೆ ಶುರು ಮಾಡಿದ್ದಾರೊ? ಅಥವಾ ಮಹಾಲಯ ಎಲ್ಲರಿಗೂ ರಜೆ ಅಂತಲೋ ಅರ್ಥವಾಗಲಿಲ್ಲ. ಈ ನಡುವೆ ಸ್ಮಶಾನದಲ್ಲೂ ಪುಸ್ತಕ ಬಿಡುಗಡೆ ನಡೆಯುತ್ತೆ, ಅಲ್ಲವೇ? ಅಮಾವಾಸ್ಯೆ ಸಂಜೆ ಸಮಾರಂಭ ಇಟ್ಟುಕೊಂಡಿದ್ದಾರೆ ಅಂದರೆ ಯಾವುದೋ ಪತ್ತೇದಾರಿ ಪುಸ್ತಕ ಇರಬೇಕು ಹಾಗಿದ್ರೆ... "ಕತ್ತಲಲ್ಲಿ ಕಾಳಿಮುತ್ತು" ಅಂತಲೋ "ಕರಿ ಮೂತಿ ಬಿಳೀ ಹಲ್ಲು" ಅಂತೇನೋ ಇರಬೇಕು!

"ಸಂಜೆ ಸಮಾರಂಭ ಇಟ್ಟುಕೊಂಡಿದ್ದೀರ, ಟಿವಿ ಸೀರಿಯಲ್ ಬಿಟ್ಟು ಜನ ಬರ್ತಾರೆಯೇ? ವೀಕೆಂಡ್ ನೋಡಿ" ಅಂತ ಪುಗಸಟ್ಟೆ ಉಪದೇಶ ಕೊಟ್ಟೆ.

"ಬಿಡುಗಡೆ ಸೋಮವಾರ ಇದೆ. ಆದರೆ ಸಮಾರಂಭ ಮಂಗಳವಾರ."

"ಹಾಗಂದ್ರೇನು? ಮನೆ ಮಟ್ಟಿಗೆ ಬಿಡುಗಡೆ ಕಾರ್ಯಕ್ರಮ ಇಟ್ಟುಕೊಂಡು ಮರುದಿನ ದೊಡ್ಡದಾಗಿ ಮಾಡ್ತಿದ್ದೀರಾ? ಪರವಾಗಿಲ್ವೇ? ಇರಲೀ, ಸಮಾರಂಭ ಎಲ್ಲಿ?"

"ಪರಪ್ಪನ ಅಗ್ರಹಾರದ ತಾವ ಸರ್" ಅಂದ ಒಬ್ಬ.

ಹಾ? ಅಮಾವಾಸ್ಯೆ ಸಂಜೆ ಅಲ್ಲದೇ ಪರಪ್ಪನ ಅಗ್ರಹಾರ ಅಂತೆ. ನಾನೇನು ಮಾಡಿದ್ದೀನಿ ಅಂತ ನನ್ನ ಪ್ರಶ್ನೆ. ನಿಮಗೆ ಬೇರೆ ಯಾರೂ ಸಿಗಲಿಲ್ಲವೇ? ಅಂದುಕೊಂಡು "ಅಲ್ರಪ್ಪಾ, ಅಮಾವಾಸ್ಯೆ ಸಂಜೆ ಪರಪ್ಪನ ಅಗ್ರಹಾರದ ಹತ್ತಿರ ಬರಬೇಕಾ? ಕಾರು ಕಳಿಸ್ತೀರೋ ಹೇಗೆ? ಅಂದ ಹಾಗೆ ಸಾಹಿತಿಗಳು ಯಾರು? ಪುಸ್ತಕದ ಹೆಸರೇನು?"

ಈಗ ತಬ್ಬಿಬ್ಬಾಗೋ ಸರದಿ ಬಂದವರದ್ದು! ಮುಖ ಮುಖ ನೋಡಿಕೊಂಡರು. ಅವರ ಗಲಿಬಿಲಿ ಕಂಡು ನನಗೂ ಡೌಟು ಶುರುವಾಯ್ತು.

"ಸಾರ್! ಸಾಹಿತಿ ಯಾಕೆ ಬೇಕು? ಯಾವ ಪುಸ್ತಕ? ಏನು ಹೇಳ್ತಿದ್ದೀರಿ?"

"ನೀವೇ ತಾನಪ್ಪಾ ಹೇಳಿದ್ದು ಬಿಡುಗಡೆ ಇದೆ, ಬನ್ನಿ ಅಂತ. ಈಗ ನೋಡಿದ್ರೆ ಯಾವ ಪುಸ್ತಕ ಅಂತ ನನ್ನನ್ನೇ ಕೇಳ್ತಿದ್ದೀರಿ?"

"ಸಾರ್, ನಿಮ್ಮನ್ನ ಕರೆಯೋಕ್ಕೆ ಬಂದಿರೋದು ಪುಸ್ತಕದ್ ಬಿಡುಗಡೆಗೆ ಅಲ್ಲಾ! ಸೋಮ್ವಾರಾ ನಮ್ ಸೊಟ್-ಕತ್ ಕರಿಯ ಪರಪ್ಪನ್ ಅಗ್ರಹಾರದ್ ಜೇಲ್'ನಿಂದ ಬೇಲ್ ಮೇಲೆ ಬರ್ತಿದ್ದಾನೆ. ಅವನ ಬಿಡುಗಡೆಗೆ ಸಮಾರಂಭ ಸಾರ್! ನೀವ್ ಬಂದು ಬಾಷ್ಣಾ ಮಾಡ್ಬೇಕು!"

ಏನು? ಈಗ ಜೈಲಿನಿಂದ ಬೇಲ್ ತೊಗೊಂಡ್ ಬಂದರೂ ಸಮಾರಂಭಾನಾ? ಈ ಕರಿಯ ಮಾಡಿರೋ ಸಾಧನೆ ಏನು? ಅಯ್ಯಯ್ಯೊ, ಹಾಗಲ್ಲ! ಶ್ರೀಯುತ ಕರಿಯ ಅವರು ಏನು ಸಾಧನೆ ಮಾಡಿ ಒಳಗಿದ್ದೋರು ಈಗ ಹೊರಗೆ ಬಂದಿದ್ದಾರೆ? ಅವರು ಮಾಡಿರೋ ಸಾಧನೆ ನಾನು ಸ್ಟೇಜ್ ಮೇಲೆ ಹೇಳಬೇಕೆ? ಇಷ್ಟಕ್ಕೂ ಸಭಿಕರಾದರೂ ಎಂಥವರು? ನೀವೂ ಬೇಡಾ, ನಿಮ್ ಸಮಾರಂಭಾನೂ ಬೇಡ.

ಆಗ ಇನ್ನೊಬ್ಬ ಅಂದ "ಇದು ದೊಡ್ ಸಮಾರಂಭ ಸಾರ್. ನೀವು ಬರಲೇಬೇಕು. ಲೇ! ಎತ್ಕೊಳ್ರೋ! ಗಾಡೀಲ್ಲಿ ಹಾಕ್ಕೊಳ್ರೋ" ಅನ್ನೋದೇ?

ನನಗೋ ಭಯವೋ ಭಯ! ಬೆವರೋ ಬೆವರು! ಕಣ್ಣು ಕತ್ತಲಿಟ್ಟುಕೊಂಡು ಬರುತ್ತಿತ್ತು! ಅವರು ಎಳೆಯುತ್ತಿದ್ದಾರೆ ಆದರೆ ನನಗೆ ಕಣ್ಣು ತೆರೆಯಲೂ ಆಗ್ತಿಲ್ಲ. ಕ್ಷೀಣ ಸ್ವರದಲ್ಲೇ "ಇಲ್ಲ, ಇಲ್ಲಾ ನಾ ಬರೋಲ್ಲ" ಅಂತ ಒದರಲು ಶುರು ಮಾಡಿದೆ...

ಆಗ....

"ಅಯ್ಯಯ್ಯಾ! ನಾನು ನಿಮ್ಮನ್ನ ಎಲ್ಲಿಗೂ ಕರೀಲಿಲ್ಲ. ಬಾಗಿಲಿಗೆ ಅಡ್ಡಲಾಗಿ ಮಲಗಿದ್ದೀರಾ. ಬೀದೀಲ್ಲೇ ಮಲಗಿದ್ದಂತೆ ಕಾಣ್ತಿದೆ. ಜನ ಏನಂದುಕೊಂಡಾರು. ಒಳಗೆ ಹೋಗಿ ಮಲಗಿ" ಅಂದಳು ನನ್ನ ಅರ್ಧಾಂಗಿ ವಿಶಾಲೂ.

English summary
Note Kannada writer Ramanni gets invitation for the release of Kariya who was lodged in Parappana Agrahara jail. But, will Ramanni accept it? A humorous story on the occasion of Mahalaya Amavasye by Srinath Bhalle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X