ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ನೇಹಕ್ಕೆ ಇನ್ನೊಂದು ಹೆಸರು ಎನ್ಆರ್ ರಾವ್

By * ಡಾ| 'ಜೀವಿ' ಕುಲಕರ್ಣಿ
|
Google Oneindia Kannada News

N Raghavendra Rao, Mumbai
ಆಯಕರ ತಜ್ಞ, ವರಿಷ್ಠ ನ್ಯಾಯಾಲಯದ ನ್ಯಾಯವಾದಿ, ಸಂಸ್ಕೃತಿ ಸಂಸ್ಕಾರಗಳನ್ನು ಮಕ್ಕಳಲ್ಲಿ ಬಿಂಬಿಸಲು ಅಹರ್ನಿಶ ದುಡಿಯುತ್ತಿತುವ ಸಮಾಜಸೇವಕ, ಕನ್ನಡಾಭಿಮಾನಿ, ಉತ್ತಮ ಸಾಹಿತ್ಯ ಕೃತಿಗಳನ್ನು ಕೊಂಡು ಓದುವ, ಮಿತ್ರರಿಗೆ ಹಾಗೂ ವಾಚನಾಲಯಗಳಿಗೆ ಹಂಚುವ ಪುಸ್ತಕಪ್ರೇಮಿ, ಎಲ್ಲಕ್ಕಿಂತ ಹೆಚ್ಚಾಗಿ ಆದರ್ಶ ಮಿತ್ರ ಆಗಿರುವ ಎನ್.ಆರ್.ರಾವ್ ಅವರಿಗೆ ಅರವತ್ತು ಎಂದು ತಿಳಿದಾಗ ನಮಗೆಲ್ಲ ಆಶ್ಚರ್ಯವಾಯಿತು.

ಅವರು ಗುಟ್ಟಾಗಿಯೇ, ಹೆಚ್ಚಿಗೆ ಯಾರನ್ನೂ ಕರೆಯದೆಯೇ, ಜೋಗೇಶ್ವರಿಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಸುಮ್ಮನೆ ಒಂದು ಪೂಜೆ ಮಾಡಿಸಿ ಬೆರಳೆಣಿಕೆ ಮಿತ್ರರನ್ನು ಕರೆದಾಗ ನಮಗೆಲ್ಲ ಅಚ್ಚರಿಯೇ ಕಾದಿತ್ತು. ಅವರ ಮಗ(ಹರ್ಷ) ಮತ್ತು ಮಗಳು(ವಿಜಯ) ಬೆಂಗಳೂರಲ್ಲಿರುತ್ತಾರೆ. ಅವರನ್ನೂ ಕರೆದಿರಲಿಲ್ಲ. ಅವರ ಗುಜರಾತಿ ಮಿತ್ರ ಗಣಾತ್ರಾಗೆ ಅವರ ಜನ್ಮ ತಾರೀಖು ಗೊತ್ತಿತ್ತು. (16, ಎಪ್ರಿಲ್). ಹಿಂದಿನ ದಿನ ರಾತ್ರಿ ಹನ್ನೆರಡಕ್ಕೆ ಬಂದು ರಾವ್ ದಂಪತಿಗಳನ್ನು ಎಚ್ಚರಿಸಿ ಒಂದು ಕಾಣಿಕೆ ಕೊಟ್ಟು ಶುಭಾಶಯ ಹೇಳಿ ಹೋಗಿದ್ದರು. ಅವರಿಗೂ ಮಠದಲ್ಲಿ ನಡೆಯುವ ಕಾರ್ಯಕ್ರಮ ಗೊತ್ತಿರಲಿಲ್ಲ. ಮಠದಲ್ಲಿ ಗುರು ರಾಘವೇಂದ್ರರ ಪೂಜೆ ಮಾಡಿ ಅಭಿನವ ಮಂತ್ರಾಲಯ ಎಂದೇ ನವೀಕರಣಗೊಳ್ಳುತ್ತಿರುವ 15 ಕೋಟಿ ರೂಪಾಯಿಗಳ ಬೃಹನ್ ಕಟ್ಟಡಕ್ಕೆ, ಅಲ್ಲಿ ಸ್ಥಾಪಿತವಾಗುತ್ತಿರುವ ಶ್ರೀ ಬಾಲಾಜಿ ಮಂದಿರಕ್ಕೆ, ಲಕ್ಷಗಳಲ್ಲಿ ತಮ್ಮ ಕಾಣಿಕೆ ಸಲ್ಲಿಸಿದರು. ಇವರಿಗೆ ಸರ್‌ಪ್ರೈಜ್ ನೀಡಲು ಮಕ್ಕಳೆಲ್ಲ ಅಂದೇ ಬಂದುಬಿಟ್ಟರು. ಆದರೆ ರಾಯರಿಗೆ ಬಿಡುವು ಇರಲಿಲ್ಲ. ಕಾಯಕವೇ ಕೈಲಾಸವೆಂಬ ಬಸವಣ್ಣನವರ ವಚನವನ್ನು ಅವರು ಅಕ್ಷರಶಃ ಪಾಲಿಸಿದರು. ತಮ್ಮ ಕ್ಲೈಂಟ್ಸ್ ಆದ ಹಿರಿಯ ಉದ್ಯಮಪತಿಗಳೊಂದಿಗೆ ಇದ್ದ ಯಾವ ಮೀಟಿಂಗನ್ನೂ ಅವರು ಮುಂದೆ ಹಾಕಲಿಲ್ಲ.

ಎನ್.ಆರ್.ರಾವ್ ಅವರ ಜೀವನದ ಧ್ಯೇಯವಾಕ್ಯವೆಂದರೆ ಸ್ನೇಹಯೋಗ. ಅವರು ವಾಸಿಸುವದು ಬೊರಿವಿಲಿ ಉಪನಗರ. ಅವರ ಬಿಲ್ಡಿಂಗನಲ್ಲಿ ಸಿರಿವಂತ ಗುಜರಾತಿಗಳೇ ಹೆಚ್ಚಾಗಿದ್ದಾರೆ. ಬಿಲ್ಡಿಂಗಿನಲ್ಲಿ ಏನೇ ಕಾರ್ಯ ನಡೆದರೂ ರಾಯರ ಹಿರಿತನಬೇಕು. ಬೋರಿವಲಿ ಕನ್ನಡ ಅಸೋಸೊಯೇಶನ್‌ನ ಎಲ್ಲ ಸದಸ್ಯರ ಅಚ್ಚುಮೆಚ್ಚಿನ ವ್ಯಕ್ತಿ ಎನ್.ಆರ್.ರಾವ್. ಬೋರಿವಲಿಯ ಮುನ್‌ಸಿಪಲ್ ಶಾಲೆಗೆ ಶಿಕ್ಷಕರ ಕೊರತೆ. ಒಬ್ಬ ಶಿಕ್ಷಕನ ಸಂಬಳ ತಾವು ಕೊಡಲು ಮುಂದೆ ಬಂದರು. ಆದರೆ ಆ ಹಣವನ್ನು ಕನ್ನಡ ಸಂಘದ ಮುಖಾಂತರ ಕೊಡಿಸಿದರು. ಮುಂಬೈಯಲ್ಲಿ ನಡೆಯುವ ಯಾವುದೇ ಕನ್ನಡ ಕಾರ್ಯಕ್ರಮವಿದ್ದರೂ ಅದಕ್ಕೆ ಸಹಾಯ ಬೇಡಲು ಬಂದರೆ ಎಂದೂ ರಾವ್ ಇಲ್ಲ ಎನ್ನುವುದಿಲ್ಲ.

ತಮ್ಮ ಊರಾದ ಮೈಸೂರಲ್ಲಿ ಸಾಧನಾ ಎಂಬ ದೊಡ್ಡ ಮನೆಯನ್ನು ಕಟ್ಟಿಸಿದ್ದು ತಾವು ಬಿಡುವಿನ ದಿನಗಳಲ್ಲಿ ವಿಶ್ರಾಂತಿ ಪಡೆಯಲಿಕ್ಕಾಗಿ ಅಲ್ಲ. ಅಲ್ಲಿಯ ಪರಿಸರದಲ್ಲಿ ಶಾಲೆಯ ಮಕ್ಕಳಿಗೆ ಉಚಿತ ಯೋಗಕ್ಲಾಸು, ವ್ಯಕ್ತಿವಿಕಸನ ಶಿಬಿರ ನಡೆಸಲು. ಅನೇಕ ಬಡ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಅವರ ಅವಶ್ಯಕತೆಗಳನ್ನು ಪೂರೈಸುವಲ್ಲಿ ರಾವ್ ತೊಡಗಿರುತ್ತಾರೆ. ಅವರ ಮನೆಯ ಸಮೀಪದಲ್ಲಿರುವ ಮಂಚೇಗೌಡ ಕೊಪ್ಪಲ್ಲಿನ ಸರಕಾರಿ ಪ್ರಥಮಿಕಶಾಲೆಯ ಮಕ್ಕಳಿಗೆ ತಮ್ಮ ಮನೆಯ ಸಭಾಗೃಹದಲ್ಲಿ ಕ್ಲಾಸು ನಡೆಸುತ್ತಾರೆ. ಪ್ರತಿ ದಿನವೂ ಒಂದೊಂದು ವರ್ಗದ ಸುಮಾರು 100 ಮಕ್ಕಳು ಶಾಲೆಯ ವಾತಾವರಣದಿಂದ ಮನೆಯ ವಾತಾವರಣಕ್ಕೆ ಬಂದು ಗುರುಕುಲದ ಮಾದರಿಯ ಸಾಂಸ್ಕೃತಿಕ ಶಿಕ್ಷಣ ಪಡೆಯುತ್ತಾರೆ. ಮಕ್ಕಳಿಗೆ ಸ್ಪರ್ಧೆ ಏರ್ಪಡಿಸಿ ಬಹುಮಾನಗಳನ್ನೂ ಕೊಡುತ್ತಾರೆ. ಉಚಿತವಾಗಿ ತಿಂಡಿಯನ್ನೂ ಕೊಡುವ ವ್ಯವಸ್ಥೆ ಮಾಡಿದ್ದಾರೆ. ಮಕ್ಕಳಿಗಾಗಿ ಹಲವಾರು ಪುಸ್ತಿಕೆಗಳನ್ನು (ಸಂಸ್ಕಾರ, ಸಂಸ್ಕೃತಿ ಮತ್ತು ಸಂಸ್ಕೃತ) ಬರೆದಿದ್ದಾರೆ. ಸುಮಾರು 30 ಸಂಸ್ಕೃತ ಶ್ಲೋಕಗಳನ್ನು ತಿಳಿಗನ್ನಡಕ್ಕೆ ಅನುವಾದಿಸಿದ್ದಾರೆ. ಮಕ್ಕಳಿಗೆ ಬೇಕಾಗುವ ಪುಸ್ತಕಗಳನ್ನೆಲ್ಲ ಕೊಂಡು ತಮ್ಮ ಮನೆಯ ಒಂದು ಭಾಗ ಉಚಿತ ವಾಚನಾಲಯವನ್ನಾಗಿ ಪರಿವರ್ತಿಸಿದ್ದಾರೆ. ಅಲ್ಲಿಗೆ ಬರುವ ಪಂಡಿತರು, ಮೇಧಾವಿಗಳು, ಕಲಾವಿದರು ಎನ್.ಆರ್.ರಾವ್ ಅವರ ಆತಿಥ್ಯ ಪಡೆಯುತ್ತಾರೆ. ಅತಿಥಿಗಳ ಪಾಂಡಿತ್ಯ, ಪ್ರತಿಭೆ, ಕಲೆಗಳ ಲಾಭ ಮೈಸೂರಿನ ಹೆಬ್ಬಾಳ ಉಪನಗರದ ಮಕ್ಕಳಿಗೆ ದೊರೆಯುತ್ತದೆ.

ಎನ್.ರಾಘವೇಂದ್ರರಾವ್ ಮೈಸೂರಿನವರು. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಇವರಿಗೆ ಮೂವರು ಸೋದರರು, ಮೂವರು ಸೋದರಿಯರು. ತಾಯಿ ಅಮೃತಾ. ತಂದೆ ಕೆ.ಎಸ್.ನಾರಾಯಣರಾಯರು. ತಂದೆ ಶಾಲೆಯಲ್ಲಿ ಅಧ್ಯಾಪಕರು. ಅನೇಕ ಊರುಗಳಿಗೆ ವರ್ಗಾವಣೆಯಾಗುತ್ತಿದ್ದುದರಿಂದ ಇವರ ಶಿಕ್ಷಣ ಒಂದೇ ಕಡೆಗೆ ಆಗಲಿಲ್ಲ. ತಂದೆ ಪ್ರಸಿದ್ಧ ಮೇಷ್ಟ್ರು. ಮಕ್ಕಳಿಗೆ ಇಂಗ್ಲಿಷ್, ಸಂಸ್ಕೃತ, ಕನ್ನಡ ಹಾಗೂ ಗಣಿತದಲ್ಲಿ ಪ್ರಾವಿಣ್ಯ ಪಡೆಯಲು ಸ್ಫೂರ್ತಿ ನೀಡುತ್ತಿದ್ದರು. ಒಂದು ಸಂಸ್ಕೃತ ಪರೀಕ್ಷೆಯಲ್ಲಿ ಮಗನಿಗೆ ಚೆನ್ನಾಗಿ ಓದಲು ಹೇಳಿದರು. ರಿಜಲ್ಟ್ ಬಂದಾಗ ಮಗ ಫಲಿತಾಂಶದ ಲಿಸ್ಟ್ ನೋಡಿದ. ಅಲ್ಲಿ ತನ್ನ ನಂಬರ್ ಇರಲಿಲ್ಲ. ಫೇಲಾಗಿರಬೇಕೆಂದು ತಿಳಿದು ಇಳಿಮುಖದಿಂದ ಮನೆಗೆ ಬಂದ. ತಂದೆ ಏನಾಯಿತೆಂದು ಕೇಳಿದರು. ಹೋಯಿತು ಎಂದ ಮಗ. ಮಗನ ಮಿತ್ರರು ಬಂದು ಅಭಿನಂದನೆ ತಿಳಿಸಿದರು. ತನ್ನ ಹೆಸರು ಪ್ರಥಮ ದರ್ಜೆಯಲ್ಲಿರಬಹುದೆಂಬ ಕಲ್ಪನೆ ಕೂಡ ಅವನಿಗೆ ಇರಲಿಲ್ಲ.

ಇಂಗ್ಲಿಷ್ ಕಲಿಸುವಾಗ ತಂದೆ ರೆನ್ ಅಂಡ್ ಮಾರ್ಟಿನ್ ಗ್ರಾಮರ್ ಹೇಗೆ ಬಳಸುತ್ತಿದ್ದರು ಎಂಬುದನ್ನು ಇಂದಿಗೂ ಇವರು ಮರೆತಿಲ್ಲ. ತಂದೆ ಮಗನಿಗೆ ಟೈಪಿಂಗ್ ಹಾಗೂ ಶಾರ್ಟ್ ಹ್ಯಾಂಡ್ ಕಲಿಯಲು ಪ್ರೋತ್ಸಾಹಿಸಿದರು. ಅದರ ಲಾಭ ಇಂದು ದೊರೆಯುತ್ತಿದೆ ಎನ್ನುತ್ತಾರೆ ರಾವ್. ಇವರು ಇತರ ನ್ಯಾಯವಾದಿಗಳಂತೆ ಸ್ಟೆನೋಗಳಿಗೆ ಡಿಕ್ಟೇಟ್ ಮಾಡುತ್ತ ಕೂಡುವುದಿಲ್ಲ. ಹತ್ತು ತಾಸಿನ ಕೆಲಸ ಒಂದೇ ತಾಸಿನಲ್ಲಿ ಮುಗಿಸುತ್ತಾರೆ. ಅವರ ವಿಚಾರ ಎಷ್ಟು ಜೋರಾಗಿ ಓಡುತ್ತದೋ ಅದಕ್ಕಿಂತ ಜೋರಾಗಿ ಅವರ ಬೆರಳು ಟೈಪ್ ಮಾಡುತ್ತದೆ. ದೊಡ್ಡ ಕಂಪನಿಗಳ ಎಗ್ರಿಮೆಂಟ್, ಸೇಲ್‌ಡೀಡ್, ಮುಂತಾದ ಕಡತಗಳನ್ನು ತಾವೇ ಟಂಕಿಸಿಬಿಡುತ್ತಾರೆ. ತಮ್ಮ ತಂದೆಯ ಕುಶಾಗ್ರಮತಿತ್ವ ಹಾಗೂ ದೂರದೃಷ್ಟಿಯನ್ನು ಇಂದಿಗೂ ನೆನೆಯುತ್ತಾರೆ.

ಮಂಡ್ಯದ ಕಾಲೇಜಿನಲ್ಲಿ ಬಿ.ಎಸ್.ಸಿ.ಗಾಗಿ ಓದಿದರು. ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ದೊರೆಯಿತು(1969). ನಂತರ ಆರು ವರ್ಷ ವರಮಾನ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡಿದರು. ಕೆಲಸ ಮಾಡುತ್ತ ಬೆಂಗಳೂರಲ್ಲಿ ರೇಣುಕಾಚಾರ್ಯ ಲಾ ಕಾಲೇಜು ಸೇರಿ ಕಾಯದೆಯಲ್ಲಿ ಪದವಿ ಪಡೆದು ನಂತರ ಮುಂಬೈಗೆ ಪಯಣ ಬೆಳಸಿದರು(1975). ಭಾರತದಲ್ಲೇ ಬಹಳ ಹೆಸರು ಗಳಿಸಿದ ಚಾರ್ಟರ್ಡ್ ಅಕೌಂಟೆಂಟ್ ಶ್ರೀ ಪಿ.ಡಿ.ಕುಂಟೆ ಎಂಬವರಲ್ಲಿ ಐದು ವರ್ಷಗಳ ಕಾಲ ಕೆಲಸ ಮಾಡಿದರು. ತೆರಿಗೆ ಇಲಾಖೆಯ ಜ್ಞಾನ, ಜೊತೆಗ ಕಾಯದೆಯ ಪ್ರಭುತ್ವದಿಂದಾಗಿ ಇವರು ಆಯಕರ ಕ್ಷೇತ್ರದಲ್ಲಿ ದೊಡ್ದ ಹೆಸರು ಗಳಿಸಿದರು. ಗೊಯಂಕಾ ಮೊದಲಾದ ಹಿರಿಯ ಉದ್ಯೋಗಪತಿಗಳು ಇವರ ಸಲಹೆಯಿಂದ ಅನೇಕ ಸಂಕಷ್ಟಗಳಿಂದ ಪಾರಾದರು. ಕುಂಟೆಯವರಲ್ಲಿ ತಾವು ಬಹಳ ವಿಷಯ ಕಲಿತಿರುವುದಾಗಿ ಹೇಳುತ್ತಾರೆ. ಕುಂಟೆಯವರು ತಮ್ಮ ಕ್ಷೇತ್ರದಲ್ಲಿ ಮೇಧಾವಿಯಾಗಿದ್ದರು ಅಷ್ಟೇ ಅಲ್ಲ ಮಾನವೀಯತೆಯ ಮೌಲ್ಯಗಳನ್ನು ಹೊಂದಿದ ಸುಸಂಸ್ಕೃತ ವ್ಯಕ್ತಿಯಾಗಿದ್ದರು ಎಂಬ ಮಾತನ್ನು ಅವರು ನೆನೆಯುತ್ತಾರೆ. 1981ರಿಂದ ಸ್ವತಂತ್ರವಾಗಿ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದರು. ಇಂದು ಅವರ ಬಳಿ ಸಲಹೆಗಾಗಿ ದೇಶವಿದೇಶದ ಬೃಹನ್ ಉದ್ಯಮಗಳು ಬರುತ್ತಿವೆ.

ಆದಮಾರು ಮಠಾಧೀಶರು ತಮ್ಮ ದಹಿಸರದ ಪೂರ್ಣಪ್ರಜ್ಞ ಶಾಲೆಯ ಟ್ರೆಜರರ್ ಆಗಲು ರಾವ್ ಅವರನ್ನು ಆಮಂತ್ರಿಸಿದರು. ಶಾಲೆಯ ಲೈಬ್ರರಿಯನ್ನು ಸುಧಾರಿಸಲು ನೂರಾರು ಪುಸ್ತಕಗಳನ್ನು ಕೊಂಡು ಒದಗಿಸಿದರು. ತಮ್ಮ ಮಿತ್ರರಿಂದ ಸಹಸ್ರಾರು ರೂಪಾಯಿ ಬೆಲೆಬಾಳುವ ಪುಸ್ತಕಗಳನ್ನು ದಾನವಾಗಿ ಕೊಡಿಸಿದರು. ಅದಮಾರು ಮಠ, ಪುತ್ತಿಗೆ ಮಠ, ರಾಘವೇಂದ್ರಸ್ವಾಮಿ ಮಠದ ಸ್ವಾಮಿಗಳು ಇವರ ಸೇವೆಯನ್ನು ಪ್ರಶಂಸಿಸಿ ಗೌರವಿಸಿದ್ದಾರೆ.

ಎನ್.ಆರ್.ರಾವ್ ಅವರು ತಮ್ಮ ತಂದೆತಾಯಿಯ ಸ್ಮರಣಾರ್ಥವಾಗಿ ನಾರಾಯಣಾಮೃತ ಫೌಂಡೇಷನ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ತಮ್ಮ ಆದಾಯದ ಒಂದು ಭಾಗವನ್ನು ಯುವಪ್ರತಿಭೆಗಳ ಪೋಷಣೆ, ಬಡವಿದ್ಯಾರ್ಥಿಗಳಿಗೆ ಸಹಾಯ, ಒಳ್ಳೆಯ ಪುಸ್ತಕಗಳ ಪ್ರಕಾಶನಕ್ಕೆ ಸಹಾಯ ಮುಂತಾದ ಸಮಾಜಿಕ ಕಳಕಳಿಯ ಕಾರ್ಯಗಳಿಗಾಗಿ ಮೀಸಲಾಗಿರಿಸಿದ್ದಾರೆ, ಈ ಫೌಂಡೇಶನ್ ಮುಖಾಂತರ ಕಾರ್ಯ ಮಾಡುತ್ತಾರೆ. (ಇತ್ತೀಚೆಗೆ ಮೈಸೂರಿನ ಸಿತಾದೇವಿಯವರು ಅನುವಾದಿಸಿದ ಗಾಂಧೀಜಿಯವರ ಸಂಕ್ಷಿಪ್ತ ಆತ್ಮ ಚರಿತ್ರೆಯನ್ನು ಮಕ್ಕಳಿಗಾಗಿ ಪ್ರಕಾಶನಗೊಳಿಸಿದ್ದಾರೆ.) ಈ ಕಾರ್ಯಗಳಲ್ಲಿ ಅವರ ಅರ್ಧಾಂಗಿ ಲೀಲಾರಾವ್, ತಂಗಿ ಸುಮಾ ಹಾಗೂ ಭಾವ ನಾಗರಾಜರು ಸಹಾಕಾರ ನೀಡುತ್ತಿದ್ದಾರೆ. ಸುತ್ತಲಿನ ಮಕ್ಕಳ ಅಭಿವೃದ್ಧಿಗಾಗಿ ಅವರ ಮೈಸೂರು ಮನೆ ಸಾಧನಾ ಒಂದು ಕೇಂದ್ರವಾಗಿದೆ.

ಎನ್.ಆರ್.ರಾವ ಅವರು ಶ್ರೀ ರಾಘವೇಂದ್ರ ಸ್ತೋತ್ರವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಭಗವದ್ಗೀತೆಯನ್ನು ಸರಳ ಕನ್ನಡದಲ್ಲಿ ಗಮಕಕ್ಕೆ ಅನುಕೂಲವಾಗುವಂತೆ ಅನುವಾದಿಸಿದ್ದಾರೆ. ಈಗ ಎಂಟು ಅಧ್ಯಾಯಗಳು ಪೂರ್ಣವಾಗಿವೆ. ಅಭಿನವ ಮಂತ್ರಾಲಯವೆಂದು ಖ್ಯಾತವಾಗುತ್ತಿರುವ ಜೋಗೇಶ್ವರಿಯ ಶ್ರೀ ರಾಘವೇಂದ್ರಸ್ವಾಮಿಗಳ ಮಠ ಹಾಗೂ ಅಲ್ಲಿ ರೂಪಗೊಳ್ಳುತ್ತಿರುವ ಶ್ರೀ ಬಾಲಾಜಿ ಮಂದಿರದ ನಿಧಿಸಂಗ್ರಹ ಕಾರ್ಯದಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಶ್ರೀರಾಘವೇಂದ್ರ ಸ್ತೋತ್ರದ ಕರ್ತೃ ಶ್ರೀ ಅಪ್ಪಣ್ಣಚಾರ್ಯರ ವಂಶಜರು ಎ.ಆರ್.ರಾವ್ ಎಂಬ ಸಂಗತಿ ಬೆಳಕಿಗೆ ಬಂದಾಗ ನಮಗೆ ರಾವ್ ಅವರ ಬಗ್ಗೆ ಇದ್ದ ಅಭಿಮಾನ ಗೌರವ ಇನ್ನಷ್ಟು ಹೆಚ್ಚಾಗಿದೆ. ಅರವತ್ತರ ಹುಟ್ಟು ಹಬ್ಬದ ಸಂದರ್ಭದಲ್ಲಿ ರಾವ್ ಅವರ ಅಭಿಮಾನಿಗಳು ಹಾಗೂ ಸ್ನೇಹಿತರು ಅವರಿಗೆ ಶುಭಾಶಯ ಹೇಳೋಣ, ಶತಂ ಶರದಃ ಬಾಳಿರಿ ಎಂದು ಹಾರೈಸೋಣ!

ಡಾ. ಜೀವಿ ಕುಲಕರ್ಣಿ ಈ ಮೇಲ್ ವಿಳಾಸ : [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X