ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಭಾರತದ ಕರ್ಣನಂತೆ ಈ ಲಾಲಕೃಷ್ಣ!

By * ವಿಶ್ವೇಶ್ವರ ಭಟ್
|
Google Oneindia Kannada News

BJP leader Lal Krishna Advani
ಅವರು ಎಲ್ಲ ಇದ್ದೂ ಏನೂ ಇಲ್ಲದ ಅವನಂತೆ ಕಾಣುತ್ತಿದ್ದಾರೆ! ಸುದೀರ್ಘ ಅರವತ್ತು ವರ್ಷಗಳ ಕಾಲ ರಾಷ್ಟ್ರರಾಜಕಾರಣದಲ್ಲಿ ಸಕ್ರಿಯರಾಗಿರುವ ಬಿಜೆಪಿಯ ಜ್ಯೇಷ್ಠ ನಾಯಕ ಲಾಲಕೃಷ್ಣ ಆಡ್ವಾಣಿಯವರು ಮೊನ್ನೆಯ ಲೋಕಸಭೆ ಚುನಾವಣೆಯ ಫಲಿತಾಂಶ ಬರುತ್ತಿದ್ದಂತೆ ರಾಜಕೀಯ ಸಮರಭೂಮಿಯಲ್ಲಿ ಎಲ್ಲ ಇದ್ದೂ ಏನೂ ಇಲ್ಲದ ಕರ್ಣನಂತೆ ಕಾಣುತ್ತಿದ್ದಾರೆ. ಕರ್ಣನಲ್ಲಿ ಏನು ಕಡಿಮೆಯಿತ್ತು? ಮಹಾಸ್ಫುರದ್ರೂಪಿ, ಅಜಾನುಬಾಹು, ಪರಮಸಾಹಸಿ, ಬಿಲ್ವಿದ್ಯೆಪ್ರವೀಣ, ಪಾಂಡವರೈವರಲ್ಲಿದ್ದ ಗುಣಗಳೆಲ್ಲ ಕರ್ಣನೊಬ್ಬನಲ್ಲೇ ಇದ್ದವು. ಸಮಚಿತ್ತದಲ್ಲಿ ಧರ್ಮರಾಯ, ಬಾಹುಬಲದಲ್ಲಿ ಭೀಮ, ಬಿಲ್ವಿದ್ಯೆಯಲ್ಲಿ ಅರ್ಜುನ ಮೆರೆಯುವ ಪಟ್ಟುಗಳೆಲ್ಲ ಕರ್ಣನಲ್ಲಿ ಕರಗತವಾಗಿತ್ತು. ಮಹಾಭಾರತದಲ್ಲಿ ಕರ್ಣನಂಥ ಸಮರಶೂರ ಮತ್ತೊಬ್ಬನಿಲ್ಲ. ಆದರೂ ಆತ ಎಲ್ಲ ಇದ್ದೂ ಏನೂ ಇಲ್ಲದವನಂತೆ ದುರಂತ ನಾಯಕನಾಗಿಬಿಟ್ಟ. ಅವನು ಕಲಿತ ವಿದ್ಯೆಗಳಾಗಲಿ, ಸಾಧಿಸಿದ ವರಸೆಗಳಾಗಲಿ, ರೂಢಿಸಿಕೊಂಡ ತಾಲೀಮುಗಳಾಗಲಿ, ಅಭಿಜಾತವಾಗಿ ಬಂದ ಕಲೆಗಳಾಗಲಿ, ದಕ್ಕಿಸಿಕೊಂಡ ತಂತ್ರವಾಗಲಿ ಯುದ್ಧಭೂಮಿಯಲ್ಲಿ ಪ್ರಯೋಜನಕ್ಕೇ ಬರಲೇ ಇಲ್ಲ. ಆತ ಸುಮ್ಮನೆ ಕೈಚೆಲ್ಲಿಬಿಟ್ಟ.

ಮಹಾಭಾರತ'ದ ಕರ್ಣನಂತೆ ಮತಭಾರತ'ದ ಲಾಲಕೃಷ್ಣ! ಇಬ್ಬರದೂ ಒಂದೇ ಅವಸ್ಥೆ. ಆಡ್ವಾಣಿಯವರಲ್ಲಿ ಏನು ಕಡಿಮೆಯಿತ್ತು? ಬೇರೆಯವರ ಜತೆಗಿಟ್ಟು ಅವರನ್ನು ಹೋಲಿಸುವ ಅಗತ್ಯ ಇಲ್ಲ. 1952ರಿಂದ 2009ರತನಕ ನಡೆದ ಎಲ್ಲ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಒಬ್ಬ ರಾಜಕಾರಣಿಯಿದ್ದರೆ ಅವರು ಆಡ್ವಾಣಿ. ಈಗಿನ ಪಾಕಿಸ್ತಾನದಲ್ಲಿರುವ ಕರಾಚಿಯಲ್ಲಿ ಹುಟ್ಟಿದರೂ ದೇಶ ವಿಭಜನೆ ಬಳಿಕ ಭಾರತಕ್ಕೆ ಆಗಮಿಸಿದ ಅವರು, ಪ್ರಾಯಶಃ ಯಾವೊಬ್ಬ ರಾಜಕಾರಣಿಯೂ ಸುತ್ತದಷ್ಟು ದೇಶವನ್ನು ಸುತ್ತಿದ್ದಾರೆ. ಅವರೇ ಹೇಳುವ ಹಾಗೆ, ಅವರು ಭಾರತದಲ್ಲಿ ಭೇಟಿ ನೀಡದ ಜಿಲ್ಲೆಗಳಿಲ್ಲ. ಸ್ವತಂತ್ರ ಭಾರತದಲ್ಲಿ ನೆಹರು, ಇಂದಿರಾ, ವಾಜಪೇಯಿ ಅವರಂತೆ ಭಾರತದ ಸಮಗ್ರತೆಯ ಬಗ್ಗೆ ಆಡ್ವಾಣಿಯವರದು ವಿಶಾಲದೃಷ್ಟಿ.

ಇಡೀ ದೇಶಕ್ಕೆ ಅವರು ಸುಪರಿಚಿತ. ಅವರು ಹೈಕಮಾಂಡ್ ನಿಂದ ಹೇರಲ್ಪಟ್ಟ ವ್ಯಕ್ತಿ ಅಲ್ಲ ಅಥವಾ ಇವರೇ ನಮ್ಮ ಪ್ರಧಾನಿ ಎಂದು ನಂಬಿಸಲಾದ, ಬಿಂಬಿಸಲಾದ ವ್ಯಕ್ತಿಯೂ ಅಲ್ಲ. ಇನ್ಯಾರೋ ಬೇಡ ಎಂದು ಆರಿಸಲಾದ ಅಭ್ಯರ್ಥಿಯೂ ಆಗಿರಲಿಲ್ಲ. ಹಾಗೆಂದು ತೃತೀಯರಂಗದ ಪ್ರಧಾನಿ ಆಕಾಂಕ್ಷಿತ ಅಭ್ಯರ್ಥಿಗಳಂತೆ ಪರಪುಟ್ಟ, ಪಡಪೋಶಿ ಅಭ್ಯರ್ಥಿಯೂ ಆಗಿರಲಿಲ್ಲ. ಯಾವುದೇ ಕೋನ, ಮಗ್ಗಲು, ಮೇಲೆ-ಕೆಳಗಿನಿಂದ ನೋಡಿದರೂ ಆಡ್ವಾಣಿ ಪ್ರಧಾನಿಪಟ್ಟಕ್ಕೆ ಅಗ್ದಿ ಲಾಯಕ್ಕಾದ ವ್ಯಕ್ತಿಯಾಗಿದ್ದರು. ಆಡ್ವಾಣಿಯವರ ಪ್ರಖರ ಹಿಂದುತ್ವ ಇಷ್ಟಪಡದವರಿಗೆ ಇಷ್ಟವಾಗುವ ರೀತಿಯಲ್ಲಿ ಅವರ ಪ್ರಖರತೆಯೂ ಕಡಿಮೆಯಾಗಿದ್ದರಿಂದ ಅಷ್ಟರಮಟ್ಟಿಗೆ ಅವರು ಸ್ವೀಕೃತರಾಗಿದ್ದರು.

ಹಾಗೆ ನೋಡಿದರೆ ಈ ಚುನಾವಣೆಯಲ್ಲಿ ಆ ಸ್ಥಾನಕ್ಕೆ ಯೋಗ್ಯ ಹಾಗೂ ಅರ್ಹ ವ್ಯಕ್ತಿಗಳ ಸಾಲಿನಲ್ಲಿ ಅವರೇ ಅಗ್ರೇಸರರಾಗಿದ್ದರು. ಕಟ್ಟಾ ಕಾಂಗ್ರೆಸ್ಸಿಗರಿಗೆ ಸಹ ಆಡ್ವಾಣಿಯವರ ಬಗ್ಗೆ ತಕರಾರಿರಲಿಲ್ಲ. ಈಗ ಅವರೂ ಹೇಳುತ್ತಿದ್ದಾರೆ ಆಡ್ವಾಣಿಯಂಥವರು ಈ ದೇಶದ ಪ್ರಧಾನಿಯಾಗಬೇಕಿತ್ತು ಹಾಗೂ ಅವರು ಅದೇಗೆ ಆ ಸ್ಥಾನ ತಪ್ಪಿಸಿಕೊಂಡರು ಎಂಬುದು ಅರ್ಥವಾಗುತ್ತಿಲ್ಲ ಎಂದು. ಅವರು ಈ ದೇಶದ ಪ್ರಧಾನಿ ಆಗಬೇಕಿತ್ತು ಎಂದು ಆಶಿಸುವುದು ಎಷ್ಟು ಸಹಜವೋ, ಅವರು ಆಗಲಿಲ್ಲ ಎನ್ನುವುದೂ ಅಷ್ಟೇ ಸತ್ಯ. ಅದಕ್ಕಾಗಿಯೇ ಅವರು ಎಲ್ಲ ಇದ್ದೂ ಏನೂ ಇಲ್ಲದ ಕರ್ಣನಂತೆ, ಸಮರಭೂಮಿಯಲ್ಲಿ ವೈರಿಗಳನ್ನು ಸದೆಬಡಿದ ಮಹಾಯೋಧ ತನ್ನ ಮನೆಯ ಬಚ್ಚಲಿನಲ್ಲಿ ಜಾರಿಬಿದ್ದು ಕಾಲು ಮುರಿದುಕೊಂಡು ಮರುಕಪಡುತ್ತಿರುವವರಂತೆ ಕಾಣುತ್ತಾರೆ. ಮಹಾಭಾರತದ ಕರ್ಣನದು ಅದೆಂಥ ಸಂಕಟ, ಹತಾಶೆ, ವಿಷಾದ, ವಿಷಣ್ಣತೆ, ಕರುಳು ಕಿತ್ತುಬರುವ ನೋವಿನ ಕತೆಯೋ ಮತಭಾರತದ ಆಡ್ವಾಣಿಯವರದೂ ಹೆಚ್ಚೂಕಮ್ಮಿ ಅದೇ ಕತೆ, ಅದೇ ವ್ಯಥೆ! ಅವರು ಕಟ್ಟಿದ ಬಿಜೆಪಿಗಲ್ಲದಿದ್ದರೂ, ಅವರನ್ನು ಕಟ್ಟಿದ ದೇಶದ ಹಿತದೃಷ್ಟಿಯಿಂದಾದರೂ ಅವರು ಪ್ರಧಾನಿಯಾಗಬೇಕಿತ್ತೆಂದು ಅಂದುಕೊಂಡವರು, ಅಂದುಕೊಳ್ಳುತ್ತಿರುವವರು ಎಲ್ಲ ಪಕ್ಷಗಳಲ್ಲೂ ಸಿಗುತ್ತಾರೆ. ಅಷ್ಟರಮಟ್ಟಿಗೆ ಅವರು ಗೆದ್ದಿದ್ದಾರೆ. ಅಷ್ಟಕ್ಕೆ ಸಮಾಧಾನ ಪಟ್ಟುಕೊಳ್ಳಬೇಕು.

ಮೊನ್ನೆ 'ಟೈಮ್ಸ್ ಆಫ್ ಇಂಡಿಯಾ'ದಲ್ಲಿ ವ್ಯಂಗ್ಯಚಿತ್ರಕಾರ ಪೊನ್ನಪ್ಪ ಒಂದು ಕಾರ್ಟೂನ್ ಎಳೆದಿದ್ದರು. ಆಡ್ವಾಣಿಯವರು ಬೇಸರದಲ್ಲಿ My strength was my weakness (ನನ್ನ ಶಕ್ತಿ, ಸಾಮರ್ಥ್ಯವೇ ನನ್ನ ದೌರ್ಬಲ್ಯ) ಎಂದು ಹೇಳುತ್ತಿದ್ದರೆ, ಡಾ. ಮನಮೋಹನ್‌ಸಿಂಗ್ ಹರ್ಷದಲ್ಲಿ My weakness was my strength (ನನ್ನ ದೌರ್ಬಲ್ಯವೇ ನನ್ನ ಶಕ್ತಿ, ಸಾಮರ್ಥ್ಯ) ಎಂದು ಹೇಳುತ್ತಿರುವಂತೆ ಚಿತ್ರಿಸಿದ್ದು ಇಬ್ಬರು ನಾಯಕರ ವ್ಯಕ್ತಿತ್ವ ಮತ್ತು ಸಾಧನೆಗೆ ಬರೆದ ಸರಳ ಷರಾ. ಅದು ವಾಸ್ತವಕ್ಕೆ ಹತ್ತಿರವೂ ಹೌದು. ಆಡ್ವಾಣಿಯವರಿಗೆ ಅವರ ಅರ್ಹತೆ, ಸಾಮರ್ಥ್ಯ, ಯೋಗ್ಯತೆಯೇ ದೌರ್ಬಲ್ಯವಾಯಿತು.

ಭಾರತದ ರಾಜಕಾರಣದಲ್ಲಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಲಾಲಕೃಷ್ಣ ಆಡ್ವಾಣಿ ಮೇರುವ್ಯಕ್ತಿತ್ವಗಳು. ಅರ್ಧಶತಮಾನ ಕಾಲ ಬೇರ್ಪಡಿಸಲಾಗದ ಜೋಡಿ. ಒಬ್ಬರ ಹೆಸರ ತುದಿಗೆ ಮತ್ತೊಂದು ಹೆಸರು. ಒಂದು ಹೆಸರು ಮುಗಿಯುತ್ತಿದ್ದಂತೆ ಮತ್ತೊಂದರ ಆರಂಭ. ಅಷ್ಟರಮಟ್ಟಿಗೆ ಬಿಡಿಸಲಾಗದ ನಂಟು. ಆ ಐವತ್ತು ವರ್ಷ ಕಾಲ ಸತತ ಒಡನಾಡಿದರೂ ಇಬ್ಬರೂ ಒಂದೇ ಒಂದು ಸಲ ಪರಸ್ಪರರ ಬಗ್ಗೆ ಕಟು ಅಥವಾ ಕೆಟ್ಟ ಮಾತನ್ನು ಆಡಿದ್ದಿಲ್ಲ. ಇಬ್ಬರಲ್ಲೂ ಅನೇಕ ವಿಷಯಗಳ ಕುರಿತು ಭಿನ್ನ ಅಭಿಪ್ರಾಯಗಳಿದ್ದವು. ಆದರೆ ಅವರ ಮಧ್ಯೆ ಸ್ಪರ್ಧಾತ್ಮಕ ಪೈಪೋಟಿಯಾಗಲಿ, ಸಂಘರ್ಷವಾಗಲಿ ಇರಲಿಲ್ಲ. ಪರಸ್ಪರ ವಿಶ್ವಾಸ, ಗೌರವ ಹಾಗೂ ಸಮಾನ ಉದಾತ್ತ ಗುರಿಗಳಿಗೆ ಬದ್ಧರಾಗಿದ್ದರೆ ರಾಜಕೀಯದಲ್ಲಿ ಸುದೀರ್ಘ ಸಂಬಂಧವನ್ನು ಕಾಪಾಡಬಹುದೆಂಬ ಘೋಷವಾಕ್ಯಕ್ಕೆ ಚೌಕಟ್ಟು ತೊಡಿಸಿದವರಂತೆ ಅವರಿಬ್ಬರೂ ನಡೆದುಕೊಂಡರು. ಅಧಿಕಾರ ರಾಜಕಾರಣವೆನ್ನುವುದು ಎಂಥ ಸ್ನೇಹ-ಸಂಬಂಧವನ್ನಾದರೂ ಕಲ್ಲವಿಲಗೊಳಿಸಿಬಿಡುತ್ತದೆ. ಆದರೆ ಈ ಇಬ್ಬರು ನಾಯಕರು ಅದಕ್ಕೆ ಅಪವಾದ. ವಾಜಪೇಯಿ ಮೈಯಲ್ಲಿ ಕಸುವು ಇರುವ ತನಕವೂ ಆಡ್ವಾಣಿ ಅವರನ್ನು overtake ಮಾಡಲು ಯೋಚಿಸಲೂ ಇಲ್ಲ. ಯಾವಾಗ ಅವರು ಪೂರ್ತಿ ಹಾಸಿಗೆ ಹಿಡಿದರೋ ಆಗಲೇ ಆಡ್ವಾಣಿಯವರು ಪ್ಯಾಡ್ ಕಟ್ಟಿಕೊಂಡಿದ್ದು. ಅಲ್ಲಿಯತನಕ ಆಡ್ವಾಣಿಯವರು ವಾಜಪೇಯಿ ನೆರಳಿನಂತೆ ಇದ್ದವರು. ಈ ಸಂಗತಿಗಳೆಲ್ಲ ಯಾಕೆ ಪ್ರಮುಖವಾಗುತ್ತವೆಯೆಂದರೆ ಅಧಿಕಾರ ರಾಜಕಾರಣವೆನ್ನುವುದು ಗಂಡ-ಹೆಂಡತಿ, ಅಳಿಯ-ಮಾವ, ತಂದೆ-ಮಗ, ಅಣ್ಣ-ತಮ್ಮ ಹೀಗೆ ಯಾರನ್ನೂ ಸುಖವಾಗಿರಲು ಬಿಟ್ಟಿಲ್ಲ. ವಚನಭ್ರಷ್ಟತೆ, ಬೆನ್ನಿಗೆ ಚೂರಿ ಹಾಕುವುದು, ಸಮಯಸಾಧಕತನವೇ ಮುಖ್ಯವಾಗಿರುವ ಇಂದಿನ ರಾಜಕೀಯದ ಅಸಹ್ಯ ವಾತಾವರಣದ ಮಧ್ಯೆಯೂ ಅಚ್ಚರಿಯೆಂಬಂತೆ ಈ ಇಬ್ಬರು ನಾಯಕರು ಮೇಲ್ಪಂಕ್ತಿ ಹಾಕಿಕೊಡುತ್ತಾರೆ.

ಈ ಇಬ್ಬರ ಪೈಕಿ ಗುಣವೈಶಿಷ್ಟ್ಯಗಳಲ್ಲಿ ಅಲ್ಲವಾದರೂ, ಗೆಳೆತನದ ಸರಳ ಸಂಗತಿಗಳಿಂದಾದರೂ ಆಡ್ವಾಣಿಯವರು ಒಂದು ತೂಕ ಹೆಚ್ಚಾಗಿ ಕಾಣುತ್ತಾರೆ. ಯಾಕೆಂದರೆ ತಮ್ಮ ಪಕ್ಷ ಅಧಿಕಾರಕ್ಕೆ ಬರುವಷ್ಟು ಸೀಟುಗಳನ್ನು ಪಡೆಯಲು ತಾವೇ ಕಾರಣರಾದರೂ, ಸರಕಾರ ರಚಿಸುವ ಸಂದರ್ಭ ಬಂದಾಗ ನಿರ್ವಂಚನೆಯಿಂದ ಮನೆಯ ಯಜಮಾನನಾದ ವಾಜಪೇಯಿ ಅವರನ್ನೇ ಕೈಹಿಡಿದು ಪ್ರಧಾನಿಪಟ್ಟಕ್ಕೆ ಕುಳ್ಳಿರಿಸುತ್ತಾರೆ. ಅಲ್ಲದೇ ಎಂದೆಂದೂ ಆ ಜಯಕ್ಕೆ ನಾನೇ ಕಾರಣ ಎಂದು claim ಮಾಡಿಕೊಳ್ಳುವುದನ್ನು ಸಹ ಇಷ್ಟಪಡುವುದಿಲ್ಲ. ಆಡ್ವಾಣಿಯವರ ಈ ಅಪರೂಪದ ಗುಣವನ್ನು ಸ್ವತಃ ವಾಜಪೇಯಿಯವರು ತಮ್ಮ ಆಪ್ತರ ಮುಂದೆ ಹೇಳಿಕೊಂಡಿದ್ದುಂಟು. ಇವನ್ನೆಲ್ಲ ಬೇರೆಯವರ ಜತೆಗಿಟ್ಟು ಹೋಲಿಸಲು ಆಗುವುದಿಲ್ಲ. ಯಾಕೆಂದರೆ ಭಾರತದ ರಾಜಕಾರಣದಲ್ಲಿ ಅಂಥ ವ್ಯಕ್ತಿಗಳಿಲ್ಲ.

ಇಷ್ಟು ವರ್ಷಗಳ ಸುದೀರ್ಘ ರಾಜಕೀಯ ಯಾತ್ರೆಯನ್ನು ಕ್ರಮಿಸಿಯೂ, ಅಧಿಕಾರ ರಾಜಕಾರಣ ಮಾಡಿಯೂ ಆಡ್ವಾಣಿಯವರು ಒಂದೇ ಒಂದು ಕಳಂಕ, ಕಪ್ಪುಚುಕ್ಕೆ, ರಾಡಿಯನ್ನು ಮೈಗೆ ತಗುಲಿಸಿಕೊಂಡವರಲ್ಲ. ಇಂದು ಕಳಂಕಪೀಡಿತರೇ ರಾಜಕೀಯಕ್ಕೆ ಬರುತ್ತಿದ್ದಾರೆ. ಮಾಡಬಾರದ್ದನ್ನೆಲ್ಲ ಮಾಡಿ ಮತ್ತಷ್ಟು ಕಳಂಕಿತರಾಗುತ್ತಾರೆ ಅಥವಾ ಮೈಗೆರಚಿದ ಹೊಲಸುಗಳನ್ನು ವಾಮಮಾರ್ಗದಲ್ಲಿ ತೊಳೆದುಕೊಳ್ಳಲು ಪ್ರಯತ್ನಿಸುತ್ತಾರೆ. ರಾಜಕಾರಣದಲ್ಲಿ ಪ್ರಾಮಾಣಿಕತೆ ಎಂಬುದು ಕೇಳಲೇಬಾರದ ಪದ. ಹಾಗೆ ನೋಡಿದರೆ ರಾಜಕೀಯ ಹಾಗೂ ಪ್ರಾಮಾಣಿಕತೆ ಎಂಬುದು ಪರಸ್ಪರ ವಿರುದ್ಧಾರ್ಥ ಪದಗಳು. ಆದರೆ ಆಡ್ವಾಣಿಯವರು ಪ್ರಾಮಾಣಿಕತೆಗೆ ಶುಭ್ರತೆಯ ಮೆರುಗನ್ನೂ ನೀಡಿದರು ಎಂಬುದನ್ನು ಅವರ ರಾಜಕೀಯ ವಿರೋಧಿಗಳೂ ಒಪ್ಪುತ್ತಾರೆ. ಹವಾಲ ಹಗರಣದಲ್ಲಿ ಆಡ್ವಾಣಿಯವರೂ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದ್ದಂತೆ, ಅವರು ಪಕ್ಷದ ಅಧ್ಯಕ್ಷ ಸ್ಥಾನ ಹಾಗೂ ಸಂಸತ್ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು ಎಲ್ಲರ ಮನಸ್ಸಿನಲ್ಲಿ ಹಸುರಾಗಿದೆ. ಈ ಹಗರಣದಲ್ಲಿ ಆಡ್ವಾಣಿಯವರಂತೆ ಹಲವು ನಾಯಕರ ವಿರುದ್ಧವೂ ಆರೋಪ ಕೇಳಿಬಂದಿತ್ತು. ಆದರೆ ಅವರಾರೂ ರಾಜೀನಾಮೆ ನೀಡುವ ರಾಜಕೀಯ ಮೂರ್ಖತನ' ಪ್ರದರ್ಶಿಸಲಿಲ್ಲ. ಅಷ್ಟೇ ಅಲ್ಲ, ನ್ಯಾಯಾಲಯ ತನ್ನನ್ನು ನಿರ್ದೋಷಿಯೆಂದು ಘೋಷಿಸುವವರೆಗೆ ಲೋಕಸಭೆಯನ್ನು ಸಹ ಪ್ರವೇಶಿಸುವುದಿಲ್ಲ ಎಂದು ಆಡ್ವಾಣಿ ಪ್ರಮಾಣ ಸ್ವೀಕರಿಸಿದರು. ಹೀಗಾಗಿ 1996ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ತಮ್ಮ ಕ್ಷೇತ್ರವಾದ ಗುಜರಾತ್‌ನ ಗಾಂಧಿನಗರವನ್ನು ವಾಜಪೇಯಿಯವರಿಗೆ (ಅವರು ಲಖನೌದಿಂದಲೂ ಸ್ಪರ್ಧಿಸಿದರು. ಎರಡರಲ್ಲೂ ಗೆದ್ದರು) ಬಿಟ್ಟುಕೊಟ್ಟರು. ಹವಾಲ ಹಗರಣದಲ್ಲಿ ಆಡ್ವಾಣಿಯವರು ಭಾಗಿಯಲ್ಲವೆಂದು ಕೋರ್ಟ್ ತೀರ್ಪಿತ್ತ ಬಳಿಕವೇ ಅವರು ಲೋಕಸಭೆ ಪ್ರವೇಶಿಸಿದ್ದು, ಪಕ್ಷದ ಜವಾಬ್ದಾರಿ ವಹಿಸಿಕೊಂಡಿದ್ದು. ದೇಶದ ರಾಜಕೀಯ ಚರಿತ್ರೆಯಲ್ಲಿ ಇಂಥ ಇನ್ನೊಂದು ನಿದರ್ಶನ ಸಿಗುವುದಿಲ್ಲ. ಆಡ್ವಾಣಿಯವರು ಭಾರತ ರಾಜಕಾರಣದಲ್ಲಿ ಕ್ರಮಿಸಿದ ಹೆಜ್ಜೆ ಗುರುತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರ ವ್ಯಕ್ತಿತ್ವ, ರಾಜಕೀಯದ ಒಳಸುಳಿ ತುಸು ಅರ್ಥವಾಗಬಹುದು.

ದೇಶವಿಭಜನೆಯ ಬಳಿಕ ಮನೆ, ಮಠ, ಹುಟ್ಟೂರಿನ ಕರುಳ ಸಂಬಂಧ ಕಡಿದುಕೊಂಡು ಭಾರತಕ್ಕೆ ಬಂದಾಗ ಆಡ್ವಾಣಿ ಅವರಿಗೆ ಹದಿನಾಲ್ಕು ವರ್ಷ ವಯಸ್ಸು. ಸಿಂಧ್‌ನಲ್ಲಿದ್ದಾಗಲೇ ಆರೆಸ್ಸೆಸ್ ಸಂಪರ್ಕಕ್ಕೆ ಬಂದಿದ್ದ ಆಡ್ವಾಣಿಯವರು ಅದೇ ಸಂಪರ್ಕದ ದೆಸೆಯಿಂದ ದಿಲ್ಲಿಗೂ ಬರುವಂತಾಯಿತು. ಹೈಸ್ಕೂಲು ವಿದ್ಯಾಭ್ಯಾಸ ಮುಗಿದ ಬಳಿಕ ರಾಜಸ್ಥಾನದ ಜೋದ್‌ಪುರದಲ್ಲಿ ನಡೆದ ಆರೆಸ್ಸೆಸ್ ಶಿಬಿರದಲ್ಲಿ ಪಾಲ್ಗೊಳ್ಳಲು ಹೋದ ಆಡ್ವಾಣಿ, ಅನಂತರ ಪೂರ್ಣಾವಧಿ ಕಾರ್ಯಕರ್ತರಾಗಿ, ಪ್ರಚಾರಕರಾಗಿ ಸೇರಿದರು. ಹತ್ತು ವರ್ಷಗಳ ಕಾಲ ಅವರು ರಾಜಸ್ಥಾನದ ಬೇರೆ ಬೇರೆ ಭಾಗಗಳಲ್ಲಿ ಪ್ರಚಾರಕರಾಗಿ ಕೆಲಸ ಮಾಡಿದರು. 1952ರಲ್ಲಿ ಒಂದು ದಿನ ರಾಜಸ್ಥಾನದಲ್ಲಿ ಪ್ರವಾಸ ಮಾಡುತ್ತಿದ್ದಾಗ ಪಂಡಿತ ದೀನ್‌ದಯಾಳ್ ಉಪಾಧ್ಯಾಯರು ರಾಜ್ಯದ ಜನಸಂಘದ ಹೊಣೆಹೊರಬೇಕೆಂದು ಸೂಚಿಸಿದಾಗ ಸಾಮಾನ್ಯ ರಾಜಕೀಯ ಕಾರ್ಯಕರ್ತನಾಗಿ ರಾಜಕಾರಣ ಪ್ರವೇಶಿಸಿದರು. ಆರಂಭದ ದಿನಗಳಲ್ಲಿ ಕರಪತ್ರ ಬರೆದಿದ್ದು, ಅದನ್ನು ಮನೆಮನೆಗೆ ವಿತರಿಸಿದ್ದು, ಮರವೇರಿ ಬ್ಯಾನರ್ ಕಟ್ಟಿದ್ದು, ಗೋಡೆಬರಹ ಬರೆದಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು 45 ಕಿಮಿ ದೂರವನ್ನು ಕಾಲ್ನಡಿಗೆಯಲ್ಲಿ ಸಂಚರಿಸಿದ್ದು, ರಾಜಸ್ಥಾನದ ಮರಳುಗಾಡಿನಲ್ಲಿ ಪಕ್ಷದ ಪ್ರಚಾರಕ್ಕಾಗಿ ಬೆಳಗಿನಿಂದ ಸಾಯಂಕಾಲದ ತನಕ ಬರಿಗಾಲಲ್ಲಿ ನಡೆದಿದ್ದು, ನಾಲ್ಕು ರಸ್ತೆ ಸೇರುವ ಜಾಗದಲ್ಲಿ ನಿಂತು ಭಾಷಣ ಮಾಡಿದ್ದೆಲ್ಲವನ್ನೂ ಆಡ್ವಾಣಿಯವರು ತಮ್ಮ ನನ್ನ ದೇಶ ನನ್ನ ಜೀವನ' ಕೃತಿಯಲ್ಲಿ ಮೆಲುಕು ಹಾಕಿದ್ದಾರೆ. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ಆಡ್ವಾಣಿಯವರು, ತಾವು ಸೇರಿದ ಸಂಘಟನೆಯ ಕೆಲಸಗಳಲ್ಲೇ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು ವಿಶೇಷ. ರಾಜಸ್ಥಾನದಲ್ಲಿ ಚುನಾವಣೆ ಸಮಯದಲ್ಲಿ ಆಡ್ವಾಣಿಯವರ ಕಠಿಣ ಪರಿಶ್ರಮ ಗಮನಿಸಿದ ಉಪಾಧ್ಯಾಯರು, ದಿಲ್ಲಿಯಿಂದ ಪ್ರಕಟವಾಗುತ್ತಿದ್ದ ಆರ್ಗನೈಸರ್' ಪತ್ರಿಕೆಯ ಪ್ರಕಟಣೆ ಜವಾಬ್ದಾರಿ ನೋಡಿಕೊಳ್ಳುವಂತೆ ಸೂಚಿಸಿದರು. ಆಡ್ವಾಣಿಯವರು ಹಲವಾರು ಗುಪ್ತನಾಮಗಳಲ್ಲಿ ಲೇಖನ ಬರೆಯುತ್ತಿದ್ದರು. ಒಬ್ಬ ವರದಿಗಾರ ಮಾಡುವ ಎಲ್ಲ ಕೆಲಸಗಳನ್ನೂ ನಿರ್ವಹಿಸುತ್ತಿದ್ದರು. ಆಗ ಅವರಿಗೆ ಸಿಗುತ್ತಿದ್ದ ಸಂಬಳ ಕೇವಲ 350 ರೂ. ಹಲವಾರು ಸಂದರ್ಭಗಳಲ್ಲಿ ಅವರೇ ಪತ್ರಿಕೆಯ ಬಂಡಲ್ ಕಟ್ಟಿದ್ದುಂಟು, ತಲೆಮೇಲೆ ಎತ್ತಿ ವಾಹನಕ್ಕೆ ಹಾಕಿದ್ದುಂಟು, ಮನೆಮನೆಗೆ ವಿತರಿಸಿದ್ದೂ ಉಂಟು. ಆಡ್ವಾಣಿಯವರು ಮದುವೆಯಾಗುವಾಗ ಅವರು ಒಬ್ಬ ಪತ್ರಕರ್ತರಾಗಿದ್ದರು. ಇದು ಆಡ್ವಾಣಿಯವರ ಆರಂಭದನಡೆ.

ಅವರು ರಾಜಕೀಯ ಪ್ರವೇಶಿಸಿದ್ದು ಒಬ್ಬ ಸಾಮಾನ್ಯ ಕಾರ್ಯಕರ್ತರಾಗಿ. ಹತ್ತಾರು ವರ್ಷ ದುಡಿದ ನಂತರವೂ ಅವರು ಕಾರ್ಯಕರ್ತರಾಗಿಯೇ ಉಳಿದರು. ನಾಯಕ ಎಂದೆನಿಸಿಕೊಳ್ಳಲು ಅವರು ತೆಗೆದುಕೊಂಡದ್ದು ಇಪ್ಪತ್ತು ವರ್ಷ. ಈಗ ರಾಜಕೀಯಕ್ಕೆ ಬರುವವರೆಲ್ಲ ನಾಯಕರೇ. ಬರಬರುತ್ತಲೇ ಎಲ್ಲರಿಗೂ ಅಧಿಕಾರ ಬೇಕು. ಯಾರಿಗೂ ಕಾರ್ಯಕರ್ತರಾಗಿ ದುಡಿಯುವ ಮನಸ್ಸಿಲ್ಲ. ದುಡ್ಡಿದ್ದವರಿಗೆಲ್ಲ ನಾಯಕರಾಗುವ ಚಪಲ. ಅಧಿಕಾರ ಹಿಡಿಯುವವರೂ ಅವರೇ. ಆದರೆ ಆಡ್ವಾಣಿಯವರು ರಾಜಕಾರಣದ ಒಂದೊಂದೇ ಮೆಟ್ಟಿಲನ್ನು ಹತ್ತಿ ಅನಂತರ ಅಧಿಕಾರದ ಗರ್ಭಗುಡಿಯ ಹತ್ತಿರ ಹೋಗಿ ನಿಂತವರು ಎಂಬುದನ್ನು ಗಮನಿಸಬೇಕು. ಈ ಅವಧಿಯಲ್ಲಿ ಅವರು ವಾಜಪೇಯಿ ಅವರ ಸಹಾಯಕ, ಜನಸಂಘದ ಅಧ್ಯಕ್ಷ, ದಿಲ್ಲಿ ಮೆಟ್ರೊಪಾಲಿಟನ್ ಕೌನ್ಸಿಲ್ ಸದಸ್ಯ, ಕೌನ್ಸಿಲ್ ಅಧ್ಯಕ್ಷ, ರಾಜ್ಯಸಭೆ ಸದಸ್ಯ, ಜನತಾ ಸರಕಾರದಲ್ಲಿ ವಾರ್ತಾ, ಪ್ರಸಾರ ಖಾತೆ ಸಚಿವ, ಬಿಜೆಪಿ ಅಧ್ಯಕ್ಷ, ಲೋಕಸಭೆ ಸದಸ್ಯ, ಕೇಂದ್ರ ಗೃಹ ಸಚಿವ, ಉಪಪ್ರಧಾನಿ, ಲೋಕಸಭೆಯ ಪ್ರತಿಪಕ್ಷ ನಾಯಕ ಹಾಗೂ ಪ್ರಧಾನಿ ಅಭ್ಯರ್ಥಿಯಾದವರು. ದೇಶದ ರಾಜಕಾರಣದ ಮೇಲೆ ಅತೀವ ಪ್ರಭಾವ ಬೀರಿದ ಅಯೋಧ್ಯೆ ರಾಮಜನ್ಮಭೂಮಿ ಆಂದೋಲನದ ನೇತೃತ್ವವನ್ನೂ ವಹಿಸಿದವರು. ಸಾಂಸ್ಕೃತಿಕ ರಾಷ್ಟ್ರೀಯತೆ ಎಂಬ ಹೊಸ ರಾಷ್ಟ್ರವಾದದ ಕಲ್ಪನೆ ಕೊಟ್ಟವರು.

ಆಡ್ವಾಣಿ ಮಹಾನ್ ಸಂಘಟಕ. ಪಕ್ಷದ ನೀತಿ, ಸಿದ್ಧಾಂತ, ಹೋರಾಟದ ಭೂಮಿಕೆಯನ್ನೆಲ್ಲ ರೂಪಿಸುವವರು, ಅದನ್ನು ಜಾರಿಗೆ ತರುವವರೆಲ್ಲ ಆಡ್ವಾಣಿಯವರೇ. ವಾಜಪೇಯಿ ಪಕ್ಷದ ಮುಕುಟಮಣಿ. ತೆರೆಯ ಹಿಂದಿನ ಹಮಾಲಿ ಕೆಲಸವೆಲ್ಲ ಆಡ್ವಾಣಿಯವರದು. ಆದರೆ ಉತ್ಸವಮೂರ್ತಿ ಮಾತ್ರ ವಾಜಪೇಯಿ. ಬಿಜೆಪಿ ಸ್ಥಾಪನೆಯಾದಂದಿನಿಂದ ಇಲ್ಲಿಯತನಕ ಸಂಘಟನೆಯನ್ನು ಬಲಪಡಿಸಿದ ಬಹುಪಾಲು ಶ್ರೇಯಸ್ಸು ಆಡ್ವಾಣಿಯವರಿಗೆ ಸಲ್ಲಬೇಕು. ಆಡ್ವಾಣಿ master crafts-man ಆದ್ರೆ, ವಾಜಪೇಯಿ master showman. ಹಾಗಂತ ವಾಜಪೇಯಿ ಅಷ್ಟಕ್ಕೇ ಸೀಮಿತರಾದವರು ಅಂತೇನೂ ಅಲ್ಲ. ಆದರೆ ಪಕ್ಷ ಕಟ್ಟುವಲ್ಲಿ ಅವರಿಗಿಂತ ಆಡ್ವಾಣಿಯವರದು ಒಂದು ಹಿಡಿ ಜಾಸ್ತಿ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಅದನ್ನು ಅವರು ಒಂದು ವ್ರತದಂತೆ, ಯಜ್ಞದಂತೆ, ತಪಸ್ಸಿನಂತೆ ಮಾಡುತ್ತಾ ಬಂದಿದ್ದಾರೆ. ಆಡ್ವಾಣಿಯವರು ಪಕ್ಷಕ್ಕೆ ನೀಡಿದ ದಿಗ್ದರ್ಶಿತ್ವವೇ ಅದನ್ನು ಕಾಂಗ್ರೆಸ್‌ಗೆ ಪರ್‍ಯಾಯಶಕ್ತಿಯಾಗಿ ರೂಪಿಸಿದ್ದು ಸಣ್ಣ ಸಂಗತಿಯಲ್ಲ.

ಇವೆಲ್ಲವುಗಳ ಜತೆಗೆ ಒಬ್ಬ ನಾಯಕನಿಗೆ ಅತ್ಯಂತ ಮುಖ್ಯವಾಗುವುದು ವೈಯಕ್ತಿಕ ಚಾರಿತ್ರ್ಯ, ಶುದ್ಧಹಸ್ತ ಹಾಗೂ ವಿಶ್ವಾಸಾರ್ಹತೆ. ಪ್ರಾಯಶಃ ಈ ಮೂರು ಸಂಗತಿಗಳಲ್ಲಿ ಆಡ್ವಾಣಿಯವರನ್ನು ಮೀರಿಸುವವರಿಲ್ಲ. ಈ ಆರು ದಶಕಗಳಲ್ಲಿ ಅವರು ಉಳಿದೆಲ್ಲವರಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದ್ದರೆ ಅದಕ್ಕೆ ಇವೇ ಕಾರಣ. ಆಡ್ವಾಣಿ ವಿರುದ್ಧ ಭ್ರಷ್ಟಾಚಾರದ ಒಂದು ಸಣ್ಣ ಅಪಸ್ವರವೂ ಕೇಳಿಬಂದಿಲ್ಲ. ಅವರ ಇಬ್ಬರು ಮಕ್ಕಳು ಹಾಗೂ ಪತ್ನಿ ರಾಜಕೀಯದಿಂದ ದೂರ. ಸಂಯಮ ಮೀರಿ ಅವರು ವರ್ತಿಸಿದ್ದು ಇಲ್ಲವೇ ಇಲ್ಲ. ತಮ್ಮ ರಾಜಕೀಯ ವಿರೋಧಿಯನ್ನು ಅವಾಚ್ಯವಾಗಿ ನಿಂದಿಸಿದ್ದೂ ಇಲ್ಲ. ಆಡ್ವಾಣಿಯವರದು ಶುದ್ಧ ಹಾಗೂ ಶುಭ್ರ ಬದುಕು. ಈಗಿನ ರಾಜಕಾರಣ ಬಯಸುವಯಾವ ಅಡ್ಡ ದಾರಿಯನ್ನೂ ಹಿಡಿಯದಿದ್ದುದು ಅವರ ಅಗ್ಗಳಿಕೆ. ಅವರು ವಿವಾದಕ್ಕೆ ತುತ್ತಾಗಿದ್ದು ಅಯೋಧ್ಯೆ ರಥಯಾತ್ರೆ ಸಂದರ್ಭದಲ್ಲಿ ಹಾಗೂ ಜಿನ್ನಾ ಸೆಕ್ಯುಲರ್ ಎಂದು ಹೇಳಿಕೆ ನೀಡಿದಾಗ. ಈ ಎರಡೂ ಸಂಗತಿಗಳ ಬಗ್ಗೆ ತಮ್ಮ ಆತ್ಮಕಥೆಯಲ್ಲಿ ಅವರು ಸಮರ್ಥನೆ ನೀಡಿದ್ದಾರೆ. ಇಂಥ ನಾಯಕನಿಗೆ ಮೊನ್ನೆಯ ಚುನಾವಣೆಯ ಫಲಿತಾಂಶ ತುಸು ಆಘಾತವಾಗಿರಲಿಕ್ಕೆ ಸಾಕು. ಆಡ್ವಾಣಿಯವರು ಇಷ್ಟು ವರ್ಷ ಸಾರ್ವಜನಿಕ ಜೀವನದಲ್ಲಿ ನಡೆದುಕೊಂಡ ರೀತಿಗೆ ಅದು well-deserved tribute ಅಲ್ಲವೇ ಅಲ್ಲ. ಅವರನ್ನು ಈ ದೇಶದ ಮತದಾರ ಇನ್ನಷ್ಟು ಗೌರವಯುತವಾಗಿ ನಡೆಸಿಕೊಳ್ಳಬಹುದಿತ್ತು ಎಂದು ಯಾರಿಗಾದರೂ ಅನಿಸದೇ ಇರದು.

ಅಷ್ಟರಮಟ್ಟಿಗಿನ ನೋವು ಅನೇಕರನ್ನು ಕಾಡಬಹುದು. ಆದರೆ ರಾಜಕೀಯದಲ್ಲಿ ಇವೆಲ್ಲವೂ ಅನಿವಾರ್ಯ. ಅದನ್ನು ಹಾಗೆಯೇ ಸ್ವೀಕರಿಸಬೇಕು. ಆಡ್ವಾಣಿಯವರ ರಾಜಕೀಯ ಭವಿಷ್ಯ ಮುಗಿದೇ ಹೋಯಿತು, ಅವರು ಇನ್ನು ನಿವೃತ್ತಿಯಾಗುವುದೊಂದೇ ಬಾಕಿ, ಅವರ ನಾಯಕತ್ವದಲ್ಲಿ ಪಕ್ಷಕ್ಕೆ ಹಿನ್ನೆಡೆಯಾಗಿದೆ ಎಂದೆಲ್ಲ ಪತ್ರಿಕೆಗಳು ಅವರ ರಾಜಕೀಯ ಜೀವನದ obituary ಬರೆಯುತ್ತಿವೆ. ನಿಶ್ಚಿತವಾಗಿಯೂ ಈ ಫಲಿತಾಂಶ ಅವರಿಗೆ ಹಿನ್ನಡೆಯೇ. ಆದರೆ ಇದೇ ಕೊನೆ ಎಂದು ಭಾವಿಸಬೇಕಿಲ್ಲ. ಹಾಗೆಯೇ ಅವರ ವ್ಯಕ್ತಿತ್ವ ಹಾಗೂ ನಾಯಕತ್ವಕ್ಕೆ ಸಿಕ್ಕ ಒಟ್ಟೂ ತೀರ್ಪು ಎಂದೂ ತಿಳಿಯಬೇಕಿಲ್ಲ. ಇದೊಂದು ರೀತಿಯಲ್ಲಿ ತಾತ್ಕಾಲಿಕ ಹಿನ್ನಡೆ. ರಾಜಕೀಯವೆಂಬುದು ನಿರಂತರ ಬದಲಾಗುವ ನದಿ ಪಾತಳಿಯಿದ್ದಂತೆ. ಇಂದು ಇದ್ದ ರೀತಿ ನಾಳೆ ಇರುವುದಿಲ್ಲ. ಅದು ನಿತ್ಯ ಚಲನಶೀಲ ಹಾಗೂ ಚಂಚಲಶೀಲ. ಇಂದಿರಾಗಾಂಧಿ ನಿಧನದ ಬಳಿಕ 1984ರ ಚುನಾವಣೆಯಲ್ಲಿ ಬಿಜೆಪಿ ಎರಡೇ ಸ್ಥಾನ ಗಳಿಸಿತ್ತು. ಅದಾಗಿ ಹದಿನಾಲ್ಕು ವರ್ಷಗಳ ಬಳಿಕ ಬಿಜೆಪಿಗೆ ಅಧಿಕಾರ ಬಂದಿತು. 1984ರಲ್ಲಿ ರಾಜೀವ್‌ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ 414 ಸ್ಥಾನ ಗಳಿಸಿ ದಾಖಲೆ ನಿರ್ಮಿಸಿತು. ಆದರೆ ಮುಂದಿನ ಚುನಾವಣೆಯಲ್ಲಿ ಪರಾಭವಗೊಂಡಿತೆಂಬ ಇತಿಹಾಸವನ್ನು ಮರೆಯಬಾರದು. ಇವೆಲ್ಲ ಸರಿ, ಹಾಗಾದರೆ ಆಡ್ವಾಣಿಯವರ ಮುಂದಿನ ನಡೆ ಏನು? ಮುಂದಿನ ಹೋರಾಟಕ್ಕೆ ಸಿದ್ಧವಾಗಲು ಆಡ್ವಾಣಿಯವರ ಪಕ್ಷವೇನೋ ಅವರ ಪರವಾಗಿ ನಿಲ್ಲಬಹುದು. ಆದರೆ ವಯಸ್ಸು ಅವರ ಪರವಾಗಿಲ್ಲ. ಅಲ್ಲದೇ ಸ್ವತಃ ಅವರೂ ಸಿದ್ಧರಿಲ್ಲ. ಹೀಗಾಗಿ ಆಡ್ವಾಣಿಯವರು ಮತ್ತೊಂದು ಛಾನ್ಸ್‌ಗೆ ಕೂಡ ಕಾಯಲಾರರು. ಈ ಎಲ್ಲ ಅಪಸವ್ಯಗಳ ನಡುವೆ ಈ ಸೋಲೇ ಅವರಿಗೆ ಅಕಾಲಿಕ ವಿದಾಯವಾಗಿಬಿಡಬಹುದಾ? ಹಾಗೆ ಯೋಚಿಸಲು ಸಹ ಮನಸ್ಸಾಗುತ್ತಿಲ್ಲ. ಮಹಾಭಾರತದ ಕರ್ಣನಂತೆ ಮತಭಾರತದ ಈ ಲಾಲಕೃಷ್ಣ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X